ದಾ.ರಾ.ಮಹೇಶ್
ಕ್ವಿಂಟಾಲ್‌ಗೆ ೨,೮೦೦ ರೂ. ಇದ್ದ ದರ ಈಗ ೧,೫೦೦ ರೂ.ಗೆ ಕುಸಿತ; ನೆರೆ ರಾಜ್ಯಗಳಿಂದ ಬೇಡಿಕೆಯಿಲ್ಲ
ವೀರನಹೊಸಹಳ್ಳಿ: ಮೆಕ್ಕೆಜೋಳದ ದರ ಕುಸಿತವಾಗಿರುವುದರಿಂದ ರೈತರು ಸಂಕಷ್ಟ ಕ್ಕೀಡಾಗಿದ್ದಾರೆ. ಜನವರಿ ಪೂರ್ವದಲ್ಲಿ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ ೨,೫೦೦ ರೂ.ನಿಂದ ೩,೦೦೦ ರೂ.ವರೆಗೆ ಬೆಲೆ ಇತ್ತು. ಕಳೆದ ಮಾರ್ಚ್‌ನಲ್ಲಿ ೨,೮೦೦ ರೂ. ಇದ್ದ ಬೆಲೆ ಸದ್ಯ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ೧,೪೦೦ರಿಂದ ೧,೫೦೦ ರೂ.ಗೆ ಕುಸಿದಿದೆ.
ಜೋಳದ ಶುಷ್ಕತೆ, ತೂಕ, ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧಾರ ಆಗುತ್ತದೆ. ಹೆಚ್ಚು ದಿನ ಸಂಗ್ರಹಿಸಿಟ್ಟರೆ ಬೇಡಿಕೆ ಕಡಿಮೆ ಆಗಬಹುದು. ಇದೇ ರೀತಿ ದರ ಕಡಿಮೆಯಾಗುತ್ತಿದ್ದರೆ ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ. ಕನಿಷ್ಠ ೧,೮೦೦ ರೂ.ನಿಂದ ೨೦೦೦ ರೂ. ದೊರೆತರೆ ಮಾತ್ರ ಬೆಳೆಗಾರರಿಗೆ ಸ್ವಲ್ಪ ಆದಾಯ ಬರುತ್ತದೆ ಎಂದು ವಡಗೆರೆಯ ಕೃಷಿಕರು ಹೇಳುತ್ತಾರೆ.
ಮಳೆಗೂ ಮೊದಲು ಬೆಳೆ ಕಟಾವು ಮಾಡಬೇಕು. ಮಳೆ ಹೆಚ್ಚಾದರೆ ನಿರ್ವಹಣೆಯ ವೆಚ್ಚ ಏರುತ್ತದೆ. ಸಂಗ್ರಹಕ್ಕೂ ಹಿನ್ನಡೆಯಾಗುತ್ತದೆ. ಇದನ್ನು ಅರಿತಿರುವ ಬೆಳೆಗಾರರು ಬೆಲೆ ಹೆಚ್ಚಾಗುವ ನಿರೀಕ್ಷೆಯಲ್ಲಿ ತೆನೆ ಕತ್ತರಿಸದೆ ಬಿಟ್ಟಿದ್ದಾರೆ. ಮತ್ತೆ ಕೆಲವರು ಕೊಯ್ಲೋತ್ತರ ಕೆಲಸದಲ್ಲಿ ನಿರತರಾಗಿದ್ದಾರೆ. ಹುಣಸೂರು ತಾಲ್ಲೂಕಿನಲ್ಲಿ ಶೇ.೨೫ರಷ್ಟು ಕೃಷಿಕರು ಮಾತ್ರ ಜೋಳ ಮಾರಾಟ ಮಾಡಿದ್ದಾರೆ. ಶೇ.೭೫ರಷ್ಟು ರೈತರು ಮಾರಾಟವನ್ನು ಮುಂದೂಡಿದ್ದಾರೆ. ನೆರೆ ರಾಜ್ಯದ ವ್ಯಾಪಾರಿಗಳು ಕೊಳ್ಳಲು ಮುಂದಾಗುತ್ತಿಲ್ಲ. ಆದರೆ, ಬಿಹಾರವು ತಮಿಳುನಾಡಿಗೆ ಕಡಿಮೆ ಬೆಲೆಗೆ ಜೋಳ ಪೂರೈಸುತ್ತಿದೆ. ಈ ಎಲ್ಲ ಕಾರಣಗಳಿಂದ ಮೆಕ್ಕೆಜೋಳ ಬೆಳೆಗಾರರು ಸ್ವಲ್ಪದಿನಗಳ ತನಕ ಕಾದುನೋಡುವ ತಂತ್ರ ಅನುಸರಿಸಿದ್ದಾರೆ.
ಸ್ಥಳೀಯ ಫಾರಂಗಳಿಗೆ ಮಾರಾಟ: ಕುಕ್ಕುಟೋದ್ಯಮಕ್ಕೆ ಪೂರೈಕೆ ಆಗುತ್ತಿದ್ದ ಮೆಕ್ಕೆ ಜೋಳಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೆಲೆ ಮಾತ್ರ ಹೆಚ್ಚುತ್ತಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಕೋಳಿ ಸಾಕಣೆದಾರರು ಮೆಕ್ಕೆಜೋಳ ಕೊಳ್ಳಲು ಸ್ಥಳೀಯ ದಲ್ಲಾಳಿಗಳು ಬಿಡುತ್ತಿಲ್ಲ ಎಂದು ಸ್ಥಳಿಯ ರೈತರು ದೂರುತ್ತಾರೆ. ಇದರಿಂದಾಗಿ ಸ್ಥಳೀಯ ಫಾರಂಗಳಿಗೆ ಧಾನ್ಯ ಮಾರಾಟ ಮಾಡಬೇಕಿದೆ ಎಂದು ರೈತ ಕೃಷ್ಣೇಗೌಡ ಹೇಳಿದರು.
” ಸರ್ಕಾರ ಮೆಕ್ಕೆಜೋಳಕ್ಕೆ ಕನಿಷ್ಠ ೨,೫೦೦ ರೂ. ಬೆಂಬಲ ಬೆಲೆ ಘೋಷಿಸಬೇಕು. ಇದರಿಂದ ರೈತರ ಬದುಕು ಹಸನಾಗುತ್ತದೆ.”
-ಅವಿನಾಶ್, ರೈತರು, ಹನಗೋಡು
” ನಮ್ಮ ಜಿಲ್ಲೆಯಲ್ಲಿ ಭತ್ತ, ರಾಗಿ ಹಾಗೂ ಹೆಸರುಕಾಳುಗಳಿಗೆ ಮಾತ್ರ ಬೆಂಬಲ ಬೆಲೆಗೆ ಅವಕಾಶವಿದ್ದು, ಹುಣಸೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮೆಕ್ಕೆಜೋಳಕ್ಕೂ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂಬ ಒತ್ತಾಯವಿದೆ. ಇದನ್ನು ಸಂಬಂಧಿಸಿದಂತೆ ಸಚಿವರು, ಅಧಿಕಾರಿಗಳ ಗಮನಕ್ಕೆ ತರಲಾಗುವುದು.”
-ಜಿ.ಡಿ.ಹರೀಶ್ ಗೌಡ, ಶಾಸಕರು





