ಸಂಬಂಧಪಟ್ಟ ಅಧಿಕಾರಿಗಳಿಗೆ ಲೊಕ್ಕನಹಳ್ಳಿ ಗ್ರಾಮಸ್ಥರ ಆಗ್ರಹ
ಹನೂರು: ಖಾಸಗಿ ವ್ಯಕ್ತಿಗಳು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿ ಹಲವು ದಿನಗಳು ಕಳೆದಿದ್ದರೂ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದ ಸರ್ವೆ ನಂ.೧೦೭/ ಎ. ರಲ್ಲಿ ೧.೨೬ ಕೆರೆ ಪರಂಪೋಕು, ೧೦೭/ಬಿಯಲ್ಲಿ ೫೭ ಸೆಂಟ್, ೨೦೭/ಸಿಯಲ್ಲಿ ೧೬ ಸೆಂಟ್, ೧೦೮ ಬಿ ೭ ಸೆಂಟ್ ಸೇರಿ ಒಟ್ಟು ೧.೯೮ ಸೆಂಟ್ ಕೆರೆಯಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ವ್ಯಕ್ತಿಗಳು ೧ ಎಕರೆಗೂ ಹೆಚ್ಚು ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಲೊಕ್ಕನಹಳ್ಳಿ ಗ್ರಾಮದ ಚಿಕ್ಕ ಕೆರೆಯನ್ನು ಅಕ್ಕ ಪಕ್ಕದ ರೈತರು ಒತ್ತುವರಿ ಮಾಡಿಕೊಳ್ಳುತ್ತಿರುವುದರಿಂದ ಕೆರೆ ದಿನದಿಂದ ದಿನಕ್ಕೆ ಕಿರಿದಾಗುತ್ತಿದೆ. ಜೊತೆಗೆ ನೀರು ನಿಲ್ಲದ ಪರಿಣಾಮ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ.
ಇದರಿಂದ ಕುಡಿಯುವ ನೀರಿಗೂ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ. ಕೆರೆ ಒತ್ತುವರಿಯಾಗಿರುವ ಪರಿಣಾಮ ಸ್ಥಳೀಯ ನಿವಾಸಿಗಳಿಗೆ ತಿರುಗಾಡಲು ರಸ್ತೆ ಸಹ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪವೂ ಇದೆ.
” ತುಂಬಾ ವರ್ಷಗಳಿಂದ ತಿರುಗಾಡಲು ರಸ್ತೆ ಇಲ್ಲದೆ ಪರಿತಪಿಸುತ್ತಿದ್ದೇವೆ. ರಸ್ತೆ ವ್ಯವಸ್ಥೆ ಕಲ್ಪಿಸಿ, ಜೊತೆಗೆ ಒತ್ತುವರಿಯಾಗಿರುವ ಕೆರೆಯನ್ನು ಅಧಿಕಾರಿಗಳು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.”
ವಿಜಯ್, ಲೊಕ್ಕನಹಳ್ಳಿ ಗ್ರಾಮಸ್ಥರು
” ಚಿಕ್ಕ ಕೆರೆ ಒತ್ತುವರಿಯಾಗಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸದ್ಯದಲ್ಲೇ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುತ್ತೇವೆ. ಸ್ಥಳೀಯ ನಿವಾಸಿಗಳು ತಿರುಗಾಡಲು ರಸ್ತೆ ಇಲ್ಲದಿರುವುದು ಗಮನಕ್ಕೆ ಬಂದಿದ್ದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಲಾಗುವುದು.”
ರಘುನಾಥನ್, ಪಿಡಿಒ, ಲೊಕ್ಕನಹಳ್ಳಿ ಗ್ರಾಪಂ





