Mysore
26
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಶಿಕ್ಷಕರ ಬದಲಾಗಿ ಪಾಲಕರಿಂದಲೇ ಮಕ್ಕಳಿಗೆ ಅಕ್ಷರಾಭ್ಯಾಸ!

ಭೇರ್ಯ ಮಹೇಶ್

ಕೆ.ಆರ್.ನಗರ ತಾಲ್ಲೂಕಿನ ಡಿ.ಕೆ.ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ

ಕೆ.ಆರ್.ನಗರ: ಶಾಲೆಗೆ ಸೇರಿಸುವ ಮುನ್ನ ಅಕ್ಷರಾಭ್ಯಾಸ ಮಾಡುವ ಪದ್ಧತಿ ಇದೆ. ಶುಭದಿನದಂದು ಅಕ್ಷರಾಭ್ಯಾಸ ಮಾಡಿದ ಮಗು ಮುಂದೆ ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಇದರಂತೆ ಮಗುವಿನ ಅಕ್ಷರಾ ಭ್ಯಾಸಕ್ಕಾಗಿ ತಾಲ್ಲೂಕಿನ ಡಿ.ಕೆ.ಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಯಲ್ಲಿ ಮಗುವಿಗೆ ಶಿಕ್ಷಕರು ಅಕ್ಷರಾಭ್ಯಾಸ ಮಾಡಿಸುವುದು ರೂಢಿ. ಆದರೆ ಅಂದು ಡಿ.ಕೆ.ಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊ ಟ್ಟಿಗೆ ಅವರ ಪಾಲಕರೂ ಶಾಲೆಯಲ್ಲಿ ಹಾಜರಿದ್ದರು. ಅಂದು ಮಕ್ಕಳಿಗೆ ಶಿಕ್ಷಕರು ಪಾಠ ಹೇಳಿಕೊಡಲಿಲ್ಲ. ಬದಲಿಗೆ ಪಾಲಕರೇ ಮಡಿಲಲ್ಲಿ ಕೂರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸಿದರು.

ಮಕ್ಕಳು ಅಪ್ಪ-ಅಮ್ಮನ ಜತೆಯಲ್ಲಿ ಕುಳಿತು ನಗುನಗುತ್ತಲೇ ತಮ್ಮ ಪುಟ್ಟ ಕೈಗಳಲ್ಲಿ ಅಕ್ಷರಾಭ್ಯಾಸಕ್ಕೆ ಮುನ್ನುಡಿ ಬರೆದರು. ಮಕ್ಕಳಲ್ಲಿ ಶಿಕ್ಷಣದ ಬಗೆಗೆ ಪ್ರೀತಿ ಹುಟ್ಟಿಸುವ, ಕಲಿಕೆಯು ಬದುಕಿನ ಮೊದಲ ಆದ್ಯತೆಯಾಗಬೇಕಾದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕರು ವಿಶಿಷ್ಟವಾಗಿ ನೆರವೇರಿಸಿಕೊಟ್ಟರು. ಹೊಸದಾಗಿ ದಾಖಲಾದ ಮಕ್ಕಳ ಜೊತೆಗೆ ಪಾಲ್ಗೊಂಡಿದ್ದ ಪಾಲಕರು ಶಾಲೆಯ ಈ ನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ವೈಯಕ್ತಿಕವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಶುಭ ಕೋರಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಡಿ.ಪಿ. ನಾಗೇಂದ್ರ, ಉಪಾಧ್ಯಕ್ಷೆ ಪ್ರಮೀಳಾ, ಪೋಷಕರಾದ ಪುಟ್ಟಸ್ವಾಮೇಗೌಡ, ತೇಜ, ಸೌಮ್ಯ, ಶಿಕ್ಷಕ ಎಸ್.ಟಿ.ರಘುವರ, ಕೆ.ಟಿ.ಚಂದನ್, ಇನ್ನಿತರರು ಕಾರ್ಯಕ್ರಮ ದಲ್ಲಿ ಹಾಜರಿದ್ದರು.

” ನಮ್ಮ ಶಾಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಒಂದನೇ ತರಗತಿಗೆ ಸೇರಿರುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಶಾಲೆಗೆ ಸ್ವಾಗತಿಸಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಕರ ನಿಯೋಜನೆ ಜತೆಗೆ ಉಚಿತ ದಾಸೋಹ, ಸಮವಸ್ತ್ರ ಸೇರಿದಂತೆ ಹತ್ತಾರು ಸೌಲಭ್ಯವನ್ನು ನೀಡಲಾಗುತ್ತಿದ್ದು, ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು.”

-ಎಂ.ಕೆ.ಕುಮಾರ್, ಮುಖ್ಯಶಿಕ್ಷಕ, ಸರ್ಕಾರಿ ಹಿ.ಪ್ರಾ. ಶಾಲೆ.

Tags:
error: Content is protected !!