ಅಣ್ಣೂರು ಸತೀಶ್
೨೮ ಬ್ಯಾಚ್‌ಗಳಿಗೆ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ೩,೧೫೧ ರೂ. ರೈತರಿಗೆ ಸಕಾಲಕ್ಕೆ ಬಟವಾಡೆ
ಭಾರತೀನಗರ: ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ (ಚಾಂಷುಗರ‍್ಸ್) ೨೦೨೪-೨೫ನೇ ಸಾಲಿನಲ್ಲಿ ನೀರಿನ ಅಭಾವದ ನಡುವೆಯೂ ೭.೬೫ ಲಕ್ಷ ಟನ್ ಕಬ್ಬು ಅರೆ ಯುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಾರಂಭಗೊಂಡ ಕಾರ್ಖಾನೆ ೨೮ ಬ್ಯಾಚ್‌ಗಳನ್ನು ಪೂರೈಸಿ ೭.೬೫ ಲಕ್ಷ ಟನ್ ಕಬ್ಬು ಅರೆದು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಿದೆ. ಕಾರ್ಖಾನೆ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಯಶಸ್ಸಿಗೆ ಕಾರಣವಾಗಿದೆ.
೨೦೨೩-೨೦೨೪ ನೇ ಸಾಲಿನಲ್ಲಿ ೯.೩೫ ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ೨೦೨೨-೨೦೨೩ ನೇ ಸಾಲಿನಲ್ಲಿ ೧೦.೩೫ ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಆದರೆ ಈ ಬಾರಿ ಮಳೆ ಅಭಾವ ಮತ್ತು ನೀರಿನ ಕೊರತೆಯಿಂದ ೭.೬೫ ಟನ್ ಕಬ್ಬನ್ನು ಮಾತ್ರ ಅರೆಯಲು ಸಾಧ್ಯವಾಗಿದೆ.
ಕಾರ್ಖಾನೆ ಆಡಳಿತ ಮಂಡಳಿ ನೀರಿನ ಅಭಾವ ಮತ್ತು ಕಬ್ಬಿನ ಕೊರತೆಯಿಂದ ಕೇವಲ ೪ ಲಕ್ಷ ಟನ್ ಕಬ್ಬು ಅರೆಯುವ ಸಿದ್ಧತೆ ಮಾಡಿಕೊಂಡಿತ್ತು. ಸದ್ಯ ಅಂದಾಜಿಗಿಂತಲೂ ಹೆಚ್ಚು ಕಬ್ಬು ನುರಿಸಿ ರೈತರ ಮೆಚ್ಚುಗೆಗೆ ಪಾತ್ರವಾಗಿದೆ.
೨೦೨೫ರ ಜುಲೈಗೆ ಮತ್ತೆ ಕಾರ್ಖಾನೆ ಪ್ರಾರಂಭಿಸುವ ಸಾಧ್ಯತೆಗಳು ಇದೆ. ಮುಂಗಾರು ಮತ್ತು ಹಿಂಗಾರು ಮಳೆ ಸಮರ್ಪಕವಾಗಿ ಬಾರದೆ ಕೈಕೊಟ್ಟಿದ್ದರಿಂದ ಬೇಸಿಗೆಯಲ್ಲಿ ನೀರಿನ ಅಭಾವವು ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಕಾರ್ಖಾನೆಯನ್ನು ಹೇಗೆ ಪ್ರಾರಂಭಿಸುತ್ತಾರೆ ಮತ್ತು ಕಬ್ಬನ್ನು ರೈತರಿಂದ ಹೇಗೆ ಪಡೆಯುತ್ತಾರೆ ಎಂಬುದೇ ಪ್ರಶ್ನೆಯಾಗಿದೆ.
ರೈತರಿಗೆ ಸಂಕಷ್ಟ: ಚಿಕ್ಕರಸಿನಕೆರೆ ಹೋಬಳಿಯ ರೈತರು ಕಬ್ಬು, ಭತ್ತದ ಬೆಳೆಯನ್ನೇ ಅವಲಂಬಿಸಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಸಾಕಷ್ಟು ರೈತರ ಕಬ್ಬು ಒಣಗಿಹೋಗಿತ್ತು. ಬೋರ್ವೆಲ್‌ನಲ್ಲಿ ೧೦೦೦, ೧೫೦೦ ಅಡಿ ಆಳವಿದ್ದರೂ ನೀರು ಬತ್ತಿಹೋಗುತ್ತಿದೆ. ಸರ್ಕಾರ ಬೆಳೆ ಸಮೀಕ್ಷೆ ಮಾಡಿಸಿತಾದರೂ ಪರಿಹಾರ ಮಾತ್ರ ದೊರೆತಿಲ್ಲ. ಹೀಗಾದರೆ ಮುಂದೇನು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕಬ್ಬು ಕಡಿಯುವ ಕಾರ್ಮಿಕರ ಕೊರತೆ : ಈಗಾಗಲೇ ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಸುತ್ತ- ಮುತ್ತಲಿನ ಕಬ್ಬು ಕಟಾವಿಗೆ ಈ ಭಾಗದಲ್ಲಿ ಸ್ಥಳೀಯ ಕೂಲಿ ಕಾರ್ಮಿಕರಿಲ್ಲದೆ ಬಳ್ಳಾರಿ ಮೂಲಕ ಕೂಲಿ ಕಾರ್ಮಿಕರನ್ನು ಅವಲಂಬಿಸಲಾಗಿದೆ. ಕಬ್ಬಿನ ಕೊರತೆಯಿಂದ ಕಬ್ಬು ಕಟಾವು ಮಾಡುವ ಕಾರ್ಮಿಕರು ಬೇರೆ ಕಾರ್ಖಾನೆ ವ್ಯಾಪ್ತಿಗೆ ತೆರಳಿದ್ದಾರೆ. ೨೦೨೫-೨೬ನೇ ಸಾಲಿಗೆ ಅಷ್ಟೋ-ಇಷ್ಟೋ ಕಬ್ಬು ಬೆಳೆದು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಕೆಂದುಕೊಂಡಿರುವ ರೈತರು ಕೂಲಿಕಾರ್ಮಿಕರಿಲ್ಲದೆ ಚಿಂತೆಗೊಳಗಾಗಿದ್ದಾರೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ಕಾರ್ಖಾನೆ ೭.೬೫ ಲಕ್ಷ ಟನ್ ಕಬ್ಬು ಅರೆದಿದೆ.
ಚಾಂಷುಗರ‍್ಸ್ ಕಾರ್ಖಾನೆ ಆಡಳಿತ ಮಂಡಳಿ ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ೩,೧೫೧ ರೂ. ಗಳನ್ನು ರೈತರಿಗೆ ಸಕಾಲಕ್ಕೆ ಬಟವಾಡೆ ಮಾಡಿದೆ. ಕಳೆದ ೨-೩ ವರ್ಷಗಳಿಂದ ಬಾಕಿ ಉಳಿಸಿಕೊಳ್ಳದೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಾಲಿನಲ್ಲಿ ಉಳಿದು ಕೊಂಡಿರುವ ೧೦ ಬ್ಯಾಚ್‌ನ ಬಾಕಿ ಹಣವನ್ನು ಮಾ.೧೫ ರೊಳಗೆ ನೀಡುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
” ಕಾರ್ಖಾನೆ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸ ತಂದಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕೊಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ಪಾವತಿಸಿ.”
-ಮಧು ಜಿ. ಮಾದೇಗೌಡ, ವಿಧಾನ ಪರಿಷತ್ ಸದಸ್ಯರು.
” ರೈತರು ಕಷ್ಟಪಟ್ಟು ಕಬ್ಬು ಬೆಳೆದು ಕಾರ್ಖಾನೆಗೆ ಸರಬರಾಜು ಮಾಡಿದ್ದಾರೆ. ಅವರಿಗೆ ಯಾವುದೇ ನೋವುಕೊಡಬಾರದು ಎಂಬ ಉದ್ದೇಶದಿಂದ ವ್ಯವಸ್ಥಾಪಕ ನಿರ್ದೇಶಕ ಎಂ.ಶ್ರೀನಿವಾಸನ್ ಅವರೊಂದಿಗೆ ಚರ್ಚಿಸಿ ಸಕಾಲಕ್ಕೆ ಹಣ ಬಟವಾಡೆ ಮಾಡಿಸಲಾಗಿದೆ. ಬಾಕಿ ಹಣವನ್ನು ಮಾ.೧೫ ರೊಳಗೆ ಪೂರ್ಣಗೊಳಿಸುತ್ತೇವೆ.”
-ಮಣಿ, ಉಪಾಧ್ಯಕ್ಷರು, ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ
” ತಾಯಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹದಿಂದ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ. ರೈತರಿಗೂ ಈ ಭಾಗದಲ್ಲಿ ಅನುಕೂಲವಾಗಿದೆ. ಮುಂದೆಯೂ ಯಾವುದೇ ತೊಂದರೆ ಇಲ್ಲದೆ ರೈತರನ್ನು ಮತ್ತು ಕಾರ್ಮಿಕರನ್ನು ನೋಡಿ ಕೊಳ್ಳಲಾಗುವುದು.”
-ಎಂ.ಶ್ರೀನಿವಾಸನ್, ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ.





