Mysore
21
scattered clouds
Light
Dark

ಹಬ್ಬದ ಸವಿಗೆ ಅಡುಗೆಯ ಸಿಹಿ

• ಪರಿಣಿತ, ಶ್ರೀರಂಗಪಟ್ಟಣ

ಇನ್ನೇನು ಗೌರಿ-ಗಣೇಶ ಹಬ್ಬ ಬಂದೇಬಿಟ್ಟಿತು. ಹಬ್ಬದ ಮೊದಲ ದಿನ ಯಾವ ಬಟ್ಟೆ ಹಾಕಿ ಕೊಳ್ಳಬೇಕು? ಎರಡನೆಯ ದಿನ ಚೌತಿಗೆ ಈ ಬಟ್ಟೆ ಆಗಬಹುದೆಂಬ ಲೆಕ್ಕಾಚಾರಗಳೆಲ್ಲ ಮುಗಿದಂತಿವೆ. ಮನೆಯಲ್ಲಿ ಆಗಲೇ ಒಂದು ಹಂತದ ಸ್ವಚ್ಛತಾ ಕಾರ್ಯ ಆಗಿರಲೂಬಹುದು. ಗೌರಿ ಗಣೇಶನನ್ನು ಬರಮಾಡಿ ಕೊಳ್ಳುವುದಷ್ಟೇ ಬಾಕಿ ಎಂಬಂತೆ ಜನರೆಲ್ಲ ಉತ್ಸಾಹದಲ್ಲಿದ್ದಾರೆ.

ಏನೇ ಹೇಳಿ ಹಬ್ಬಕ್ಕೆ ವಿಶೇಷ ಕಳೆಯೆಂದರೆ ತಿಂಡಿ ತಿನಿಸುಗಳು. ನಾವೆಲ್ಲ ಚಿಕ್ಕವರಿದ್ದಾಗ ಮನೆ ಮಂದಿಯೆಲ್ಲ ಒಟ್ಟುಗೂಡಿ ಮೋದಕ, ಕರ್ಜಿಕಾಯಿ, ಸಿಹಿ ಕಡುಬು, ಚಕ್ಕುಲಿ, ತಂಬಿಟ್ಟು ಮಾಡು ತ್ತಿದ್ದೆವು. ಪಾಕ ವಿಧಾನಗಳು ಗೊತ್ತಿಲ್ಲದಿದ್ದರೂ ಹಿಟ್ಟಿನಲ್ಲಿ ಸಿಹಿ ತುಂಬಿ, ಚೂಪನೆಯ ಗೋಪುರ ಕಟ್ಟಿದರೆ, ಮೋದಕ ಆಗುವುದೆಂದು ತಿಳಿದಿತ್ತು! ಜೊತೆಗೆ ಅಮ್ಮ ಹೂರಣ ತಯಾರಿಸುತ್ತಿದ್ದರೆ, ಪಾಕ ಬಂತೇ ಇಲ್ಲವೇ ಎಂದು ಘಮದಲ್ಲೇ ಆಜ್ಜಿ ಹೇಳಿಬಿಡುತ್ತಿದ್ದರು.

ಇವತ್ತಿನ ಕಾಲಕ್ಕೆ ಪಕ್ಕದಲ್ಲಿರುವ ಅಥವಾ ಇನ್ಯಾವುದೋ ಪ್ರಸಿದ್ದವಾದ ಸ್ವೀಟ್ ಅಂಗಡಿಗೆ ತೆರಳಿ, ಬೇಕಾದ್ದೆಲ್ಲವನ್ನೂ ಪ್ಯಾಕ್ ಕಟ್ಟಿಸಿಕೊಂಡು ಬಂದು ಬಿಡುತ್ತೇವೆ. ಅದಕ್ಕಿಂತ ಸುಲಭ ವಾಗಿ, ಶುಚಿ ರುಚಿಯಾಗಿ ಮನೆಯಲ್ಲೇ ಮಾಡಿಕೊಳ್ಳಬಲ್ಲ ಕೆಲ ವಿಶೇಷ ಅಡುಗೆಯನ್ನು ನಾನಿಲ್ಲಿ ತಿಳಿಸುತ್ತಿದ್ದೇನೆ.

ಮೋದಕ ಮಾಡುವ ವಿಧಾನ: ಒಂದು ಕಪ್ ಗೋಧಿ ಹಿಟ್ಟಿಗೆ ಒಂದು ಚಮಚದಷ್ಟು ತುಪ್ಪ ಸೇರಿಸಿ, ಅದನ್ನು ಚಪಾತಿಯ ಹದಕ್ಕೆ ಕಲಿಸಿಕೊಂಡು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಬೇಕು. ತುಪ್ಪ ಸವರಿಟ್ಟರೆ ಅಥವಾ ಒದ್ದೆ ಬಟ್ಟೆ ಮುಚ್ಚಿಟ್ಟರೆ ಒಳ್ಳೆಯದು. ಪಾತ್ರೆಗೆ ಒಂದು ಕಪ್ ಬೆಲ್ಲ, ಸ್ವಲ್ಪ ಸ್ವಲ್ಪ ನೀರು ಬೆರೆಸಿ ಕಾಯಿಸಬೇಕು. ಪಾಕ ಸರಿಯಾಗಿ ಬಂತೆಂಬುದನ್ನು ತಿಳಿಯಲು ಬೆಲ್ಲದ ಪಾಕವನ್ನು ಬೆರಳ ಸಹಾಯದಿಂದ ಗಮನಿಸಬೇಕು. ಬೆರಳುಗಳೆರಡನ್ನು ಎಳೆವಾಗ, ತುಂಡಾಗದೆ ಒಂದೆಳೆ ಬಂತೆಂದರೆ ಪಾಕವಾಯಿತೆಂದು ಅರ್ಥ. ಇಲ್ಲದಿದ್ದರೆ, ಸಣ್ಣ ತಟ್ಟೆಗೆ ನೀರು ಹಾಕಿ, ಎರೆದ ಪಾಕ ಉಂಡೆ ಕಟ್ಟುವ ಹದಕ್ಕೆ ಬಂದಿರಬೇಕು. ಹಾಗೆ ಪಾಕ ಬಂದಾದ ಮೇಲೆ, ತೆಂಗಿನಕಾಯಿ ತುರಿ ಸೇರಿಸಿ, ಎಳ್ಳು, ಏಲಕ್ಕಿ ಪುಡಿ ಸೇರಿಸಿದರೆ ಹೂರಣ ತಯಾರು. ಬೇಕಿದ್ದರೆ ಹುರಿಗಡಲೆ ಪುಡಿಯನ್ನೂ ಸೇರಿಸಬಹುದು. ಕಲೆಸಿಟ್ಟ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ, ತೆಳುವಾಗಿ ನಾದಬೇಕು. ಅದಕ್ಕೆ ಸ್ವಲ್ಪ ಹೂರಣ ಸೇರಿಸಿ, ಪರದೆಯಂತೆ ಒಂದು ಕಡೆಯಿಂದ ಹಿಟ್ಟನ್ನು ಎಳೆದು, ಮೇಲೆ ಚೂಪಾಗಿಸಿದರೆ ಕೆಲಸ ಮುಗಿದಂತೆ ಸರಿ. ಇನ್ನು ಅವೆಲ್ಲವನ್ನು ಎಣ್ಣೆ ಅಥವಾ ತುಪ್ಪದಲ್ಲಿ ಕರಿದರೆ ಮೋದಕ ತಯಾರು.

ತಂಬಿಟ್ಟು ಮಾಡುವ ವಿಧಾನ: ಒಂದು ಕಪ್ ಹೆಸರುಕಾಳು ಅಥವಾ ಹೆಸರುಬೇಳೆಯ ಜೊತೆಗೆ ನಾಲೈದು ಏಲಕ್ಕಿ ಹಾಕಿ, ಕೆಂಪು ಬಣ್ಣ ಬರುವವರೆಗೂ ಹುರಿದು ಪುಡಿಮಾಡಿಟ್ಟುಕೊಳ್ಳಬೇಕು. ಅದಾದ ಮೇಲೆ ಎರಡು ಮುಷ್ಠಿ ಕಡ್ಲೆಕಾಯಿ ಬೀಜವನ್ನೂ ಹುರಿದು, ತಣ್ಣಗಾದ ಮೇಲೆ ಸಿಪ್ಪೆ ಬಿಡಿಸಿಡಬೇಕು. ಒಲೆಯ ಮೇಲಿಟ್ಟ ಪಾತ್ರೆಗೆ ಮುಕ್ಕಾಲು ಕಪ್‌ನಷ್ಟು ಬೆಲ್ಲ ಮತ್ತು ಸ್ವಲ್ಪ ನೀರನ್ನು ಸೇರಿಸಿ, ಒಂದೆಳೆ ಪಾಕ ತಯಾರಿಸಿ, ಅದಕ್ಕೆ ಪುಡಿಯನ್ನು ಸೇರಿಸಿದ ನಂತರ ಒಲೆ ಆರಿಸಬೇಕು. ನಿಧಾನವಾಗಿ ಪುಡಿ ಮತ್ತು ಪಾಕದ ಜೊತೆ ಕಡ್ಲೆಕಾಯಿ ಬೀಜ, ತುಪ್ಪ ಹಾಕಿ, ಬಿಸಿ ಇರುವಾಗಲೇ ಉಂಡೆ ಕಟ್ಟಿಟ್ಟುಕೊಂಡರೆ, ಹಬ್ಬಕ್ಕೆ ಬೇಕಾದ ತಂಬಿಟ್ಟು ಸಿದ್ಧ.

ಸಿಹಿಕಡುಬು ಮಾಡುವ ವಿಧಾನ: ಒಂದು ಕಪ್ ಅಕ್ಕಿಯನ್ನು ಒಂದೆರಡು ಗಂಟೆ ನೆನೆಸಿ, ಅದಕ್ಕೆ ಅರ್ಧ ಕಪ್ ತೆಂಗಿನಕಾಯಿ ತುರಿ, ಉಪ್ಪು ಮತ್ತು ಚೂರೇ ಚೂರು ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಹದದಲ್ಲಿ ರುಬ್ಬಿಟ್ಟುಕೊಳ್ಳಬೇಕು. ಅರಿಶಿನದ ಎಲೆ ಸಿಕ್ಕರೆ ಒಳ್ಳೆಯದು. ಇಲ್ಲದಿದ್ದರೆ ಬಾಳೆ ಎಲೆಯಲ್ಲಿಯೂ ಮಾಡಬಹುದು. ಎಲೆಯುದಕ್ಕೂ ಅದನ್ನು ಎರೆದು, ಹೂರಣವನ್ನು ಮಧ್ಯಕ್ಕೆ ಹಾಕಿ ಮುಚ್ಚಿ, ಹಬೆಯಲ್ಲಿ ಇಪ್ಪತ್ತು ನಿಮಿಷಗಳವರೆಗೆ ಬೇಯಿಸಿದರೆ ಸಿಹಿ ಕಡುಬು ತಯಾರು.