ಪುನೀತ್ ಮಡಿಕೇರಿ
ಮಳೆಗಾಲದಲ್ಲಿ ಮೈ ಬೆಚ್ಚಗಿಡಲು ಏಡಿ ವಿಶೇಷ ಆಹಾರ
ಮಡಿಕೇರಿ: ಮಳೆಯ ನಡುವೆ ಮಡಿಕೇರಿ ನಗರದಲ್ಲಿ ಏಡಿ ಮಾರಾಟ ಬಲು ಜೋರಾಗಿದೆ.
ಹೌದು. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಚಳಿಗೆ ದೇಹವನ್ನು ಬೆಚ್ಚಗಿಡಲು ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಏಡಿ, ಬಿದಿರು ಕಣಿಲೆ, ಮರಕೆಸ ಮಾರಾಟ ಮಾಡುತ್ತಿದ್ದಾರೆ. ಏಡಿ ವ್ಯಾಪಾರ ಬಲು ಜೋರಾಗಿ ಸಾಗಿದರೆ, ಕಣಿಲೆ, ಮರಕೆಸ ಒಂದು ದಿನ ವ್ಯಾಪಾರವಾದರೆ, ಮತ್ತೊಂದು ದಿನ ಬೇಡಿಕೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಜಿಲ್ಲೆಯ ಜನರು ಮಳೆಗಾಲದಲ್ಲಿ ವಿವಿಧ ಬಗೆಯ ಖಾದ್ಯಗಳ ಮೊರೆ ಹೋಗುವುದು ಸಾಮಾನ್ಯ. ಅದರಲ್ಲೂ ಮೈಕೊರೆಯುವ ಚಳಿಯಿಂದ ಬೆಚ್ಚಗಿರಿಸುವಂತಹ ಆಹಾರ ಪದಾರ್ಥಗಳನ್ನು ಜನ ಹೆಚ್ಚಾಗಿ ಇಷ್ಟ ಪಡುತ್ತಾರೆ.
ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಹಾರಂಗಿ ಬ್ಯಾಕ್ ವಾಟರ್, ಎಚ್.ಡಿ.ಕೋಟೆ ಸೇರಿದಂತೆ ನದಿ, ತೋಡುಗಳಿಂದ ನಾಟಿ ಏಡಿಗಳನ್ನು ಹಿಡಿದು ತಂದು ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನ ಮಡಿಕೇರಿಗೆ ಸುಮಾರು ೬೦-೭೦ ಕೆ.ಜಿ.ಜೀವಂತ ಏಡಿಗಳೊಂದಿಗೆ ಆಗಮಿಸುವ ಮಡಿಕೇರಿ ಕುಮಾರ್ ೧೨ ಏಡಿಗಳನ್ನು ದಾರದಲ್ಲಿ ಪೋಣಿಸಿಡುತ್ತಾರೆ. ಏಡಿ ಮಾಲೆಗೆ ೩೫೦ ರೂ.ನಂತೆ ಮಾರಾಟ ಮಾಡಲಾಗುತ್ತದೆ. ಕೆ.ಜಿ.ಗೆ ೩೦೦ ರೂ.ನಂತೆ ಮಾರಾಟ ಮಾಡುತ್ತಿದ್ದಾರೆ.
ಏಡಿಯ ಉಷ್ಣಾಂಶ ಸರಿದೂಗಿಸುವ ಆಹಾರ: ನಮ್ಮ ದೇಹದ ಉಷ್ಣತೆಯನ್ನು ಕಾಪಾಡುವುದೇ ಏಡಿಯ ವಿಶೇಷ. ಬೇಸಿಗೆ ಕಳೆದು ಮಳೆಗಾಲ ಬಂದಾಗ ದೇಹದಲ್ಲಿನ ಉಷ್ಣಾಂಶ ಕಡಿಮೆಯಾಗುತ್ತದೆ. ಅದನ್ನು ಸರಿದೂಗಿಸುವುದಕ್ಕಾಗಿ ಇಂಥ ಆಹಾರಗಳನ್ನೇ ಮಳೆಗಾಲದಲ್ಲಿ ಹೆಚ್ಚು ಸೇವಿಸಲಾಗುತ್ತದೆ. ಈ ಹಿಂದೆ ಭತ್ತದ ಗದ್ದೆಗಳಲ್ಲಿ, ಹಳ್ಳಕೊಳ್ಳಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಏಡಿ ಮಳೆಗಾಲದ ಜಂಕ್ ಫುಡ್ ಇದ್ದಹಾಗೆ. ಇವುಗಳನ್ನು ಸುಟ್ಟು ತಿನ್ನುವುದು, – ಮಾಡಿ ತಿನ್ನುವುದು ಗ್ರಾಮೀಣ ಜನರ ಹವ್ಯಾಸ. ಆದರೆ, ಇಂದು ಗದ್ದೆಗೆ ರಾಸಾಯನಿಕ ಗೊಬ್ಬರ ಹಾಕುವುದರಿಂದ ಮತ್ತು ಗದ್ದೆಯಲ್ಲಿ ಶುಂಠಿ ಬೆಳೆ ಬೆಳೆಯಲು ಆರಂಭಿಸಿದ ಮೇಲೆ ಏಡಿಗಳ ಸಂತತಿ ಕ್ಷೀಣಗೊಳ್ಳುತ್ತಿದೆ.
ಉಷ್ಣಾಂಶ ಹೊಂದಿರುವ ಖಾದ್ಯಗಳಿವು: ಏಡಿಯಂತೆಯೇ ಮರಕೆಸ ಹಾಗೂ ಕಣಿಲೆ ಕೂಡ ಉಷ್ಣಾಂಶ ಹೊಂದಿರುವ ಒಂದು ಖಾದ್ಯ. ವ್ಯಾಪಾರಿಗಳು ಇಂದು ಸುಮಾರು ಅರ್ಧ ಕಿಲೋ ತೂಕ ಹೊಂದಿರುವ ಕಣಿಲೆಯ ಒಂದು ಪ್ಯಾಕೆಟ್ ಅನ್ನು ೬೦ ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅದೇ ರೀತಿ ಕರ್ಕಾಟಕ ಮಾಸದಲ್ಲಿ ಮರದ ಮೇಲೆ ಬಿಡುವ ಮರಕೆಸ ಎಂಬ ಸೊಪ್ಪು ಕೂಡ ಔಷಧ ರೂಪದೊಂದಿಗೆ ಉಷ್ಣಾಂಶ ಹೊಂದಿರುವ ಖಾದ್ಯವಾಗಿದೆ. ಕೊಡಗು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮರಕೆಸವನ್ನು ಬಳಸುತ್ತಾರೆ. ಆಟಿ ಮಾಸದಲ್ಲಿ ಒಂದು ದಿನವಾದರೂ ಈ ಸೊಪ್ಪನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಮರಕೆಸದಿಂದ ಪತ್ರೊಡೆ ಸೇರಿದಂತೆ ಇನ್ನಿತರ ಖಾದ್ಯಮಾಡಿ ಸವಿಯಲಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಬೆಳೆಯುವ ಬಿದಿರಿನ ಕಣಿಲೆ ಮತ್ತು ಮರಕೆಸಕ್ಕೆ ಕೆಲವೊಮ್ಮೆ ಬೇಡಿಕೆ ಕೂಡ ಇದೆ.
” ಏಡಿ ಕೊಂಡುಕೊಳ್ಳಲು ಜನ ಬರುತ್ತಿದ್ದಾರೆ. ಮಾರಾಟಕ್ಕೆ ತಂದ ಏಡಿಗಳು ಸಂಜೆ ಹೊತ್ತಿಗೆ ಖಾಲಿಯಾಗುತ್ತದೆ. ಹಾರಂಗಿ ಬ್ಯಾಕ್ ವಾಟರ್‌ನಿಂದ ಏಡಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇನೆ. ಕೊಡಗಿನಲ್ಲಿ ಹಲವು ಕಾರಣಗಳಿಂದ ಸ್ಥಳಿಯವಾಗಿ ಹೆಚ್ಚಿನ ಏಡಿ ದೊರೆಯುತ್ತಿಲ್ಲ. ಆದ್ದರಿಂದ ನಾವು ತಂದ ಏಡಿಯನ್ನು ಗ್ರಾಹಕರು ಕೊಂಡುಕೊಳ್ಳುತ್ತಾರೆ. ದಿನಕ್ಕೆ ೧೨ ಏಡಿಗಳುಳ್ಳ ೬೦-೭೦ ಸರಗಳು ಮಾರಾಟವಾಗುತ್ತದೆ.”
-ಕುಮಾರ್, ಏಡಿ ವ್ಯಾಪಾರಿ





