ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೈಜೋಡಿಸಬೇಕಿದೆ: ಡಾ.ಮಂಥರ್‌ಗೌಡ
ಮಡಿಕೇರಿ: ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ಕಾಫಿ ಕಂಪು ಮೇಳೈಸಿತು. ಕಾಫಿ ದಸರಾದಲ್ಲಿ ಕಾಫಿ ಕೃಷಿ ಸಂಬಂಧಿತ ಮತ್ತು ಕೆಫೆ ಸೇರಿದಂತೆ ೪೫ ಮಳಿಗೆಗಳು ಹಾಗೂ ಕಾಫಿ ದಸರಾ ಅಂಗವಾಗಿ ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
ಕಾಫಿ ಫ್ಲೇವರ್ ಕೇಕ್, ಕಾಫಿ ಫ್ಲೆವರ್ ಕಪ್ ಕೇಕ್, ಕಾಫಿ ಫ್ಲೆವರ್ ಬ್ರೌನಿ, ಕಾಫಿ ಫ್ಲೇವರ್ ಬಿಸ್ಕತ್, ಕಾಫಿ ಫ್ಲೆವರ್ ಪುಡ್ಡಿಂಗ್, ವಿಭಿನ್ನ ರುಚಿಯಿರುವ ಕಾಫಿ ಪಾನೀಯ, ಕಾಫಿ ಫ್ಲೇವರ್ ಚಾಕಲೇಟ್ ಸವಿಯನ್ನು ಸ್ಪರ್ಧೆಯ ನಂತರ ಸಾರ್ವಜನಿಕರು ಸವಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಪರಿಕಲ್ಪನೆಯಲ್ಲಿ ಕಳೆದ ವರ್ಷದಿಂದ ಮಡಿಕೇರಿ ದಸರಾಕ್ಕೆ ಪರಿಚಯಿಸಲ್ಪಟ್ಟ ಕಾಫಿ ದಸರಾಕ್ಕೆ ಉತ್ತಮ ಸ್ಪಂದನ ದೊರಕಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷವೂ ಕಾಫಿ ದಸರಾ ಆಯೋಜಿಸಲಾಗಿತ್ತು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಕಾಫಿ ದಸರಾವನ್ನು ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ಕೊಡಗಿನ ದಿ.ಸಾಕಮ್ಮ ಸ್ಮರಣಾರ್ಥ ಸಭಾಂಗಣದಲ್ಲಿ ನಡೆಸಲಾಯಿತು. ಕಾಫಿ ದಸರಾ ಅಂಗವಾಗಿ ಕಾಫಿ ಕೃಷಿಕರಿಗೆ ಮಾಹಿತಿ ನೀಡುವ ಸಲುವಾಗಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭಾರತೀಯ ಕಾಫಿ ಮಂಡಳಿಯ ಗುಣಮಟ್ಟ ವಿಭಾಗದ ನಿರ್ದೇಶಕ ಡಾ.ಐಚೆಟ್ಟೀರ ಮಂದಪ್ಪ ಕಾಫಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ವಿಚಾರವಾಗಿ ಮಾತನಾಡಿದರು.
ಸಕಲೇಶಪುರದ ಪ್ರಗತಿಪರ ಕೃಷಿಕ ಕರಣ್ ಅವರು ಕಾಫಿ ಕೃಷಿಯಲ್ಲಿ ಇತ್ತೀಚಿನ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಿದರೆ, ಕುಶಾಲನಗರದ ಪ್ರಗತಿ ಪರ ಕೃಷಿಕ ಜೆರ್ಮಿ ಡಿಸೋಜಾ ಅವರು ರೋಬಸ್ಟಾ ಕಾಫಿಯಲ್ಲಿ ಕುಬ್ಜ ತಳಿಯ ಬಗ್ಗೆ ಮಾಹಿತಿ ನೀಡಿದರು. ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚೇಂದ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ ಅವರು ಕಾಫಿ ಕೃಷಿಗೆ ಪೂರಕವಾದ ಮಣ್ಣಿನ ಫಲವತ್ತತೆ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಕಾಫಿಗೆ ಉತ್ತಮ ದರವಿದ್ದರೂ ಕೂಡ ಕಾಫಿ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.
ಕಾಫಿ ಬೆಳೆಗೆ ಉತ್ತಮ ದರ ಇದ್ದರೂ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಫಿ ಉತ್ಪಾದನೆಯಲ್ಲಿ ಸಣ್ಣ ಬೆಳೆಗಾರರು ಕೂಡ ಇದ್ದು, ಹಲವು ಸಮಸ್ಯೆ ಮತ್ತುಸವಾಲುಗಳನ್ನು ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರು ಎಲ್ಲರೂ ಒಂದೆಡೆ ಸೇರಿ ಕಾಫಿ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆ ವಿಸ್ತರಣೆ ಮತ್ತಿತರ ಬಗ್ಗೆ ಚರ್ಚಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವವೃಂದ ಮಾತನಾಡಿ, ತೋಟಗಾರಿಕೆ ಬೆಳೆಯಾದ ಅಡಕೆ ಮತ್ತು ಕಾಳು ಮೆಣಸಿಗೆ ವಿಮಾ ಸೌಲಭ್ಯ ಇರುವಂತೆ ಕಾಫಿ ಬೆಳೆಗೂ ವಿಮೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಕಾಫಿ ಕ್ಷೇತ್ರದ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ವೈ.ರಾಜೇಶ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ನಂದ ಬೆಳ್ಯಪ್ಪ, ಕೊಡಗು ಮಹಿಳಾ ಜಾಗೃತಿ ಸಂಘದ ಅಧ್ಯಕ್ಷರಾದ ಜ್ಯೋತಿಕಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಎಸ್.ಜಿ.ಮೇದಪ್ಪ, ಬುಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಬಾಸ್ತಿ, ಇತರರು ಹಾಜರಿದ್ದರು.
” ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜಿಲ್ಲಾಡಳಿತ ರೈತರ, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಲ್ಲಿ ಸದಾ ಸಿದ್ಧವಾಗಿದೆ. ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸು ವಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದೆ.”
-ವೆಂಕಟ್ ರಾಜಾ, ಜಿಲ್ಲಾಧಿಕಾರಿ
” ಇಡೀ ಜಗತ್ತಿನಲ್ಲಿ ಕಾಫಿ ಬೆಳೆಯ ದರ ಒಂದು ರೀತಿಯ ಸಂಚಲನ ಮೂಡಿಸಿದೆ. ಕಾಫಿ ಬೆಳೆಗೆರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯವಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು. ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ಹೊಸ ಹೊಸ ತಂತ್ರಜ್ಞಾನದ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸುತ್ತಿದೆ.”
-ದಿನೇಶ್ ದೇವವೃಂದ, ಅಧ್ಯಕ್ಷರು, ಭಾರತೀಯ ಕಾಫಿ ಮಂಡಳಿ





