ಎಚ್.ಎಸ್.ದಿನೇಶ್ ಕುಮಾರ್
ನಾಗಮಂಗಲ ಪ್ರಕರಣ ಹಿನ್ನೆಲೆ ಆಂದೋಲನ ವಿಶೇಷ ವರದಿ
ಮೈಸೂರು: ಮಕ್ಕಳನ್ನು ಸಂತೋಷಪಡಿಸುವುದಕ್ಕಾಗಿ ಕೊಡಿಸುವ ತಿನಿಸು, ಅವರ ಆರೋಗ್ಯ ಅಥವಾ ಪ್ರಾಣಕ್ಕೇ ಸಂಚಕಾರ ತಂದುಬಿಟ್ಟರೆ, ಪೋಷಕರ ಗತಿಯೇನು? ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಇತ್ತೀಚೆಗೆ ಬೇಕರಿ ತಿನಿಸು ಸೇವಿಸಿದ ಮಗುವೊಂದು ಅಸ್ವಸ್ಥಗೊಂಡಿದ್ದು, ಎರಡು ಬೇಕರಿಗಳಿಗೆ ಬೀಗ ಹಾಕಿದ ಘಟನೆ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಇಂತಹದೊಂದು ಪ್ರಶ್ನೆ ವ್ಯಾಪಕ ಚರ್ಚೆಗೊಳಪಟ್ಟಿದೆ.
ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಿಂದಿನಿಂದಲೂ ಕಲಬೆರಕೆ ಆಹಾರ ಸೇವಿಸಿದವರು ಅನಾರೋಗ್ಯಕ್ಕೀಡಾದ ಪ್ರಕರಣಗಳುಕಂಡುಬಂದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಈಗಿನ ಪ್ರಕರಣ ಒಂದರ ಹೊರತಾಗಿ ಬೇರೆಯವು ಇಲ್ಲ. ಮೈಸೂರಿನಲ್ಲಿ ಕೂಡ ಅಂತಹ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ.
ಹೋಟೆಲ್ ಹಾಗೂ ಬೇಕರಿಗಳಲ್ಲಿ ಅಶುಚಿತ್ವ ಹಾಗೂ ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡುವವರವಿರುದ್ಧ ಸಮರ ಸಾರಿರುವ ಮೈಸೂರು ನಗರಪಾಲಿಕೆ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತಹ ವ್ಯಾಪಾರಿಗಳಿಂದ ೧೫ ಲಕ್ಷ ರೂ.ವರೆಗೂ ದಂಡ ವಿಧಿಸಿದ್ದಾರೆ. ಆದರೂ ಇಂತಹ ಪ್ರಕರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಿರುವುದು ವಿಪರ್ಯಾಸ.
ಆಧುನಿಕತೆಯ ವೇಗದ ಜೀವನದಲ್ಲಿ ಇಂದು ಹೋಟೆಲ್ ಹಾಗೂ ಬೇಕರಿ ತಿನಿಸುಗಳು ಜನರ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿವೆ. ಆದರೆ, ಆಹಾರ ಅಥವಾ ತಿನಿಸುಗಳ ಗುಣಮಟ್ಟ ಹಾಗೂ ಸ್ವಚ್ಛತೆ ಬಗ್ಗೆ ಮಾತ್ರ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಹೀಗಾಗಿ ಆಗಿಂದಾಗ್ಗೆ ಹೋಟೆಲ್ ಹಾಗೂ ಬೇಕರಿ ತಿನಿಸುಗಳ ಸೇವನೆಯ ಪರಿಣಾಮ ಗ್ರಾಹಕರು ಅಸ್ವಸ್ಥತೆಯಿಂದ ಬಳಲುವ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಮೂವತ್ತು, ನಲವತ್ತು ವರ್ಷಗಳ ಹಿಂದೆ ಯಾವುದೇ ನಗರ ಹಾಗೂ ತಾಲ್ಲೂಕುಗಳಲ್ಲಿ ಬೆರಳೆಣಿಕೆಯಷ್ಟು ಹೋಟೆಲ್ ಕಾಣಸಿಗುತ್ತಿದ್ದವು. ಬೇಕರಿಗಳಂತೂ ಅಲ್ಲೊಂದು, ಇಲ್ಲೊಂದು ಎಂಬಂತೆ ಇರುತ್ತಿದ್ದವು. ಜನರೂ ಮನೆಯಲ್ಲಿ ಮಾಡಿದ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಹೊರಗಿನ ತಿಂಡಿ ಸೇವನೆ ಅಪರೂಪವಾಗಿತ್ತು. ಆದರೀಗ ಎಲ್ಲವೂ ಬದಲಾಗಿದೆ. ಕೂಡು ಕುಟುಂಬ ಇಲ್ಲದ ಕಾರಣ, ಸಣ್ಣ ಕುಟುಂಬಗಳು ಹೋಟೆಲ್ ಹಾಗೂ ಬೇಕರಿಗಳನ್ನು ಅವಲಂಬಿಸುವುದು ಹೆಚ್ಚಾಗಿದೆ.
ಹೀಗಾಗಿ ಇಂದು ನಗರ ಪ್ರದೇಶಗಳ ಹೃದಯಭಾಗದಲ್ಲಿ, ಬಡಾವಣೆಗಳಲ್ಲಿ ಹೋಟೆಲ್‌ಗಳು ಹಾಗೂ ಬೇಕರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆ ಪೈಪೋಟಿ ಎಂಬಂತೆ ಅಸಂಖ್ಯಾತ ಫುಟ್‌ಪಾತ್ ಹೋಟೆಲ್‌ಗಳೂ ತಲೆಯೆತ್ತಿವೆ.
ಇದರ ನಡುವೆ ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಗುಣಮಟ್ಟದ ಆಹಾರ ನೀಡಬೇಕು ಎಂಬ ಕಾರಣಕ್ಕಾಗಿ ಸರ್ಕಾರ ಕೂಡ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಆಯಾ ನಗರಗಳ ಸ್ಥಳೀಯ ಸಂಸ್ಥೆಗಳು ನಿಯಮ ಅನುಷ್ಠಾನ ಹಾಗೂ ಪರಿಶೀಲನೆಯ ಉಸ್ತುವಾರಿ ಹೊತ್ತಿವೆ. ಅದಕ್ಕೆಂದೇ ನಗರಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಪ್ರತ್ಯೇಕ ತಂಡವಾಗಿ ಕಾರ್ಯನಿರ್ವಹಿಸುತ್ತಾರೆ. ಗುಣಮಟ್ಟ ಹಾಗೂ ಅಶುಚಿತ್ವದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಕೂಡಲೇ ಹೋಟೆಲ್ ಹಾಗೂ ಬೇಕರಿಗಳ ಪರಿಶೀಲನೆಯೇ ಅವರ ಮುಖ್ಯವಾದ ಕೆಲಸ.
ಇದರ ಜೊತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಸ್ವಯಂ ಆಗಿ ಆಗಿಂದಾಗ್ಗೆ ಹೋಟೆಲ್, ಬೇಕರಿ, ಆಹಾರ ತಯಾರಿಕಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ ಸಂಪೂರ್ಣ ಪರಿಶೀಲನೆ ನಡೆಸುವ ಅಧಿಕಾರವನ್ನು ಹೊಂದಿವೆ. ಈ ಕೆಲಸಗಳು ನಿರಂತರವಾಗಿ ನಡೆಯುತ್ತವೆ. ಹೀಗಿದ್ದರೂ ಆಗಿಂದಾಗ್ಗೆ ಕೆಲ ಹೋಟೆಲ್ ಹಾಗೂ ಬೇಕರಿಗಳಲ್ಲಿ ತಿನಿಸು ಸೇವಿಸುವ ಮಕ್ಕಳು, ವೃದ್ಧರು ಅಸ್ವಸ್ಥರಾಗಿವ ಘಟನೆಗಳು ಬೆಳಕಿಗೆ ಬರುತ್ತಿವೆ. ಸ್ಥಳೀಯ ಸಂಸ್ಥೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ತಮ್ಮ ಕೆಲಸವನ್ನು ಬದ್ಧತೆ ಹಾಗೂ ಪ್ರಾಮಾಣಿಕವಾಗಿ ಮಾಡಿದಲ್ಲಿ ತಿನಿಸುಗಳನ್ನು ಸೇವಿಸಿ ಅಸ್ವಸ್ಥರಾಗುವ ಪ್ರಕರಣಗಳು ತೀರಾ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಕಾಲಕಾಲಕ್ಕೆ ಹೋಟೆಲ್, ಬೇಕರಿ ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳ ತಂಡ ಯಾವುದೋ ರಾಜಕಾರಣಗಳ, ಉದ್ಯಮಿಗಳ ಪ್ರಭಾವಕ್ಕೆ ಒಳಗಾಗಿ ಹೋಟೆಲ್ ಹಾಗೂ ಬೇಕರಿಗಳ ತಪಾಸಣಾ ಕಾರ್ಯವನ್ನೂ ಮಾಡುವ ಗೋಜಿಗೆ ಹೋಗುವುದಿಲ್ಲ.
ಇದರಿಂದಾಗಿ ಜನರು ಕಲಬೆರಕೆ ಆಹಾರ ಅಥವಾ ತಿನಿಸುಗಳನ್ನು ಸೇವಿಸಿ, ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಅವಧಿ ಮೀರಿದ ಧಾನ್ಯಗಳು, ಆಹಾರ ಪದಾರ್ಥಗಳ ಬಳಕೆ, ವಾರಗಟ್ಟಲೇ ಫ್ರಿಜ್‌ನಲ್ಲಿ ಇಟ್ಟ ಮಾಂಸದಿಂದ ಆಹಾರ ಪದಾರ್ಥಗಳನ್ನು ತಯಾರಿಸಿದರೆ, ಅವು ಕಲುಷಿತವಾಗುತ್ತದೆ ಎನ್ನಲಾಗಿದೆ. ಇದು ಗ್ರಾಹಕರಿಗೆ ಗೊತ್ತೇ ಆಗುವುದಿಲ್ಲ. ಆರೋಗ್ಯ ಕೆಟ್ಟ ಮೇಲೆ ಮಾತ್ರ ಹೋಟೆಲ್‌ನಲ್ಲಿ ತಿನ್ನಬಾರದು ಎಂದು ಮನೆಯಲ್ಲಿ ಮಾತನಾಡಿಕೊಂಡು ಸುಮ್ಮನಾಗಿಬಿಡುತ್ತಾರೆ. ಕೆಲವರು ತೀರಾ ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ಪ್ರಕರಣಗಳು ಬೆಳಕಿಗೆ ಬರುತ್ತವೆ. ಇದು ನಿಲ್ಲಬೇಕು. ಸಾರ್ವಜನಿಕರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿ ವರ್ಗ ಜನರ ಆರೋಗ್ಯದತ್ತ ಕೂಡ ಆಲೋಚಿಸಬೇಕು. ಆಹಾರ ತಯಾರಿಕಾ ಘಟಕಗಳು, ಹೋಟೆಲ್‌ಗಳು, ಬೇಕರಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಅಲ್ಲಿನ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಬಗ್ಗೆ ಜನರಿಗೆ ಖಾತ್ರಿ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ಲಾಸ್ಟಿಕ್ ಬಳಸುವಂತಿಲ್ಲ: ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು, ಪಾರ್ಸೆಲ್ ಕಟ್ಟಲು ಪ್ಲಾಸ್ಟಿಕ್ ಕವರ್ ಹಾಗೂ ಮುದ್ರಿತ ಪೇಪರ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬೇಕರಿಗಳಲ್ಲಿ ಕೂಡ ಪ್ಲಾಸ್ಟಿಕ್ ಕವರ್ ಅಥವಾ ಪ್ಲಾಸ್ಟಿಕ್ ಪೇಪರ್ ಮೂಲಕ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವಂತಿಲ್ಲ.
ಬಿಸಿ ನೀರು ನೀಡಬೇಕು: ಯಾವುದೇ ಹೋಟೆಲ್ ಅಥವಾ ಬೇಕರಿಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ಅಥವಾ ಕಾಯಿಸಿ ಆರಿಸಿದ ನೀರನ್ನು ಮಾತ್ರ ನೀಡಬೇಕು. ಅವಧಿ ಮೀರಿದ ನೀರಿನ ಬಾಟಲ್ ಅಥವಾ ತಂಪು ಪಾನೀಯ ನೀಡಿದಲ್ಲಿ ದಂಡ ತೆರಬೇಕಾಗುತ್ತದೆ.
ಪರವಾನಗಿ ಪ್ರಮಾಣಪತ್ರ: ಯಾವುದೇ ಹೋಟೆಲ್ ಅಥವಾ ಬೇಕರಿಗಳು ವ್ಯಾಪಾರ ವಹಿವಾಟು ನಡೆಸಬೇಕಾದಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಎಫ್‌ಎಸ್‌ಎಸ್‌ಎ ಪರವಾನಗಿ ಪಡೆದಿರುವ ಪ್ರಮಾಣ ಪತ್ರ, ಟ್ರೇಡ್ ಲೈಸನ್ಸ್ ಅಳವಡಿಸುವುದು ಕಡ್ಡಾಯ. ಇದು ಫುಟ್‌ಪಾತ್ ಹೋಟೆಲ್ ಗಳಿಗೂ ಅನ್ವಯ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಠಿಣ ನಿಯಮಗಳಿವೆ ಎಚ್ಚರ..!:
* ವಾರ್ಷಿಕ ೧೨ ಲಕ್ಷ ರೂ. ಮಿತಿಯೊಳಗೆ ಆಹಾರ ಪದಾರ್ಥ ಉದ್ದಿಮೆ ನಡೆಸುವವರು ಎಫ್‌ಎಸ್‌ಎಸ್‌ಎ ನೋಂದಣಿ ಮಾಡಿಕೊಳ್ಳಬೇಕು. ೧೨ ಲಕ್ಷ ರೂ.ಗಳಿಗಿಂತ ಮೇಲ್ಪಟ್ಟು ಬಂಡವಾಳ ಹಾಕಿರುವವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು
* ಕಾಯ್ದೆ ಪ್ರಕಾರ ಗುಣಮಟ್ಟ ಕಾಪಾಡಿಕೊಳ್ಳದ ಯಾವುದೇ ಆಹಾರವನ್ನು ಮಾರುವ ವ್ಯಕ್ತಿ ಗರಿಷ್ಟ ೫ ಲಕ್ಷ ರೂ. ವರೆಗೆ ದಂಡ ಪಾವತಿಸಬೇಕಾಗುತ್ತದೆ
* ಯಾವುದೇ ಆಹಾರವನ್ನು ತಪ್ಪಾಗಿ ವಿವರಿಸುವ ಹಾಗೂ ಆಹಾರದ ಸ್ವರೂಪ ಅಥವಾ ಗುಣಮಟ್ಟದ ಬಗ್ಗೆ ತಪ್ಪು ದಾರಿಗೆಳೆಯುವ, ಸುಳ್ಳು ಖಾತರಿಯನ್ನು ನೀಡುವ ಜಾಹೀರಾತುಗಳಿಗೆ ೧೦ ಲಕ್ಷ ರೂ. ದಂಡ ವಿಧಿಸಲಾಗುತ್ತದೆ
* ಯಾವುದೇ ವ್ಯಕ್ತಿ ಅನೈರ್ಮಲ್ಯ ಅಥವಾ ಸ್ವಚ್ಛತೆ ಇಲ್ಲದ ವಾತಾವರಣದಲ್ಲಿ ಮಾನವ ಬಳಕೆಗಾಗಿ ಆಹಾರ ಪದಾರ್ಥವನ್ನು ತಯಾರಿಸುವ, ಸಂಸ್ಕರಿಸುವ ಅಥವಾ ಮಾರಾಟ ಮಾಡುವವರಿಗೆ ೧ ಲಕ್ಷ ರೂ. ವರೆಗೆ ದಂಡ
* ಆಹಾರ ಕಲಬೆರಕೆಯಿಂದ ಆರೋಗ್ಯಕ್ಕೆ ಹಾನಿಯಾಗದಿದ್ದರೂ ಗರಿಷ್ಟ ೨ ಲಕ್ಷ ರೂ., ದಂಡ. ಸೇವಿಸಿದವರ ಆರೋಗ್ಯಕ್ಕೆ ಹಾನಿಯಾದರೆ ಗರಿಷ್ಟ ೧೦ ಲಕ್ಷ ರೂ. ವರೆಗೆ ದಂಡ
* ಯಾವುದೇ ವ್ಯಕ್ತಿಯು ಸ್ವತಃ ಅಥವಾ ಆತನ ಪರವಾಗಿ ಯಾವುದೇ ವ್ಯಕ್ತಿಯಿಂದ ಅಸುರಕ್ಷಿತ ಆಹಾರ ಪದಾರ್ಥ ಆಮದು, ಮಾರಾಟ, ಸಂಗ್ರಹ, ವಿತರಣೆ ಮಾಡುವುದು ಶಿಕ್ಷಾರ್ಹ ಅಪರಾಧ
* ಕಲಬೆರಕೆ ಆಹಾರ, ತಿನಿಸುಗಳನ್ನು ಸೇವಿಸಿದವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಾದರೆ ೫ ಲಕ್ಷ ರೂ. ವರೆಗೆ ದಂಡ ಮತ್ತು ಆರು ವರ್ಷಗಳ ಜೈಲುವಾಸ. ಮರಣಕ್ಕೆ ಕಾರಣವಾದಲ್ಲಿ ೧೦ ಲಕ್ಷ ರೂ.ವರೆಗೆ ದಂಡ, ಏಳು ವರ್ಷದಿಂದ ಜೀವಾವಧಿಯವರೆಗೆ ವಿಸ್ತರಿಸಬಹುದಾದ ಜೈಲುವಾಸ
* ಎಫ್‌ಎಸ್‌ಎಸ್‌ಎ ಪರವಾನಗಿ ಇಲ್ಲದೆ ಆಹಾರ ವಸ್ತುಗಳನ್ನು ವಿತರಿಸುವುದು ಅಥವಾ ಆಮದು ಮಾಡಿಕೊಳ್ಳುವುದು ಅಥವಾ ಮಾರಾಟ ಮಾಡುವವರಿಗೆ ಆರು ತಿಂಗಳವರೆಗಿನ ಜೈಲುವಾಸ ಮತ್ತು ೫ ಲಕ್ಷ ರೂ. ವರೆಗೆ ದಂಡ
ಬಿಸಿಯೂಟ ತಯಾರಕರಿಗೆ ಸೂಕ್ತ ತರಬೇತಿ: ಜಿಲ್ಲೆಯ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಅಡುಗೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಬಿಸಿಯೂಟ ತಯಾರಕರಿಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಅಡುಗೆ ಸಿಬ್ಬಂದಿಯ ನಿರ್ದಿಷ್ಟ ಕೆಲಸಗಳು ಹಾಗೂ ಅಡುಗೆ ಕೇಂದ್ರಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಸುರಕ್ಷತಾ ಕ್ರಮಗಳ ಅರಿವು ಹಾಗೂ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ.
-ಎಸ್.ಟಿ.ಜವರೇಗೌಡ, ಡಿಡಿಪಿಐ
ಶುಚಿತ್ವ ಕುರಿತು ಗ್ರಾಹಕರಿಗೆ ಎಚ್ಚರ ಇರಲಿ: ಯಾವ ಹೋಟೆಲ್ ಅಥವಾ ಬೇಕರಿ ಸ್ವಚ್ಛವಾಗಿದೆ ಎಂಬುದರ ಬಗ್ಗೆ ಗ್ರಾಹಕರೇ ತಿಳಿದುಕೊಳ್ಳಬೇಕು. ಕಡಿಮೆ ದರಕ್ಕೆ ಆಹಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಕೆಲವರು ಫುಟ್‌ಪಾತ್ ಹೋಟೆಲ್‌ಗಳ ಮೊರೆ ಹೋಗುತ್ತಾರೆ. ಅಲ್ಲಿ ಸ್ವಚ್ಛತೆ ಇದೆಯೇ, ಕುಡಿಯಲು ಬಿಸಿನೀರು ಕೊಡುತ್ತಾರೆಯೇ? ಶೌಚಾಲಯ ವ್ಯವಸ್ಥೆ ಇದೆಯೆ? ಎಂಬುದನ್ನು ಜನರು ಗಮನಿಸುವುದೇ ಇಲ್ಲ.
-ಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ
ಆಹಾರ ತಯಾರಿಕಾ ಘಟಕಗಳಲ್ಲಿ ಗುಣಮಟ್ಟದ ಪರಿಶೀಲನೆ:
ಗುಣಮಟ್ಟದ ಆಹಾರ ತಯಾರಿಕಾ ಘಟಕಗಳು, ಹೋಟೆಲ್‌ಗಳು, ಬೇಕರಿಗಳಲ್ಲಿ ಆಗಾಗ್ಗೆ ಗುಣಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್, ಬೇಕರಿಗಳ ಮಾಲೀಕರಿಗೆ ೫ ಲಕ್ಷ ರೂ. ದಂಡ ವಿಧಿಸಲಾಗಿದೆ. ಆಹಾರ ಸೇವನೆಯಿಂದ ತೊಂದರೆಗೀಡಾಗುವ ಗ್ರಾಹಕರಿಗೆ ಪರಿಹಾರ ನೀಡುವ ಸಂಬಂಧ ಕಾಯ್ದೆಯಲ್ಲಿ ಯಾವುದೇ ಅಂಶವಿಲ್ಲ. ನ್ಯಾಯಾಲಯ ಅಥವಾ ಗ್ರಾಹಕರ ನ್ಯಾಯಾಲಯದ ಮೂಲಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು.
-ಡಾ.ಎಸ್.ಎಲ್.ರವೀಂದ್ರ, ಅಂಕಿತ ಅಧಿಕಾರಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ
ನಗರಪಾಲಿಕೆ ಪರಿವೀಕ್ಷಕರಿಂದ ಪರಿಶೀಲನೆ:
ಫುಟ್‌ಪಾತ್ ಸೇರಿದಂತೆ ಹೋಟೆಲ್ ಹಾಗೂ ಬೇಕರಿಗಳು ಸ್ವಚ್ಛತೆ ಕಾಪಾಡುತ್ತಿವೆಯೇ ಎಂಬುದರ ಬಗ್ಗೆ ಆಗಾಗ್ಗೆ ನಮ್ಮ ಆರೋಗ್ಯ ಪರಿವೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುತ್ತಾರೆ. ಕಳೆದ ೨ ವರ್ಷಗಳಲ್ಲಿ ೯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಒಟ್ಟು ೧೦ ಲಕ್ಷ ರೂ. ಗಳಷ್ಟು ದಂಡವನ್ನು ಹೋಟೆಲ್‌ಗಳಿಂದ ವಸೂಲಿ ಮಾಡಲಾಗಿದೆ. ವಾರದಲ್ಲಿ ಕನಿಷ್ಠ ಮೂರು ದಿನಗಳು ನಾನು ಕೂಡ ಹೋಟೆಲ್ ಹಾಗೂ ಬೇಕರಿಗಳ ಪರಿಶೀಲನೆ ಮಾಡುತ್ತೇನೆ.
-ಡಾ.ವೆಂಕಟೇಶ್, ನಗರಪಾಲಿಕೆ ಆರೋಗ್ಯಾಧಿಕಾರಿ
ಗುಣಮಟ್ಟದ ಆಹಾರ ನೀಡಿದರಷ್ಟೇ ಗ್ರಾಹಕರು ಬರುವುದು:
ಫುಟ್‌ಪಾತ್ ಹೋಟೆಲ್ ಎಂದ ಮಾತ್ರಕ್ಕೆ ಗ್ರಾಹಕರು ಆತಂಕ ಪಡಬೇಕಾಗಿಲ್ಲ. ನಾವು ಜನರ ಮುಂದೆಯೇ ಪಾರದರ್ಶಕವಾಗಿ ಆಹಾರವನ್ನು ತಯಾರಿಸುತ್ತೇವೆ. ಶುಚಿತ್ವ ಹಾಗೂ ಗುಣಮಟ್ಟದ ಆಹಾರವನ್ನು ನೀಡಿದಲ್ಲಿ ಮಾತ್ರ ಜನರು ಮತ್ತೊಮ್ಮೆ ನಮ್ಮಲ್ಲಿಗೆ ಬರುತ್ತಾರೆ ಎಂಬ ಸತ್ಯ ನಮಗೆ ಗೊತ್ತಿದೆ.
-ಸತೀಶ್, ತಳ್ಳುಗಾಡಿ ಹೋಟೆಲ್ ಮಾಲೀಕ, ಮೈಸೂರು
ಶುಚಿತ್ವ ಕಾಪಾಡಬೇಕು: ಗ್ರಾಹಕರು ರುಚಿರುಚಿಯಾದ ತಿಂಡಿ-ತಿನಿಸುಗಳನ್ನು ತಿನ್ನಲೆಂದು ಬೇಕರಿಗೆ ಬಂದು ನಾವು ಹೇಳಿದಷ್ಟು ಹಣ ನೀಡಿ ಕೊಂಡುಕೊಳ್ಳುತ್ತಾರೆ. ಗ್ರಾಹಕರಿಂದಲೇ ಜೀವನ ನಡೆಸುವ ನಾವು, ಬೇಕರಿಗಳಲ್ಲಿ ಶುಚಿತ್ವ ಕಾಪಾಡುವುದರ ಜತೆಗೆ ಗುಣಮಟ್ಟದ ಪದಾರ್ಥಗಳನ್ನು ಉಪಯೋಗಿಸುವುದು ನಮ್ಮ ಆದ್ಯ ಕರ್ತವ್ಯ.
– ಎಚ್.ಆರ್.ಅರವಿಂದ್, ಅಧ್ಯಕ್ಷರು, ಮಂಡ್ಯ ಜಿಲ್ಲಾ ಬೇಕರಿ ಮಾಲೀಕರ ಸಂಘ
ಬೇಕರಿ ತಿನಿಸುಗಳ ಗುಣಮಟ್ಟ ಖಾತರಿ ಅಗತ್ಯ: ಬೇಕರಿ ತಿನಿಸುಗಳನ್ನು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಆದ್ದರಿಂದ ಮಾಲೀಕರು ಬೇಕರಿಗಳಲ್ಲಿ ಗುಣಮಟ್ಟದ ಪದಾರ್ಥಗಳನ್ನು ಬಳಸಿ ತಿಂಡಿ ತಿನಿಸು ತಯಾರಿಸುತ್ತಿದ್ದಾರೆಯೇ ಹಾಗೂ ಅವಧಿ ಮೀರಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಒಳ್ಳೆಯದು.
– ಸಿ.ಎಸ್.ಮಂಜು, ಅನ್ನಪೂರ್ಣೇಶ್ವರಿ ನಗರ, ಮಂಡ್ಯ
ಆಹಾರ ಇಲಾಖೆ ಗಮನಹರಿಸಲಿ: ಜನರು ಬೇಕರಿ ತಿನಿಸುಗಳನ್ನು ಸೇವಿಸುವುದನ್ನು ಕಡಿಮೆ ಮಾಡ ಬೇಕು. ಅವಧಿ ಮೀರಿದ ತಿನಿಸುಗಳ ಮಾರಾಟವೂ ನಡೆಯುತ್ತಿದೆ. ಈ ಬಗ್ಗೆ ಆಹಾರ ಇಲಾಖೆ ಹಾಗೂ ನಗರಸಭೆ, ಪುರಸಭೆಯ ಆಹಾರ ನಿರೀಕ್ಷಕರು ಬೇಕರಿ ಹಾಗೂ ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ, ಕಲಬೆರಕೆ ಆಹಾರಗಳಿಂದ ಸಂಭವಿಸುವ ಅವಘಡಗಳಿಗೆ ಕಡಿವಾಣ ಹಾಕಬಹುದು.
– ಬಿ.ಬೊಮ್ಮೇಗೌಡ, ಉಪಾಧ್ಯಕ್ಷ, ಜಿಲ್ಲಾ ರೈತ ಸಂಘ, ಮಂಡ್ಯ
ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು: ಹಿರಿಯರು ಮಕ್ಕಳಿಗೆ ಇಂತಹ ಬೇಕರಿ ಉತ್ಪನ್ನಗಳ ಅತಿಯಾದ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಿಳಿಸಿಕೊಡಬೇಕು. ಆರೋಗ್ಯ ಇಲಾಖೆಯು ತಿಂಗಳಿಗೆ ಒಮ್ಮೆಯಾದರೂ ಒಂದು ವಿಶೇಷವಾದ ತಂಡದ ಮೂಲಕ ಇಂತಹ ಬೇಕರಿಗಳ ತಪಾಸಣೆ ನಡೆಸಿ ಶುಚಿತ್ವ ಇಲ್ಲದ ಘಟಕಗಳ ಮೇಲೆ ತೀವ್ರ ಶಿಸ್ತು ಕ್ರಮ ಕೈಗೊಳ್ಳಬೇಕು.
-ಪಿ.ಎಸ್.ರವಿಕೃಷ್ಣ, ಅಧ್ಯಕ್ಷ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಮಡಿಕೇರಿ.
ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು: ಇಂದು ಆಹಾರ ಎನ್ನುವುದು ಜನರ ಆರೋಗ್ಯದ ಕಾಳಜಿಯನ್ನು ಮೀರಿ, ಪೂರ್ತಿಯಾಗಿ ವ್ಯಾವಹಾರಿಕವಾಗಿದೆ. ಇಂದಿನ ಮಕ್ಕಳು ಬೇಕರಿ ತಿಂಡಿಗಳು, ಜಂಕ್ ಫುಡ್‌ಗಳಿಗೆ ಒಗ್ಗಿ ಹೋಗಿದ್ದಾರೆ. ಅಂತಹ ಪದಾರ್ಥಗಳನ್ನು ಇತರ ಮಕ್ಕಳು ಸೇವಿಸುವಾಗ, ನಮ್ಮ ಮಕ್ಕಳನ್ನು ಅದರಿಂದ ದೂರ ಇಡುವುದೂ ಕಷ್ಟ. ಸರ್ಕಾರ ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಮೂಲಕ ಕಲಬೆರಕೆ ಆಹಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.
-ಕೆದಂಬಾಡಿ ಕಾಂಚನಗೌಡ, ಉಪನ್ಯಾಸಕರು, ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಪ್ರಕರಣ ಕಂಡುಬಂದಿಲ್ಲ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಗುವೊಂದು ಕೇಕ್ ತಿಂದು ಅಸ್ವಸ್ಥಗೊಂಡಂತಹ ಪ್ರಕರಣ ಕೊಡಗು ಜಿಲ್ಲೆಯಲ್ಲಿ ಕಂಡುಬಂದಿಲ್ಲ .
-ಡಾ.ಸತೀಶ್ ಕುಮಾರ್, ಡಿಎಚ್‌ಓ, ಕೊಡಗು ಜಿಲ್ಲೆ
ಗುಣಮಟ್ಟದ ಆಹಾರಕ್ಕೆ ಆದ್ಯತೆ: ಮಡಿಕೇರಿ ನಗರದಂತಹ ಪ್ರದೇಶದಲ್ಲಿ ಶುಚಿಯಾದ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗುತ್ತಿದೆ. ನಮ್ಮ ಹೊಟೇಲ್‌ನಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಈ ಸಂಬಂಧ ಅಧಿಕಾರಿಗಳಿಂದ ಆಗಾಗ ಪರಿಶೀಲನೆ ಕೂಡ ನಡೆಯುತ್ತದೆ.
-ಸುಜಿತ್, ಮಾಲೀಕ, ಹೊಟೇಲ್ ಸುಜಾತ, ಮಡಿಕೇರಿ
ಆಹಾರ ಕಲಬೆರಕೆ ಗಂಭೀರ ಸಮಸ್ಯೆ: ಆಧುನಿಕ ಕಾಲದಲ್ಲಿ ಎಲ್ಲ ಆಹಾರಗಳಲ್ಲಿಯೂ ಕಲಬೆರಕೆ ಕಂಡು ಬರುತ್ತಿದೆ. ಬಣ್ಣ ಬಣ್ಣದ ಕೇಕ್, ಚಾಕೊಲೇಟ್‌ಗಳಿಗೆ ಮಕ್ಕಳು ಮಾರುಹೋಗುತ್ತಿದ್ದಾರೆ. ತಯಾರಕರು ಕೂಡ ಆಕರ್ಷಣೀಯ ಬಣ್ಣದ ಕವರ್ ಗಳಿಂದ ತಿಂಡಿ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಇದೊಂದು ಗಂಭೀರ ಸಮಸ್ಯೆಯಾಗಿದೆ.
-ವಿನೋದ್‌ಕುಮಾರ್, ಕೃಷಿಕರು, ಕೂತಿ ಗ್ರಾಮ, ಸೋಮವಾರಪೇಟೆ ತಾ.
ಇತರ ಕಡೆ ಮರುಕಳಿಸದಿರಲಿ: ಮಂಡ್ಯ ನಗರದಲ್ಲಿ ಕೇಕ್ ತಿಂದು ಮಗುವೊಂದು ಅಸ್ವಸ್ಥಗೊಂಡಂತಹ ಪ್ರಕರಣ ಇತರೆ ಕಡೆಗಳಲ್ಲಿ ಮರುಕಳಿಸಬಾರದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಗುಣಮಟ್ಟ ನಿಯಂತ್ರಕರು ಎಲ್ಲ ನಗರ, ಪಟ್ಟಣಗಳ ಬೇಕರಿಗಳು, ತಿಂಡಿ ತಿನಿಸು ತಯಾರಿಕೆ ಹಾಗೂ ಮಾರಾಟದ ಅಂಗಡಿಗಳನ್ನು ಪರಿಶೀಲಿಸಬೇಕು. ಆಹಾರ ಪದಾರ್ಥಗಳ ಗುಣಮಟ್ಟದ ಕಡೆ ನಿಗಾ ವಹಿಸಬೇಕು.
-ಟಿ.ಜೆ.ಸುರೇಶ್, ಚಾಮರಾಜನಗರ
ಅಂಗಡಿಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು: ಬೇಕರಿ ಹಾಗೂ ಇತರೆ ತಿಂಡಿ – ತಿನಿಸುಗಳ ಅಂಗಡಿಗಳವರು ಮೊದಲು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಹಳಸಲು ತಿನಿಸುಗಳನ್ನು ಮಕ್ಕಳು ಹಾಗೂ ಗ್ರಾಹಕರಿಗೆ ನೀಡಕೂಡದು. ಈ ಬಗ್ಗೆ ಅಂಗಡಿಗಳ ಮಾಲೀಕರು ನಿಗಾ ವಹಿಸಬೇಕು. ಈ ಕುರಿತು ಅಂಗಡಿ ತೆರೆಯಲು ಪರವಾನಗಿ ನೀಡಿರುವ ಸ್ಥಳೀಯ ಸಂಸ್ಥೆಗಳು ಎಚ್ಚರ ವಹಿಸಬೇಕು.
– ಕುಮಾರಸ್ವಾಮಿ, ಚಾಮರಾಜನಗರ





