ಆನಂದ್ ಹೊಸೂರ್
೩೦ ಸಾವಿರಕ್ಕೂ ಅಧಿಕ ರಾಸುಗಳು ಭಾಗವಹಿಸುವ ನಿರೀಕ್ಷೆ; ರಾಸುಗಳನ್ನು ಕಟ್ಟಲು ರೈತರಿಂದ ಸಿದ್ಧತೆ
ಹೊಸೂರು: ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ೩೦ ಸಾವಿರಕ್ಕೂ ಅಧಿಕ ರಾಸುಗಳು ಭಾಗವಹಿಸುವ ನಿರೀಕ್ಷೆ ಕಂಡುಬರುತ್ತಿದೆ.
ಜನವರಿ ೫ರಿಂದ ಆರಂಭಗೊಳ್ಳುವ ಈ ಜಾನುವಾರು ಜಾತ್ರೆ ಹಳ್ಳಿಕಾರ್ ತಳಿಯ ರಾಸುಗಳಿಂದ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ಜಾತ್ರೆಯಲ್ಲಿ ಭಾಗವಹಿಸುವ ರೈತರು ಭರದಿಂದ ಜಾತ್ರಮಾಳಕ್ಕೆ ಆಗಮಿಸಿ ತಮ್ಮ ರಾಸುಗಳನ್ನು ಇಳಿಜಾರಿನಲ್ಲಿ ನಿಲ್ಲುವಂತೆ ಕಟ್ಟಲು ಧವಣಿಗಳನ್ನು ಮಾಡುತ್ತಿರು ವುದು ಕಂಡುಬರುತ್ತಿದೆ.
ಜಾತ್ರೆಗೆ ಬರುವ ರಾಸುಗಳನ್ನು ಕಟ್ಟಲು ಪ್ರತ್ಯೇಕ ಜಾಗ ಇಲ್ಲದ ಕಾರಣ ಚುಂಚನ ಕಟ್ಟೆಯ ಸುತ್ತ ಮುತ್ತ ಇರುವ ಜಾಗದಲ್ಲಿ ರೈತರ ಜಮೀನುಗಳನ್ನು ೧ ಗದ್ದೆಗೆ ೨ ರಿಂದ ೮ ಸಾವಿರ ರೂ. ನೀಡಿ ಅಲ್ಲಿ ರಾಸುಗಳನ್ನು ಕಟ್ಟಲು ಗದ್ದೆಗಳನ್ನು ಸ್ವಚ್ಛಗೊಳಿಸಿ ಧವಣಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೆ ತಮ್ಮ ರಾಸುಗಳ ವೈಭೋಗ ತೋರಲು ಬೃಹತ್ ಚಪ್ಪರ, ಶಾಮಿಯಾನ ಹಾಕಲು ತಯಾರಿ ನಡೆಸುತ್ತಿದ್ದಾರೆ. ಜಾತ್ರೆ ಇನ್ನು ೭ ದಿನಗಳಲ್ಲಿ ಭರ್ಜರಿಯಾಗಿ ಆರಂಭಗೊಳ್ಳಲಿದ್ದು ಇದಕ್ಕಾಗಿ ರಾಸುಗಳ ವ್ಯಾಪಾರಿಗಳು ಎದುರು ನೋಡುತ್ತಿದ್ದಾರೆ. ಕೋಟ್ಯಂತರ ರೂ. ವ್ಯಾಪಾರ ನಡೆಯುವುದು ನಿಶ್ಚಿತವಾಗಿದೆ.
ಶಾಸಕ ಡಿ ರವಿಶಂಕರ್ ಅವರು ಈಗಾಗಲೇ ಜಾತ್ರೆಯ ಪೂರ್ವಭಾವಿ ಸಭೆ ನಡೆಸಿ ಜಾತ್ರೆಗೆ ಅಗತ್ಯ ಮೂಲ ಭೂತ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಅಧಿಕಾರಿಗಳ ಸಿದ್ಧತೆ : ಜಾನುವಾರು ಜಾತ್ರೆಗಾಗಿ ಈಗಾಗಲೇ ರಸ್ತೆಯ ಬದಿಗೆ ಜಾತ್ರಾ ಮಾಳದಲ್ಲಿ ವಿದ್ಯುತ್ ದೀಪ ಅಲಂಕಾರ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಇಲ್ಲಿ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸುವುದು, ವಿದ್ಯುತ್ ದೀಪ ಅಳವಡಿಸುವುದು, ಆರೋಗ್ಯ ಇಲಾ ಖೆಯ ವತಿಯಿಂದ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರ, ಪಶು ಇಲಾಖೆಯ ವತಿಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ಈಗಾಗಲೇ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ.
ಈ ಜಾತ್ರೆಯ ಬಗ್ಗೆ ಜಿಲ್ಲಾಡಳಿತ ರಾಜ್ಯ ಮಟ್ಟದಲ್ಲಿ ಸೂಕ್ತ ಪ್ರಚಾರ ಕಲ್ಪಿಸುವ ಜತೆಗೆ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಯುವ ಮುಖಂಡ ಡೇರಿ ಮಾಧು ಒತ್ತಾಯಿಸಿದ್ದಾರೆ.
” ಜನವರಿ ೬ರಿಂದ ಚುಂಚನಕಟ್ಟೆ ಜಾನುವಾರು ಜಾತ್ರೆ ಆರಂಭಗೊಳ್ಳಲಿದ್ದು ರೈತರು ಆ ದಿನದಿಂದಲೇ ಜಾತ್ರಾಮಾಳಕ್ಕೆ ಜಾನುವಾರುಗಳನ್ನು ಕರೆತರಲು ಮುಂದಾಗಬೇಕು. ಅದಕ್ಕಿಂತ ಮೊದಲೇ ಬಂದರೆ ರಾಸುಗಳನ್ನು ವಾಪಸ್ ಕಳಿಸಲಾಗುವುದು. ಈ ಸಂಬಂಧ ತಹಸಿಲ್ದಾರ್ ನರಗುಂದ ಅವರು ಆದೇಶ ಮಾಡಿದ್ದಾರೆ”
-ಕೆ.ಜೆ.ಶರತ್ ಕುಮಾರ್, ಉಪತಹಸಿಲ್ದಾರ್ ಚುಂಚನಕಟ್ಟೆ