Mysore
26
overcast clouds

Social Media

ಶುಕ್ರವಾರ, 09 ಜನವರಿ 2026
Light
Dark

ಮಂಜಿನ ನಗರಿಯಲ್ಲಿ ಗರಿಗೆದರಿದ ದಸರಾ ಚಟುವಟಿಕೆ

ಪುನೀತ್ ಮಡಿಕೇರಿ

ಈ ಬಾರಿ ಗಮನ ಸೆಳೆಯಲಿದೆ ದಶಮಂಟಪಗಳ ಶೋಭಾಯಾತ್ರೆ

ಮಡಿಕೇರಿ: ನಾಡಹಬ್ಬ ದಸರಾಕ್ಕೆ ದಿನಗಣನೆ ಶುರುವಾಗಿರುವಂತೆ ಮಂಜಿನ ನಗರಿ ಮಡಿಕೇರಿಯಲ್ಲೂ ಚಟುವಟಿಕೆ ಗರಿಗೆದರಿದೆ. ಮೈಸೂರಿನ ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆ ಯಾದರೆ ಮಡಿಕೇರಿಯಲ್ಲಿ ಒಂದನ್ನೊಂದು ಮೀರಿಸುವ ದಶಮಂಟಪಗಳ ಶೋಭಾಯಾತ್ರೆ ಎಲ್ಲರ ಗಮನ ಸೆಳೆಯಲಿವೆ.

ಹಾಗಾಗಿ ಮಂಟಪಗಳನ್ನು ಹೊರಡಿಸುವ ಹತ್ತು ದೇವಾಲಯಗಳ ಸಮಿತಿಗಳಿಗೂ ವಿಶೇಷ ಮಹತ್ವವಿದ್ದು, ಈ ಬಾರಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ನೀಡುವಂತೆ ಬೇಡಿಕೆ ಕೇಳಿಬರುತ್ತಿದೆ. ದಸರಾ ರಜೆಯ ಅವಧಿಯಿಂದ ಸ್ಥಳೀಯ ಪ್ರವಾಸೋದ್ಯಮವೂ ಮರು ಜೀವ ಪಡೆದು ಕೊಳ್ಳುತ್ತದೆ. ಹಾಗಾಗಿಯೇ ಮಡಿಕೇರಿ ದಸರಾಕ್ಕೆ ವಿಶೇಷ ಆಕರ್ಷಣೆ ಇದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳು ತ್ತಿರುವ ಮಡಿಕೇರಿ ದಸರಾದ ಸಿದ್ಧತೆಗಳು ೨-೩ ತಿಂಗಳುಗಳು ಮುಂಚಿತವಾಗಿಯೇ ಶುರುವಾಗುತ್ತವೆ.

ಮಡಿಕೇರಿ ದಸರಾದಲ್ಲಿ ದಶಮಂಟಪಗಳೇ ಪ್ರಮುಖ ಆಕರ್ಷಣೆ ಆಗಿರುವುದರಿಂದ ದಸರಾ ಸಮಿತಿಗಳ ರಚನೆ ಜತೆಗೆ ಮಂಟಪಗಳಲ್ಲಿ ಅಳವಡಿಸುವ ಪೌರಾಣಿಕ ಕತೆಗಳ ಆಯ್ಕೆ, ಅವುಗಳಿಗೆ ಬೃಹತ್ ಬೊಂಬೆಗಳ ತಯಾರಿ, ವಿದ್ಯುತ್ ದೀಪದ ವ್ಯವಸ್ಥೆ, ಸ್ಟುಡಿಯೋ ಸೆಟ್ಟಿಂಗ್ಸ್ ಹೀಗೆ ಎಲ್ಲಾ ಬಗೆಯ ತಯಾರಿಗಳು ಈಗಾಗಲೇ ಹತ್ತೂ ಮಂಟಪಗಳಿಗೆ ಸಂಬಂಽಸಿದಂತೆ ಆರಂಭವಾಗಿವೆ. ಒಂದೊಂದು ಮಂಟಪದ ತಯಾರಿಗೂ ಸುಮಾರು ೩೦ ಲಕ್ಷ ರೂ. ವೆಚ್ಚ ಮಾಡಲಾಗುತ್ತದೆ.

ಮಡಿಕೇರಿ ದಸರಾ ಸರ್ಕಾರದ ಅನುದಾನವನ್ನು ಅವಲಂಬಿಸಿ ಆಚರಿಸಿಕೊಂಡು ಬರಲಾಗುತ್ತಿದೆ. ದಶಮಂಟಪಗಳ ತಯಾರಿಗೆ ಸಾರ್ವಜನಿಕರ ಸಹಕಾರ ಪಡೆದುಕೊಳ್ಳಲಾಗುತ್ತದೆ. ಆದರೆ ಇತರ ಕಾರ್ಯಕ್ರಮಗಳಿಗೆ ಸರ್ಕಾರದ ಅನುದಾನ ಅನಿವಾರ್ಯವಾಗಿದೆ. ಕಳೆದ ವರ್ಷ ಸರ್ಕಾರ ೧.೫೦ ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈ ಮೊತ್ತದಲ್ಲೇ ದಶಮಂಟಪಗಳು ಮತ್ತು ಕರಗಗಳಿಗೂ ಹಣ ಹಂಚಿಕೆ ಮಾಡಬೇಕಿರುವುದರಿಂದ ಈ ಬಾರಿ ಅನುದಾನದ ಪ್ರಮಾಣವನ್ನು ಏರಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಈ ವರ್ಷ ಮಡಿಕೇರಿ ದಸರಾಕ್ಕೆ ಕನಿಷ್ಠ ೨ ಕೋಟಿ ರೂ. ಅನುದಾನ ನೀಡಬೇಕು ಎಂಬ ಬೇಡಿಕೆ ದಸರಾ ಸಮಿತಿಯವರಿಂದ ಕೇಳಿ ಬರುತ್ತಿದೆ. ಒಂದು ಮಂಟಪ ನಿರ್ಮಾಣಕ್ಕೆ ಕನಿಷ್ಠ ೩೦ ಲಕ್ಷ ರೂ.ಗೂ ಹೆಚ್ಚು ಹಣ ಖರ್ಚಾಗುವುದರಿಂದ ದಶಮಂಟಪಗಳಿಗೆ ಕೊಡುವ ಮೊತ್ತವನ್ನೂ ಹೆಚ್ಚಿಸಬೇಕು ಎಂಬ ಒತ್ತಾಯವಿದೆ. ಮಂಟಪಗಳಿಗೆ ಕನಿಷ್ಠ ತಲಾ ೫ ಲಕ್ಷ ರೂ. ಮತ್ತು ಕರಗ ಸಮಿತಿಗಳಿಗೆ ೩ ಲಕ್ಷ ರೂ. ಅನುದಾನ ಸರ್ಕಾರ ನೀಡಬೇಕು. ಈ ನಿಟ್ಟಿನಲ್ಲಿ ಸಂಬಂಽಸಿದ ಎಲ್ಲಾ ಸಮಿತಿಗಳು ಸರ್ಕಾರದ ಗಮನ ಸೆಳೆಯಬೇಕು.

ಮಡಿಕೇರಿ ದಸರಾಕ್ಕೆ ಅನುದಾನದ ವಿಷಯ ಈಚೆಗೆ ಮಡಿಕೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸಮ್ಮುಖದಲ್ಲಿ ಪ್ರಸ್ತಾಪ ಆಯಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಮಡಿಕೇರಿ ದಸರಾ ಎಂದಿನಂತೆ ಅದ್ಧೂರಿಯಾಗಿ ನಡೆಯಲಿದೆ. ಅನುದಾನದ ವಿಷಯದಲ್ಲಿ ಯಾವುದೇ ಅನುಮಾನ ಬೇಡ. ಕಳೆದ ವರ್ಷದ ರೀತಿಯಲ್ಲಿ ನಿರೀಕ್ಷಿಸಿದಕ್ಕಿಂತ ಉತ್ತಮ ಅನುದಾನವೇ ಸಿಗಲಿದೆ ಎಂಬ ಭರವಸೆ ನೀಡಿದ್ದಾರೆ.

” ಮೈಸೂರು ದಸರಾ ಹೊರತುಪಡಿಸಿದರೆ ಮಡಿಕೇರಿ ದಸರಾ ದೇಶದಲ್ಲಿ ಪ್ರಾಮುಖ್ಯತೆ ಪಡೆದಿದೆ. ಮಡಿಕೇರಿ ದಸರಾಕ್ಕೆ ದೇಶ, ವಿದೇಶ, ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಆಗಮಿಸಿ ಐತಿಹಾಸಿಕ ದಸರಾ ವೀಕ್ಷಿಸುತ್ತಾರೆ. ಇಂಥ ಮಹತ್ವದ ದಸರೆಗೆ ಹೆಚ್ಚಿನ ಅನುದಾನ ನೀಡಬೇಕಿದೆ. ಮಡಿಕೇರಿ ದಸರಾಕ್ಕೆ ೨ ಕೋಟಿ ರೂ.ಗೂ ಹೆಚ್ಚು ಅನುದಾನ ತರುವ ಪ್ರಯತ್ನ ಮಾಡಲಾಗವುದು.”

-ಹರೀಶ್ ಅಣ್ವೇಕರ್, ಅಧ್ಯಕ್ಷರು, ದಸರಾ ದಶಮಂಟಪ ಸಮಿತಿ

” ಮಡಿಕೇರಿ ದಸರಾ ಅದ್ಧೂರಿತನದ ಬಗ್ಗೆ ಯಾವುದೇ ಅನುಮಾನ ಬೇಡ. ಈ ಹಿಂದಿನಂತೆ ಸಂಭ್ರಮದಿಂದಲೇ ನಡೆಯಲಿದೆ. ಕಳೆದ ವರ್ಷವೂ ಉತ್ತಮ ಅನುದಾನವನ್ನೇ ಕೊಡಲಾಗಿತ್ತು. ಈ ವರ್ಷ ಕೂಡ ನಿರೀಕ್ಷೆಯಂತೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಲಿದೆ. ಇಲ್ಲಿಯ ದಸರಾ ಆಚರಣೆ ಯಾವುದೇ ತೊಡಕಾಗದಂತೆ ನಡೆಯಲಿದೆ.”

-ಎನ್.ಎಸ್.ಭೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ

Tags:
error: Content is protected !!