Mysore
16
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

‘ಕುಡಿಯುವ ನೀರಿನ ಕಾಮಗಾರಿಗಳನ್ನು ಬೇಗ ಮುಗಿಸಿ’

‘ಆಂದೋಲನ’ ವರದಿಯ ಪರಿಣಾಮ ಅರಣ್ಯಾಧಿಕಾರಿಗಳ, ಜಿಪಂ ಅಽಕಾರಿಗಳ ಸಭೆ ನಡೆಸಿದ ಶಾಸಕ ಮಂಜುನಾಥ್

ಕೊಳ್ಳೇಗಾಲ: ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಅರಣ್ಯ ಇಲಾಖೆಯು ಸಹಕಾರ ನೀಡದ ಕಾರಣ ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಶಾಸಕರಾದ ಎಂ.ಆರ್.ಮಂಜುನಾಥ್ ತಿಳಿಸಿದರು.

‘ಆಂದೋಲನ’ ದಿನಪತ್ರಿಕೆಯಲ್ಲಿ ಇತ್ತೀಚೆಗೆ ಹನೂರು ತಾಲ್ಲೂಕಿನಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಕಟವಾದ ಸುದೀರ್ಘ ವರದಿಯ ಹಿನ್ನೆಲೆಯಲ್ಲಿ ಪಟ್ಟಣದ ಅರಣ್ಯ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅರಣ್ಯಾಧಿಕಾರಿಗಳು, ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಯಿತು. ನಂತರ ಶಾಸಕರು ಸುದ್ದಿಗಾರರ ಜೊತೆ ಮಾತನಾಡಿ, ೨೦೨೩ರಲ್ಲೇ ಹನೂರು ತಾಲ್ಲೂಕಿನ ೨೦ಕ್ಕೂ ಹೆಚ್ಚು ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್ ಅಳವಡಿಸುವ ಕಾಮಗಾರಿನಡೆದಿತ್ತು. ಆದರೆ, ಅರಣ್ಯ ಇಲಾಖೆಯವರು ಅನುಮೋದನೆ ನೀಡದ ಕಾರಣ ನೀರು ಒದಗಿಸಲು ವಿಳಂಬವಾಯಿತು ಎಂದರು.

ಹನೂರು ತಾಲ್ಲೂಕಿನ ಹಲವು ಗ್ರಾಮಗಳು ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳ ವ್ಯಾಪ್ತಿಯಲ್ಲಿ ಬರುತ್ತವೆ. ನೀರಿನ ಪೈಪ್‌ಲೈನ್ ಅಳವಡಿಸಲು ಅರಣ್ಯ ಇಲಾಖೆಯು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕು. ಈ ಸಂಬಂಧ ರಾಜ್ಯ ಸರ್ಕಾರವು ಪ್ರಯತ್ನಿಸಬೇಕು. ಸಮನ್ವಯತೆಯಿಂದ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಂಡು ನೀರು ಒದಗಿಸಲು ಕ್ರಮ ವಹಿಸಲಿದೆ. ಅಧಿಕಾರಿಗಳು ಸಮನ್ವತೆಯಿಂದ ಗ್ರಾಮಗಳ ಜನರಿಗೆ ನೀರು ಒದಗಿಸಲು ಮುಂದಾಗಬೇಕು. ಈ ನೀರಿನ ಯೋಜನೆ ಕಾಮಗಾರಿಗಳು ೬-೭ ತಿಂಗಳಲ್ಲಿ ಮುಕ್ತಾಯವಾಗಲಿವೆ ಎಂದು ತಿಳಿಸಿದರು.

ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕಾವೇರಿ ನದಿಯಿಂದ ಶಾಶ್ವತ ಕುಡಿಯುವ ನೀರು ಪೂರೈಸಲು ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ೩ ಕಡೆ ಪೂರ್ಣಗೊಳ್ಳಬೇಕಿದೆ. ಇದನ್ನು ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.

ಜಿಪಂ ಸಿಇಒ ಮೋನಾ ರೋತ್, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕ್ಷಕ ಇಂಜಿನಿಯರ್ ವೀರಪ್ಪ, ಚಾ.ನಗರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಜಗದೀಶ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್‌ಒ ಭಾಸ್ಕರ್, ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

” ಬಾಕಿಯಿರುವ ನೀರಿನ ಕಾಮಗಾರಿಗಳನ್ನು ಬೇಗ ಪೂರೈಸಬೇಕು. ಅಗತ್ಯವಿರುವ ಕಡೆ ಬೋರ್‌ವೆಲ್ಗಳನ್ನು ಕೊರೆಸಬೇಕು. ಖಾಸಗಿಯಾಗಿ ನೀರು ಪಡೆದು ಟ್ಯಾಂಕರ್ ಮೂಲಕ ಪೂರೈಸಬೇಕು. ಮತ್ತೊಮ್ಮೆ ನೀರಿನ ಸಮಸ್ಯೆ ಉಂಟಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.”

ಎಂ.ಆರ್.ಮಂಜುನಾಥ್, ಶಾಸಕರು

Tags:
error: Content is protected !!