ಆಂದೋಲನ ವಿಶೇಷ ಸಂದರ್ಶನದಲ್ಲಿ ಹುಲಿ ಯೋಜನೆಯ ನಿರ್ದೇಶಕರೂ ಆದ ಪಿ.ಎ ಸೀಮಾ ಬದ್ಧತೆಯ ನುಡಿ
ಮೈಸೂರು: ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಅರಣ್ಯ ಪ್ರದೇಶ ಎಂಬ ಖ್ಯಾತಿ ಪಡೆದಿರುವ ನಾಗರಹೊಳೆ, ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿ ಮಾನವ- ವನ್ಯಜೀವಿ ಸಂಘರ್ಷಗಳು ನಡೆಯುತ್ತಲೇ ಇವೆ. ಹುಲಿಗಳ ದಾಳಿಯಿಂದ ಸಾಕು ಪ್ರಾಣಿಗಳಷ್ಟೇ ಅಲ್ಲದೆ ಮನುಷ್ಯರೂ ಬಲಿಯಾಗುತ್ತಿದ್ದಾರೆ. ಹುಲಿಗಳು ಕಾಡಿನಿಂದ ಹೊರಬಂದು ದಾಳಿ ಮಾಡುವುದಕ್ಕೆ ಕಾರಣವೇನು ಎಂಬ ಕುತೂಹಲಕಾರಿ ಪ್ರಶ್ನೆಗಳು ಹಾಗೂ ಇಲಾಖೆಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಹುಲಿ ಯೋಜನೆ ನಿರ್ದೇಶಕರಾದ ಪಿ. ಎ. ಸೀಮಾ ಅವರು ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹುಲಿ ಕಾಡಿನಿಂದ ಹೊರಬರಲು ಕಾರಣವೇನು?
ಪಿ. ಎ. ಸೀಮಾ: ಹುಲಿಗಳ ಸಂತತಿ ಹೆಚ್ಚಾಗಿದೆ. ಇದರಿಂದ ಹುಲಿಗಳು ತಮ್ಮ ಗಡಿಯನ್ನು ಗುರುತು ಮಾಡಿಕೊಳ್ಳಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ತಮ್ಮ ಗಡಿ ಗುರುತಿಸಿಕೊಳ್ಳಲು ಹುಲಿಗಳ ನಡುವೆ ಕದನವಾದಾಗ ಶಕ್ತಿಯುತ ಹುಲಿ ದುರ್ಬಲ ಹುಲಿಯನ್ನು ಹೊರ ಹಾಕುತ್ತದೆ. ಆಗ ಆ ಹುಲಿ ಕಾಡಿನಿಂದ ಹೊರಬಂದು ಆಹಾರ ಹುಡುಕಲು ಯತ್ನಿಸುತ್ತದೆ. ಆಗ ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆ. ಎರಡನೆಯದಾಗಿ ವಯಸ್ಸಾದ ಹುಲಿ ಬೇಟೆಯಾಡಲು ಶಕ್ತಿ ಕಡಿಮೆ ಆದಾಗ ಸುಲಭವಾಗಿ ಸಿಗುವ ಆಹಾರಕ್ಕಾಗಿ ಕಾಡಿನಿಂದ ಹೊರಬಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆ. ಇದರ ಜೊತೆಗೆ ನವೆಂಬರ್‌ನಿಂದ ಫೆಬ್ರವರಿ ತಿಂಗಳು ಹುಲಿಗಳಿಗೆ ಸಂತಾನೋತ್ಪತ್ತಿ ಸಮಯವಾದ್ದರಿಂದ ಆಗ ಶಕ್ತಿಯುತವಾದ ಹುಲಿ ನಿಶ್ಶಕ್ತ ಹುಲಿಯನ್ನು ಹೊರ ಹಾಕುತ್ತದೆ. ಹಾಗಾಗಿ ಕೆಲ ಹುಲಿಗಳು ನಾಡಿನತ್ತ ಬರುತ್ತವೆ.
ಕಾಡಂಚಿನ ಗ್ರಾಮದವರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೀರಾ?
ಪಿ. ಎ. ಸೀಮಾ: ಈಗಾಗಲೇ ನಮ್ಮ ಇಲಾಖೆಯ ಮೇಲಽಕಾರಿಗಳ ನಿರ್ದೇಶನದಂತೆ ಕಾಡಂಚಿನ ಗ್ರಾಮ ದವರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಲೇ ಇದ್ದೇವೆ. ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿ ದಾಗ ಶೀಘ್ರವೇ ಪರಿಹಾರ ಕೊಡಿಸುವ ಕೆಲಸ ಮಾಡು ತ್ತಿದ್ದೇವೆ. ಜೊತೆಗೆ ಕಾಡಂಚಿನ ಗ್ರಾಮದ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗೊಂಡು ಜನರ ರಕ್ಷಣೆಗೆ ಬದ್ಧರಾಗಿದ್ದೇವೆ.
ಹುಲಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಿಮಗೆ ಈ ಹುದ್ದೆ ಹೊರೆಯಾಗುತ್ತಿಲ್ಲವೇ?
ಪಿ.ಎ. ಸೀಮಾ: ಕೆಲ ವರ್ಷಗಳ ಹಿಂದೆ ಇಬ್ಬರು ಹುಲಿ ಯೋಜನಾ ನಿರ್ದೇಶಕರನ್ನು ನೇಮಿಸಲಾಯಿತು. ನಾಗರಹೊಳೆ, ಬಂಡೀಪುರ, ಬಿಆರ್‌ಟಿ ಸೇರಿದಂತೆ ಮೂರು ಹುಲಿ ಯೋಜನೆಗಳನ್ನು ಸೇರಿಸಿ ಮೈಸೂರು ಹುಲಿ ಯೋಜನೆ ನಿರ್ದೇಶಕರ ಹುದ್ದೆ ಸೃಷ್ಟಿಸಿದ್ದರೆ, ಭದ್ರಾ, ಅಣಶಿ-ದಾಂಡೇಲಿ ಹುಲಿಧಾಮ ಸೇರಿಸಿ ಶಿವಮೊಗ್ಗ ಹುಲಿ ಯೋಜನೆ ನಿರ್ದೆಶಕರ ಹುದ್ದೆ ಸೃಷ್ಟಿಸಲಾಯಿತು. ಇದಾದ ಕೆಲವೇ ವರ್ಷಗಳಲ್ಲಿ ಶಿವಮೊಗ್ಗ ಶಿವಮೊಗ್ಗ ಹುಲಿ ಯೋಜನೆ ನಿರ್ದೆಶಕರ ಹುದ್ದೆ ರದ್ದಾಗಿ ನಂತರ ಮೈಸೂರು ಹುಲಿ ಯೋಜನೆ ನಿರ್ದೇಶಕರ ಹುದ್ದೆಯನ್ನು ಮಾತ್ರ ಉಳಿಸಲಾ ಯಿತು. ಹೀಗೆ ನಿರಂತರವಾಗಿ ಬದಲಾವಣೆ ಆಗುತ್ತಲೇ ಇದ್ದು ಮೈಸೂರು ಹುಲಿ ಯೋಜನೆ ನಿರ್ದೇಶಕರಾಗಿ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಹಾಗಾಗಿ ಹೆಚ್ಚಿನ ಜವಾಬ್ದಾರಿ ಇದೆ. ಹೊರೆ ಅನ್ನಿಸುತ್ತಿಲ್ಲ. ನಾನು ಹುಲಿ ಪ್ರಿಯಳೂ ಆಗಿರುವುದರಿಂದ ಈ ಹುದ್ದೆ ತೃಪ್ತಿ ತಂದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಳ್ಳಬೇಟೆ ತಡೆಗೆ ಕೈಗೊಂಡಿರುವ ಕ್ರಮಗಳೇನು?
ಪಿ. ಎ. ಸೀಮಾ: ಎನ್ಸ್ತ್ರ್ಟೆಪ್ಸ್ ತಂತ್ರಾಂಶ ಬಳಸಿ ಕಾಲ್ನಡಿಗೆಯಲ್ಲಿ, ಆನೆಗಳ ಮೇಲೆ, ವಾಹನಗಳಲ್ಲಿ ಹಗಲು-ರಾತ್ರಿ ಗಸ್ತು ಕಾರ್ಯ ನಡೆಸಲಾಗುತ್ತದೆ. ಮಾನ್ಸೂನ್‌ನಲ್ಲಿ ಕಳ್ಳಬೇಟೆ ತಡೆಯಲು ವಿಶೇಷ ತಂಡಗಳನ್ನು ಮಾಡಿಕೊಂಡು ಗಸ್ತು ಮಾಡಲಾಗುತ್ತದೆ. ಕಾಡಂಚಿನಲ್ಲಿ ಎಸ್‌ಟಿಪಿಎಫ್ ತಂಡಗಳೊಂದಿಗೆ ಉರುಳು ನಿರ್ಮೂಲನೆ ಕೆಲಸಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಕಳ್ಳ ಬೇಟೆ ತಡೆ ಶಿಬಿರಗಳ ಸಿಬ್ಬಂದಿ ರಾತ್ರಿ ವೇಳೆಯಲ್ಲಿ ಶಿಬಿರಗಳಲ್ಲೇ ಇದ್ದು ಕೆಲಸ ನಿರ್ವಹಿಸುತ್ತಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆ ಚೌಕೂರು ವನ್ಯಜೀವಿ ವಲಯದಲ್ಲಿ ಸಫಾರಿ ಜೋನ್ ಮಾಡುವ ಪ್ರಸ್ತಾಪ ಏನಾಯಿತು?
ಪಿ. ಎ. ಸೀಮಾ: ಆನೆಚೌಕೂರು ಬಫರ್ ಅರಣ್ಯ ಪ್ರದೇಶದಲ್ಲಿ ಸಫಾರಿ ಜೋನ್ ಮಾಡುವ ಪ್ರಸ್ತಾ ವನೆ ಇದೆ. ಆದರೆ, ಇದಕ್ಕೆ ಕೊಡಗು ರೈತ ಸಂಘದಿಂದ ಆಕ್ಷೇಪಣೆ ಇರುವುದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನೂತನ ಸರ್ಕಾರ ರೈತರ ಜತೆ ಮಾತುಕತೆ ನಡೆಸಿ ಸಫಾರಿ ವಲಯ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಫಾರಿಗೆ ಬರುವ ಪ್ರವಾಸಿಗರಿಗೆ ಡ್ರೆಸ್‌ಕೋಡ್ ಅಗತ್ಯವಿದೆಯೇ?
ಪಿ. ಎ. ಸೀಮಾ: ಡ್ರೆಸ್ ಕೋಡ್ ಅಂತೇನಿಲ್ಲ. ಆದರೆ, ಸಫಾರಿ ಹೋಗುವ ಪ್ರವಾಸಿಗರು ಹಸಿರು, ಖಾಕಿ ಬಣ್ಣಗಳಲ್ಲಿ ಮಂದ ಬಣ್ಣದ ಉಡುಪುಗಳನ್ನು ಧರಿಸಿದರೆ ಉತ್ತಮ. ಗಾಢ ಬಣ್ಣದ ಉಡುಪು ಧರಿಸಿದಲ್ಲಿ ವನ್ಯಪ್ರಾಣಿಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿರುತ್ತವೆ.




