ಗಿರೀಶ್ ಹುಣಸೂರು
ನೊಂದ ಕುಂಟುಂಬಗಳಿಗೆ ಲಕ್ಷ ಲಕ್ಷ ರೂ. ಪರಿಹಾರ ತಲುಪಿಸಿರುವ ರಾಜ್ಯ ಸರ್ಕಾರ
ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಕಾಡಂಚಿನ ಜನ
ಕಾಡಂಚಿನ ತುಂಡು ಭೂಮಿಯಲ್ಲಿ ವ್ಯವಸಾಯದ ಜೊತೆಗೆ ಕೂಲಿ ಮಾಡುತ್ತಾ ಸಂಸಾರದ ನೊಗ ಎಳೆಯುತ್ತಿದ್ದ ಕುಟುಂಬದ ಮುಂದಾಳುಗಳನ್ನೇ ಹುಲಿ ಬಲಿಪಡೆದಿರುವುದು ಒಂದೆಡೆಯಾದರೆ ಮತ್ತೊಬ್ಬ ಗಾಯಾಳು ೪೫ರ ಹರೆಯದಲ್ಲೇ ದೃಷ್ಟಿಹೀನರಾಗಿ ಪ್ರತಿಯೊಂದಕ್ಕೂ ಇನ್ನೊಬ್ಬರನ್ನು ಆಶ್ರಯಿಸುವಂತಾಗಿರುವುದು ದುರಂತವೇ ಸರಿ. ಸರ್ಕಾರ ಜೀವ ಹಾನಿಯಾದವರ ಕುಟುಂಬದವರಿಗೆ ಲಕ್ಷ ಲಕ್ಷ ಪರಿಹಾರ, ಗಾಯಾಳುಗೆ ಆಸ್ಪತ್ರೆಯ ವೆಚ್ಚ ಭರಿಸುವ ಜತೆಗೆ ಪರಿಹಾರ ಧನವನ್ನೂ ನೀಡಿರಬಹುದು. ಪರಿಹಾರ ಧನವೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ. ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಡದಂತೆ ಶಾಶ್ವತ ಪರಿಹಾರ ರೂಪಿಸಿ, ಇನ್ನಷ್ಟು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವುದನ್ನು ತಪ್ಪಿಸಲು ಸರ್ಕಾರ ದೃಢಸಂಕಲ್ಪ ಮಾಡಬೇಕಿದೆ.
‘೧೫ ನಿಮಿಷ ಮುಂಚೆ ಜಮೀನಿಗೆ ಹೋಗಿದ್ದರೆ ನಾನೂ ಹುಲಿ ಬಾಯಿಗೆ ತುತ್ತಾಗುತ್ತಿದ್ದೆ’
ಮೈಸೂರು: ನಮ್ಮ ತಂದೆಯನ್ನು ಕೊಂದ ಹುಲಿಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದೇ ಇಲ್ಲ. ಬೇರಾವುದೋ ಹುಲಿ ಸೆರೆ ಹಿಡಿದು ತೋರಿಸಿ ಕಣ್ಣೊರೆಸುವ ತಂತ್ರ ಮಾಡಿದರು. ಆ ಹುಲಿ ಇಲ್ಲೇ ಅಡ್ಡಾಡುತ್ತಿರುವುದರಿಂದ ಈ ಭಾಗದ ಕಾಡಂಚಿನ ಜನ ಇಂದಿಗೂ ಭಯದಲ್ಲೇ ಬದುಕುವಂತಾ ಗಿದೆ.
ಹತ್ತು ದಿನಗಳ ಹಿಂದೆಯೂ ಮೇಯಲು ಬಿಟ್ಟಿದ್ದ ಹಸು, ಮೇಕೆಗಳನ್ನು ಹೊತ್ತೊಯ್ದಿದೆ. ವಿಷಯ ತಿಳಿಸಿದಾಗ ಅರಣ್ಯ ಇಲಾಖೆಯವರು ಬಂದು ಬೋನಿಟ್ಟು, ಬಂದಾ ಪುಟ್ಟಾ-ಹೋದಾ ಪುಟ್ಟಾ ಎಂಬಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಹುಲಿ ದಾಳಿಗೆ ಬಲಿಯಾದ ಸರಗೂರು ತಾಲ್ಲೂಕು ಬೆಣ್ಣೆಗೆರೆ ಗ್ರಾಮದ ರಾಜಶೇಖರಪ್ಪ ಅವರ ಮಗ ಶಿವು.
ವಿರೋಧದ ನಡುವೆಯೂ ವನ್ಯಜೀವಿ ಸಫಾರಿ ಪುನಾರಂಭ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಹಿಂದೆ ಬ್ರಿಟಿಷರು ನಮ್ಮವರ ವಿರುದ್ಧವೇ ನಮ್ಮವರನ್ನು ಎತ್ತಿಕಟ್ಟಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುತ್ತಿದ್ದಂತೆ, ಸರ್ಕಾರ ಕೂಡ ಒಡೆದಾಳುವ ನೀತಿ ಅನುಸರಿಸುತ್ತಿದೆ. ರೈತ ಸಂಘಟನೆಗಳು ಸಫಾರಿ ಪುನಾರಂಭದ ವಿರುದ್ಧ ಇಷ್ಟೆಲ್ಲ ಹೋರಾಟ ಮಾಡುತ್ತಿದ್ದರೂ ಸರ್ಕಾರ ಬೇರೆ ಜನರನ್ನು ಸಫಾರಿ ಪರವಾಗಿ ಎತ್ತಿಕಟ್ಟಿ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದೆ. ಆಳುವ ಸರ್ಕಾರಕ್ಕೆ ಜನರ ಜೀವ ಮುಖ್ಯವೋ, ಆದಾಯ ಮುಖ್ಯವೋ ಎಂದು ಪ್ರಶ್ನೆ ಮಾಡುವ ಅವರು, ಸಾರಾಯಿ, ಲಾಟರಿ ಬಂದ್ ಮಾಡಿದ ಮೇಲೂ ಸರ್ಕಾರ ನಡೆಯುತ್ತಿಲ್ಲವೇ? ಅದೇ ರೀತಿ ಸಫಾರಿ ಬಂದ್ ಮಾಡಿ ಸರ್ಕಾರ ನಡೆಸಲಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ.
ತಂದೆಯ ಜೊತೆ ವ್ಯವಸಾಯ ಮಾಡುತ್ತಿದ್ದ ನಾನು ನಿತ್ಯಜಮೀನಿನಲ್ಲಿ ತಂದೆಯ ಜೊತೆಗೇ ಊಟ ಮಾಡುವುದು ರೂಢಿ. ಅಂದು ಕೂಡ (೨೦೨೫ರ ಅ.೨೬) ೧೫ ನಿಮಿಷ ಮುಂಚೆ ಜಮೀನಿಗೆ ಹೋಗಿದ್ದರೆ ನಾನೂ ಹುಲಿ ಬಾಯಿಗೆ ಬಲಿಯಾಗುತ್ತಿದ್ದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಆ ಘಟನೆ ಬಳಿಕ ಸಂಜೆ ೫ ಗಂಟೆ ಆಗುತ್ತಿದ್ದಂತೆ ಅಮ್ಮ ಫೋನ್ ಮಾಡ್ತಾರೆ, ಇನ್ನೂ ಮನೆಗೆ ಬಂದಿಲ್ಲವಲ್ಲಾ ಎಂದು ವಿಚಾರಿಸಲು, ಕತ್ತಲಾಗುವ ಮುಂಚೆ ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ತಂದೆಯ ಸಾವಿಗೆ ಸರ್ಕಾರ ೨೦ ಲಕ್ಷ ರೂ. ಪರಿಹಾರ ಕೊಟ್ಟಿದೆ. ಮನೆಗೆ ಆಧಾರವಾಗಿದ್ದ ತಂದೆಯೇ ಹೋದ ಮೇಲೆ ಪರಿಹಾರ ಕಟ್ಟಿಕೊಂಡು ಏನು ಅಂತಾ ಅರಣ್ಯ ಇಲಾಖೆಯವರು ಪರಿಹಾರ ಪಡೆದುಕೊಳ್ಳುವಂತೆ ಫೋನ್ ಮಾಡಿದಾಗಲೂ ಪರಿಹಾರ ಬೇಡ ಎಂದು ಹೋಗಿರಲಿಲ್ಲ, ರೈತ ಮುಖಂಡರೆಲ್ಲರ ಸಲಹೆ ಕೇಳಿ ಪರಿಹಾರದ ಚೆಕ್ ಪಡೆದಿದ್ದೇವೆ. ಪ್ರಾಣ ಹಾನಿಗೆ ಪರಿಹಾರ ಒಂದು ಭಾಗ. ಆದರೆ, ಸಫಾರಿ ಪುನಾರಂಭ ಮಾಡಿದ್ದು ಸರಿಯಲ್ಲ. ಎಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿರುವ ಐಷಾರಾಮಿ ರೆಸಾರ್ಟ್‌ಗಳಲ್ಲಿ ತಂಗಲು ದೂರದ ಊರುಗಳಿಂದ ಆಡಿ, ಬಿಎಂಡಬ್ಲ್ಯೂಮೊದಲಾದ ದುಬಾರಿ ಕಾರುಗಳಲ್ಲಿ ಜನ ಇಲ್ಲಿಗೆ ಬಂದು ಹೋಗ್ತಾರೆ. ಆದರೆ, ಇಲ್ಲಿನ ರಸ್ತೆಗಳೇ ಸರಿಯಿಲ್ಲ. ರಾಜ್ಯದ ಅತೀ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯೂ ಹೋಗುತ್ತಿಲ್ಲ. ಇನ್ಯಾವ ಸುಖಕ್ಕೆ ಸಫಾರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ
ಕುಟುಂಬದ ಆಧಾರದ ಸ್ತಂಭವನ್ನೇ ಹುಲಿ ಎಳೆದೋಯ್ತು.
ಉಳುಮೆ ಮಾಡ್ತಿದ್ದೋರ‍್ನ ಹುಲಿ ಎತ್ಕೊಂಡೋಯ್ತು : ಕೊಟ್ಟಿಗೆ ಕಸ ಎಸೆದು ನಾಷ್ಟ ತರಲು ಹೇಳಿ ಹೊಲ ಉಳುಮೆ ಮಾಡಲು ಹೋಗಿದ್ದರು, ನಾನಿನ್ನೂ ನಾಷ್ಟ ತಂಗೊಂಡು ಹೋಗಿರ‍್ನಿಲ್ಲ. ಅಷ್ಟೊತ್ತಿಗೆ ಪಕ್ಕದ ಜಮೀನವ್ರು ಫೋನ್ ಮಾಡಿ ನಿನ್ ಗಂಡನ್ನ ಹುಲಿ ಹೊತ್ಕೊಂಡೋ ಗಿ ಟ್ರಂಚ್ಗೆ ಹಾಕೊಂಡದೆ ಅಂದ್ರು, ಅಡುಗೆ ಮಾಡೋದ್ನು ಬುಟ್ಟು ಓಡೋದೆ, ಅಷ್ಟೊತ್ತಿಗೆ ಎಲ್ಲಾ ಮುಗ್ದೋಗಿತ್ತು ಎಂದು ಅಳಲು ತೋಡಿ ಕೊಂಡವರು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಮೊಳೆಯೂರು ವನ್ಯಜೀವಿ ವಲಯದ ಹಳೇ ಹೆಗ್ಗುಡಿಲು ಗ್ರಾಮದ ಜಮೀನಿನಲ್ಲಿ ೨೦೨೫ರ ನವೆಂಬರ್ ೭ರಂದು ಹುಲಿ ದಾಳಿಗೆ ಬಲಿಯಾದ ದಂಡನಾಯಕ ಅವರ ಪತ್ನಿ ರುಕ್ಮಿಣಿ. ನಮ್ಗಿರೋದು ಒಂದೆಕ್ರೆ ಜಮೀನು, ನಮ್ಗೆ ಮೂರು ಜನ ಹೆಣ್ಮಕ್ಕಳು, ನಂಗೂ ಕಣ್ಣು ಕಾಣಿಸಲ್ಲ. ಹೀಗಾಗಿ ಅವರೇ ಕೂಲಿ ಮಾಡಿ ಸಂಸಾರ ನಡೆಸ್ತಿದ್ರು, ದೊಡ್ಡ ಮಗಳನ್ನ ಅವರಿದ್ದಾಗಲೇ ಮದುವೆ ಮಾಡುದ್ರು, ಸರ್ಕಾರದವ್ರು ೨೦ ಲಕ್ಷ ರೂ.ಪರಿಹಾರ ಕೊಟ್ಟವರೆ, ಚಿಕ್ಕವರಿಬ್ರೂ ಓದ್ತಾವರೆ. ಪಿಯುಸಿ ಓದ್ತಾ ಇರೋ ಎರಡನೇ ಮಗಳಿಗೆ ೧೮ ವರ್ಷ ಆದಾಗ ಕೆಲಸ ಕೊಡುವ ಮಾತು ಕೊಟ್ಟವ್ರೆ ಎಂದು ತಮ್ಮ ಅಳಲು ತೋಡಿಕೊಂಡರು. ಚಿಯಾ ಬೆಳೆ ಬಿತ್ತಲು ೨೦೨೫ರ ನವೆಂಬರ್ ೭ರಂದು ಬೆಳಿಗ್ಗೆ ೮.೩೦ರ ಸುಮಾರಿಗೆ ಜಮೀನು ಉಳುಮೆ ಮಾಡುತ್ತಿದ್ದ ದಂಡ ನಾಯಕ ಎಂಬವರ ಮೇಲೆ ಕಾಡಿನಿಂದ ಹೊರಬಂದ ಹುಲಿ ಏಕಾಏಕೀ ದಾಳಿ ಮಾಡಿತ್ತು. ಹುಲಿ ದಾಳಿಯಿಂ ಗಾಬರಿಗೊಂಡ ಜೋಡೆತ್ತುಗಳು ಗ್ರಾಮದತ್ತ ಓಡಿಬಂದಿವೆ. ರೈತ ದಂಡನಾಯಕ ಅವರನ್ನು ಜಮೀನಿನಿಂದ ಸುಮಾರು ೧೦೦ ಮೀಟರ್ ದೂರದಲ್ಲಿರುವ ಆನೆ ತಡೆ ಕಂದಕಕ್ಕೆ ಎಳೆದೊಯ್ದ ಹುಲಿ ರಕ್ತ ಹೀರಿ ಬಲಿ ಪಡೆದಿತ್ತು. ॑ದಂಡನಾಯಕನ ಚೀರಾಟ ಕೇಳಿದ ಅಕ್ಕ ಪಕ್ಕದ ಜಮೀನಿನ ರೈತರು ಕೂಗಾಡುತ್ತಾ ಗುಂಪಾಗಿ ದೌಡಾಯಿಸಿದಾಗ ಹುಲಿ ಓಡಿ ಹೋಗಿತ್ತು.
” ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ಹುಲಿ ದಾಳಿಯಿಂದ ಸಂಭವಿಸಿದ ಮೂವರ ಸಾವು ಹಾಗೂ ಒಬ್ಬರು ಗಾಯಗೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಸರ್ಕಾರ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನ.೭ರಿಂದ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. -.೨೧ರಂದು ಸರ್ಕಾರ ಸಫಾರಿಯನ್ನು ಪುನಾರಂಭಿಸುವ ಆದೇಶ ಹೊರಡಿಸಿದ್ದು, ಭಾನುವಾರದಿಂದ ಸ-ರಿ ಆರಂಭವಾಗಿದೆ. ಇದಕ್ಕೆ ರೈತ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದರೆ, ರೆಸಾರ್ಟ್ ಮಾಲೀಕರು ಮತ್ತು ಪರಿಸರ ಪ್ರವಾಸೋದ್ಯಮದ ಪರ ಇರುವವರು ಇದನ್ನು ಸ್ವಾಗತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ‘ಆಂದೋಲನ’ ದಿನಪತ್ರಿಕೆ ಇಂದಿನಿಂದ ಇದರ ಸಾಧಕ-ಬಾಧಕಗಳ ಕುರಿತ ಅಭಿಯಾನ ಆರಂಭಿಸಿದೆ.”




