ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ
• ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ ಬಸವನಕಟ್ಟೆಯ ಕೋಡಿ ಪಕ್ಕದಲ್ಲಿ ಏರಿ ಬಿರುಕು ಬಿಟ್ಟು ನೀರು ಸೋರಿಕೆ ಆಗುತ್ತಿದೆ. ದಿನದಿಂದ ದಿನಕ್ಕೆ ಬಿರುಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಅಕ್ಕಪಕ್ಕದ ರೈತರು ಆತಂಕಗೊಂಡಿದ್ದಾರೆ.
ನೀರಿನ ಸೋರಿಕೆಯಿಂದ ಏರಿ ಒಡೆದರೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಸವನ ಕಟ್ಟೆಯ ಅಂಗಳದ ನೀರೆಲ್ಲ ಖಾಲಿಯಾಗಲಿದೆ. ಚಳಿಗಾಲ ಆರಂಭವಾಗಿದ್ದು, ಬೇಸಿಗೆ ಕಾಲ ಸಮೀಪಿಸುತ್ತಿದೆ. ನೀರು ಖಾಲಿಯಾದರೆ ಜನ, ಜಾನುವಾರುಗಳಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ಕಳವಳಗೊಂಡಿದ್ದಾರೆ.
ಸೋರಿಕೆಯಾಗಿ ಹುತ್ತೂರು ಕೆರೆಯಿಂದ 2ನೇ ಹಂತದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳಿಗೆ ಕಬಿನಿ ನೀರು ತುಂಬಿಸುವ ಯೋಜನೆಯಡಿ ನೀರು ತುಂಬಿಸಲಾಗುತ್ತಿದೆ. ಹುತ್ತೂರು ಕೆರೆಯಿಂದ ವಡ್ಡಗರೆ ಕೆರೆಗೆ ಕಬಿನಿ ನೀರು ಬರಲಿದೆ. ಅಲ್ಲಿಂದ ವಡೆಯನಪುರದ ಬಸವನ ಕಟ್ಟೆಗೆ ನೀರು ಬಂದು ತುಂಬುತ್ತಿದೆ.
ಬಸವನಕಟ್ಟೆ ತುಂಬಿ ಕೋಡಿ ಬಿದ್ದಿದೆ. ಇದರ ಸಮೀಪವಿರುವ ಏರಿ ಬಿರುಕು ಬಿಟ್ಟು ಮತ್ತಷ್ಟು ನೀರು ಸೋರಿಕೆಯಾಗಿ ತಗ್ಗು ಪ್ರದೇಶದ ಜಮೀನುಗಳಿಗೆ ಹರಿದು ಹೋಗುತ್ತಿದೆ. ತಗ್ಗು ಪ್ರದೇಶದಲ್ಲಿ ಕೃಷಿ ಪಂಪ್‌ಸೆಟ್‌ಗಳು, ಹುರುಳಿ ಫಸಲಿನ ಜಮೀನುಗಳಿವೆ.
ಏರಿಯಲ್ಲಿ ದೊಡ್ಡ ಬಿರುಕು ಉಂಟಾದರೆ ತುಂಬಿರುವ ನೀರು ನುಗ್ಗಿ ಏರಿಯೇ ಒಡೆಯುವ ಸಾಧ್ಯತೆಯಿದೆ. ಒಂದು ವೇಳೆ ಏರಿ ಒಡೆದರೆ ನೀರು ಪಂಪ್‌ಸೆಟ್ ಜಮೀನುಗಳ ಪಾಲಾಗಲಿದೆ. ಇದನ್ನು ತಪ್ಪಿಸಲು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಬಸವನಕಟ್ಟೆ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಹಳೆಯ ಕಾಲದ ಏರಿಯಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಏರಿ ಅಕ್ಕಪಕ್ಕ ಹಾಗೂ ಮೇಲೆಲ್ಲ ಗಿಡಗಂಟೆಗಳು ಬೆಳೆದು ನಿಂತಿವೆ. ಆದಷ್ಟು ಬೇಗ ಇವುಗಳನ್ನು ತೆರವು ಮಾಡಿ ಏರಿಯನ್ನು ಶುದ್ಧಗೊಳಿಸಬೇಕು. ಜೊತೆಗೆ ಬಿರುಕನ್ನು ಮುಚ್ಚಿ ನೀರು ಪೋಲಾಗದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಕೆರೆ ತುಂಬಿದ್ದರಿಂದ ಸುತ್ತಮುತ್ತಲಿನ ತಗ್ಗು ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸಿದೆ. ಇದಲ್ಲದೆ ಕೊಡಸೋಗೆ, ಬೊಮ್ಮಲಾಪುರ ಮತ್ತು ವಡೆಯನಪುರ ಗ್ರಾಮಗಳ ಜಾನುವಾರುಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. ಇದನ್ನು ಸಂರಕ್ಷಿಸಲು ಮುಂದಾಗಬೇಕು ಎಂಬ ಆಗ್ರಹಸ್ಥಳೀಯರಿಂದ ಕೇಳಿಬಂದಿದೆ.