ಮುದ್ದಂಡ ಕುಟುಂಬಸ್ಥರಿಂದ ಹಾಕಿ ಹಬ್ಬಕ್ಕಾಗಿ ಭರ್ಜರಿ ಸಿದ್ಧತೆ : ಮಾ. ೨೮ರಿಂದ ಆರಂಭ
ಪುನೀತ್
ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಕೊಡವ ಹಾಕಿಯ ೨೫ನೇ ವರ್ಷದ ಬೆಳ್ಳಿ ಹಬ್ಬದ ಜವಾಬ್ದಾರಿ ಹೊತ್ತಿರುವ ಮುದ್ದಂಡ ಕುಟುಂಬಸ್ಥರು ಹಾಕಿ ಹಬ್ಬದ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.
ಮಾ. ೨೮ರಿಂದ ೨೫ನೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಆರಂಭವಾಗಲಿದೆ. ಒಂದು ತಿಂಗಳ ಕಾಲ ನಡೆಯುವ ಮುದ್ದಂಡ ಹಾಕಿ ಉತ್ಸವದಲ್ಲಿ ಅಂದಾಜು ೪೦೦ ತಂಡ ಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಕುಟುಂಬಗಳ ನೋಂದಣಿ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ.
ಆನ್ ಲೈನ್ ಮೂಲಕ ಮತ್ತು ನೇರವಾಗಿ ತಂಡಗಳ ನೋಂದಣಿ ಮಾಡಲಾಗುತ್ತಿದ್ದು, ಈಗಾಗಲೇ ೩೭೦ ತಂಡಗಳು ನೋಂದಣಿ ಮಾಡಿಕೊಂಡಿವೆ. ೨೫ ಹೊಸ ತಂಡಗಳ ನಿರೀಕ್ಷೆ: ಮಡಿಕೇರಿ ಸುತ್ತಮುತ್ತಲಿನ ಹೆಚ್ಚಿನ ಕೊಡವ ಕುಟುಂಬ ಗಳು ಕೌಟುಂಬಿಕ ಹಾಕಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಂತಹ ಕುಟುಂಬಗಳನ್ನು ಸಂಪರ್ಕಿಸಿ ಪಂದ್ಯಾ ವಳಿಗೆ ಆಹ್ವಾನಿಸುವ ಕೆಲಸವನ್ನು ಮದ್ದಂಡ ಕುಟುಂಬಸ್ಥರು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಅಂದಾಜು ೨೫ ಹೊಸ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮುದ್ದಂಡ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಿಷಿನ್ ಸುಬ್ಬಯ್ಯ ಹೇಳಿದ್ದಾರೆ.
ಮೈದಾನ ತಯಾರಿ ಪ್ರಕ್ರಿಯೆ ಆರಂಭ: ಈ ಬಾರಿಯ ಹಾಕಿ ಉತ್ಸವ ನಡೆಯಲಿರುವ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು ಆವರಣದಲ್ಲಿ ಈಗಾಗಲೇ ಹಾಕಿ ಮೈದಾನವನ್ನು ಸಿದ್ಧಪಡಿಸುವ ಕೆಲಸ ಆರಂಭಿಸಲಾಗಿದೆ. ಗ್ಯಾಲರಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎಂದಿ ನಂತೆ ಟಾಟಾ ಕಾಫಿ ಸಂಸ್ಥೆ ಈ ಬಾರಿಯೂ ಮೈದಾನ ತಯಾರಿ ಕೆಲಸದಲ್ಲಿ ಮುದ್ದಂಡ ಕುಟುಂಬದ ಜತೆ ಕೈ ಜೋಡಿಸಿದೆ.
ಹಾಕಿ ಉತ್ಸವಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿವೆ. ಅಂದಾಜು ೪೦೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈಗಾಗಲೇ ೩೭೦ ತಂಡಗಳು ನೋಂದಣಿ ಮಾಡಿಕೊಂಡಿವೆ. ಜಿಲ್ಲೆಯ ಶಾಸಕರು, ಸಂಸದರಾದಿಯಾಗಿ ಎಲ್ಲಾ ಪ್ರಮುಖರು ಪಂದ್ಯಾವಳಿಗೆ ಸಹಕರ ನೀಡಿದ್ದಾರೆ. ಮೈದಾನ ಸಿದ್ಧಗೊಳಿಸುವ ಪ್ರಕ್ರಿಯೆಯೂ ಈಗಾಗಲೇ ಆರಂಭವಾಗಿದೆ. -ಮುದ್ದಂಡ ರಿಷಿನ್ ಸುಬ್ಬಯ್ಯ, ಅಧ್ಯಕ್ಷರು, ಮುದ್ದಂಡ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್
ಒಟ್ಟು 13 ಲಕ್ಷ ರೂ.ನಗದು ಬಹುಮಾನ
ಕೊಡವ ಹಾಕಿ ಅಕಾಡೆಮಿ ಅಧೀನದಲ್ಲಿ ಕೌಟುಂಬಿಕ ಹಾಕಿ ಉತ್ಸವ ನಡೆಯುತ್ತಿದೆ. ವಿಜೇತರಿಗೆ ಒಟ್ಟು ೧೩ ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದೆ. ವಿಜೇತ ಕುಟುಂಬದವರು ೫ ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆಯಲಿದ್ದಾರೆರೆ. ರನ್ನರ್ಸ್ ತಂಡ ೩ ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆಯಲಿದ್ದಾರೆ.
ಸೆಮಿಫೈನಲ ಪರಾಜಿತ ಎರಡು ತಂಡಗಳಿಗೆ ತಲಾ ೧ ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೇ, ಈ ಬಾರಿ ವಿಶೇಷವಾಗಿ ಕುಟುಂಬವಾರು ಮಹಿಳಾ ರಿಂಕ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗುತ್ತಿದ್ದು, ವಿಜೇತ ಕುಟುಂಬಕ್ಕೆ ೨ಲಕ್ಷ ರೂ. ನಗದು ಹಾಗೂ ರನ್ನರ್ಸ್ ತಂಡಕ್ಕೆ ೧ ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಎರಡು ಪಂದ್ಯಾವಳಿ ಸೇರಿ ಒಟ್ಟು ೧೩ ಲಕ್ಷ ರೂ. ನಗದು ಬಹುಮಾನ ನೀಡುವುದು ಈ ಬಾರಿಯ ವಿಶೇಷವಾಗಿದೆ. ಪಂದ್ಯಾವಳಿ ಪುರುಷೋತ್ತಮನಿಗೆ ಎಥರ್ ಬೈಕ್ ಬಹುಮಾನ ನೀಡಲಾಗುವುದು. ಇನ್ನಿತರ ಸಾಧಕರಿಗೂ ಬಹುಮಾನಗಳನ್ನು ನೀಡಲಾಗುತ್ತದೆ.
ಮಾ. ೨೫ರಿಂದ ಕ್ರೀಡಾ ಜ್ಯೋತಿ ಮ್ಯಾರಥಾನ್
೨೫ನೇ ವರ್ಷದ ಹಾಕಿ ಉತ್ಸವದ ವಿಶೇಷತೆಯಾಗಿ ಈ ಬಾರಿ ಹಾಕಿ ಉತ್ಸವವನ್ನು ಆರಂಭಿಸಿದ ಪಾಂಡಂಡ ಕುಟುಂಬ ಸೇರಿದಂತೆ ಈವರೆಗೆ ಹಾಕಿ ಉತ್ಸವವನ್ನು ಆಯೋಜಿಸಿದ ಎಲ್ಲಾ ಕುಟುಂಬಗಳಿಂದಲೂ ಕ್ರೀಡಾ ಜ್ಯೋತಿಯನ್ನು ತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ. ೨೫ರಿಂದ ಮೂರು ದಿನಗಳ ಕಾಲ ಈ ಮ್ಯಾರಥಾನ್ ನಡೆಯಲಿದ್ದು, ಮಾ. ೨೮ರ ಉದ್ಘಾಟನಾ ಸಮಾರಂಭದ ವೇಳೆ ಕ್ರೀಡಾಂಗಣವನ್ನು ತಲುಪಲಿದೆ.





