ಚಿರಂಜೀವಿ ಸಿ.ಹುಲ್ಲಹಳ್ಳಿ
ಸೆ.೫ರಿಂದ ೧೯ರವರೆಗೆ ಲಕ್ಷಾಂತರ ಮಂದಿ ವೀಕ್ಷಣೆ; ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಳ
* ಕಳೆದ ವರ್ಷಕ್ಕೆ ಹೋಲಿಸಿದರೆ ೪ ಲಕ್ಷಕ್ಕೂ ಹೆಚ್ಚು ಮಂದಿ ವೆಬ್ ಸೈಟ್ ವೀಕ್ಷಣೆ
* ಗೋಲ್ಡ್ ಕಾರ್ಡ್ ಖರೀದಿ, ಪಂಜಿನ ಕವಾಯತು, ಯುವ ದಸರಾ ವೀಕ್ಷಕರೇ ಹೆಚ್ಚು
ಮೈಸೂರು: ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಪ್ರಾರಂಭಿಸಿರುವ ದಸರಾ ವೆಬ್‌ಸೈಟ್ ವೀಕ್ಷಿಸಿ ಮಾಹಿತಿ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೆ.೫ರಿಂದ ೧೯ರವರೆಗೆ ೧೮ ಲಕ್ಷ ಪ್ರವಾಸಿಗರು ದಸರಾ ವೆಬ್‌ಸೈಟ್ ವೀಕ್ಷಣೆ ಮಾಡಿದ್ದಾರೆ. ದಸರಾ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿ, ಪಂಜಿನ ಕವಾಯಿತು, ಯುವ ದಸರಾ ವೀಕ್ಷಣೆಯನ್ನು ಅರಮನೆಯಲ್ಲಿ ಕುಳಿತು ವೀಕ್ಷಿಸಲು ಟಿಕೆಟ್ ಖರೀದಿಸಲು ವೆಬ್‌ಸೈಟ್‌ನತ್ತ ಮುಖ ಮಾಡಿದ್ದಾರೆ. ನಿತ್ಯ ಅಂದಾಜು ೧ ಲಕ್ಷ ಜನರು ದಸರಾ ವೆಬ್‌ಸೈಟ್ ವೀಕ್ಷಣೆ ಮಾಡುತ್ತಿದ್ದಾರೆ.
ಸೆ.೫ರಂದು ವೆಬ್‌ಸೈಟ್ ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಮೊದಲ ಕೆಲ ದಿನಗಳು ವೀಕ್ಷಣೆ ಕಡಿಮೆ ಪ್ರಮಾಣದಲ್ಲಿ ಇತ್ತು. ಆದರೆ, ದಸರಾ ಸಮೀಪಿಸುತ್ತಿದ್ದಂತೆ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೆಬ್‌ಸೈಟ್‌ನತ್ತ ಕಣ್ಣು ಹಾಯಿಸಿದ್ದಾರೆ. ಇದರಲ್ಲಿ ಗೋಲ್ಡ್ ಕಾರ್ಡ್ ಖರೀದಿ ಬಗ್ಗೆ, ಪಂಜಿನ ಕವಾಯತು, ಯುವ ದಸರಾ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.
ದಸರಾ ವೆಬ್‌ಸೈಟ್‌ಗೆ ಹೊಸ ರೂಪವನ್ನು ನೀಡಲಾಗಿದೆ. ಇದರಲ್ಲಿ ದಸರಾ ಮಹೋತ್ಸವ ಸಂಬಂಧ ನಡೆಯುತ್ತಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಮಾಹಿತಿಯನ್ನು ದಸರಾ ಹಂಚಿಕೊಳ್ಳುತ್ತಿದೆ. ದಸರಾ ಉದ್ಘಾಟನೆಗೆ ಆಗಮಿಸುವ ಗಣ್ಯರಿಂದ ಹಿಡಿದು ಕಾರ್ಯಕ್ರಮಗಳ ವೇಳಾಪಟ್ಟಿ, ನಡೆ ಯುವ ಕಾರ್ಯಕ್ರಮ ಮತ್ತು ಸ್ಥಳಗಳ ಬಗ್ಗೆ ಮಾಹಿತಿಯೊಂದಿಗೆ ದಸರಾ ಸಂಬಂಧ ಚುನಾಯಿತ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ನಡೆಸುವ ಸುದ್ದಿಗೋಷ್ಠಿಯ ವಿವರ, ಚಿತ್ರ ಮಾಹಿತಿ ಕೂಡ ಅಂದಂದೇ ಅಪ್‌ಲೋಡ್ ಮಾಡಲಾಗುತ್ತಿದೆ.
ಇವುಗಳ ಒಟ್ಟಿಗೆ ವಿಶೇಷ ವರದಿ ರೂಪದಲ್ಲಿ ‘ಫೀಚರ್’ ಲೇಖನಗಳನ್ನು ಕೂಡ ಪ್ರಕಟಿಸಲಾಗುತ್ತಿದೆ. ಏರ್‌ಶೋ ನಲ್ಲಿ ಭಾಗವಹಿಸುವ ಸೂರ್ಯಕಿರಣ್, ಸ್ವದೇಶಿ ನಿರ್ಮಿತ ಸಾರಂಗ್ ಹೆಲಿಕಾಪ್ಟರ್ ಬಗ್ಗೆ ಕೂಡ ಲೇಖನಗಳನ್ನು ನೀಡಲಾಗಿದೆ. ಇದರಿಂದಾಗಿ ಏರ್‌ಶೋ ನೋಡಲು ಹೋಗುವ ಮುನ್ನ ಕೆಲ ಮಾಹಿತಿ ಸಿಕ್ಕಂತೆ ಆಗುತ್ತಿದೆ. ಜೊತೆಗೆ ಹಿಂದಿನ ವರ್ಷದ ವಿಡಿಯೋ ಲಿಂಕ್‌ಗಳೂ ಕೂಡ ಈ ಸಲ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ
” ಈ ವರ್ಷದ ದಸರಾ ವೆಬ್‌ಸೈಟ್ ವೀಕ್ಷಣೆ ಮಾಡುತ್ತಿರುವ ಪ್ರವಾಸಿಗರು ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳ ಮತ್ತು ಗೋಲ್ಡ್ ಕಾರ್ಡ್ ಸೇರಿ ದಂತೆ ಇನ್ನಿತರೆ ಟಿಕೆಟ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ದಸರಾ ವೀಕ್ಷಿಸಲು ಬರುವ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ದಸರಾ ವೆಬ್‌ಸೈಟ್ ನಿರ್ವಹಿಸಲು ೧೫ರಿಂದ ೨೦ ಮಂದಿ ಶ್ರಮಿಸುತ್ತಿದ್ದಾರೆ. ಈ ಬಾರಿ ಸಣ್ಣ ಲೋಪವೂ ಇಲ್ಲದಂತೆ ನಿರ್ವ ಹಣೆ ಮಾಡುವ ಹೊಣೆಯನ್ನು ವಹಿಸಲಾಗಿದೆ.”
-ಡಾ.ಪಿ.ಶಿವರಾಜು, ಅಪರ ಜಿಲ್ಲಾಧಿಕಾರಿ





