ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಯುವ ಬ್ರಿಗೇಡ್ ಮೈಸೂರು ಘಟಕದ ಸ್ವಯಂ ಸೇವಕರು ಎರಡು ಟ್ರಾಕ್ಟರ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಏಳು ಚೀಲಗಳಷ್ಟು ಮದ್ಯದ ಬಾಟಲಿಗಳನ್ನು ಸಂಗ್ರಹಿಸಿರುವುದು ಶ್ಲಾಘನೀಯ. ಚಾಮುಂಡಿಬೆಟ್ಟ ಈಗಾಗಲೇ ಪ್ಲಾಸ್ಟಿಕ್ ನಿಷೇಧಿತ ಪ್ರದೇಶ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಣೆ ಆಗಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮದ್ಯದ ಬಾಟಲಿಗಳು ದೊರೆತಿರುವುದು ವಿಪರ್ಯಾಸವೇ ಸರಿ.
ರಸ್ತೆಬದಿಯಲ್ಲಿ, ವ್ಯೂ ಪಾಯಿಂಟ್ ಬಳಿ ಹಾಗೂ ಪೊಲೀಸರು ಗಸ್ತು ತಿರುಗುವ ಸ್ಥಳಗಳಲ್ಲಿಯೂ ನೂರಾರು ಮದ್ಯದ ಬಾಟಲಿಗಳು ದೊರೆತಿರುವುದು ಬೇಸರದ ಸಂಗತಿ. ಚಾಮುಂಡಿ ಬೆಟ್ಟದಲ್ಲಿ ಪಾವಿತ್ರ್ಯತೆ ಕಾಪಾಡುವುದು ಬೆಟ್ಟಕ್ಕೆ ಬರುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪವಿತ್ರ ಸ್ಥಳದಲ್ಲಿ ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಎಸೆದು ಅಪವಿತ್ರ ಗೊಳಿಸುವವರ ವಿರುದ್ಧ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





