ಆನಂದ್ ಹೊಸೂರು
ಹೊಸೂರು ಶಾಲೆ ಆವರಣದಲ್ಲಿ ಒಣ ಮರಗಳ ರೆಂಬೆಕೊಂಬೆ ಬೀಳುತ್ತಿರುವುದರಿಂದ ಪೋಷಕರಲ್ಲಿ ಆತಂಕ
ಹೊಸೂರು: ಆರು ತಿಂಗಳುಗಳಿಂದಲೂ ಮರಗಳು ಒಣಗಿ ಬೀಳುತ್ತಿದ್ದರೂ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಸಾಲಿಗ್ರಾಮ ತಾಲ್ಲೂಕಿನ ಹೊಸೂರು ಸರ್ಕಾರಿ ಶಾಲಾ ಮಕ್ಕಳು ಆತಂಕದಲ್ಲೇ ಪಾಠ ಕೇಳುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಾಲಿಗ್ರಾಮ ತಾಲ್ಲೂಕಿನ ಹೊಸೂರು ಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಸಿಲ್ವರ್ ಮರಗಳು ಒಣಗಿ ಹೋಗಿದ್ದು, ನಿತ್ಯ ಗಾಳಿ-ಮಳೆಗೆ ಒಣ ಮಗಳ ರೆಂಬೆ-ಕೊಂಬೆಗಳು ಬೀಳುತ್ತಿವೆ. ಶಾಲಾವರಣದಲ್ಲಿ ೫ಕ್ಕೂ ಹೆಚ್ಚು ಮರಗಳು ಒಣಗಿ ಅಪಾಯದ ಸ್ಥಿತಿಯಲ್ಲಿದ್ದರೂ ಅವುಗಳನ್ನು ತೆರವುಗೊಳಿಸದೆ ಅಧಿಕಾರಿಗಳು ಮಕ್ಕಳ ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒಣಗಿರುವ ಈ ಮರಗಳ ಪಕ್ಕದಲ್ಲಿ ಹೊಸೂರು ಬ್ಲಾಕ್ ೨ ಅಂಗನವಾಡಿ ಕಟ್ಟಡವಿದ್ದು, ಸದ್ಯ ಕಟ್ಟಡದ ಚಾವಣಿಯ ಮೇಲೆ ಮರದ ಕೊಂಬೆಗಳು ಮುರಿದು ಬೀಳುತ್ತಿದ್ದು ಈ ವಿಷಯದ ಗಂಭೀರತೆ ಅರಿತು ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಕ್ಷಕರು, ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಯವರಿಗೆ ಹಲವಾರು ಬಾರಿ ಮನವಿಮಾಡಿ, ಒಣ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದರೂ, ಟೆಂಡರ್ ಕರೆದು ಬಿಡ್ ನಡೆಯಬೇಕಿದ್ದು ನಂತರ ತೆರವು ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಕನ್ನಡ ಶಾಲೆಯಲ್ಲಿ ೬೭ ಮಕ್ಕಳು, ಉರ್ದು ಶಾಲೆಯಲ್ಲಿ ೧೯ ಮಕ್ಕಳು ಮತ್ತು ಅಂಗನವಾಡಿಯಲ್ಲಿ ೧೬ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಆಕಸ್ಮಿಕವಾಗಿ ಏನಾದರೂ ಮರಗಳ ಬಳಿ ಹೋದಾಗ ಅಪಾಯ ಉಂಟಾಗುವ ಸಾಧ್ಯತೆ ಇದೆ. ಈಗಲಾದರೂ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆ ಎಚ್ಚೆತ್ತು ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.
” ಒಣ ಮರಗಳನ್ನು ಹರಾಜು ಹಾಕಲು ಈಗಾಗಲೇ ಮುಖ್ಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ನಡೆಸಿ ಒಣ ಮರಗಳನ್ನು ತೆರವುಗೊಳಿಸಲಾಗುವುದು.”
-ಹರಿಪ್ರಸಾದ್, ವಲಯ ಅರಣ್ಯಾಧಿಕಾರಿ, ಕೆ.ಆರ್.ನಗರ.
” ಸರ್ಕಾರಿ ಶಾಲೆ ಎಂದರೆ ಅಧಿಕಾರಿಗಳಿಗೆ ಮತ್ತುಸರ್ಕಾರಕ್ಕೆ ಉದಾಸೀನತ ಇದೆ ಎಂಬುದಕ್ಕೆ ಇಲ್ಲಿನ ಶಾಲೆಯ ಸ್ಥಿತಿ ಉದಾಹರಣೆಯಾಗಿದೆ. ಶಾಲೆಯ ಯಾವುದೇ ಮಗುವಿನ ಮೇಲೆ ಒಣ ಮರಗಳಿಂದ ಹಾನಿಯಾದರೆ ಶಿಕ್ಷಣಾಧಿಕಾರಿಗಳೇ ಅದರ ಹೊಣೆ ಹೊರಬೇಕಾಗುತ್ತದೆ.”
-ಸ್ವಾಮಿ, ಪೋಷಕರು, ಹೊಸೂರು





