Mysore
27
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಕ್ಯಾನ್ಸರ್ ಕುರಿತ ಗೊಂದಲ; ಫೋನ್ ಇನ್‌ನಲ್ಲಿ ಪರಿಹಾರ

ಮೈಸೂರು: ‘ಆಂದೋಲನ’ ದಿನಪತ್ರಿಕೆ ಕಚೇರಿಯಲ್ಲಿ ಗುರುವಾರ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವ ಜನಿಕರು ಬಹಳಷ್ಟು ಕರೆಗಳನ್ನು ಮಾಡಿ ಕ್ಯಾನ್ಸರ್ ಕುರಿತು ಇದ್ದ ಗೊಂದಲಗಳು ಹಾಗೂ ಸಂದೇಹಗಳನ್ನು ನಿವಾರಿಸಿದರು.

ನಟರಾಜು (ಕೆ. ಆರ್. ನಗರ): ತಿಂಗಳಿಗೊಮ್ಮೆ ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ತಾಲ್ಲೂಕುಗಳಲ್ಲಿ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಸುತ್ತೀರ?
ಡಾ. ಅಭಿಲಾಷ್: ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಈಗಾ ಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಶಿಬಿರವನ್ನು ನಡೆಸಲಿದ್ದೇವೆ.

ಉಷಾ ಪ್ರಕಾಶ್ (ಮೈಸೂರು): ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಇದೆಯಾ?
ಡಾ. ಅಭಿಲಾಷ್: ೯ರಿಂದ ೧೪ ವರ್ಷದ ಬಾಲಕಿಯರಿಗೆ ಗರ್ಭಕೋಶ ಕಂಠದ ಕ್ಯಾನ್ಸರ್ ತಡೆಗಟ್ಟಲು ಇರುವ ಲಸಿಕೆ ನೀಡಲಾಗುತ್ತಿದೆ. ೯ರಿಂದ ೧೪ ವರ್ಷದ ಬಾಲಕಿಯರಿಗೆ ಎರಡು ಹಂತಗಳಲ್ಲಿ ಮತ್ತು ೧೫ರಿಂದ ೨೦ ವರ್ಷದ ಯುವತಿಯರಿಗೆ ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಮೈಸೂರಿನ ಪ್ರಮುಖ ಕಾಲೇಜುಗಳಲ್ಲಿ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸ ಲಾಗುತ್ತಿದ್ದು, ಜಾಗೃತಿಯನ್ನು ಹೆಚ್ಚು ಮಾಡಲಿದ್ದೇವೆ ಎಂದರು.

ಸೋಸಲೆ ಮಹದೇವಶೆಟ್ಟಿ (ತಿ. ನರಸೀಪುರ): ಕ್ಯಾನ್ಸರ್ ರೋಗವು ಯಾರಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದೆ?
ಡಾ. ವಿನಯ್: ಕ್ಯಾನ್ಸರ್ ರೋಗಕ್ಕೆ ಪುರುಷ-ಮಹಿಳೆ ಎಂಬ ಬೇಧವಿಲ್ಲ. ಕೆಲವು ಕ್ಯಾನ್ಸರ್‌ಗಳು ಪುರುಷರಲ್ಲಿ ಹೆಚ್ಚು ಕಂಡು ಬಂದರೆ ಇನ್ನೂ ಕೆಲವು ಮಹಿಳೆಯರಲ್ಲಿ ಕಾಣಿಸಿಕೊಳ್ಳಲಿದೆ. ಕ್ಯಾನ್ಸರ್ ಯಾವ ಅಂಗಾಂಗದಲ್ಲಿ ಕಾಣಿಸಿಕೊಳ್ಳುವುದೋ ಅಲ್ಲಿ ಲಕ್ಷಣ ತೋರಲಿದೆ.

ಯೋಗೇಶ್ (ಮೈಸೂರು): ನಾನೊಬ್ಬ ಮಧುಮೇಹಿಯಾಗಿದ್ದು, ಕ್ಯಾನ್ಸರ್ ರೋಗ ಬರಲಿದೆಯಾ?
ಡಾ. ಅಭಿಲಾಷ್:ಸಕ್ಕರೆ ಕಾಯಿಲೆ ಇದ್ದವರಿಗೆಲ್ಲ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇರುವುದಿಲ್ಲ. ಆದರೆ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಜೊತೆಗೆ ಸಕ್ಕರೆ ಕಾಯಿಲೆ ಇದ್ದು ಕ್ಯಾನ್ಸರ್ ಬಂದರೂ ಆತಂಕ ಪಡಬೇಕಾಗಿಲ್ಲ. ಪ್ರಾಥಮಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ಪಡೆದರೆ ಗುಣಮುಖವಾಗಬಹುದು.

ಸತ್ಯಶೀಲನ್ (ಬನ್ನಿಮಂಟಪ): ನಮ್ಮ ತಂದೆ ಕ್ಯಾನ್ಸರ್‌ನಿಂದ ನಿಧನರಾದರು. ವಂಶಪರಂಪಾರ್ಯವಾಗಿ ಕ್ಯಾನ್ಸರ್ ಬರಲಿದೆಯಾ?

ಡಾ. ವಿನಯ್: ಮೂತ್ರ ವಿಸರ್ಜನೆ ಸರಿಯಾಗಿ ಮಾಡಲು ಸಾಧ್ಯವಾಗದಿದ್ದಾಗ. ಮೂತ್ರ ತೊಟ್ಟಿಕುವ ಲಕ್ಷಣ ಇದ್ದರೆ ಎಂಆರ್‌ಐ ಸ್ಕ್ಯಾನ್ ಮಾಡಿಸಬೇಕು. ಯಾವುದೇ ಲಕ್ಷಣಗಳು ಇಲ್ಲದಿದ್ದರೆ ವರ್ಷಕ್ಕೊಮ್ಮೆ ಸಿಆರ್‌ಪಿಎಂ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯ ಬಹುದು. ಕ್ಯಾನ್ಸರ್ ವಂಶವಾಹಿಯಾಗಿ ಬರಬಹುದು.

ರವಿ (ಮೈಸೂರು): ಕ್ಯಾನ್ಸರ್ ರೋಗದ ಲಕ್ಷಣಗಳೇನು? ಯಾವ ಹಂತದಲ್ಲಿ ಕ್ಯಾನ್ಸರ್ ಗುಣಪಡಿಸಿಕೊಳ್ಳಬಹುದು?
ಡಾ. ಅಭಿಲಾಷ್: ಕ್ಯಾನ್ಸರ್ ರೋಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಲಕ್ಷಣಗಳಿರುವುದಿಲ್ಲ. ಶ್ವಾಸಕೋಶ, ಬಾಯಿಯ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಗರ್ಭಕೋಶ ಕೊರಳಿನ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ಹಲವು ಮಾದರಿಯಲ್ಲಿ ರೋಗ ಬಾಧಿಸಲಿದೆ. ದೀರ್ಘ ಕಾಲದ ಕೆಮ್ಮು, ತೂಕ ಇಳಿಕೆ, ಆಹಾರ ನುಂಗಲಾಗದೆ ಇರುವುದು, ಮಲ ವಿಸರ್ಜನೆಯಲ್ಲಿ ರಕ್ತ, ಕಪ್ಪು ಮಲ ವಿಸರ್ಜನೆ, ದೇಹದಲ್ಲಿನ ಗಂಟುಗಳು, ನೋವಿಲ್ಲದ ಗಂಟುಗಳು ಕೂಡ ಕ್ಯಾನ್ಸರ್ ಲಕ್ಷಣಗಳು.

ಇದಕ್ಕೆ ಪರಿಹಾರವೆಂದರೆ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕು. ತಂಬಾಕು ಪದಾರ್ಥ ಸೇವನೆ, ಮದ್ಯಪಾನ ಬಿಡಬೇಕು. ಸಸ್ಯಹಾರ ಮತ್ತು ಹಣ್ಣು-ತರಕಾರಿಗಳನ್ನು ಹೆಚ್ಚು ಸೇವನೆ ಮಾಡಬೇಕು. ಮೊದಲ ಹಂತದಿಂದ ಮೂರನೇ ಹಂತ ತಲುಪಿದ ಕ್ಯಾನ್ಸರ್ ರೋಗವನ್ನು ಸಂಪೂರ್ಣ ಗುಣಪಡಿಸಿಬಹುದು. ೪ನೇ ಹಂತ ತಲುಪಿದವರಿಗೂ ಜೀವ ಉಳಿಸಿದ್ದೇವೆ.

ರೇಖಾ (ಕೆ. ಆರ್. ನಗರ): ಸ್ತನ ಕ್ಯಾನ್ಸರ್ ವಂಶವಾಹಿಯಾಗಿ ಬರಲಿದೆಯೇ?
ಡಾ. ವಿನಯ್: ಸ್ತನ ಕ್ಯಾನ್ಸರ್ ತಾಯಿಯಿಂದ ಮಗಳಿಗೆ ಬರುವ ಸಾಧ್ಯತೆ ಇರಲಿದೆ. ಆದರೆ, ತಾಯಿಯಲ್ಲಿ ಕ್ಯಾನ್ಸರ್ ಇದ್ದರೆ ಮಗಳಿಗೆ ಬಂದೇ ಬರಲಿದೆ ಎಂಬುದಿಲ್ಲ. ಒಂದು ವೇಳೆ ತಾಯಿಯಿಂದ ಮಗಳಿಗೆ, ಮಗಳಿಂದ ಮೊಮ್ಮಗಳಿಗೆ ಬರಲಿದೆ ಎಂದರೆ ಅನುವಂಶಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ತಪಾಸಣೆಯಿಂದ ಮುಂದಿನ ಪೀಳಿಗೆಯಲ್ಲಿರುವ ಜೀನ್‌ಗಳನ್ನು ಪತ್ತೆ ಹಚ್ಚಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕಿತ್ಸೆ ನೀಡಬಹುದು.

ರಮೇಶ್ (ಬೃಂದಾವನ ಬಡಾವಣೆ): ನಮ್ಮ ತಂದೆಗೆ ಹೊಟ್ಟೆಯಲ್ಲಿ ಕ್ಯಾನ್ಸರ್ ಇತ್ತು. ವಂಶವಾಹಿಯಾಗಿ ಕ್ಯಾನ್ಸರ್ ಬರಲಿದೆಯಾ?

ಡಾ. ಅಭಿಲಾಷ್: ‘ಸ್ಟಮಕ್ ಕ್ಯಾನ್ಸರ್’ ವಂಶವಾಹಿಯಾಗಿ ಬರುವುದು ತೀರಾ ವಿರಳ. ಶೇ. ೧ರಷ್ಟು ಮಂದಿಗೆ ಬರಬಹುದು ಅಷ್ಟೇ. ಅನುವಂಶಿಕ ಪರೀಕ್ಷೆಯ ತಪಾಸಣೆ ಮಾಡಿಸಿ ಅನುಮಾನ ಬಗೆಹರಿಸಿಕೊಳ್ಳಬಹುದು.

ಜ್ಞಾನೇಶ್ ಕುಮಾರ್ (ಬೆಂಗಳೂರು): ನಾನೊಬ್ಬ ಆಹಾರ ಪ್ರಿಯನಾಗಿದ್ದು, ಯಾವ ಆಹಾರದ ಮೂಲಕ ಕ್ಯಾನ್ಸರ್ ಬರಬಹುದು? ಡಾ. ಅಭಿಲಾಷ್: ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಸುಟ್ಟು ತಿನ್ನುವ ಮಾಂಸಾಹಾರ ಮತ್ತು ರೆಡ್ ಮೀಟ್ ತಿನ್ನುವುದರಿಂದ ಕ್ಯಾನ್ಸರ್ ರೋಗ ಬರಲಿದೆ.

Tags:
error: Content is protected !!