ಅನುಚೇತನ್ ಕೆ.ಎಂ.
ಮೈಸೂರು: ಜಿಲ್ಲಾಡಳಿತ, ನಗರಪಾಲಿಕೆ ಅಧಿಕಾರಿಗಳು ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ನಗರದ ಹೃದಯ ಭಾಗದಲ್ಲೇ ಇರುವ ವಿದ್ಯಾರಣ್ಯಪುರಂನ ನಾಲ್ಕನೇ ಮುಖ್ಯರಸ್ತೆಯ ೩೨ನೇ ಅಡ್ಡ ರಸ್ತೆಯಲ್ಲಿ ಸಮಸ್ಯೆಗಳದ್ದೇ ದರ್ಬಾರ್ ನಡೆಯುತ್ತಿದೆ.
ಪಾಲಿಕೆಯ ೬೨ನೇ ವಾರ್ಡ್ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಮೂಲ ಸೌಕರ್ಯಗಳಿಲ್ಲದೆ ಜನರು ಹೈರಾಣಾಗಿದ್ದಾರೆ. ಗುಂಡಿಗಳು ಬಿದ್ದ ರಸ್ತೆಯಲ್ಲೇ ಜನರು ಬಿದ್ದು ಎದ್ದು ಸಂಚರಿಸುತ್ತಿದ್ದಾರೆ. ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಕೊಳಚೆ ನೀರು ಮನೆ ಮುಂದೆ ನಿಂತು ಗಬ್ಬೆದ್ದು ನಾರುತ್ತಿದೆ.
ರಸ್ತೆಯ ತಿರುವಿನಲ್ಲಿರುವ ಮ್ಯಾನ್‌ಹೋಲ್ ನಲ್ಲಿ ಹೂಳು ತುಂಬಿಕೊಂಡು ಸ್ವಲ್ಪ ಮಳೆಯಾದರೂ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಮುಖ್ಯ ರಸ್ತೆಯಲ್ಲಿ ಸ್ವಲ್ಪ ದೂರವೇ ಹೊಸದಾಗಿ ಚರಂಡಿ ನಿರ್ಮಿಸಲಾಗಿದ್ದು, ಅಲ್ಲಿಯೂ ಹೂಳು ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆ ನಿವಾರಣೆಗೆ ಗಮನಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆಯ ಬೇಜವಾಬ್ದಾರಿ
ಸಮಸ್ಯೆ ಎದುರಾದಾಗ ಬಂದು ತಾತ್ಕಾಲಿಕವಾಗಿ ಕೊಳಚೆ ನೀರು ಹರಿಯುವಂತೆ ಮಾಡಿ ಹೋಗುತ್ತಾರೆ. ಮತ್ತೆ ಅದೇ ಸಮಸ್ಯೆ ಎದುರಾಗುತ್ತದೆ. ಇದುವರೆಗೂ ಯಾವುದೇ ಒಳಚರಂಡಿ ನಿರ್ಮಿಸುವ ಕೆಲಸವಾಗಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಉಡಾಫೆ ಉತ್ತರ ನೀಡುತ್ತಾರೆ. ಸ್ಥಳೀಯ ಶಾಸಕರಿಗೂ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿದರು.
ನಗರಪಾಲಿಕೆ ಅಧಿಕಾರಿಗಳು ಕೂಡಲೇ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಸಮರ್ಪಕ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಬಡಾವಣೆಯ ಸಮಸ್ಯೆ ಕುರಿತು ಪಾಲಿಕೆಗೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪಾಲಿಕೆಯವರು ಕಂದಾಯ ವಸೂಲು ಮಾಡಿದರೂ ನಾವೇ ಚರಂಡಿ ಸ್ವಚ್ಛಗೊಳಿಸುವಂತಹ ಪರಿಸ್ಥಿತಿ ಎದುರಾಗಿದೆ. –ಗುರುಪ್ರಸಾದ್, ಸ್ಥಳೀಯರು
ಪಾಲಿಕೆ ವತಿಯಿಂದ ನಗರದ ವಿವಿಧೆಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕೂಡಲೇ ಈ ಸಮಸ್ಯೆ ಗಳನ್ನು ಪರಿಗಣಿಸಿ ಸಂಬಂಧಪಟ್ಟ ಇಂಜಿನಿಯರ್‌ಗೆ ಪರಿಶೀಲಿಸುವಂತೆ ಸೂಚಿಸಲಾಗುವುದು. ಎಲ್ಲೆಲ್ಲಿ ಕಾಮಗಾರಿ ಆಗಬೇಕಾಗಿದೆ ಅಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧಾರ ಕೈಗೊಳ್ಳುತ್ತೇವೆ.
-ಶೇಖ್ ತನ್ವೀರ್ ಆಸಿಫ್, ಆಯುಕ್ತರು, ನಗರಪಾಲಿಕೆ





