Mysore
26
scattered clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ಓದುಗರ ಪತ್ರ: ಹಳೆಯ ಪಿನ್‌ಕೋಡನ್ನೇ ಮುಂದುವರಿಸಿ

ಕಳೆದ ವರ್ಷ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನೂತನವಾಗಿ ಅಂಚೆ ಕಚೇರಿಯನ್ನು ತೆರೆದು, ನೂತನ ಪಿನ್‌ಕೋಡ್ (570 034) ಅನ್ನು ಈ ಹೊಸ ಅಂಚೆ ಕಚೇರಿಗೆ ನೀಡಲಾಗಿತ್ತು.

ಈ ಅಂಚೆ ಕಚೇರಿಗೆ ಕುವೆಂಪುನಗರದ ಎನ್-ಬ್ಲಾಕ್, ಅರವಿಂದ ನಗರ, ಐಶ್ವರ್ಯಾ ನಗರ, ವಿವೇಕಾನಂದ ನಗರದ ಸ್ವಲ್ಪ ಭಾಗವನ್ನು ಸೇರಿಸಲಾಗಿತ್ತು.

ಈ ಹಿಂದೆ ಕುವೆಂಪುನಗರದ ಎನ್-ಬ್ಲಾಕ್ ಸೇರಿದಂತೆ ಹಲವು ಬಡಾವಣೆಗಳು ಕುವೆಂಪುನಗರದ ಅಂಚೆಕಚೇರಿಯ ವ್ಯಾಪ್ತಿಗೆ ಸೇರಿದ್ದು, ಪಿನ್‌ಕೋಡ್ ಸಂಖ್ಯೆ 570023 ಆಗಿತ್ತು. ಇದರಿಂದಾಗಿ ಕುವೆಂಪುನಗರದ ನಿವಾಸಿಗಳಿಗೆ ತಲುಪಬೇಕಿದ್ದ ಪತ್ರಗಳು ನಿಗದಿತ ಸಮಯಕ್ಕೆ ತಲುಪುತ್ತಿದ್ದವು. ಆದರೆ ಈಗ ಶ್ರೀರಾಂಪುರದ ನೂತನ ಅಂಚೆಕಚೇರಿಯ ವ್ಯಾಪ್ತಿಗೆ ಕುವೆಂಪುನಗರವನ್ನು ಸೇರಿಸಿರುವುದರಿಂದ ಪಿನ್‌ಕೋಡ್ ಕೂಡ ಬದಲಾಗಿದ್ದು, ಹಳೆಯ ಪಿನ್ ಕೋಡ್ ಬಳಸಿ ಬರೆದ ಪತ್ರಗಳು ಮೊದಲು ಕುವೆಂಪುನಗರದ ಅಂಚೆಕಚೇರಿಗೆ ಹೋಗಿ ಅಲ್ಲಿಂದ ಶ್ರೀರಾಂಪುರ ಅಂಚೆಕಚೇರಿಗೆ ಬಂದು ನಂತರ ಸಂಬಂಧಪಟ್ಟವರ ಕೈ ಸೇರುತ್ತಿವೆ. ಇನ್ನು ಸ್ಪೀಡ್ ಪೋಸ್ಟ್ ಪತ್ರಗಳೂ 2-3 ದಿನಗಳು ತಡವಾಗಿ ಸಂಬಂಧಪಟ್ಟವರ ಕೈ ಸೇರುತ್ತಿವೆ. ಈ ಬಗ್ಗೆ ಅಂಚೆಕಚೇರಿಯಲ್ಲಿ ವಿಚಾರಿಸಿದಾಗ ಪಿನ್‌ಕೋಡ್ ಬದಲಾಗಿರುವುದರಿಂದ ಪತ್ರಗಳು ತಡವಾಗಿ ಬರುತ್ತಿವೆ ಎನ್ನುತ್ತಿದ್ದಾರೆ.

ಕುವೆಂಪುನಗರದ ಜನರು ಕಳೆದ 20 ವರ್ಷಗಳಿಂದಲೂ ಹಳೆಯ ಪಿನ್ ಕೋಡನ್ನೇ ಬಳಸುತ್ತಿದ್ದು, ಕುವೆಂಪುನಗರದಲ್ಲಿರುವವರಿಗೆ ಪತ್ರ ಬರೆಯುವವರೂ ಹಳೆಯ ಪಿನ್‌ಕೋಡ್ ಬಳಸಿಯೇ ಪತ್ರ ಬರೆಯುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕುವೆಂಪುನಗರಕ್ಕೆ ಈ ಹಿಂದೆ ಇದ್ದ ಹಳೆಯ ಪಿನ್‌ಕೋಡನ್ನೇ ಮುಂದುವರಿಸಬೇಕಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags:
error: Content is protected !!