Mysore
20
scattered clouds

Social Media

ಸೋಮವಾರ, 26 ಜನವರಿ 2026
Light
Dark

‘ಕೂರ್ಗ್ ವಿಲೇಜ್ ಯೋಜನೆ’ ಅರಣ್ಯ ರೋದನ

ನವೀನ್ ಡಿಸೋಜ

ಅನೈತಿಕ ಚಟುವಟಿಕೆ ತಾಣವಾಗುತ್ತಿದೆ ಅಚ್ಚ ಹಸಿರಿನ ಸುಂದರ ತಾಣ

ಮಡಿಕೇರಿ: ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೂರ್ಗ್ ವಿಲೇಜ್ ಯೋಜನೆ ನನೆಗುದಿಗೆ ಬಿದ್ದಿದ್ದು, ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಿದ್ದ ತಾಣ, ಈಗ ಉಪಯೋಗಕ್ಕೆ ಬಾರದಂತಾಗಿದೆ.

ಕೊಡಗಿನ ಸಂಸ್ಕ ತಿಯನ್ನು ಬಿಂಬಿಸುವ ಪಾರಂಪರಿಕ ಉತ್ಪನ್ನಗಳು ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ರಾಜಾಸೀಟ್ ಬಳಿ ಕೂರ್ಗ್ ವಿಲೇಜ್ ಯೋಜನೆಗೆ ಚಾಲನೆ ನೀಡಲಾಯಿತಾದರೂ, ಇಲ್ಲಿಯ ತನಕ ಅದು ಕಾರ್ಯರೂಪಕ್ಕೆ ಬಂದಿಲ್ಲ. ಪ್ರವಾಸಿಗರಿಗೆ ಕೊಡಗಿನ ಸಂಸ್ಕ ತಿ, ಪದ್ಧತಿ, ಪರಂ ಪರೆ ತಿಳಿಸುವುದರ ಜತೆಗೆ, ಸ್ಥಳೀಯ ಸಾಂಪ್ರದಾಯಿಕ ತಯಾರಿಕೆಗಳು, ಕೃಷಿ ಉತ್ಪನ್ನಗಳನ್ನು ಪ್ರವಾಸಿಗರು ಖರೀದಿ ಮಾಡಲು ಅವಕಾಶ ಕಲ್ಪಿಸುವುದಕೋಸ್ಕರ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ನಿಂದ ಸುಮಾರು ೧೧೫ ಮೀ. ದೂರದಲ್ಲಿ ಕೂರ್ಗ್ ವಿಲೇಜ್‌ನ್ನು ನಿರ್ಮಿಸಲಾಗಿದೆ.

ಈ ಕೂರ್ಗ್ ವಿಲೇಜ್ ನಿರ್ಮಿಸಿರುವ ಪ್ರದೇಶ ಅತ್ಯಂತ ಸುಂದರವಾಗಿದ್ದು, ಇಲ್ಲಿರುವ ಪುಟ್ಟ ಕೊಳ ಆಕರ್ಷಣೀಯವಾಗಿದೆ. ಭೂ ಪ್ರದೇಶ ಕೂಡ ಪ್ರವಾಸಿಗರನ್ನು ಸೆಳೆಯುವಂತಿದೆ. ಪ್ರಕೃತಿ ನಡುವೆ ವಿಹರಿಸುತ್ತಾ ಕೊಡಗು ಭೇಟಿಯ ನೆನಪು ಹಸಿರಾಗಿರುವಂತೆ ಶಾಪಿಂಗ್ ಮಾಡಲು ಬೇಕಾದ ಎಲ್ಲಾ ಅವಕಾಶಗಳು ಇಲ್ಲಿವೆ. ಆದರೆ, ಉಪಯುಕ್ತವಾಗುತ್ತಿಲ್ಲ ಎನ್ನುವ ನೋವು ಪ್ರಜ್ಞಾ ವಂತರನ್ನು ಕಾಡುತ್ತಿದೆ.

ಇಲ್ಲಿ ಸುಮಾರು ೯೮ ಲಕ್ಷ ರೂ. ವೆಚ್ಚದಲ್ಲಿ ಮಳಿಗೆಗಳನ್ನು ಕೂಡ ನಿರ್ಮಿಸಲಾಗಿದ್ದು, ಜಿಲ್ಲೆಯ ಸ್ತ್ರೀ ಶಕ್ತಿ ಸಂಘಗಳು, ತೋಟಗಾರಿಕೆ ಉತ್ಪನ್ನ ಕಂಪೆನಿಗಳು, ಏಲಕ್ಕಿ, ಜೇನು ಸೇರಿದಂತೆ ಕೊಡಗಿನ ಪಾರಂಪರಿಕ ಉತ್ಪನ್ನಗಳ ಉತ್ಪಾದಕರಿಗೆ ಸಂಬಂಧಿಸಿದ ಸಹಕಾರ ಸಂಘಗಳಿಗೆ ಹಂಚಿಕೆ ಮಾಡಲಾಗಿದ್ದರೂ, ಮಳಿಗೆಗಳು ಇಲ್ಲಿ ಕಾರ್ಯಾರಂಭ ಮಾಡಿಲ್ಲ.

ಹೀಗಾಗಿ ಕೊಡಗಿನ ಬಹು ನಿರೀಕ್ಷಿತ ಈ ಕೂರ್ಗ್ ವಿಲೇಜ್ ಯೋಜನೆ ನನೆಗುದಿಗೆ ಬಿದ್ದಿದೆ. ಕೂರ್ಗ್ ವಿಲೇಜ್ ಕೇಂದ್ರ ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗಿದ್ದು, ಪ್ರಚಾರ ಕೊರತೆಯಿಂದ ಪ್ರವಾಸಿಗರು ಇತ್ತ ಮುಖವನ್ನೇ ಹಾಕಲಿಲ್ಲ. ಜೊತೆಗೆ ಮಳೆಗಾಲವೂ ಆರಂಭವಾಗಿರುವುದರಿಂದ ವಿಲೇಜ್, ಈಗ ಅರಣ್ಯವಾಗಿ ಪರಿವರ್ತನೆಯಾಗಿದೆ. ವಿಲೇಜ್ ಪ್ರದೇಶದಲ್ಲಿ ಪ್ರವಾಸಿಗರು ವಿರಮಿಸಲು ನಿರ್ಮಿಸಿದ್ದ ಬೆಂಚುಗಳು ಗಿಡಗಂಟಿ ಗಳಿಂದ ಆವೃತವಾಗಿವೆ. ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ಲಕ್ಷಾಂತರ ರೂ. ಪೋಲಾಗಿದೆ. ತಾಣದ ಮುಖ್ಯದ್ವಾರಕ್ಕೆ ಬೀಗ ಜಡಿಯಲಾಗಿದ್ದು, ಅಚ್ಚ ಹಸಿರಿನ ಪರಿಸರದಿಂದ ಕಂಗೊಳಿಸುತ್ತಿದ್ದ ತಾಣ ಈಗ ಕಪ್ಪುಚುಕ್ಕೆಯಾಗಿ ಮಾರ್ಪಾಡಾಗುತ್ತಿದೆ. ಇದಕ್ಕೆ ಸ್ಥಳೀಯ ಜನರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು,ಕೂಡಲೇ ಈ ತಾಣವನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

” ಕೂರ್ಗ್ ವಿಲೇಜ್ ಯೋಜನೆ ಮೂಲಕ ಸರ್ಕಾರದ ಹಣ ಪೋಲು ಮಾಡಲಾಗಿದೆ. ವ್ಯವಸ್ಥಿತವಾಗಿ ಯೋಜನೆ ರೂಪಿಸಲು ಇಲಾಖೆಗಳು ವಿಫಲವಾಗಿವೆ. ಈಗ ಯೋಜನೆ ಕಾಡುಪಾಲಾಗಿದ್ದು, ಇಂತಹ ಯೋಜನೆಗಳಿಂದ ಅನೈತಿಕ ಚಟುವಟಿಕೆಗೆ ಇಲಾಖೆಯೇ ಅನುವು ಮಾಡಿಕೊಡುತ್ತಿರುವಂತಿದೆ. ಸಂಬಂಧಪಟ್ಟವರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.”

-ಹರೀಶ್ ಜಿ. ಆಚಾರ್ಯ, ಸ್ಥಳೀಯರು

ರಸ್ತೆಬದಿ ವ್ಯಾಪಾರಿಗಳಿಗೆ ‘ವಿಲೇಜ್’ ಒಳಗೇ ಜಾಗ ಸಿಗಬೇಕು:  ರಾಜಾಸೀಟ್ ಸಮೀಪದಲ್ಲೇ ಈ ಯೋಜನೆ ರೂಪಿಸಲಾಗಿದೆ. ಸದ್ಯ ರಾಜಾಸೀಟ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆಯೂ ಇದೆ. ವಾರಾಂತ್ಯಗಳಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಜೊತೆಗೆ ರಸ್ತೆಬದಿಯಲ್ಲೇ ಗಾಡಿಗಳಲ್ಲಿ ವಿವಿಧ ಖಾದ್ಯ, ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ರಸ್ತೆ ಬದಿ ವ್ಯಾಪಾರಿಗಳಿಗೆ ಕೂರ್ಗ್ ವಿಲೇಜ್‌ನಲ್ಲಿ ಮಳಿಗೆ ನೀಡಿದಲ್ಲಿ ಜನಜಂಗುಳಿ ಕಡಿಮೆಯಾಗುವುದರೊಂದಿಗೆ ಒಂದಷ್ಟು ಸ್ಥಳಾವಕಾಶ ಕೂಡ ದೊರೆಯಲಿದೆ. ಹೀಗಾಗಿ ರಸ್ತೆಬದಿ ವ್ಯಾಪಾರಿಗಳಿಗೆ ಕೂರ್ಗ್ ವಿಲೇಜ್‌ನಲ್ಲಿ ಮಳಿಗೆ ನೀಡುವುದು ಅಗತ್ಯ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿವೆ.

” ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರವಾಸಿಗರನ್ನು ಸೆಳೆಯಲು ಕೂರ್ಗ್ ವಿಲೇಜ್ ಯೋಜನೆಯನ್ನು ರೂಪಿಸಲಾಗಿತ್ತು. ಮಳಿಗೆಗಳ ಹಂಚಿಕೆ ನಡೆದಿತ್ತಾದರೂ ಸಂಘ ಸಂಸ್ಥೆಗಳು ಮುಂದೆ ಬರದಿರುವುದರಿಂದ ಯೋಜನೆ ಹಾಗೆಯೇ ನಿಂತಿದೆ. ಕೂರ್ಗ್ ವಿಲೇಜ್ ಯೋಜನೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ. ಜೊತೆಗೆ ಇತರ ಇಲಾಖೆಯ ಸಹಯೋಗದಲ್ಲಿ ಶೀಘ್ರದಲ್ಲೇ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.”

-ಶಶಿಧರ್, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ 

Tags:
error: Content is protected !!