ಕುಶಾಲನಗರದಲ್ಲಿ ಕಟ್ಟಡ ಕಾಮಗಾರಿ ಆರಂಭ; ವಿರಾಜಪೇಟೆಯಲ್ಲಿಯೂ ಸ್ಥಾಪನೆಗೆ ನಿರ್ಧಾರ
ನವೀನ್ ಡಿಸೋಜ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ೨ ಹೊಸ ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪನೆಗೆ ಚಿಂತಿಸಲಾಗಿದ್ದು, ಹೆಚ್ಚುವರಿಯಾಗಿ ೬೪ ಹೊಸ ಮಾರ್ಗಗಳಿಗೆ ಬೇಡಿಕೆ ಇಡಲಾಗಿದೆ.
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗಳಿಗಿಂದ ಖಾಸಗಿ ಬಸ್‌ಗಳು ಹೆಚ್ಚಿನ ಸೇವೆ ಒದಗಿಸುತ್ತಿವೆ. ಗ್ರಾಮೀಣ ಭಾಗದ ನಿವಾಸಿಗಳು ಖಾಸಗಿ ಬಸ್ ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ಇದೀಗ ಕೆಎಸ್‌ಆರ್‌ಟಿಸಿ ತನ್ನ ಮಾರ್ಗಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಸದ್ಯ ಮಡಿಕೇರಿಯಲ್ಲಿ ಮಾತ್ರ ಡಿಪೋ ಕಾರ್ಯನಿರ್ವಹಿಸುತ್ತಿದ್ದು, ೨ ಹೊಸ ಡಿಪೋಗಳ ಸ್ಥಾಪನೆ ಕಾರ್ಯ ಚುರುಕುಗೊಂಡಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಮಾರ್ಗಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ೧೪ ಹೊಸಮಾರ್ಗಗಳನ್ನು ಆರಂಭಿಸಿರುವ ರಾಜ್ಯ ಸಾರಿಗೆ ಸಂಸ್ಥೆ, ಇನ್ನೂ ೬೪ ಹೊಸ ಮಾರ್ಗಗಳಿಗೆ ಬೇಡಿಕೆ ಇಟ್ಟಿದೆ.
ಇದರಿಂದ ಹಿಂದಿನಿಂದಲೂ ಸೇವೆ ನೀಡುತ್ತಿರುವ ಖಾಸಗಿ ಬಸ್ ಮಾಲೀಕರು ತಮ್ಮ ವ್ಯವಹಾರಕ್ಕೆ ಹೊಡೆತ ಬೀಳುವ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಜಿಲ್ಲೆಯ ೫ ತಾಲ್ಲೂಕುಗಳಿಗೆ ಕೆಎಸ್ ಆರ್‌ಟಿಸಿಯ ಒಂದೇ ಡಿಪೋ ಕಾರ್ಯಾಚರಿಸುತ್ತಿದೆ. ಕುಶಾಲನಗರದಲ್ಲಿ ಮತ್ತೊಂದು ಡಿಪೋ ಆರಂಭಿಸುವ ನಿಟ್ಟಿನಲ್ಲಿ ಕಟ್ಟಡನಿರ್ಮಾಣ ಕೆಲಸ ನಡೆಯುತ್ತಿದ್ದು, ವರ್ಷದೊಳಗೆ ಕುಶಾಲನಗರ ಡಿಪೋ ಅಸ್ತಿತ್ವಕ್ಕೆ ಬರಲಿದೆ. ಇದರೊಂದಿಗೆ ವಿರಾಜ ಪೇಟೆಯಲ್ಲಿ ಮತ್ತೊಂದು ಡಿಪೋ ಸ್ಥಾಪನೆಗೆ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಭೂಮಿ ಒದಗಿಸಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದೆ. ಈ ಎರಡೂ ಡಿಪೋಗಳು ಸ್ಥಾಪನೆ ಯಾದರೆ ಒಟ್ಟು ೩ ಡಿಪೋಗಳ ಮೂಲಕ ೬೪ ಹೊಸ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲು ಸಂಸ್ಥೆ ಸಿದ್ಧತೆ ನಡೆಸಿದೆ.
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸೇವೆ ಆರಂಭಿಸುವುದಕ್ಕೂ ಮೊದಲೇ ಖಾಸಗಿ ಬಸ್ ಗಳು ಸಾರಿಗೆ ಸೇವೆ ಒದಗಿಸುತ್ತಿವೆ. ಈಗಲೂ ಕೊಡಗಿನ ಗ್ರಾಮೀಣ ಭಾಗಗಳ ಪ್ರಯಾಣಿಕರು ಕೆಎಸ್‌ಆರ್‌ಟಿಸಿಗಿಂತ ಹೆಚ್ಚಾಗಿ ಖಾಸಗಿ ಬಸ್ ಗಳನ್ನೇ ಅವಲಂಬಿಸಿದ್ದಾರೆ. ಆದರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ಖಾಸಗಿ ಬಸ್‌ಗಗಳಿಗೆ ಜಿಲ್ಲೆಯಲ್ಲಿಯೂ ಹೊಡೆತ ಬಿದ್ದಿದೆ.
ಇದರಿಂದಾಗಿ ರಾಜ್ಯಮಟ್ಟದಲ್ಲಿ ಖಾಸಗಿ ಬಸ್ ಗಳಿಗೂ ಶಕ್ತಿ ಯೋಜನೆಯನ್ನು ವಿಸ್ತರಿಸ ಬೇಕೆಂದು ಬಸ್ ಮಾಲೀಕರು ಸರ್ಕಾರದ ಗಮನ ಸೆಳೆದರಾದರೂ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಇದೀಗ ಕೆಎಸ್‌ಆರ್‌ಟಿಸಿ ತನ್ನ ಸೇವೆಯನ್ನು ವಿಸ್ತರಿಸುತ್ತಿರುವುದರಿಂದ ಖಾಸಗಿ ಬಸ್‌ಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎನ್ನುವುದು ಖಾಸಗಿ ಬಸ್ ಮಾಲೀಕರ ಆತಂಕವಾಗಿದೆ.
ಸರ್ಕಾರ ಖಾಸಗಿ ಬಸ್‌ಗಳಿಗೆ ಹೊಸ ಗ್ರಾಮೀಣ ಮಾರ್ಗಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಿ ಹಲವು ವರ್ಷಗಳಾಗಿವೆ. ಈಗಿರುವ ಮಾರ್ಗಗಳಲ್ಲೇ ಖಾಸಗಿ ಬಸ್‌ಗಳು ಸಂಚರಿಸಬೇಕಾಗಿದ್ದು, ಹೆಚ್ಚುವರಿ ಮಾರ್ಗಗಗಳನ್ನು ಪಡೆಯಲು ಸಾಧ್ಯವಿಲ್ಲ.
ಹೀಗಿರುವಾಗ ಖಾಸಗಿ ಬಸ್‌ಗಳಿರುವ ಅದೇ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಸೇವೆ ವಿಸ್ತರಿಸುವುದರಿಂದ ಖಾಸಗಿ ಬಸ್‌ಗಳಿಗೆ ಸಮಸ್ಯೆಯಾಗಲಿದೆ ಎನ್ನುವುದು ಖಾಸಗಿ ಬಸ್ ಮಾಲೀಕರ ಅಳಲಾಗಿದೆ.
ಈಗಾಗಲೇ ಬಸ್ ಮಾರ್ಗಗಳನ್ನು ಹೆಚ್ಚಿಸುವ ವಿಚಾರವಾಗಿ ಆರ್‌ಟಿಒ ಸರ್ವೇ ನಡೆದಿದ್ದು, ಇದು ಸಮರ್ಪಕವಾಗಿಲ್ಲ ಎಂಬುದು ಖಾಸಗಿ ಬಸ್ ಮಾಲೀಕರ ಆರೋಪವಾಗಿದೆ. ಈ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಖಾಸಗಿ ಬಸ್ ಮಾಲೀಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಹೊಸದಾಗಿ ಜಂಟಿ ಸರ್ವೇ ನಡೆಸಿ ಬಳಿಕ ಹೊಸ ಮಾರ್ಗಗಳಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
” ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲದ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಸೇವೆ ಆರಂಭಿಸುವುದನ್ನು ನಾವೂ ಸ್ವಾಗತಿಸುತ್ತೇವೆ. ಆದರೆ ಖಾಸಗಿ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಹೆಚ್ಚುವರಿ ಸೇವೆ ನೀಡುವುದರಿಂದ ನಮಗೆ ನಷ್ಟವಾಗುತ್ತದೆ. ಈಗಾಗಲೇ ಹೊಸ ಮಾರ್ಗಗಳನ್ನು ಹೊಂದಲು ನಮಗೆ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಕೆಎಸ್‌ಆರ್‌ಟಿಸಿಯ ಅನಾರೋಗ್ಯಕರ ಪೈಪೋಟಿ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.”
-ಹೊಸೂರು ರಮೇಶ್ ಜೋಯಪ್ಪ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ.
” ಕುಶಾಲನಗರ ಡಿಪೋ ಕಾಮಗಾರಿ ನಡೆಯುತ್ತಿದ್ದು, ಸದ್ಯದಲ್ಲಿಯೇ ಕಾರ್ಯಾರಂಭಿಸಲಿದೆ. ವಿರಾಜಪೇಟೆಯಲ್ಲಿ ಮತ್ತೊಂದು ಡಿಪೋ ಸ್ಥಾಪಿಸುವ ಚಿಂತನೆಯಿದೆ. ಹೀಗಾಗಿ ಹೆಚ್ಚುವರಿಯಾಗಿ ೬೪ ಮಾರ್ಗಗಳಿಗೆ ಬೇಡಿಕೆ ಇಟ್ಟಿದ್ದೇವೆ. ಜನರ ಬೇಡಿಕೆಯಂತೆ ಸೇವೆ ಒದಗಿಸಲು ಸಾರಿಗೆ ಸಂಸ್ಥೆ ಪ್ರಯತ್ನಿಸುತ್ತಿದೆ.”
-ಮೆಹಬೂಬ್‌ಖಾನ್, ಡಿಪೋ ವ್ಯವಸ್ಥಾಪಕ.





