ಆರ್.ಟಿ.ವಿಠ್ಠಲಮೂರ್ತಿ
ಸಿದ್ದರಾಮಯ್ಯ ಅವರನ್ನೇ ೫ ವರ್ಷ ಸಿಎಂ ಎಂದು ಘೋಷಿಸುವಂತೆ ಒತ್ತಡ
ಬೆಂಗಳೂರು: ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಕೇಳಿ ಬರುತ್ತಿರುವ ಅಧಿಕಾರ ಹಂಚಿಕೆಯ ಗೊಂದಲವನ್ನು ಪರಿಹರಿಸುವಂತೆ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಲು ನಿರ್ಧರಿಸಿರುವ ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು, ಈ ಸಂಬಂಧ ದಿಲ್ಲಿಗೆ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದಾರೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಅಧಿಕಾರ ಹಂಚಿಕೆಯ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಶೀತಲ ಸಮರ ಹಾಗೆಯೇ ಮುಂದುವರಿದಿದ್ದು, ಇದಕ್ಕೆ ತಕ್ಷಣ ಬ್ರೇಕ್ ಹಾಕದಿದ್ದರೆ ಸರ್ಕಾರಕ್ಕೆ ಅಪಾಯ ಎಂದು ವರಿಷ್ಠರಿಗೆ ವಿವರಿಸಲು ಈ ಸಚಿವರು ನಿರ್ಧರಿಸಿದ್ದಾರೆ. ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಮುಗಿದ ನಂತರ ದಿಲ್ಲಿಗೆ ತೆರಳಲು ನಿರ್ಧರಿಸಿರುವ ಈ ಸಚಿವರು, ಸರ್ಕಾರಕ್ಕೆ ಅಪಾಯವಾಗದಂತೆ ಅಧಿಕಾರ ಹಂಚಿಕೆಯ ವಿಷಯವನ್ನು ಇತ್ಯರ್ಥ ಪಡಿಸಬೇಕು ಎಂದು ಪಕ್ಷದ ವರಿಷ್ಠರನ್ನು ಕೋರಲಿದ್ದಾರೆ.
ಇವೇ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರನ್ನು ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುವಂತೆ ಕೋರಲಿದ್ದಾರೆ. ಕರ್ನಾಟಕದ ಅಹಿಂದ ಮತ ವರ್ಗಗಳುಸಿದ್ಧರಾಮಯ್ಯ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದರೆ ಪಕ್ಷಕ್ಕೆ ಅನುಕೂಲ ಮತ್ತು ಸರ್ಕಾರಕ್ಕೆ ಶಕ್ತಿ ಎಂದು ವಿವರ ನೀಡಲು ತೀರ್ಮಾನಿಸಿದ್ದಾರೆ. ಅಂದ ಹಾಗೆ ಕಳೆದೆರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕೇಳಿ ಬರುತ್ತಿದ್ದ ಪ್ರಸ್ತಾಪದ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು, ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿಕೊಂಡಿದ್ದರು.
ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನಾನು ಡಿ.ಕೆ.ಶಿವಕುಮಾರ್ ಅವರನ್ನು ಸೋಲಿಸಿದ್ದೇನೆ. ಹಾಗೆಯೇ ಒಂದಿಬ್ಬರು ಶಾಸಕರು ಡಿಕೆಶಿ ಪರವಾಗಿರಬಹುದು ಎನ್ನುವ ಮೂಲಕ ತಮಗೆ ಯಾರೂ ಎದುರಾಳಿ ಇಲ್ಲ ಎಂದು ಹೇಳುವ ಯತ್ನ ಮಾಡಿದ್ದರು. ಆದರೆ ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಮಾಡಿದ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ಲೋಕಸಭೆ ಚುನಾವಣೆ ನಡೆದಾಗ ನಾವೇ ಅಧಿಕಾರದಲ್ಲಿದ್ದೇವಲ್ಲವೇ? ಹೀಗಾಗಿ ಮತದಾರರ ಪಟ್ಟಿಯನ್ನು ನಾವು ನೋಡಿಕೊಳ್ಳಬೇಕಿತ್ತು ಎಂದು ಹೇಳಿ ವರಿಷ್ಠರ ಆಕ್ರೋಶಕ್ಕೆ ಗುರಿಯಾಗಿದ್ದರು.
ಹೀಗೆ ವರಿಷ್ಠರ ಆಕ್ರೋಶಕ್ಕೆ ಗುರಿಯಾದ ರಾಜಣ್ಣ ಅವರನ್ನು ಸ್ವತಃ ರಾಹುಲ್ ಗಾಂಧಿ ಅವರ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಚಿವ ಸಂಪುಟದಿಂದ ವಜಾ ಮಾಡಿದ್ದರು. ಹೀಗೆ ರಾಜಣ್ಣ ಅವರು ವಜಾ ಆದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಣದಲ್ಲಿ ಉತ್ಸಾಹ ಗರಿಗೆದರಿದ್ದು, ಶಿಸ್ತನ್ನು ಯಾರೇ ಉಲ್ಲಂಘಿಸಿದರೂ ವರಿಷ್ಠರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಾರೆ. ನಾಳೆ ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿದು, ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಬೇಕು ಎಂದು ತಾವು ಹೇಳಿದಾಗ ಅದರ ಪಾಲನೆಯಾಗಬೇಕು ಎಂದು ವರಿಷ್ಠರು ನಿರೀಕ್ಷಿಸುತ್ತಾರೆ. ಒಂದು ವೇಳೆ ಅದು ಆಗದೆ ಇದ್ದರೆ ಕಠಿಣ ಕ್ರಮಕ್ಕೆ ಮುಂದಾಗುತ್ತಾರೆ ಎಂದು ಹೇಳಿಕೊಳ್ಳುವ ಕೆಲಸ ಶುರುವಾಗಿದೆ. ಹೀಗಾಗಿ ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.
” ಕೆಲ ದಿನಗಳಿಂದ ತಣ್ಣಗಾಗಿದ್ದ ಅಧಿಕಾರ ಹಂಚಿಕೆ ಪ್ರಸ್ತಾಪ ಪುನಃ ಮೇಲೆದ್ದಿದ್ದು, ಸಹಜವಾಗಿಯೇ ಇದು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲೆವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಇದಕ್ಕೆ ಬ್ರೇಕ್ ಹಾಕಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರ ಮಾತು. ಮುಖ್ಯಮಂತ್ರಿ ಪಟ್ಟದಲ್ಲಿ ಸಿದ್ಧರಾಮಯ್ಯ ಅವರೇ ಮುಂದುವರಿಯಬೇಕು ಎಂದು ವರಿಷ್ಠರಿಗೆ ಹೇಳಲು ಈ ಸಚಿವರ ಪಡೆ ನಿರ್ಧರಿಸಿದೆ.”




