Mysore
22
broken clouds

Social Media

ಗುರುವಾರ, 08 ಜನವರಿ 2026
Light
Dark

ಚುಂಚನಕಟ್ಟೆ: ಕಣ್ಮನ ಸೆಳೆಯುತ್ತಿರುವ ಜಾನುವಾರು ಜಾತ್ರೆ

ಆನಂದ್‌ ಹೊಸೂರು 

೪ ರಿಂದ ೬ ಲಕ್ಷ ರೂ.ಗೂ ಅಧಿಕ ಬೆಲೆಬಾಳುವ ದುಬಾರಿ ಎತ್ತುಗಳು ಆಕರ್ಷಣೆ; ರೈತರ ಸಂಭ್ರಮ

ಹೊಸೂರು: ಸುಗ್ಗಿಯ ನಂತರ ನಡೆಯುವ ದಕ್ಷಿಣ ಭಾರತದ ಮೊದಲ ಜಾತ್ರೆಯಾದ ಚುಂಚನಕಟ್ಟೆ ಜಾತ್ರೆಯಲ್ಲಿ ಈಗ ಕೃಷಿ ಯಂತ್ರೋಪಕರಣಗಳು, ಜೋಡೆತ್ತುಗಳು, ಜಾನುವಾರುಗಳ ಭರ್ಜರಿ ಮಾರಾಟ ಕಂಡುಬರುತ್ತಿದೆ.

ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಗ್ರಾಮೀಣ ಸಂಸ್ಕ ತಿ, ಸೊಗಡು ಬಿಂಬಿಸುವ ಜಾನುವಾರು ಜಾತ್ರೆ ಕಣ್ಮನ ಸೆಳೆಯುತ್ತಿದೆ. ಜಾತ್ರೆಯಲ್ಲಿ ಸಿಂಗಾರಗೊಂಡ ಜಾನುವಾರುಗಳ ಮೇಳ ಕಿ.ಮೀ.ಗಟ್ಟಲೆ ಕಂಡು ಬರುತ್ತಿದ್ದು, ಸುಗ್ಗಿಯ ದಣಿವನ್ನು ತಣಿಸಿಕೊಳ್ಳಲು ರೈತರು ಜಾನುವಾರು ಜಾತ್ರೆಯತ್ತ ಮುಗಿ ಬೀಳುತ್ತಿದ್ದು ೭೦ ಸಾವಿರ ರೂ.ಗಳಿಂದ ಆರಂಭಿಸಿ ೪ರಿಂದ ೬ ಲಕ್ಷ ರೂ.ಗೂ ಅಧಿಕ ಬೆಲೆಬಾಳುವ ದುಬಾರಿ ಎತ್ತುಗಳು ಜಾತ್ರೆಯಲ್ಲಿ ಜನಾಕರ್ಷಣೆಯ ಕೇಂದ್ರಬಿಂದುವಾಗಿವೆ.

ವಿವಿಧ ಜಿಲ್ಲೆಗಳಿಂದಲೂ ರೈತರು ಆಗಮಿಸಿ ಜಾನುವಾರು ಗಳನ್ನು ಇಲ್ಲಿಗೆ ವಾದ್ಯಗೋಷ್ಠಿಯ ಮೂಲಕ ಕರೆತರುತ್ತಿರುವುದು ವಿಶೇಷ. ಚುಂಚನಕಟ್ಟೆಯ ಜಾನುವಾರು ಜಾತ್ರೆ ಯಲ್ಲಿ ಸದ್ಯ ಪಶುಸಂಗೋಪನೆ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು ೪ರಿಂದ ೬ ಸಾವಿರಕ್ಕೂ ಅಧಿಕ ಎತ್ತುಗಳು ಬಂದಿದ್ದು, ರೈತರು ತಮ್ಮ ರಾಸುಗಳ ಮೇಲಿರುವ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ರಾಸುಗಳಿಗೆ ಬೃಹತ್ ಶಾಮಿಯಾನ, ವಿದ್ಯುತ್ ಅಲಂಕಾರಿಕ ಚಪ್ಪರಗಳನ್ನು ಹಾಕಿಸಿದ್ದಾರೆ.

ಕೃಷಿ ಯಂತ್ರೋಪಕರಣಗಳು ಹೆಜ್ಜೆ-ಹೆಜ್ಜೆಗೂ ಸಿಗುತ್ತಿವೆ. ಆದರೆ, ಹೆಚ್ಚು ದುಡಿಮೆಗೆ ಒಗ್ಗುವ ಹಳ್ಳಿಕಾರ್ ತಳಿಯ ಎತ್ತುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ. ಚುಂಚನಕಟ್ಟೆ ಜಾನುವಾರು ಜಾತ್ರೆಯು ರಾಜ್ಯ ಮತ್ತು ಹೊರ ರಾಜ್ಯದಲ್ಲಿಯೂ ಹೆಸರುವಾಸಿಯಾಗಿದ್ದು, ಇಲ್ಲಿಗೆ ರಾಸುಗಳನ್ನು ಕೊಳ್ಳಲು ದೂರದ ಬಳ್ಳಾರಿ, ಗದಗ, ಹುಬ್ಬಳ್ಳಿ, ಧಾರವಾಡ, ಕಲಬರುಗಿ, ವಿಜಯಪುರ, ದಾವಣಗೆರೆ, ಶಿವ ಮೊಗ್ಗ ಮುಂತಾದ ಕಡೆಗಳಿಂದ ಮತ್ತು ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ಕಡೆಗಳಿಂದಲೂ ರೈತರು ಬರುತ್ತಿದ್ದಾರೆ. ಜಾತ್ರೆಯಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆಯುವ ನಿರೀಕ್ಷೆಯಿದೆ.

ಪ್ರತಿನಿತ್ಯ ತಮ್ಮ ರಾಸುಗಳಿಗೆ ಹಾಲು, ರವೆ, ತುಪ್ಪ ಮತ್ತಿತರ ಪೌಷ್ಟಿಕಾಂಶ ಭರಿತ ಮೃಷ್ಟಾನ್ನ ಭೋಜನ ಉಣಬಡಿಸುತ್ತಾ ತಮ್ಮ ರಾಸುಗಳ ಮೇಲಿರುವ ಕಾಳಜಿಯನ್ನು ತೋರ್ಪಡಿ ಸುತ್ತಿದ್ದಾರೆ. ಜಾತ್ರೆಯಲ್ಲಿ ರಾಸುಗಳಿಗೆ ಯಾವುದೇ ರೋಗರುಜಿನಗಳು ಬಾರದಂತೆ ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರೆಗೆ ಕೆ.ಆರ್.ನಗರ ಪಶು ಇಲಾಖೆಯ ಪಶುವೈದ್ಯಾಽಕಾರಿಗಳ ತಂಡ ತಾತ್ಕಾಲಿಕ ಪಶು ಚಿಕಿತ್ಸಾಲಯವನ್ನು ತೆರೆದು ಶ್ರಮಿಸುತ್ತಿದೆ.

ರಾಸುಗಳ ಕ್ಯಾಟ್‌ವಾಕ್:: ಜಾತ್ರೆಯ ಮಾಳ ದಲ್ಲಿ ಅಲಕಾಂರಗೊಂಡ ರಾಸುಗಳನ್ನು ಯಾವ ಫ್ಯಾಷನ್ ಶೋಗಳಿಗೂ ಕಡಿಮೆ ಇಲ್ಲದಂತೆ ಕ್ಯಾಟ್ ವಾಕ್ ಮಾದರಿಯಲ್ಲಿ ರಸ್ತೆಗಳಲ್ಲಿ ನಡೆಸಿ ಖರೀದಿದಾರರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ.

” ಚುಂಚನಕಟ್ಟೆ ಜಾನುವಾರು ಜಾತ್ರೆಯಲ್ಲಿ ಭೂಮಿ ಉಳುಮೆ ಮಾಡಲು ಹೆಸರು ಪಡೆದಿರುವ ಹಳ್ಳಿಕಾರ್ ತಳಿಯ ರಾಸುಗಳು ಸಿಗುವುದರಿಂದ ನಾವು ೧೫ ಜನರ ತಂಡ ಬಂದಿದ್ದೇವೆ. ಈ ಬಾರಿ ದರವು ಕೂಡ ಲಕ್ಷ ರೂ. ಮೇಲೆ ನಡೆಯುತ್ತಿದ್ದು, ಕೊಳ್ಳಲು ಕಷ್ಟವಾಗುತ್ತಿದೆ. ಜತೆಗೆ ಚುಂಚನಕಟ್ಟೆ ಜಾತ್ರೆಯನ್ನು ನೋಡಿ ಕಣ್ಣು ತುಂಬಿಕೊಳ್ಳುವುದೇ ಒಂದು ಸೌಭಾಗ್ಯವಾಗಿದ್ದು, ಜಾತ್ರೆಯ ಬಗ್ಗೆ ಹೆಚ್ಚು ಪ್ರಚಾರದ ಅವಶ್ಯವಿದೆ.”

-ಗದ್ದಿಗೆಪ್ಪ, ಹುಬ್ಬಳ್ಳಿ

” ಸಣ್ಣ ಸಣ್ಣ ಕಾರ್ಯಕ್ರಮಗಳಿಗೂ ಸಾವಿರಾರು ರೂ. ಖರ್ಚು ಮಾಡಿ ಪ್ರಚಾರವನ್ನು ನೀಡುವ ಸರ್ಕಾರ, ಜಿಲ್ಲಾಡಳಿತ ಚುಂಚನಕಟ್ಟೆ ಜಾನುವಾರು ಜಾತ್ರೆಯ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಪ್ರತಿ ಬಾರಿ ಸಭೆಗಳಲ್ಲಿ ಮನವಿ ಮಾಡುತ್ತಾ ಬಂದರೂ ಜಾನುವಾರು ಜಾತ್ರೆಗೆ ಯಾವುದೇ ರೀತಿ ಪ್ರಚಾರವನ್ನು ನೀಡದೆ ಕಳೆಗುಂದುವಂತೆ ಮಾಡಲಾಗುತ್ತಿದೆ.”

-ಮಧು ಕರ್ತಾಳ್, ರೈತ ಮುಖಂಡ, ಹೊಸೂರು

Tags:
error: Content is protected !!