Mysore
33
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಐತಿಹಾಸಿಕ ಸಂಸತ್ ಅಧಿವೇಶನಕ್ಕೆ ದಿನಗಣನೆ!

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ನಿರ್ಧಾರ 

ಏಪ್ರಿಲ್ ೧೬ರಿಂದ ೧೮ರವರೆಗೆ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದ್ದು, ಈ ಅಧಿವೇಶನ ಭಾರತದ ರಾಜಕೀಯದ ಮಟ್ಟಿಗೆ ಐತಿಹಾಸಿಕ ಅಧಿವೇಶನವಾಗುವ ಲಕ್ಷಣಗಳು ಸ್ಪಷ್ಟವಾಗಿವೆ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಬೇಡಿಕೆ ದಶಕಗಳಿಂದ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಸಂಗತಿ. ಲಿಂಗ ಸಮಾನತೆ ಎಂಬುದು ಕೇವಲ ಕಾಗದದ ಮೇಲೆ ಉಳಿಯದೇ ವಾಸ್ತವವಾಗಿ ಜಾರಿಗೆ ಬರಬೇಕು, ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸಮನಾಗಿ ಹೆಜ್ಜೆ ಹಾಕುತ್ತಿರುವ ಮಹಿಳೆಯರಿಗೆ ರಾಜ್ಯ- ದೇಶ ಮುನ್ನಡೆಸುವ, ಸರ್ಕಾರದ ಆಡಳಿತ, ನೀತಿ, ನಿರ್ಧಾರ ಕೈಗೊಳ್ಳುವುದರಲ್ಲಿಯೂ ಸಮಪಾಲು ದೊರೆಯಬೇಕೆಂಬ ನ್ಯಾಯ ಯುತ ಬೇಡಿಕೆ ಈಡೇರುವ ಸಮಯ ಈಗ ಬಂದಿದೆ.

ದೇಶದ ಎಲ್ಲಾ ರಾಜಕೀಯ ಪಕ್ಷಗಳು ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಬೇಕೆಂಬ ಅಭಿಪ್ರಾಯ ಹೊಂದಿವೆ, ಮಹಿಳಾ ಮೀಸಲಾತಿ ಪರವಾಗಿಯೇ ಇವೆ. ಆದರೆ, ಈ ಮೀಸಲಾತಿ ಜಾರಿಗೊಳಿಸುವುದಕ್ಕೆ ಸರಿಯಾದ ಸಮಯ ಮಾತ್ರ ಇಲ್ಲಿಯವರೆಗೆ ಬಂದಿರಲಿಲ್ಲ. ಕೆಲವೊಮ್ಮೆ ರಾಜಕೀಯ ಕಾರಣಗಳಿಗಾಗಿ, ಇನ್ನೂ ಕೆಲವೊಮ್ಮೆ ತಾಂತ್ರಿಕ ಕಾರಣಗಳಿಗಾಗಿ ಮಹಿಳಾ ಮೀಸಲಾತಿ ಜಾರಿ ಮುಂದೂಡಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ೨೦೨೩ರ ಸೆಪ್ಟೆಂಬರ್ ತಿಂಗಳಲ್ಲಿ ‘ನಾರಿ ಶಕ್ತಿ ವಂದನಾ ಅಧಿನಿಯಮ’ವನ್ನು ಸಂಸತ್ತಿನಲ್ಲಿ ಮಂಡಿಸಿ ಸರ್ವಾನುಮತದ ಅಂಗೀಕಾರವನ್ನು ಪಡೆದಿತ್ತು. ಆ ಅಧಿನಿಯಮಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡುವ ಮೂಲಕ ೨೦೨೯ರ ಲೋಕಸಭಾ ಚುನಾವಣೆ ಹಾಗೂ ಅದಕ್ಕಿಂತ ಮೊದಲು ಬರುವ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.೩೩ ಕ್ಷೇತ್ರಗಳನ್ನು ಮೀಸಲಿಡುವ, ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡುವ ಹಾಗೂ ಮಹಿಳಾ ಮೀಸಲಾತಿಗೆ ಸಂಬಂಽಸಿದ ಕ್ಷೇತ್ರಗಳ ನಿರ್ಧಾರ ಮತ್ತು ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸುವುದಕ್ಕೆ ಈಗ ವಿಶೇಷ ಅಧಿವೇಶನ ಕರೆಯಲಾಗಿದೆ.

ಸಾಮಾನ್ಯವಾಗಿ ವರ್ಷಕ್ಕೆ ಮೂರು ಬಾರಿ ಸಂಸತ್ತಿನ ಅಧಿವೇಶನ ನಡೆಯುತ್ತದೆ. ಬಜೆಟ್ ಅಧಿವೇಶನ, ಮಳೆಗಾಲ ಅಧಿವೇಶನ ಮತ್ತು ಚಳಿಗಾಲ ಅಧಿವೇಶನ. ಆದರೆ, ವಿಶೇಷ ಸಂದರ್ಭಗಳಲ್ಲಿ ರಾಜಕೀಯ ಅಥವಾ ಶಾಸನಾತ್ಮಕ ಅಗತ್ಯಗಳಿಗಾಗಿ ವಿಶೇಷ ಅಧಿವೇಶನ ಕರೆಯಲಾಗುತ್ತದೆ. ಅಂಥದೇ ಒಂದು ಮಹತ್ವದ ವಿಶೇಷ ಅಧಿವೇಶನಲ್ಲಿ ಈಗ ಭಾರತದ ರಾಜಕೀಯಕ್ಕೆ ಮಹತ್ವದ ತಿರುವು ಕೊಡಬಹುದಾದ ಮಹಿಳಾ ಮೀಸಲಾತಿ ಮಸೂದೆಯ ಕುರಿತು ಚರ್ಚೆ ನಡೆಯಲಿದೆ.

ಕ್ಷೇತ್ರ ಪುನರ್‌ವಿಂಗಡಣೆ ಆತಂಕ: ಮಹಿಳಾ ಮೀಸಲಾತಿಯ ಜೊತೆಗೆ ೨೦೨೬ರ ಜನಗಣತಿ ಆಧಾರದ ಮೇಲೆ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವುದು, ಸದ್ಯಕ್ಕೆ ೫೪೩ ಇರುವ ಲೋಕಸಭೆಯ ಸಂಖ್ಯಾ ಬಲವನ್ನು ೮೦೦ಕ್ಕೆ ಹೆಚ್ಚಿಸುವುದೂ ಸೇರಿದಂತೆ ಸಂಬಂಧಿತ ವಿಷಯಗಳ ಬಗ್ಗೆ ಈ ಅಧಿವೇಶನದಲ್ಲಿ ಮಹತ್ವದ ಚರ್ಚೆ ನಿರೀಕ್ಷಿಸಲಾಗಿದೆ.

ಆದರೆ, ಈ ಕ್ಷೇತ್ರ ಪುನರ್ ವಿಂಗಡಣೆ ಒಂದು ವಿವಾದಾತ್ಮಕ ವಿಷಯವಾಗಿದ್ದು, ಈ ವಿಚಾರದಲ್ಲಿ ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗುವ ನಿರೀಕ್ಷೆ ಇದೆ. ಸಂವಿಧಾನದ ಆಶಯದಂತೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯಬೇಕು. ಆದರೆ, ೨೦೧೧ರ ನಂತರ ದೇಶದಲ್ಲಿ ಜನಗಣತಿ ನಡೆದಿಲ್ಲ. ೨೦೨೧ರ ವೇಳೆ ಕೋವಿಡ್ ಕಾರಣದಿಂದಾಗಿ ಜನಗಣತಿ ನಡೆದಿರಲಿಲ್ಲ. ಈಗ ಹೊಸದಾಗಿ ಜನಗಣತಿ ನಡೆಯುತ್ತಿದೆಯಾದರೂ ಈ ಹೊಸ ಜನಗಣತಿ ಆಧರಿಸಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ ರಾಜಕೀಯವಾಗಿ ದಕ್ಷಿಣ ಭಾರತಕ್ಕೆ ಭಾರೀ ಅನ್ಯಾಯವಾಗಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಇಂಥ ಆತಂಕಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ೨೦೧೧ರ ಜನಗಣತಿ ಆಧಾರದ ಮೇಲೆಯೇ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕೆಂಬ ನಿರ್ಧಾರವನ್ನೂ ಈಗ ಕೇಂದ್ರ ಸರ್ಕಾರ ಮಾಡಿದೆ.

ಜನಸಂಖ್ಯೆ ಆಧಾರದ ಮೇಲೆ ನಡೆಯುವ ಕ್ಷೇತ್ರ ಪುನರ್‌ವಿಂಗಡಣೆಯಿಂದ ಉತ್ತರ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಬಹಳ ಹೆಚ್ಚಾಗಲಿವೆ. ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೇ ತಪ್ಪು ಎಂಬ ಅರ್ಥ ಬರಲಿದೆ. ಅಭಿ ವೃದ್ಧಿಯ ಎಲ್ಲ ಮಾನದಂಡಗಳಲ್ಲೂ ಮುಂದಿರುವ ಮತ್ತು ಜನಸಂಖ್ಯೆ ನಿಯಂತ್ರಣವನ್ನು ಸಮರ್ಥವಾಗಿ ಮಾಡಿರುವ ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದಾಗ ಕಡಿಮೆಯಾದರೆ ರಾಜಕೀಯವಾಗಿ ದಕ್ಷಿಣ ಭಾರತ ಅಪ್ರಸ್ತುತವಾಗುವ ಆತಂಕವಿದೆ. ಕೇವಲ ಉತ್ತರದ ೨-೩ ರಾಜ್ಯಗಳನ್ನು ಗೆದ್ದರೆ ಇಡೀ ದೇಶವನ್ನೇ ಗೆದ್ದಂತಾಗುವುದರಿಂದ ಭವಿಷ್ಯದಲ್ಲಿ ದೇಶದ ಏಕತೆ, ಅಖಂಡತೆಗೆ ಧಕ್ಕೆ ಉಂಟಾಗಬಹುದು, ನಮ್ಮ ದೇಶದ ಒಕ್ಕೂಟ ವ್ಯವಸ್ಥೆಗೂ ಮಾರಕವಾಗ ಬಹುದು ಎಂಬ ವಿಶ್ಲೇಷಣೆಗಳಿವೆ.

ಸರ್ಕಾರದ ಲೆಕ್ಕಾಚಾರ: ಮಹಿಳಾ ಮೀಸಲಾತಿ ಜಾರಿಗೊಳಿಸುವ ಮೂಲಕ ರಾಜಕೀಯವಾಗಿ ಲಾಭ ಪಡೆಯುವ ಲೆಕ್ಕಾಚಾರ ಮೋದಿ ಸರ್ಕಾರಕ್ಕೆ ಇದ್ದಂತಿದೆ. ಮಹಿಳಾ ಸಬಲೀಕರಣ, ಮಹಿಳೆಯರಿಗೆ ಸಮಾನ ಸ್ಥಾನಮಾನ ಒದಗಿಸುವ ಈ ಐತಿಹಾಸಿಕ ಮಸೂದೆಗೆ ಅಂಗೀಕಾರ ಪಡೆದು ೨೦೨೯ರ ಚುನಾವಣೆಯಲ್ಲಿ ಅನುಷ್ಠಾಣಗೊಳಿಸಿದರೆ ರಾಜಕೀಯವಾಗಿ ಬಿಜೆಪಿಗೆ ಲಾಭವಾಗಲಿದೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಮತದಾರರ ಮೇಲೆ ನೇರವಾಗಿ ಈ ಮಸೂದೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಚುನಾವಣೆಗಳಲ್ಲಿ ಭರ್ಜರಿ ಪ್ರಚಾರ ಮಾಡಿ ಮಹಿಳಾ ಮತದಾರರನ್ನು ಆಕರ್ಷಿಸಬಹುದಾಗಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಿದ್ದಂತಿದೆ. ಅದೇ ಕಾರಣಕ್ಕಾಗಿ ದಿಢೀರನೇ ಈಗ ವಿಶೇಷ ಅಧಿವೇಶನ ಕರೆದು ಈ ವಿಷಯವನ್ನು ಚರ್ಚಿಸಲಾಗುತ್ತಿದೆ.

ವಿರೋಧ ಪಕ್ಷಗಳ ಆಕ್ಷೇಪ: ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳೆಲ್ಲವೂ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ ಸ್ಥಾನಗಳನ್ನು ಮೀಸಲಿಡುವ ವಿಚಾರವನ್ನು ತಾತ್ವಿಕವಾಗಿ ಒಪ್ಪಿಕೊಂಡಿವೆ. ಆದರೆ, ಇದನ್ನು ಜಾರಿಗೊಳಿಸಲು ಹೊರಟಿರುವ ಸಮಯ ಮತ್ತು ಉದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸಿವೆ.

ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವ ಸಂಬಂಧ ತರಾತುರಿಯಲ್ಲಿ ವಿಶೇಷ ಅಧಿವೇಶನ ಕರೆದಿರುವ ಸರ್ಕಾರದ ನಿರ್ಧಾರದ ಹಿಂದೆ ಈ ಚುನಾವಣೆ ಮೇಲೆ ಪ್ರಭಾವ ಬೀರುವ ಉದ್ದೇಶವಿದ್ದಂತಿದೆ ಎಂಬುದು ಪ್ರಮುಖ ಆರೋಪ. ಕ್ಷೇತ್ರ ಪುನರ್‌ವಿಂಗಡಣೆ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಹಲವಾರು ಆಕ್ಷೇಪಗಳಿವೆ. ಕ್ಷೇತ್ರ ಪುನರ್ ವಿಂಗಡಣೆ ಮಾಡುವ ವಿಧಾನ ದೋಷಪೂರಿತವಾಗಿದೆ ಎಂಬುದು ವಿರೋಧ ಪಕ್ಷಗಳ ಅಭಿಪ್ರಾಯ. ೨೦೨೩ರ ಸೆಪ್ಟೆಂಬರ್ ತಿಂಗಳಲ್ಲೇ ಮಹಿಳಾ ಮೀಸಲಾತಿ ವಿಧೇಯಕ (ನಾರಿ ಶಕ್ತಿ ವಂದನಾ ಅಧಿನಿಯಮ) ಸಂಸತ್ತಿನಲ್ಲಿ ಅಂಗೀಕಾರವಾಗಿದ್ದರೂ ಹೊಸ ಜನಗಣತಿಯ ನಂತರವೇ ಮಹಿಳಾ ಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ಅದನ್ನು ಅನುಷ್ಠಾನಗೊಳಿಸಿರಲಿಲ್ಲ. ಈಗ ಏಕಾಏಕಿ ಹೊಸ ಜನಗಣತಿ ಇಲ್ಲದೇ ೨೦೧೧ರ ಜನಗಣತಿ ಆಧಾರದ ಮೇಲೆಯೇ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ, ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಿ, ಮಹಿಳಾ ಮೀಸಲಾತಿ ಜಾರಿಗೊಳಿಸುವ ತುರ್ತು ಸರ್ಕಾರಕ್ಕೆ ಏನಿದೆ? ಹಳೆಯ ಜನಗಣತಿ ಆಧಾರದ ಮೇಲೆಯೇ ಈ ಕಾನೂನು ಜಾರಿಗೊಳಿಸುವುದಾದರೆ ೨೦೨೪ರ ಲೋಕಸಭೆ ಚುನಾವಣೆಯನ್ನು ಇದೇ ಆಧಾರದ ಮೇಲೆ ಮಾಡಬಹುದಾಗಿತ್ತು ಎಂಬುದು ವಿರೋಧ ಪಕ್ಷಗಳ ಪ್ರಶ್ನೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ತಮ್ಮ ನಿಲುವು ರೂಪಿಸುವುದಕ್ಕಾಗಿ ಏಪ್ರಿಲ್ ೧೫ ರಂದು ವಿರೋಧ ಪಕ್ಷಗಳ ಒಕ್ಕೂಟದ ಸಭೆ ನಡೆಯಲಿದೆ.

ರಾಜಕೀಯ ಮತ್ತು ತಾಂತ್ರಿಕ ಸಮಸ್ಯೆಗಳು ಏನೇ ಇರಲಿ, ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಮಹಿಳಾ ನಾಯಕತ್ವ ಸೃಷ್ಟಿಗೆ ಕಾರಣವಾಗಲಿರುವ, ಮಹಿಳೆಯರ ಸಶಕ್ತೀಕರಣ ಹಾಗೂ ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲಿರುವ ಮತ್ತು ಪ್ರಜಾಪ್ರಭುತ್ವದ ಮೂಲ ಉದ್ದೇಶವಾಗಿರುವ ಸಮಾನತೆ ಮಹಿಳೆಯರಿಗೂ ದೊರಕುವಂತೆ ಮಾಡುವ ಈ ಐತಿಹಾಸಿಕ ಮಸೂದೆ ಅಂಗೀಕಾರವಾಗಿ ಶೀಘ್ರ ಅನುಷ್ಠಾನವಾಗುವ ಅಗತ್ಯವಂತೂ ಇದೆ.

” ಲಿಂಗ ಸಮಾನತೆ ಎಂಬುದು ಕೇವಲ ಕಾಗದದ ಮೇಲೆ ಉಳಿಯದೆ ವಾಸ್ತವವಾಗಿ ಜಾರಿಗೆ ಬರಬೇಕು, ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸಮನಾಗಿ ಹೆಜ್ಜೆ ಹಾಕುತ್ತಿರುವ ಮಹಿಳೆಯರಿಗೆ ರಾಜ್ಯ-ದೇಶ ಮುನ್ನಡೆಸುವ, ಸರ್ಕಾರದ ಆಡಳಿತ, ನೀತಿ, ನಿರ್ಧಾರ ಕೈಗೊಳ್ಳುವುದರಲ್ಲಿಯೂ ಸಮಪಾಲು ದೊರೆಯಬೇಕೆಂಬ ನ್ಯಾಯಯುತ ಬೇಡಿಕೆ ಈಡೇರುವ ಸಮಯ ಈಗ ಬಂದಿದೆ.”

 

 

Tags:
error: Content is protected !!