Mysore
19
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಅಕ್ರಮ ರೆಸಾರ್ಟ್, ರೆಸ್ಟೋರೆಂಟ್ ಪರಿಶೀಲನೆಗೆ ಸಮಿತಿ ರಚನೆ

ಮಹೇಂದ್ರ ಹಸಗೂಲಿ

ಪಾರದರ್ಶಕ ವರದಿ ನೀಡಿ ಅಕ್ರಮ ಕಟ್ಟಡಗಳನ್ನು ತೆರವು ಮಾಡುವಂತೆ ರೈತರು, ಪರಿಸರವಾದಿಗಳ ಒತ್ತಾಯ

ಗುಂಡ್ಲುಪೇಟೆ: ಬಂಡೀಪುರ ವ್ಯಾಪ್ತಿಯ ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಾಗೂ ಕಾನೂನುಬಾಹಿರವಾಗಿ ನಿರ್ಮಾಣಗೊಂಡಿರುವ ಹೋಟೆಲ್, ಕ್ಲಬ್, ಬಾರ್, ರೆಸ್ಟೋರೆಂಟ್, ರೆಸಾರ್ಟ್ ಹಾಗೂ ಇತರ ವಾಣಿಜ್ಯ ಕಟ್ಟಡಗಳ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ.

ಫೆ.೫ರಂದು ಮೈಸೂರು ವಿಭಾಗದ ಪ್ರಾದೇಶಿಕ ಆಯಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀಡಿದ ನಿರ್ದೇಶನದ ಮೇರೆಗೆ ಚಾಮರಾಜನಗರ ಜಿಲ್ಲೆಯ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣಾ ಕಾಯ್ದೆ, ಅರಣ್ಯ ಕಾಯ್ದೆ ಹಾಗೂ ಇತರೆ ಸಂಬಂಧಿತ ಕಾನೂನುಗಳ ಉಲ್ಲಂಘನೆ ಆಗುತ್ತಿರುವ ಬಗ್ಗೆ ದೂರುಗಳು ಹಾಗೂ ವರದಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ, ಪರಿಸರ ಸೂಕ್ಷ್ಮ ವಲಯದ ಸಂರಕ್ಷಣೆ ಹಾಗೂ ಕಾನೂನುಬದ್ಧ ಆಡಳಿತಕ್ಕಾಗಿ ಸಮಗ್ರ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ. ಆದ್ದರಿಂದ, ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಥವಾ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ ಹಾಗೂ ಈಗಾಗಲೇ ಅನುಮತಿ ಪಡೆದು ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಹೋಟೆಲ್, ಕ್ಲಬ್, ಬಾರ್, ರೆಸ್ಟೋರೆಂಟ್, ರೆಸಾರ್ಟ್ ಹಾಗೂ ಇತರೆ ವಾಣಿಜ್ಯ ಕಟ್ಟಡಗಳು ಮತ್ತು ವಾಣಿಜ್ಯ ಸ್ಥಳಗಳನ್ನು ಪರಿಶೀಲನೆ ನಡೆಸುವ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗಿದೆ.

ಅಕ್ರಮ ನಿರ್ಮಾಣ, ಭೂ ಒತ್ತುವರಿ ಹಾಗೂ ಪರಿಸರ ನಿಯಮ ಉಲ್ಲಂಘನೆಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಶಿಫಾರಸು ಸಲ್ಲಿಸಲು ಸೂಚಿಸಲಾಗಿದೆ. ಅರಣ್ಯ ಕಾಯ್ದೆ ಹಾಗೂ ಇತರ ಸಂಬಂಽತ ಕಾನೂನು ನಿಯಮಗಳ ಪಾಲನೆಯ ಸ್ಥಿತಿಯನ್ನು ಪರಿಶೀಲಿಸಿ ನಂತರ ವಿವರವಾದ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಽಕಾರಿಗಳಿಗೆ ಸಲ್ಲಿಸಬೇಕು. ಅಕ್ರಮ ಹಾಗೂ ಕಾನೂನು ಉಲ್ಲಂಘನೆಯು ಕಂಡುಬಂದ ಘಟಕಗಳ ವಿರುದ್ಧ ಕಾನೂನು ಕ್ರಮ/ತೆರವು/ ಮುಚ್ಚುವಿಕೆ/ದಂಡ ವಿಧಿಸುವ ಕುರಿತು ಶಿಫಾರಸು ವರದಿ ಸಲ್ಲಿಸಬೇಕಿದೆ. ಅದರಂತೆ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಅರಣ್ಯ ಪ್ರದೇಶ ವಿಭಾಗವಾರು ಟಾಸ್ಕ್ ಫೋರ್ಸ್ ರಚಿಸಿ ಆದೇಶಿಸಲಾಗಿದೆ.

” ಜಿಲ್ಲಾಧಿಕಾರಿಗಳು ಅಕ್ರಮ ರೆಸಾರ್ಟ್ ಪರಿಶೀಲನೆ ನಡೆಸಲು ಸಮಿತಿ ರಚಿಸಿರುವುದು ಸ್ವಾಗತಾರ್ಹ. ಹಾಗೆಯೇ ಸಫಾರಿಯನ್ನು ವರ್ಷದಲ್ಲಿ ಆರು ತಿಂಗಳ ಕಾಲ ಮಳೆಗಾಲದಲ್ಲಿ ಮಾಡಬೇಕು. ಪರಿಸರ ಅಧ್ಯಯನ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ನಿಜವಾದ ರೈತರು ಸಣ್ಣಪುಟ್ಟ ಹೋಂ ಸ್ಟೇ ಮಾಡಲಿ. ಉದ್ಯಮಕ್ಕಾಗಿ ದೊಡ್ಡ ಮಟ್ಟದಲ್ಲಿ ಮಾಡಿದರೆ ಸಮಸ್ಯೆಯಾಗುತ್ತದೆ. ಅಕ್ರಮದ ಬಗ್ಗೆ ಸಮಿತಿ ಪಾರದರ್ಶಕ ವರದಿ ನೀಡಬೇಕು. ಇಲ್ಲದಿದ್ದರೆ ಅಕ್ರಮ ಚಟುವಟಿಕೆ ಹೆಚ್ಚಾಗುತ್ತದೆ. ಕಾಡುಪ್ರಾಣಿಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ.”

-ಎಸ್.ಪಿ.ಸುರೇಶ್, ಪರಿಸರವಾದಿ, ಪ್ರಗತಿಪರ ರೈತ

ಟಾಸ್ಕ್ ಫೋರ್ಸ್ ಕಮಿಟಿ: 

ಕೊಳ್ಳೆಗಾಲ ಉಪ ವಿಭಾಗಾಧಿಕಾರಿಗಳನ್ನು ಟಾಸ್ಕ್ ಫೋರ್ಸ್ ಕಮಿಟಿ ಅಧ್ಯಕ್ಷರಾಗಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಯಾಗಿ, ತಹಸಿಲ್ದಾರ್, ತಾಪಂ ಇಒ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳು, ಅಬಕಾರಿ ನಿರೀಕ್ಷಕರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.

” ಅಕ್ರಮ ರೆಸಾರ್ಟ್‌ನಿಂದ ಕಾಡಿಗೆ ಹಾಗೂ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತಿದ್ದು, ಒಂದು ಎಕರೆ ಅನ್ಯಕ್ರಾಂತ ಮಾಡಿ ಐದು ಎಕರೆ ರೆಸಾರ್ಟ್ ಮಾಡುವುದು, ಕೃಷಿಗೆ ಎಂದು ಕೊಳವೆ ಬಾವಿ ಕೊರೆಸಿ, ವಿದ್ಯುತ್ ಪಡೆದು ವಾಣಿಜ್ಯಕ್ಕೆ ಬಳಸುವುದು, ಇಂತಹ ವಿಚಾರಗಳಿಗೆ ಕಡಿವಾಣ ಹಾಕುವಂತೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು. ಅದರಂತೆ ಸಮಿತಿ ರಚಿಸಿದ್ದು, ಇದರಲ್ಲಿ ಪಾರದರ್ಶಕತೆ ಇರಬೇಕು. ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಅಕ್ರಮ ಕಟ್ಟಡಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರವಾಗಲಿದೆ.”

-ಹೊನ್ನೂರು ಪ್ರಕಾಶ್, ರೈತ ಮುಖಂಡ 

 

 

Tags:
error: Content is protected !!