ಮಂಡ್ಯ:ನಗರದ ವಿವಿಧ ಬಡಾವಣೆಗಳನ್ನು ಹಾದು ಬೇಲೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಹರಿಯುವ ವಿಶ್ವೇಶ್ವರಯ್ಯ ನಾಲೆಯ ೮ನೇ ವಿತರಣಾ ನಾಲೆಯ ದುಸ್ಥಿತಿ ಬಗ್ಗೆ ‘ಆಂದೋಲನ’ ಪತ್ರಿಕೆಯಲ್ಲಿ ಪ್ರಕಟಗೊಂಡ ಸಚಿತ್ರ ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ವರದಿಗೆ ಓಗೊಟ್ಟ ಬಡಾವಣೆಗಳ ಮುಖಂಡರು ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.
ಹನಿ ಹನಿ ನೀರೂ ಅಮೂಲ್ಯ ಎನ್ನುವ ಸರ್ಕಾರದ ಜಾಗೃತಿ ಫಲಕಗಳನ್ನು ಅಪಹಾಸ್ಯ ಮಾಡುವಂತೆ…..ಸ್ವಚ್ಛ ಪರಿಸರವನ್ನು ಕಾಪಾಡಿ ಎಂಬ ಪ್ರಚಾರವನ್ನು ಅಣಕಿಸುವಂತೆ ಹಲವರು ತಮ್ಮ ಮನೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆಯೋ, ಖಾಲಿ ನಿವೇಶನವೋ, ಚರಂಡಿಯೋ ಎಲ್ಲೆಂದರಲ್ಲಿ ಬಿಸಾಡುತ್ತಿರುವ ಬಗ್ಗೆ ‘ಆಂದೋಲನ’ ಪತ್ರಿಕೆ ವರದಿ ಮಾಡಿತ್ತು.
ಮಂಡ್ಯದ ಮರೀಗೌಡ ಬಡಾವಣೆ, ದ್ವಾರಕಾನಗರ,ಅನ್ನಪೂರ್ಣೇಶ್ವರಿ ನಗರ, ಶ್ರೀರಾಮನಗರದ ಮೂಲಕ ಹಾದು ಬೇಲೂರು ಗ್ರಾಪಂ ವ್ಯಾಪ್ತಿಯಲ್ಲಿ ಹರಿಯುವ ವಿಶ್ವೇಶ್ವರಯ್ಯ ನಾಲೆಯ ೮ನೇ ವಿತರಣಾ ನಾಲೆ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಉಸಿರು ಕಟ್ಟಿ ಸಾಯುತ್ತಿರುವಂತೆ ಭಾಸವಾಗುತ್ತಿದೆ.
ಸುಮಾರು ೧೦ ಕ್ಯೂಸೆಕ್ಸ್ ಸಾಮರ್ಥ್ಯದ ಈ ನಾಲೆ ಸುಮಾರು ೬೦ ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ. ನೀರು ನಿಂತ ಬಳಿಕ ಅಕ್ಷರಶಃ ದೊಡ್ಡ ಮೋರಿಯಂತೆ ಕಾಣುವ ಈ ನಾಲೆ ಇಲ್ಲಿನ ನಿವಾಸಿಗಳಿಗೆ ಕಸ ಎಸೆಯುವ ತೊಟ್ಟಿಯಂತೆ ಭಾಸವಾದಂತಿದೆ. ನಾಲೆ ಉದ್ದಕ್ಕೂ ಮರುಬಳಕೆಯಾಗುವ ಪ್ಲಾಸ್ಟಿಕ್, ಏಕಬಳಕೆಯ ಪ್ಲಾಸ್ಟಿಕ್ ಕವರ್‌ಗಳೂ ಸೇರಿದಂತೆ ಅನೇಕ ತ್ಯಾಜ್ಯಗಳು ಯಥೇಚ್ಛವಾಗಿ ಸಂಗ್ರಹವಾಗುತ್ತಿರುವ ಕುರಿತು ಸಚಿತ್ರ ವರದಿ ಪ್ರಕಟವಾಗಿತ್ತು.
ಈ ವರದಿಯಿಂದ ಎಚ್ಚೆತ್ತುಕೊಂಡ ಬೇಲೂರು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸ್ಥಳೀಯ ಬಡಾವಣೆಗಳ ಮುಖಂಡರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿ, ನಾಲೆಯಲ್ಲಿ ನೀರು ಸ್ವಚ್ಛತೆಯಿಂದ ಹರಿಯುವಂತೆ ಶ್ರಮ ವಹಿಸಿದ ಪರಿಣಾಮ ಇಂದು ಈ ಬಡಾವಣೆಗಳ ಉದ್ದಕ್ಕೂ ಸ್ವಚ್ಛವಾಗಿ,ಸರಾಗವಾಗಿ ನೀರು ಹರಿಯುತ್ತಿದೆ. ಮಾತ್ರವಲ್ಲ, ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಗಳನ್ನೂ ಅಲ್ಲಿಂದ ತೆರವುಗೊಳಿಸಿ, ಪೊಲೀಸರಿಂದ ಎಚ್ಚರಿಕೆಯ ಫಲಕಗಳನ್ನೂ ಅಳವಡಿಸಲಾಗಿದೆ.





