Mysore
17
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಾಗರಹೊಳೆ ಅಭಯಾರಣ್ಯದಲ್ಲಿ ಕ್ರಿಕೆಟ್ ಪಂದ್ಯ: ಅಧಿಕಾರಿಗಳ ವಿಚಾರಣೆ

ಬೆಂಗಳೂರು: ಕರ್ನಾಟಕದ ಅರಣ್ಯಗಳ ನಿರ್ವಹಣೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ ಎನ್ನಲಾದ ಕ್ರಿಕೆಟ್ ಪಂದ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅರಣ್ಯ ಇಲಾಖೆ ಮತ್ತೊಮ್ಮೆ ತೀವ್ರ ಪರಿಶೀಲನೆಗೆ ಒಳಗಾಗಿದೆ. ಈ ದೃಶ್ಯಗಳು ಪರಿಸರ ಸಂರಕ್ಷಣಾವಾದಿಗಳು ಮತ್ತು ವನ್ಯಜೀವಿ ಕಾರ್ಯಕರ್ತರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆ, ನಾಗರಹೊಳೆ ಹುಲಿ ಸಂರಕ್ಷಣಾ ಅಭಯಾರಣ್ಯದ ಅರಣ್ಯಾಧಿಕಾರಿಗಳನ್ನು, ಬೆಂಗಳೂರಿನ ಪ್ರಧಾನ ಕಚೇರಿಯ ಉನ್ನತ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಹೆಚ್ಚುತ್ತಿರುವ ಹಾಗೂ ಬುಡಕಟ್ಟು ಮತ್ತು ಅರಣ್ಯವಾಸಿಗಳ ಸ್ಥಳಾಂತರ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ನಾಗರಹೊಳೆ ಅರಣ್ಯದೊಳಗಿನ ನಾನಾಚ್ಚಿ ಗೇಟ್ ಬಳಿ ಜನರ ಗುಂಪೊಂದು ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುತ್ತಿರುವುದು ಕಂಡುಬಂದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಬುಧವಾರ ಮತ್ತು ಗುರುವಾರ ಪಂದ್ಯಾವಳಿ ನಡೆದಿದ್ದು, ಇದಕ್ಕಾಗಿ ಹೆಚ್ಚಿನ ಪ್ರಮಾಣದ ಗಿಡಗಳನ್ನು ತೆರವುಗೊಳಿಸಲಾಗಿದೆ. ಪಂದ್ಯವನ್ನು ವೀಕ್ಷಿಸಲು ಆಗಮಿಸಿದ ಹೆಚ್ಚಿನ ಸಂಖ್ಯೆಯ ಜನರು ತಮ್ಮ ವಾಹನಗಳನ್ನು ಮೈದಾನದ ಸುತ್ತಲೂ ನಿಲ್ಲಿಸಿ ತೆರೆದ ಸ್ಥಳದಲ್ಲಿ ಊಟ ಮಾಡುತ್ತಿರುವುದು ಕಂಡು ಬಂದಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಮಾತ್ರವಲ್ಲದೆ ಅರಣ್ಯ ಸಂರಕ್ಷಣಾ ಕಾಯ್ದೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳು ಮತ್ತು ಸುಪ್ರೀಂ ಕೋರ್ಟ್ ಆದೇಶಗಳ ಉಲ್ಲಂಘನೆ ಯಾಗಿದೆ ಎಂದು ಅರಣ್ಯ ಸಂರಕ್ಷಣವಾದಿಗಳು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಅರಣ್ಯ ಇಲಾಖೆಗಳಿಗೆ ಯಾವುದೇ ಅರಣ್ಯೇತರ ಚಟುವಟಿಕೆಗಳು ಮತ್ತು ಹಸಿರು ಹೊದಿಕೆಯನ್ನು ತೆರವುಗೊಳಿಸಲು ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿತ್ತು. ನಾಗರಹೊಳೆ ಹುಲಿ ಮೀಸಲು ನಿರ್ದೇಶಕಿ ಪಿ.ಎ. ಸೀಮಾ ಅವರು ಕಾಡಿನೊಳಗಿನ ಕುಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಮಕ್ಕಳು ಈ ಪಂದ್ಯವನ್ನು ಆಯೋಜಿಸಿದ್ದರು. ಸ್ಥಳವು ಸಫಾರಿ ಪಾಯಿಂಟ್ ಬಳಿ ಇದೆ. ಅವರು ಕಳೆದ ೧೦ ವರ್ಷಗಳಿಂದ ಅಲ್ಲಿ ಕ್ರಿಕೆಟ್ ಆಡುತ್ತಿದ್ದರು. ೨೦೧೫ ರಿಂದ ಈ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯಲಾಗಿಲ್ಲ ಮತ್ತು ಮರ ಕಡಿಯಲು ಯಾವುದೇ ಅನುಮತಿಯನ್ನೂ ನೀಡಿಲ್ಲ ಎಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

” ಕ್ರಿಕೆಟ್ ಆಟದ ವಿಡಿಯೋ ಮತ್ತು ಛಾಯಾಚಿತ್ರಗಳು ವೈರಲ್ ಆದ ಕೂಡಲೇ, ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವ ಈಶ್ವರ ಬಿ.ಖಂಡ್ರೆ ಅವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಽಕಾರಿ ಪಿ.ಸಿ.ರೈ ಅವರಿಗೆ ಪತ್ರ ಬರೆದಿದ್ದು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಏಳು ದಿನಗಳಲ್ಲಿ ವರದಿ ನೀಡಬೇಕೆಂದು ಸೂಚನೆ ನೀಡಿದ್ದಾರೆ”

Tags:
error: Content is protected !!