ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆಯಿತು.
ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಬುಧವಾರ ಮಧ್ಯ ರಾತ್ರಿಯಿಂದ ಗುರುವಾರದ ಮುಂಜಾನೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಪಾರಂಪರಿಕ ತಾಣ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಸಮ್ಮುಖದಲ್ಲಿ ನಡೆದ ವಿಶೇಷ ಪ್ರಾರ್ಥನೆ ಮತ್ತಷ್ಟು ಮೆರುಗು ತುಂಬಿತು. ಬುಧವಾರ ಸಂಜೆಯಿಂದಲೇ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ದೊಡ್ಡ ಭಕ್ತಸಾಗರವೇ ನೆರೆದಿತ್ತು. ಕ್ರೈಸ್ತರು ಮಾತ್ರವಲ್ಲದೇ ಎಲ್ಲ ಧರ್ಮೀಯರೂ ತಮ್ಮ ಸಂಭ್ರಮ,ಖುಷಿ ಹಂಚಿಕೊಳ್ಳಲು ಚರ್ಚ್ ಆವರಣದಲ್ಲಿ ನೆರೆದಿದ್ದರು. ರಾತ್ರಿ ೧೧.೩೦ರಿಂದ ೧೨ರ ವರೆಗೆ ಕ್ಯಾರೋಲ್ ಗೀತಗಾಯನ ಚರ್ಚ್ ನೊಳಗೆ ಪ್ರತಿಧ್ವನಿಸಿತು. ಚರ್ಚ್‌ನಲ್ಲಿ ವಿಶೇಷ ದೀಪದ ಬೆಳಕಿನ ಅಲಂಕಾರದ ಜತೆಗೆ ಬಣ್ಣ ಬಣ್ಣದ ತಳಿರು ತೋರಣಗಳ ಸೊಬಗು ಕಂಗೊಳಿಸುತ್ತಿತ್ತು. ಕೊರೆಯುವ ಮಾಗಿಯ ಚಳಿಯ ನಡುವೆಯೇ ಚರ್ಚ್‌ನ ಒಳಗೆ-ಹೊರಗೆ ಸಾವಿರಾರು ಕ್ರೈಸ್ತ ಬಾಂಧವರು ಏಸು ಕ್ರಿಸ್ತನಲ್ಲಿ ದೃಷ್ಟಿ ನೆಟ್ಟು ಪ್ರಾರ್ಥನೆ ನಡೆಸಿದರು. ರಾತ್ರಿ ಹನ್ನೆರಡಾಗುತ್ತಿದ್ದಂತೆಯೇ ಗಂಟೆಯ ನಾದ ಮೊಳಗಲಾರಂಭಿಸಿತು.
ಶ್ವೇತವಸ್ತ್ರಧಾರಿಯಾದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಅವರು ಚರ್ಚ್‌ನ ಪರಿವಾರದೊಂದಿಗೆ ಛತ್ರಿ- ಚಾಮರಗಳ ಹಿಮ್ಮೇಳದೊಂದಿಗೆ ಶುಭ್ರ ಬಿಳಿವಸ್ತ್ರದಲ್ಲಿದ್ದ ಬಾಲಯೇಸುವಿನ ಪುಟ್ಟ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ತಂದರು.
ದೇವರ ಮೂರ್ತಿ ಹೊರಬರುತ್ತಿದ್ದಂತೆಯೇ ನೂರಾರು ಜನರು ಪಾದವನ್ನು ಮುಟ್ಟಿ ನಮಸ್ಕರಿಸಿದರು. ಎಲ್ಲರ ಘೋಷಣೆ, ಹಾಡು, ಸಂಗೀತದ ಹರಕೆಯ ನಡುವೆಯೇ ಗೋದಲಿಯಲ್ಲಿ ಬಾಲ ಏಸುವನ್ನು ರಾತ್ರಿ ಹನ್ನೆರಡಕ್ಕೆ ತಂದು ಪ್ರತಿಷ್ಠಾಪನೆ ಮಾಡಿದರು.
ಜನರು ಸಾಲುಸಾಲಾಗಿ ನಿಂತು ಬಾಲ ಯೇಸುವಿಗೆ ನಮಸ್ಕರಿಸಿದರು. ಬಾಲ ಏಸುವಿನ ಪ್ರತಿಷ್ಠಾಪನೆ ಮಾಡಿ ನಂತರ ಮತ್ತೆ ರಾತ್ರಿ ಒಂದು ಗಂಟೆವರೆಗೆ ಬಲಿಪೂಜೆ ನಡೆಯಿತು. ಬಿಷಪ್ ಫ್ರಾನ್ಸಿಸ್ ಸೆರಾವೊ ಅವರ ನೇತೃತ್ವದಲ್ಲಿ ಹತ್ತಾರು ಪಾದ್ರಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
” ಪ್ರಭು ಏಸು ಬೆತ್ಲಹೇಮಿನ ಗೋದಲಿಯಲ್ಲಿ ಜನಿಸಿದ ಕ್ಷಣ ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭುವಿಯಲ್ಲಿ ಸುಮನಸ್ಕರಿಗೆ ಶಾಂತಿ ಎಂಬ ದೇವದೂತರ ಗಾನ ಆಗಸದಲ್ಲಿ ಮೊಳಗಿತು. ಈ ಮಹೋನ್ನತ ಕ್ಷಣದಲ್ಲಿ ಗೋದಲಿಯಲ್ಲಿನ ಬಡತನ ಮತ್ತು ಅಬಲ ಶಿಶುವು ಪ್ರಕಟಿಸುವ ದೇವರ ಮಹಿಮೆಯಾದರೂ ಏನು? ಈ ದಿವ್ಯ ಘಟನೆಯ ಮೂಲಕಸ್ವರ್ಗವನ್ನೂ,ಭುವಿಯನ್ನೂ ಸೃಜಿಸಿದ ದೇವರು ಮಾನವ ಕುಲವನ್ನು ಪಾಪ, ದುಃಖ ಮತ್ತು ಪ್ರತಿಯೊಂದು ರೀತಿಯ ದುಷ್ಟತನದಿಂದ ರಕ್ಷಿಸಲು ಮಾನವನಾಗಿ ಜನಿಸಿದರು. ದೇವರ ಮಹಿಮೆ ಭುವಿಯಲ್ಲಿ ಬೆಳಗಿದೆ. ದೇವರೊಂದಿಗೆ ಆತ್ಮೀಯತೆಯ ಭಾವ ಮೂಡಿಸಿ, ಒಳ್ಳೆಯತನ, ಮೃದುತ್ವ ಮತ್ತು ಕರುಣೆಯನ್ನು ಆಂತರಿಕವಾಗಿ ಸವಿಯುವುದರಿಂದ ಉಂಟಾಗುವ ನೆಮ್ಮದಿಯ ಭಾವನೆಯೇ ಕ್ರಿಸ್ತ ಜಯಂತಿಯಾಗಿದೆ.
ಕ್ರಿಸ್ತ ಜಯಂತಿ ನಾವು ಅನುಭವಿಸುವ ಆಂತರಿಕ ಸ್ವಾತಂತ್ರ್ಯ ಮತ್ತು ಅನಿರ್ವಚನೀಯ ಸಂತೋಷದ ಭಾವನೆ. ಕ್ರಿಸ್ತ ಜಯಂತಿ ಪ್ರತಿಯೊಂದು ರೀತಿಯ ಬಂಧನದಿಂದ ವಿಮೋಚನೆಗೊಂಡ, ಪ್ರತಿ ಗಾಯದಿಂದ ಗುಣಮುಖರಾದ, ಒಡೆದ ಸಂಬಂಧಗಳಿಂದ ಚೇತರಿಸಿಕೊಂಡ ಆಳವಾದ ಭಾವನೆಯಾಗಿದೆ. ನಮ್ಮ ಸ್ವಾರ್ಥ, ಅಹಂಕಾರ ಸತ್ತಾಗ ಮತ್ತು ಸಂಪೂರ್ಣವಾಗಿ ದೇವರಿಗಾಗಿ ಮತ್ತು ಪರರಿಗಾಗಿ ಬದುಕಲು ಕಲಿತಾಗ ನಾವು ಅನುಭವಿಸುವ ರೂಪಾಂತರವೇ ಈ ಕ್ರಿಸ್ಮಸ್.
ಈ ರೂಪಾಂತರವು ನಿಜವಾಗಿಯೂ ಜೀವರ ಮಹಿಮೆಯಾಗಿದೆ ಮತ್ತು ಸಹೋದರತ್ವ ಮತ್ತು ಶಾಂತಿಯ ಅನುಭವವನ್ನು ನೀಡುತ್ತದೆ. ‘ಎಲ್ಲಿ ಮನಸ್ಸು ಭಯವಿಲ್ಲದಿರುವುದೋ ಮತ್ತು ತಲೆ ಎತ್ತಿ ನಿಲ್ಲುವುದೋ, ಜ್ಞಾನವು ಮುಕ್ತವಾಗಿದೆಯೋ ಮತ್ತು ವಿಶ್ವವು ಕಿರಿದಾದ ದೇಶೀಯ ಗೋಡೆಗಳಿಂದ ತುಂಡುಗಳಾಗಿ ಒಡೆಯದಿರುವುದೋ’ ಎಂಬ ರವೀಂದ್ರನಾಥ ಠಾಗೋರ್ ನುಡಿದ ಮಾತುಗಳು ಕ್ರಿಸ್‌ಮಸ್‌ನ ನಿಜವಾದ ಸಂದೇಶಕ್ಕೆ ಸನಿಹವಾಗಿವೆ. ಭೂಮಿಯ ಮೇಲೆ ಕ್ರಿಸ್ತನು. ಸ್ಥಾಪಿಸಲು ಬಂದದ್ದು ಇದೇ ಪ್ರೀತಿಯ ದೈವೀ ಸಾಮ್ರಾಜ್ಯವನ್ನು. ಬೆತ್ಲಹೇಮಿನ ಪುಟ್ಟಕಂದ ಹೊರಸೂಸುವ ಶುದ್ಧ ಪ್ರೀತಿ, ಕಲ್ಮಶವಿಲ್ಲದ ಸಂತೋಷ, ನಿಷ್ಕಪಟ ಮುಗ್ಧತೆ, ಅಪಾರ ಮೃದು ಭಾವನೆ, ಹೇರಳವಾದ ಆತ್ಮೀಯತೆ ಮತ್ತು ಆಳವಾದ ಶಾಂತಿಯಿಂದ ನಮ್ಮ ಹೃದಯಗಳಲ್ಲಿ ಸ್ಪರ್ಶಿಸಲ್ಪಡಲು ಹಾತೊರೆಯಬೇಕು. ಧರ್ಮವನ್ನು ದುರುದ್ದೇಶಪೂರಿತವಾಗಿ, ನಾಜೂಕು ಮತ್ತು ಬೆದರಿಕೆಯಿಂದ ವಿಭಜನೆಗಳನ್ನು ಸೃಷ್ಟಿಸಲು ಮತ್ತು ದ್ವೇಷವನ್ನು ಹರಡಲು ಬಳಸಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕ್ರಿಸ್ತ ಜಯಂತಿಯ ಬಾಂಧವ್ಯ, ಭ್ರಾತೃತ್ವ ನಮಗಿಂದು ಅವಶ್ಯವಾಗಿದೆ. ಕ್ರಿಸ್‌ಮಸ್ ತರುವ ಶಾಂತಿ, ಸಂತೋಷ ಮತ್ತು ಪ್ರೀತಿಯು ಪ್ರತಿಯೊಬ್ಬರನ್ನು ಆಲಂಗಿಸಿ ಹೊಸ ವರ್ಷದ ಪ್ರತಿ ಕ್ಷಣದಲ್ಲೂ ಜೀವನದಲ್ಲಿ ಆವರಿಸಲಿ. ಕ್ರಿಸ್ತಸೌರಭದ ಕಂಪು ನಿಮ್ಮ ಮನ ಮನೆಗಳನ್ನು ಆವರಿಸಲಿ.
-ಫ್ರಾನ್ಸಿಸ್ ಸೆರಾವೊ ಎಸ್‌ಜೆ ಧರ್ಮಾಧ್ಯಕ್ಷರು, ಮೈಸೂರು ಧರ್ಮಕ್ಷೇತ್ರ





