ಮಹಾದೇಶ್ ಎಂ.ಗೌಡ
ಹನೂರು: ತಾಲ್ಲೂಕಿನ ೨೫ ಗ್ರಾಮ ಪಂಚಾಯಿತಿಗಳ ಪೈಕಿ ೨೧ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೪೭ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಪ್ರಸ್ತುತ ೩೧ ಘಟಕಗಳು ಚಾಲನೆಯಲ್ಲಿದ್ದು, ೧೬ ಘಟಕಗಳು ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ದೊರೆಯದೇ -ರೈಡ್‌ಯುಕ್ತ ನೀರನ್ನೇ ಕುಡಿಯುವುದು ಅನಿವಾರ್ಯವಾಗಿದೆ.
ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ : ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು, ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಮಾರ್ಟಳ್ಳಿ ಭಾಗದಲ್ಲಿ ಸಾವಿರ ಅಡಿ ಕೊಳವೆಬಾವಿ ಕೊರೆದರೂ ಶುದ್ಧ ನೀರು ಸಿಗದೇ ಇರುವುದರಿಂದ ಜನರು ಪ್ಲೋರೈಡ್ ಮಿಶ್ರಿತ ನೀರನ್ನೇ ಬಳಸುವುದು ಅನಿವಾರ್ಯವಾಗಿದೆ. ಅಂತೋಣಿಯಾರ್ ಕೋವಿಲ್ ಗ್ರಾಮದಲ್ಲಿನ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದರೂ ಸಂಬಂಧಪಟ್ಟವರು ಶುದ್ಧ ನೀರಿನ ಘಟಕವನ್ನು ಆರಂಭಿಸದೇ ಇರುವುದರಿಂದ ಗ್ರಾಮಸ್ಥರು ವಿಧಿಯಿಲ್ಲದೇ ಅದೇ ನೀರನ್ನೇ ಬಳಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ದುರಸ್ತಿಯಾಗದ ನೀರಿನ ಘಟಕಗಳು:
ಹನೂರು ತಾಲ್ಲೂಕಿನ ಅಜ್ಜೀಪುರ, ಚಿಕ್ಕಮಾಲಾಪುರ, ಮಹಾಲಿಂಗನ ಕಟ್ಟೆ, ಗೆಜ್ಜಲನತ್ತ, ಲೊಕ್ಕನಹಳ್ಳಿ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ, ಪುದುನಗರ, ಬಸವನಗುಡಿ, ಉದ್ದಟ್ಟಿ ಹಾವಿನಮೂಲೆ, ರಾಮೇಗೌಡನಹಳ್ಳಿ ಗೊಲ್ಲರದಿಂಬ, ಮೇಟುತೆರು ಕೂಡ್ಲೂರು, ಬೈರನತ್ತ ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿ ವರ್ಷಗಳೇ ಕಳೆದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿಗೆ ಕ್ರಮ ವಹಿಸದೇ ಇರುವುದರಿಂದ ಶುದ್ಧ ಕುಡಿಯವ ನೀರಿನ ಘಟಕಗಳಲ್ಲಿನ ಯಂತ್ರಗಳು ತುಕ್ಕು ಹಿಡಿಯುತ್ತಿವೆ.
೪ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ: ಹನೂರು ತಾಲ್ಲೂಕಿನ ಮೀಣ್ಯಂ, ಬೈಲೂರು, ಎಲ್ಲೇಮಾಳ, ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲದೇ ಈ ಭಾಗದ ಜನರು ಕೊಳವೆಬಾವಿಗಳನ್ನೇ ಅವಲಂಬಿಸಿದ್ದು, -ರೈಡ್‌ಯುಕ್ತ ನೀರು ಕುಡಿದು ಅನಾರೋಗ್ಯಕ್ಕೀಡಾಗುತ್ತಿದ್ದಾರೆ.
ನೀರಿನ ಘಟಕಗಳಲ್ಲಿ ನಿರ್ವಹಣೆ ಕೊರತೆ: ತಾಲ್ಲೂಕಿನ ೨೧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೪೭ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇವುಗಳನ್ನು ಗ್ರಾಮ ಪಂಚಾಯಿತಿ, ಹಾಲು ಉತ್ಪಾದಕರ ಸಹಕಾರ ಸಂಘ, ಖಾಸಗಿ ಏಜೆನ್ಸಿ, ಪಿಆರ್‌ಇಡಿ, ಸಂಸ್ಥೆಯ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಸಕಾಲಕ್ಕೆ ನಿರ್ವಹಣೆ (ಸರ್ವಿಸಿಂಗ್) ಮಾಡದೇ ಇರುವುದರಿಂದ ನೀರಿನ ಘಟಕಗಳು ಹಾಳಾಗುತ್ತಿವೆ.
” ರಾಮಾಪುರ ಗ್ರಾಪಂ ವ್ಯಾಪ್ತಿಯ ಗೆಜ್ಜಲನತ್ತ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಐದು ವರ್ಷಗಳೇ ಕಳೆದಿದ್ದು, ಸಂಬಂಧ ಪಟ್ಟವರು ದುರಸ್ತಿ ಮಾಡದೇ ಇರುವುದ ರಿಂದ ಜನರಿಗೆ ಶುದ್ಧ ಕುಡಿಯುವ ನೀರು ಸಿಗದೇ ಪರದಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು.”
-ಅಶ್ವತ್ಥ್, ರಾಮಾಪುರ ನಿವಾಸಿ
ನಾಯಿಗಳ ಆವಾಸಸ್ಥಾನ:
ಶುದ್ಧ ನೀರಿನ ಘಟಕಗಳು ಹಾಳಾಗಿರುವುದರಿಂದ ಹಾಗೂ ಬಾಗಿಲುಗಳು ಮುರಿದು ಹೋಗಿರುವುದರಿಂದ ನೀರಿನ ಘಟಕಗಳು ಬೀದಿ ನಾಯಿಗಳು ವಾಸ ಸ್ಥಾನವಾಗಿ ಮಾರ್ಪಾಟಾಗಿದೆ.
” ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳು ಹಾಳಾಗಿದ್ದರೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ನೀರಿನ ಘಟಕಗಳನ್ನು ದುರಸ್ತಿಪಡಿಸಲಾಗುವುದು.”
-ಮೋನಾರೋತ್, ಜಿಲ್ಲಾ ಪಂಚಾಯಿತಿ ಸಿಇಒ





