Mysore
24
scattered clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಜಮೀನು ರಸ್ತೆಗಾಗಿ ಕಾಲೇಜು ಕಾಂಪೌಂಡ್ ನೆಲಸಮ

ಎಚ್.ಡಿ.ಕೋಟೆ ಸರ್ಕಾರಿ ಕಾಲೇಜಿನ ಪಕ್ಕದ ಜಮೀನಿನವರಿಂದ ಕೃತ್ಯ

ರಾತ್ರೋ ರಾತ್ರಿ ಕಾರ್ಯಾಚರಣೆ ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಂಜು ಕೋಟೆ

ಎಚ್.ಡಿ.ಕೋಟೆ: ರಸ್ತೆ ನಿರ್ಮಾಣ ಮಾಡಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ಅನ್ನು ಪಕ್ಕದಜಮೀನಿನ ಕೆಲ ಪ್ರಭಾವಿಗಳು ರಾತ್ರೋರಾತ್ರಿ ನೆಲಸಮ ಗೊಳಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಭೂಮಾಫಿಯಾ ಹೆಚ್ಚಾಗುತ್ತಿದ್ದು, ಸರ್ಕಾರಿ ಜಮೀನು, ಜಾಗಗಳು ಭೂಗಳ್ಳರ ಪಾಲಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿರುವಸಂದರ್ಭದಲ್ಲಿ ಪಟ್ಟಣದಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಗದ್ದಿಗೆ ವೃತ್ತದ ಬಳಿ ೯ ಎಕರೆ ೩೦ ಗುಂಟೆ ಜಾಗದಲ್ಲಿ ೩೦ ವರ್ಷಗಳ ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಾಪನೆ ಮಾಡಲಾಯಿತು. ಆದರೆ, ಕಾಲೇಜಿನ ಕಾಂಪೌಂಡಿನ ಕೊನೆ ಭಾಗದಲ್ಲಿ ಸುಮಾರು ೩೦ ಅಡಿಗಳಷ್ಟು ಕಾಂಪೌಂಡ್ ಅನ್ನು ೧೫ ದಿನಗಳ ಹಿಂದೆ ಕಾಲೇಜಿನ ಪಕ್ಕದ ಜಮೀನಿನವರಾದ ರಂಗನಾಥ್ ಹಾಗೂಮತ್ತಿತರರು ತಮ್ಮ ಜಾಗವೆಂದು ಹೇಳಿ, ಕಂದಾಯ ಇಲಾಖೆಯ ಕೆಲ ಅಧಿಕಾರಿಗಳ ಸಹಕಾರದಿಂದ ಕೆಲ ದಾಖಲಾತಿಗಳನ್ನು ಪಡೆದು ರಾತ್ರೋರಾತ್ರಿ ಕಾಂಪೌಂಡ್ ಒಡೆದು ಹಾಕಿದ್ದಾರೆ.

ಈ ವಿಚಾರ ತಿಳಿದ ಕಾಲೇಜಿನ ಪ್ರಾಂಶುಪಾಲರಾದ ಅರುಣ್‌ಕುಮಾರ್ ಅವರು, ತಹಸಿಲ್ದಾರ್ ಶ್ರೀನಿವಾಸ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ ಅವರಿಗೆ ದೂರು ನೀಡಿದ್ದರು.

ಈ ಜಾಗದ ವಿಚಾರವಾಗಿ ಸರ್ವೇ ನಡೆಯದೆ ಅಕ್ರಮವಾಗಿ ಕಾಂಪೌಂಡ್ ಒಡೆದು ಹಾಕಿರುವುದು ತಪ್ಪಾಗಿದ್ದು, ಸರ್ವೆ ಕಾರ್ಯ ನಡೆದು ಸರ್ಕಾರದ ಜಾಗವೋ ಅಥವಾ ಜಮೀನಿನವರ ಜಾಗವೋ ಎಂದು ತಿಳಿಯುವವರೆಗೂ ಕಾಂಪೌಂಡ್ ಜಾಗದಲ್ಲಿ ಕಾಮಗಾರಿ ನಡೆಸಬಾರದೆಂದು ಸೂಚನೆ ನೀಡಿ ದೂರು ದಾಖಲು ಮಾಡಿಕೊಂಡಿದ್ದರು.

ಆದರೂ ಬುಧವಾರ ಜಮೀನಿನವರು ಮತ್ತು ಪ್ರಭಾವಿಗಳು ಹೊಸದಾಗಿ ಕಾಂಪೌಂಡ್ ಮತ್ತು ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತೊಮ್ಮೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

ಈ ಭಾಗದಲ್ಲಿ ಜಮೀನು ಮತ್ತು ನಿವೇಶನಗಳಿಗೆ ಭಾರೀ ಬೇಡಿಕೆ ಮತ್ತು ಹೆಚ್ಚು ಮೌಲ್ಯ ಇರುವುದರಿಂದ ದಿನದಿಂದ ದಿನಕ್ಕೆ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದು, ಸರ್ಕಾರದ ಜಾಗವೋ ಅಥವಾ ಜಮೀನಿನವರ ಜಾಗವೋ ಎಂಬುದನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಶಾಸಕ ಅನಿಲ್ ಚಿಕ್ಕಮಾದುರವರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದು, ಸರ್ಕಾರಿ ಕಾಲೇಜಿನ ಕಾಂಪೌಂಡ್‌ಅನ್ನು ಒಡೆದು ಹಾಕಿರುವ ಬಗ್ಗೆ ಹಾಗೂ ಕಾಲೇಜಿನ ಜಾಗದ ಸಮಗ್ರ ಸರ್ವೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ʼ ಪ್ರಥಮ ದರ್ಜೆ ಕಾಲೇಜಿನ ಜಾಗದ ಅಳತೆ ಮತ್ತು ಜಮೀನಿನವರಿಗೆ ಸೇರಿದ ರಸ್ತೆಯ ಜಾಗ ಎಲ್ಲಿದೆ ಎಂಬುದನ್ನು ಕಂದಾಯ ಇಲಾಖೆಯವರು ಸರ್ವೆ ಮಾಡಿ ಜಾಗವನ್ನು ಗುರುತಿಸಿದ ನಂತರ ಅವರವರ ಜಾಗವನ್ನು ಹದ್ದುಬಸ್ತು ಮಾಡಿಕೊಳ್ಳಲು ಸೂಚಿಸಲಾಗಿದೆ. ಅಲ್ಲಿಯವರೆಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡದಂತೆ ಸೂಚಿಸಲಾಗಿದೆ.”

-ಗಂಗಾಧರ್, ಸರ್ಕಲ್ ಇನ್‌ಸ್ಪೆಕ್ಟರ್

” ಸರ್ಕಾರಿ ಪದವಿ ಕಾಲೇಜಿನ ಜಾಗದಲ್ಲಿ ರಸ್ತೆ ಬಿಡಿಸಬೇಕೆಂದು ಜಮೀನಿನ ವರು ಕಾಂಪೌಂಡ್ಅನ್ನು ಒಡೆದು ರಸ್ತೆ ನಿರ್ಮಿಸಿ ಕೊಂಡು ತಮ್ಮ ಜಮೀನಿಗೆ ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದರು. ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಘಟನೆ ಸಂಬಂಧ ಮೇಲಧಿಕಾರಿಗಳಿಗೆ ಮತ್ತು ಶಾಸಕ ರಿಗೆ ವಿಚಾರ ತಿಳಿಸಲಾಗಿದೆ. ಕಾಲೇಜಿನ ಜಾಗ ವನ್ನು ಸರ್ವೆ ಮಾಡಿಕೊಡಿ ಎಂದು ಕಂದಾಯ ಇಲಾಖೆಗೆ ತಿಂಗಳ ಹಿಂದೆಯೇ ಪತ್ರ ಬರೆದರೂ ಅದರ ಬಗ್ಗೆ ಕ್ರಮ ಕೈಗೊಳ್ಳದೆ ಪಕ್ಕದ ಜಮೀನಿನ ರಸ್ತೆ ವಿಚಾರವಾಗಿ ಗಮನಹರಿಸಿದ್ದಾರೆ.”

-ಅರುಣ್ ಕುಮಾರ್, ಪ್ರಾಂಶುಪಾಲರು, ಸರ್ಕಾರಿ ಕಾಲೇಜು

Tags:
error: Content is protected !!