ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ಪಾಲು ಹಾಗೂ ರಾಜ್ಯದ ಪಾಲು ಎಂಬ ತರ್ಕದ ಕ್ರೆಡಿಟ್ ಕಲಹ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ನಿರಂತರವಾಗಿ ನಡೆಯುತ್ತಿದ್ದ ಅನುದಾನದ ಸಂಘರ್ಷ ಇದೀಗ ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ವೇದಿಕೆಯಲ್ಲಿಯೇ ನಡೆದಿರುವುದು ವಿಪರ್ಯಾಸ.
ರಾಷ್ಟ್ರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಕೈಜೋಡಿಸಬೇಕೇ ವಿನಾ ಈ ರೀತಿ ಅನುದಾನದ ಜಟಾಪಟಿಗೆ ಇಳಿದು ವೇದಿಕೆಯನ್ನು ಬಳಸಿಕೊಳ್ಳುವುದು ಮುಜುಗರ ತರುವ ವಿಚಾರ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಕ್ಕೆ ಅನುದಾನದ ಕೊರತೆ ಆಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿ.
ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಬೇಕಾದ ಹಣವನ್ನು ಸಮರ್ಪಕವಾಗಿ ನೀಡಿದರೆ, ಕೇಂದ್ರ ಹಾಗೂ ರಾಜ್ಯ ಸಹಭಾಗಿತ್ವದ ಯೋಜನೆಗಳಿಗೆ ತಾರತಮ್ಯವಿಲ್ಲದೆ ಅನುದಾನವನ್ನು ಒದಗಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯಡಿ ಅಸಮಾಧಾನ ಅಪಸ್ವರಗಳಿಗೆ ಆಸ್ಪದ ಕೊಡದೆ ಸಮನ್ವಯವನ್ನು ಸಾಧಿಸುವುದು ಒಳಿತು.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





