Mysore
24
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಒಲವಿನ ಬಣ್ಣಗಳಲ್ಲಿ ಮಕ್ಕಳ ಮನೋಲ್ಲಾಸ

ಜೆಎಸ್‌ಎಸ್ ಬಾಲ ಜಗತ್ ಶಾಲೆ ಆವರಣದಲ್ಲಿ ಚಿತ್ರಕಲಾ ಶಿಬಿರ

ಕೆ. ಎಂ. ಅನುಚೇತನ್
ಮೈಸೂರು: ಪರೀಕ್ಷೆ ಮುಗಿದು ಬೇಸಿಗೆ ರಜೆ ಶುರುವಾಯಿತೆಂದರೆ, ಮಕ್ಕಳಿಗೆ ರಜಾ-ಮಜಾ. ಮಕ್ಕಳಲ್ಲಿ ಅಡಗಿರುವ ಸುಪ್ತಪ್ರತಿಭೆಯನ್ನು ಹೊರತರಲು ಈ ಅವಧಿ ಸೂಕ್ತ ಕಾಲ. ಇದಕ್ಕಾಗಿಯೇ ನಗರದ ವಿವಿಧೆಡೆ ಹತ್ತು ಹಲವು ಬೇಸಿಗೆ ಶಿಬಿರಗಳು ನಡೆಯುತ್ತಿವೆ. ಜೆಎಸ್ ಎಸ್ ಮಹಾವಿದ್ಯಾಪೀಠದ ವತಿಯಿಂದ ಬಾಲ ಜಗತ್ ಶಾಲೆ ಆವರಣದಲ್ಲಿ ಆಯೋಜಿ ಸಿರುವ ಚಿತ್ರಕಲಾ ಶಿಬಿರ ಮಕ್ಕಳ ಕುತೂಹಲಕ್ಕೆ ಬಣ್ಣಗಳ ಲೇಪನ ನೀಡುತ್ತಾ ಚಕಿತಗೊಳಿಸುತ್ತಿದೆ.

ಕಲ್ಪನೆಯಲ್ಲಿ ಮೂಡುವ ಕಲಾಚಿತ್ರಗಳು: ಈ ಶಿಬಿರದಲ್ಲಿ ಮಕ್ಕಳಿಗೆ ಚಿತ್ರ ಬರೆಯುವುದನ್ನು ಹೇಳಿಕೊಡಲು ಏಳು ಜನ ಶಿಕ್ಷಕರಿದ್ದು, ಮಕ್ಕಳಿಗೆ ಬೋರ್ಡ್ ಮೇಲೆ ಚಿತ್ರ ಬರೆದು ಹೇಳಿಕೊಡುತ್ತಾರೆ. ಬಳಿಕ ಮಕ್ಕಳಿಗೆ ಚಿತ್ರ ಬರೆಯಲು ಬಿಟ್ಟು, ಚಿತ್ರಗಳಲ್ಲಿನ ಲೋಪ-ದೋಷಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ತಿದ್ದುವ ಕೆಲಸ ಮಾಡಲಾಗುತ್ತಿದೆ.

೬ ರಿಂದ ೧೬ ವರ್ಷದ ವಯಸ್ಸಿನ ಮಕ್ಕಳಿಗಾಗಿ ಚಿತ್ರಕಲಾ ಶಿಬಿರ ಆಯೋಜಿಸಲಾಗಿದ್ದು, ಮಕ್ಕ ಳನ್ನು ವಯೋಮಿತಿಗೆ ಅನುಗುಣವಾಗಿ ಮೂರು ಗುಂಪುಗಳಾಗಿ ವಿಂಗಡಿಸಿ ಶಿಬಿರ ನಡೆಸಲಾಗುತ್ತಿದೆ. ೬ರಿಂದ ೯ ವರ್ಷದ ಮಕ್ಕಳು, ೧೦ ರಿಂದ ೧೨ ವರ್ಷದ ಮಕ್ಕಳು, ೧೩ ರಿಂದ ೧೬ ವರ್ಷದ ಮಕ್ಕಳಿಗೆ ಆಯಾ ವಯೋ ಮಾನಕ್ಕೆ ತಕ್ಕಂತೆ ವಿವಿಧ ಪ್ರಕಾರಗಳ ಚಿತ್ರಕಲೆ ಬರವಣಿಗೆಯನ್ನು ಹೇಳಿಕೊಡಲಾಗುತ್ತಿದೆ. ವಿಶೇಷವೆಂದರೆ ಈಗ ತಾನೆ ಎಲ್‌ಕೆಜಿ ವ್ಯಾಸಂಗ ಮಾಡುತ್ತಿರುವ ನಾಲ್ಕು ವರ್ಷದ ಪುಟ್ಟ ಬಾಲಕಿ ಕೃಪಾ ಶಿಬಿರದಲ್ಲಿ ಭಾಗವಹಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ೧೦ ರಿಂದ ೧೨ ವರ್ಷ ವಯಸ್ಸಿನ ಮಕ್ಕಳು ಹೆಚ್ಚು ಭಾಗವಹಿಸಿದ್ದು, ಎಲ್ಲಾ ಮಕ್ಕಳು ಬಿಳಿ ಹಾಳೆಗಳ ಮೇಲೆ ಬಣ್ಣದ ಪೆನ್ಸಿಲ್, ಸ್ಕೆಚ್ ಪೆನ್ನುಗಳು, ಬಣ್ಣ ಮತ್ತು ಬ್ರಷ್ ಗಳನ್ನು ಹಿಡಿದು ವಿವಿಧ ರೀತಿಯ ಚಿತ್ರಗಳನ್ನು ಬರೆದು ಜತೆಗಾರರೊಂದಿಗೆ ಹರುಷಪಡುತ್ತಿದ್ದಾರೆ.

ಹೆಚ್ಚುತ್ತಿರುವ ಮಕ್ಕಳ ಆಸಕ್ತಿ: ಸ್ವಚ್ಛಂದವಾಗಿ ತುಂಟಾಟ ಆಡುತ್ತಾ, ಆಟ-ಪಾಠದ ಜೊತೆಗೆ ಕಾಲ ಕಳೆಯುತಿದ್ದ ಮಕ್ಕಳು ಶಿಬಿರದಲ್ಲಿ ಭಾಗವಹಿಸಿ ತಮ್ಮ ಕಲ್ಪನೆಯ ಚಿತ್ರಗಳು ಹಾಗೂ ಗುರುಗಳು ಹೇಳಿಕೊಟ್ಟಂತಹ ಚಿತ್ರಗಳನ್ನು ಆಸಕ್ತಿಯಿಂದ ಬರೆದು ಸಂತಸದಿಂದ ಕಾಲಕಳೆ ಯುತ್ತಿದ್ದಾರೆ. ೧೬ ವರ್ಷಗಳ ಹಿಂದೆ ೩೫ ಮಕ್ಕ ಳಿಂದ ಆರಂಭವಾದ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದಿದ್ದು, ಪ್ರಸ್ತುತ ವರ್ಷದ ಶಿಬಿರದಲ್ಲಿ ೮೫ ಮಕ್ಕಳು ಭಾಗವಹಿಸಿದ್ದಾರೆ. ಏ. ೨ರಂದು ಆರಂಭವಾದ ಶಿಬಿರ ಏ. ೨೨ರಂದು ಮುಕ್ತಾಯವಾಗಲಿದ್ದು, ೨೦ ದಿನಗಳಲ್ಲಿ ಮಕ್ಕಳಿಗೆ ಚಿತ್ರಕಲಾ ಕಲಾವಿದರಾಗುವ ಕನಸನ್ನು ಬಿತ್ತುವ ಕೆಲಸ ಮಾಡಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆವರೆಗೆ ಶಿಬಿರದಲ್ಲಿ ಸ್ಮರಣ ಚಿತ್ರಣ, ಸರಳಗೈ ಚಿತ್ರಣ, ಅಕ್ಷರ ಲೇಖನ, ನಿಸರ್ಗ ಚಿತ್ರಣ, ಗ್ಲಾಸ್ ಪೇಂಟಿಂಗ್, ಕಸದಿಂದ ರಸ ಮಾದರಿ ತಯಾರಿಕೆ, ಮಾಸ್ಕ್ ಮೇಕಿಂಗ್ ಸೇರಿದಂತೆ ಇನ್ನೂ ಹಲವು ರೀತಿಯ ಚಿತ್ರಕಲಾ ಪ್ರಕಾರಗಳನ್ನು ಕಲಿಸಲಾಗುತ್ತಿದೆ. ಶಿಬಿರದಲ್ಲಿ ಮಕ್ಕಳು ನಲಿಯುತ್ತಾ, ಆಸಕ್ತಿವಹಿಸಿ ಶ್ರದ್ಧೆಯಿಂದ ಚಿತ್ರಕಲೆ ಚಟುವಟಿಕೆಯಲ್ಲಿ ತೊಡಗಿ ಕೊಂಡು ಬೇಸಿಗೆ ರಜಾ ದಿನಗಳನ್ನು ಅತ್ಯಂತ ಸಂತೋಷ ವಾಗಿ ಕಲಿಕೆಯೊಂದಿಗೆ ಕಳೆಯುತ್ತಿದ್ದಾರೆ.

ಈ ಶಿಬಿರಕ್ಕೆ ಪೋಷಕರಿಗಿಂತ ಮಕ್ಕಳೇ ಹೆಚ್ಚಿನ ಆಸಕ್ತಿವಹಿಸಿ ಸೇರಿಕೊಳ್ಳುತ್ತಿದ್ದು, ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಇಮ್ಮಡಿ ಗೊಳ್ಳುತ್ತಿದೆ. ಪ್ರತಿ ವರ್ಷ ಮಕ್ಕಳ ಭಾಗ ವಹಿಸುವಿಕೆ ಹೆಚ್ಚಾಗುತ್ತಿದೆ. ಬೇರೆ ಶಿಬಿರ ಗಳಿಗಿಂತ ಚಿತ್ರಕಲಾ ಶಿಬಿರವು ವಿಭಿನ್ನ ವಾಗಿದ್ದು, ಮಕ್ಕಳು ಚಿತ್ರಕಲೆಯಲ್ಲಿ ಭವಿಷ್ಯ ವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಅವರಲ್ಲಿ ಸಕಾರಾತ್ಮವಾದ ಉತ್ತಮ ಗುಣಗಳನ್ನು ಬೆಳೆಸುತ್ತದೆ. ಎಸ್. ಎಂ. ಜಂಬುಕೇಶ್ವರ, ಚಿತ್ರಕಲಾ ಶಿಬಿರ ಸಂಚಾಲಕರು

ಚಿತ್ರಕಲಾ ಶಿಬಿರ ಮಕ್ಕಳಿಗೆ ತುಂಬಾ ಪ್ರಯೋಜನಕಾರಿ ಯಾಗುತ್ತಿದೆ. ಮಕ್ಕಳಲ್ಲೇ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಚಿತ್ರಕಲೆಯಿಂದ ಮಕ್ಕಳಲ್ಲಿ, ತಾಳ್ಮೆ, ಓದಿನ ಮೇಲೆ ಆಸಕ್ತಿ ಹುಟ್ಟಿಸುತ್ತಿದ್ದು, ಬರವಣಿಗೆಯಲ್ಲಿ ಅಕ್ಷರಗಳು ದುಂಡಾಗಿ ಮೂಡುತ್ತಿವೆ. – ಶಶಿಕಲಾ, ಪೋಷಕರು, ಬೋಗಾದಿ ನಿವಾಸಿ.

ನಾನು ಈ ಚಿತ್ರಕಲಾ ಶಿಬಿರದಲ್ಲಿ ಹಲವು ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. ಪ್ರತಿ ವರ್ಷವೂ ಹೊಸ ರೀತಿಯ ಚಿತ್ರ ಪ್ರಕಾರಗಳನ್ನು ಕಲಿಯುತ್ತಿದ್ದೇನೆ. ರಜಾ ದಿನಗಳನ್ನು ಕಳೆಯಲು ಹೆಚ್ಚಿನ ಅನುಕೂಲವಾಗುತ್ತಿದೆ. ಮುಂದಿನ ವರ್ಷವೂ ಭಾಗವಹಿಸುವ ಆಸೆಯಿದೆ. –ಹೆಬಾ, ೯ನೇ ತರಗತಿ ವಿದ್ಯಾರ್ಥಿನಿ

 

Tags:
error: Content is protected !!