Mysore
26
few clouds

Social Media

ಬುಧವಾರ, 07 ಜನವರಿ 2026
Light
Dark

ದಸರಾ: ಜಂಬೂ ಸವಾರಿಯತ್ತ ಜನರ ಚಿತ್ತ

ಕೆ.ಬಿ.ರಮೇಶನಾಯಕ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯು ಅಕ್ಟೋಬರ್ ೨ರಂದು ನಡೆಯಲಿದ್ದು, ಅತ್ತಕಡೆ ಲಕ್ಷಾಂತರ ಜನರ ಚಿತ್ತ ಹರಿದಿದೆ.

ಏತನ್ಮಧ್ಯೆ, ಅ.೧ರಂದು ಆಯೋಜನೆಯಾಗಿರುವ ವೈಮಾನಿಕ ಪ್ರದರ್ಶನ ಹೊರತುಪಡಿಸಿ ದಸರೆಯ ಬಹುತೇಕ ಕಾರ್ಯಕ್ರಮಗಳಿಗೆ ಸೋಮವಾರ ತೆರೆ ಬಿದ್ದಿದೆ. ಕಳೆದ ಎಂಟು ದಿನಗಳಿಂದ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷಾಂತರ ಜನರ ಮನಸೂರೆ ಗೊಂಡು ಮುಕ್ತಾಯವಾಗಿದ್ದರೆ, ಹಲವು ಸಾಂಸ್ಕೃತಿಕ, ಸಾಹಸ, ಕ್ರೀಡೆ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಗಿದಿವೆ.

ಸೆ.೨೨ರಂದು ಚಾಮುಂಡಿಬೆಟ್ಟದಲ್ಲಿ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ನಾಡಹಬ್ಬಕ್ಕೆ ಚಾಲನೆ ನೀಡಿದ್ದರೆ, ಸಂಜೆ ಅರಮನೆ ಅಂಗಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಈ ಬಾರಿ ದಸರಾ ಮಹೋತ್ಸವವು ೧೧ ದಿನಗಳ ಕಾಲ ನಡೆದರೂ ಕೂಡ ವಿಜಯದಶಮಿ ಮೆರವಣಿಗೆ ಹೊರತುಪಡಿಸಿ ಉಳಿದ ಕಾರ್ಯಕ್ರಮಗಳನ್ನು ೯ ದಿನಗಳಿಗೆ ಸೀಮಿತಗೊಳಿಸಲಾಗಿತ್ತು.

ಹರಿಹರನ್, ಅನನ್ಯಾ ಭಟ್, ವಿಜಯಪ್ರಕಾಶ್ ಸೇರಿದಂತೆ ಅನೇಕ ಗಾಯಕರು ಮೋಡಿ ಮಾಡಿದರೆ, ಐದು ದಿನಗಳ ಯುವದಸರಾ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಯಶಸ್ವಿಯಾಗಿದೆ. ರೈತ ದಸರಾ, ದಸರಾ ಸಿಎಂ ಕಪ್ ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ, ಮಹಿಳಾ ಮತ್ತು ಮಕ್ಕಳ ದಸರಾ, ಪಾರಂಪರಿಕ ಸೈಕಲ್ ಸವಾರಿ, ಪಾರಂಪರಿಕ ನಡಿಗೆ, ಯೋಗಾಸನ ಕಾರ್ಯಕ್ರಮಗಳು ಜನಮೆಚ್ಚುಗೆ ಪಡೆದವು. ಹಲವು ವರ್ಷಗಳಿಂದ ಮೂಲ ಸೌಕರ್ಯದ ಕೊರತೆ ಕಾಣುತ್ತಿದ್ದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣಕ್ಕೆ ಈ ಬಾರಿ ೫ ಕೋಟಿ ರೂ.ವೆಚ್ಚದಲ್ಲಿ ಮೇಲ್ಛಾವಣಿ, ಡ್ರೆಸ್ಸಿಂಗ್ ರೂಂ ಮತ್ತಿತರ ವ್ಯವಸ್ಥೆ ಮಾಡಿದ್ದರಿಂದಾಗಿ ಸಹಸ್ರಾರು ಕುಸ್ತಿಪಟುಗಳು ಖುಷಿಯಿಂದ ವೀಕ್ಷಣೆ ಮಾಡಿದ್ದುದು ಗಮನಾರ್ಹ.

ಕ್ರೀಡಾಕೂಟದಲ್ಲಿ ಊಟ, ವಸತಿ ವಿಚಾರದಲ್ಲಿ ಅನೇಕ ಸಮಸ್ಯೆ ಎದುರಿಸಲಾಗುತ್ತಿತ್ತು. ಆದರೆ, ಈ ಬಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಅವರೇ ಮೈಸೂರಿನಲ್ಲಿ ಒಂದು ವಾರ ಠಿಕಾಣಿ ಹೂಡಿ, ಸಣ್ಣ ಲೋಪಕ್ಕೂ ಅವಕಾಶ ಇಲ್ಲದಂತೆ ನಿರ್ವಹಣೆ ಮಾಡಿದರು. ಜಿಲ್ಲಾಧಿಕಾರಿ, ಆಯುಕ್ತರ ಶ್ರಮ: ಕಳೆದ ಎರಡು ವಾರಗಳಿಂದ ಬಿಡುವಿಲ್ಲದೆ ಶ್ರಮ ಹಾಕಿದ್ದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರ ಕಾರ್ಯಶೈಲಿಯಿಂದಾಗಿ ಬಹುತೇಕ ಕಾರ್ಯಕ್ರಮಗಳು ಸುಗಮವಾಗಿ ಮುಕ್ತಾಯವಾಗಿವೆ.

ದಸರಾ ಉಪ ಸಮಿತಿಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡಿ ಕಾರ್ಯಕ್ರಮಗಳು ನಡೆಯುವಂತೆ ಮಾಡಿದ್ದರೆ, ಅಧಿಕಾರೇತರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಪಟ್ಟಿ ಬೆಳೆಯುತ್ತಲೇ ಇದ್ದರೂ ಅದಕ್ಕೆ ತಕ್ಕಂತೆ ವೈಮಾನಿಕ ಪ್ರದರ್ಶನ, ಡ್ರೋನ್ ಶೋ ಪಾಸ್ ವಿತರಣೆಯಾಗುವಂತೆ ನೋಡಿಕೊಂಡಿದ್ದಾರೆ. ಪೊಲೀಸ್ ಆಯುಕ್ತರ ಅವಿಶ್ರಾಂತ ಕಾರ್ಯ: ಇನ್ನು ಪ್ರತಿಯೊಂದು ಕಾರ್ಯಕ್ರಮಗಳಿಗೆ ಅಗತ್ಯಕ್ಕೆ ತಕ್ಕಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಮಧ್ಯರಾತ್ರಿ ತನಕ ರೌಂಡ್ ಹಾಕುವ ಮೂಲಕ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವುದು ಗಮ ನಾರ್ಹವಾಗಿದೆ. ಇದುವರೆಗೂ ನಗರದ ಒಳಗಡೆ ಸಂಚಾರ ನಿರ್ವಹಣೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿದ್ದನ್ನು ಸರಳವಾಗಿ ನಿರ್ವಹಣೆ ಮಾಡಿದ್ದಾರೆ.

” ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸಮ್ಮನಾಗದೆ, ತಾವೇ ಒಂದು ಸುತ್ತು ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಜನರು ಹೆಚ್ಚು ಸಂಖ್ಯೆಯಲ್ಲಿ ದಾಂಗುಡಿಯಿಡುತ್ತಿರುವ ಆಹಾರ ಮೇಳಕ್ಕೆ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದ್ದು ಕೂಡ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ”

” ದಸರಾ ದೀಪಾಲಂಕಾರ ಉಪ ಸಮಿತಿ ವತಿಯಿಂದ ನಡೆದ ಎರಡು ದಿನಗಳ ಡ್ರೋನ್ ಶೋ ಅನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದು, ಅ.೧ ಮತ್ತು ೨ರಂದು ಕೂಡ ನಡೆಯಲಿರುವ ಡ್ರೋನ್ ಪ್ರದರ್ಶನ ವೀಕ್ಷಣೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ”

Tags:
error: Content is protected !!