ಮಹದೇಶ್ವರ ಬೆಟ್ಟದಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ಭಕ್ತರು, ಹಲವಾರು ಸೇವೆಗಳ ಸಲ್ಲಿಕೆ
ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ ನೆರವೇರಿಸಲಾಯಿತು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ಪೂಜೆ ನೆರವೇರಿಸಿದರು.
ಸಂಜೆ ೬.೩೦ರಿಂದ ರಾತ್ರಿ ೮.೩೦ರವರೆಗೆ ಲಿಂಗಮೂರ್ತಿಗೆ ಎಳ್ಳೆಣ್ಣೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿಯ ಜತೆಗೆ ಹಾಲಿನ ಅಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವೇರಿಸಿದರು. ಬಳಿಕ ಮಾದಪ್ಪನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಧೂಪ, ದೀಪದಾರತಿ ಹಾಗೂ ಮಹಾಮಂಗಳಾರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಎಣ್ಣೆಮಜ್ಜನ ಸೇವೆ ಹಿನ್ನೆಲೆಯಲ್ಲಿ ದೇಗುಲದ ಆವರಣದಲ್ಲಿ ಹೆಚ್ಚಿನ ಭಕ್ತರು ನೆರೆದಿದ್ದರು. ಚಿನ್ನದ ತೇರಿನ ಉತ್ಸವದಲ್ಲಿ ಭಾಗಿ: ಸಂಜೆ ೭ಕ್ಕೆ ನಡೆಯುವ ಚಿನ್ನದ ತೇರಿನ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದು, ಇದರಲ್ಲಿ ಹರಕೆ ಹೊತ್ತ ಭಕ್ತರು ದೇಗುಲದ ಸುತ್ತ ದಂಡಿನ ಕೋಲನ್ನು ಹೊತ್ತು ಪ್ರದಕ್ಷಿಣೆ ಹಾಕುವುದರ ಮೂಲಕ ಭಕ್ತಿಭಾವ ಮೆರೆದರು.
ಅಂತರಂಗೆಯ ಕಲ್ಯಾಣಿಯಲ್ಲಿ ಸ್ನಾನ ಮಾಡಿ ಮುಡಿಸೇವೆ, ಉರುಳುಸೇವೆ, ಪಂಜಿನ ಸೇವೆ ಹಾಗೂ ರಜಾ ಹೊಡೆಯುವ ಸೇವೆ ಕೈಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೆಲ ಭಕ್ತರು ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಾದಿಗಳಲ್ಲಿ ಭಾಗಿಯಾದರು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರ ನೇತೃತ್ವದಲ್ಲಿ ಕುಡಿಯುವ ನೀರು, ಶೌಚಗೃಹ, ವಿಶೇಷ ನಿರಂತರ ದಾಸೋಹ, ನೆರಳಿನ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗಿದೆ. ಅಂಗವಿಕಲರು, ಹಿರಿಯ ನಾಗರಿಕರಿಗೆ ದೇವರ ದರ್ಶನ ಪಡೆಯಲು ವಿಶೇಷ ಕೌಂಟರ್‌ನ ಅವಕಾಶ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ವಿವಿಧೆಡೆಯಿಂದ ಆಗಮಿಸುತ್ತಿರುವ ಭಕ್ತರು: ದೀಪಾವಳಿ ಅಮಾವಾಸ್ಯೆಗೆ ಆಸುಪಾಸಿನ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ರಾಜ್ಯ ಹಾಗೂ ನೆರೆ ರಾಜ್ಯದ ಭಕ್ತರು ಆಗಮಿಸಿ ಮೂರಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡುತ್ತಾರೆ. ಅದರಂತೆಯೇ ಮೂರಾಲ್ಕು ದಿನಗಳಿಂದ ಮೈಸೂರು, ಮದ್ದೂರು, ಚಾ.ನಗರ, ಮಳವಳ್ಳಿ, ತಿ.ನರಸೀಪುರ ಹಾಗೂ ಇನ್ನಿತರ ಕಡೆಗಳಿಂದ ಹೆಚ್ಚಿನ ಭಕ್ತರು ಈಗಾಗಲೇ ಬಂದು ತಂಗಿದ್ದಾರೆ.
ಸ್ವತಃ ಸ್ವಚ್ಛತೆಗಿಳಿದ ಕಾರ್ಯದರ್ಶಿ: ಮಾದಪ್ಪನ ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡುವ ಹಿತದೃಷ್ಟಿಯಿಂದ ಭಕ್ತರಿಗೆ ಅರಿವು ಮೂಡಿಸುವುದರ ಜೊತೆಗೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ ರಘು ಸ್ವತಃ ತಾವೇ ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾದರು.
ಕಾಲ್ನಡಿಗೆ ಯಾತ್ರೆ: ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಭಕ್ತರು, ಮಹಿಳೆಯರು, ಮಕ್ಕಳು ಕಾಲ್ನಡಿಗೆಯಲ್ಲಿಯೇ ಬಂದು ಮಾದಪ್ಪನ ಬೆಟ್ಟದಲ್ಲಿ ತಂಗಿ ದ್ದಾರೆ.
ಗಮನ ಸೆಳೆದ ದೀಪಾಲಂಕಾರ: ಮ.ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಒಂದು ವಾರದಿಂದಲೇ ವಿನೂತನ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ವಿನೂತನ ಮಾದರಿಯಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರ ಭಕ್ತರ ಕಣ್ಮನ ಸೆಳೆಯುತ್ತಿದೆ.





