Mysore
23
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಸರಗೂರು ಸಾರಿಗೆ ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ

ದಾಸೇಗೌಡ 

ಓವರ್‌ಹೆಡ್ ಟ್ಯಾಂಕ್‌ಗಳ ನಡುವೆ ತಪ್ಪಾದ ಸಂಪರ್ಕ; ಪೋಲಾಗುತ್ತಿರುವ ನೀರು; ಸಾರ್ವಜನಿಕರ ಆಕ್ರೋ

ಸರಗೂರು : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಹಾಗೂ ಹೋಟೆಲ್ ಗಳಿಗೆ ನೀರು ಪೂರೈಕೆಯನ್ನು ಕಲ್ಪಿಸಲಾಗಿದೆ. ಆದರೆ ಎರಡು ಓವರ್‌ಹೆಡ್ ಟ್ಯಾಂಕ್‌ಗಳ ನಡುವೆ ತಪ್ಪಾದ ಸಂಪರ್ಕದ ಪರಿಣಾಮವಾಗಿ ನೀರು ಪೋಲಾಗುತ್ತಿದ್ದು, ಈ ಅವ್ಯವಸ್ಥೆಗೆ ಕಾರಣವಾಗಿದೆ.

ಪ್ರತಿ ದಿನ ಸಾವಿರಾರು ಲೀಟರ್ ನೀರು ಪೋಲಾಗುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಾಂಗಣದಲ್ಲೇ ನೀರು ಪೋಲಾಗುತ್ತಿರುವುದನ್ನು ಕಂಡು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ನೀರು ನಿಂತು ಬಸ್ ನಿಲ್ದಾಣದಲ್ಲಿ ಪಾಚಿ ಕಟ್ಟಿದೆ. ಎಷ್ಟೋ ಪ್ರಯಾಣಿಕರು ಓಡಾಡುವಾಗ ಜಾರಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಹತ್ತು ವರ್ಷಗಳ ಹಳೆಯದಾದ ಈ ಶೌಚಾಲಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ದುರ್ವಾಸನೆ ಬೀರುತ್ತಿದೆ. ಪಿಟ್‌ನಲ್ಲೇ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ಇದರಿಂದ ರೋಗರುಜಿನಗಳು ಹರಡುವ ಭೀತಿ ಎದುರಾಗಿದೆ.

ಫಿಲ್ಟರ್ ನೀರು ಹೊರಗೆ ಹೋಗಬೇಕಾದ ಸ್ಥಳದಲ್ಲಿ ಚಿಕ್ಕ ಇಂಗು ಗುಂಡಿಯಲ್ಲಿ ನೀರು ನಿಂತು ಹೊಂಡಗಳಾಗಿವೆ. ಬಸ್ ನಿಲ್ದಾಣದ ಕಾಂಪೌಂಡ್ ಒಳಗಡೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬಸ್ ನಿಲ್ದಾಣದ ಒಳಗಡೆ ಹೊಂಡದಂತಾಗಿದೆ. ಪಕ್ಕದ ಟ್ರಾನ್ಸ್‌ಫಾರ್ಮರ್ ಕೆಳಗೆ ನೀರು ನಿಂತಿದ್ದು, ಸೊಳ್ಳೆ ಹೆಚ್ಚಾಗಿ ರೋಗದ ಭೀತಿ ಎದುರಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಅಧಿಕಾರಿಗಳು ಭೇಟಿ ನೀಡಿ ಭರವಸೆ ಕೊಟ್ಟು ಸುಮ್ಮನಾಗುತ್ತಾರೆ. ತಿಂಗಳ ಹಿಂದೆ ಕಾಮಗಾರಿಯ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಇಂಗು ಗುಂಡಿ ಮಾಡಿ ನೀರನ್ನು ಹೊರಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಇಂದಿಗೂ ಕೆಲಸ ಆರಂಭವಾಗಿಲ್ಲ. ಇದರಿಂದ ಸಾರ್ವಜನಿಕರು ತೀವ್ರ ಅಸಮಾಧಾನಗೊಂಡಿದ್ದಾರೆ.

ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ವತಿಯಿಂದ ವರ್ಷಕ್ಕೆ ಲಕ್ಷಾಂತರ ರೂ, ಕಂದಾಯ ಸಲ್ಲಿಸುತ್ತಿದ್ದರೂ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ. ರಸ್ತೆ ಬದಿಯಲ್ಲಿ ಯುಜಿಡಿ ಇಲ್ಲದೆ ನೀರನ್ನು ಹೊರ ಬಿಡಲು ಆಗುತ್ತಿಲ್ಲ. ಇಲ್ಲಿನ ಹೋಟೆಲ್ ನೀರು ಫಿಲ್ಟರ್ ಆಗಿ ನೀರು ಹೊರಗಡೆ ಬಂದರೂ ಈ ನೀರು ಹೊರಗಡೆ ಹೋಗಲು ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಬಸ್ ನಿಲ್ದಾಣದ ಮುಂಭಾಗದಿಂದ ಮುಖ್ಯ ರಸ್ತೆಯ ನೀರೆಲ್ಲ ಒಳಗಡೆ ಹರಿದು ಬಂದು ಬಸ್ ನಿಲ್ದಾಣವೇ ಕೆರೆಯಂತಾಗುತ್ತದೆ.

ಬಸ್ ನಿಲ್ದಾಣದ ಒಳಗಡೆ ಗಿಡ ಮರಗಳು, ಹೆಚ್ಚಾಗಿ ಬೆಳೆದಿದ್ದು ತೇಗದ ಮರಗಳ ನಿರ್ವಹಣೆಯೂ ಇಲ್ಲವಾಗಿದೆ. ಗಲೀಜು ನೀರು ಹೋಟೆಲ್‌ನ ಮುಂಭಾಗದಲ್ಲಿ ನಿಲ್ಲುತ್ತಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸದೆ ಇರುವುದು ಬೇಸರದ ಸಂಗತಿ. ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಮರ್ಪಕ ವ್ಯವಸ್ಥೆ ಇಲ್ಲದೇ ನೆಲದ ಮೇಲೆಯೇ ಕೂರುವಂತಾಗಿದೆ. ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಇಲ್ಲ. ಇಲ್ಲಿದ್ದ ಫಿಲ್ಟರ್ ಅನ್ನು ಹೆಚ್. ಡಿ ಕೋಟೆ ಬಸ್ ನಿಲ್ದಾಣಕ್ಕೆ ತೆಗೆದು ಕೊಂಡು ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ

” ಬಸ್ ನಿಲ್ದಾಣದ ನೀರು ಪಟ್ಟಣ ಪಂಚಾಯಿತಿಯ ಮುಖ್ಯ ಚರಂಡಿಗೆ ಸೇರಿದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಬಸ್ ನಿಲ್ದಾಣದ ಮುಂಭಾಗ ಅಂದರೆ ನಂದಿನಿ ಹಾಲಿನ ಡೇರಿ ಕಾಂಪೌಂಡ್‌ಗೆ ಹೊಂದಿ ಕೊಂಡಂತೆ ಅಕ್ಕ, ಪಕ್ಕದಲ್ಲಿ ಸಣ್ಣ ಸಣ್ಣ ಅಂಗಡಿಗಳನ್ನು ನಿರ್ಮಿಸಿದರೆ ಬಡವರಿಗೆ ಉದ್ಯೋಗ, ವ್ಯವಹಾರಕ್ಕೆ ಅವಕಾಶ ಸಿಗುತ್ತದೆ.”

-ಕೆಂಡಗಣ್ಣಸ್ವಾಮಿ, ಚಾಮಲಾಪುರ 

ಸಾರ್ವಜನಿಕರ ಒತ್ತಾಯ: 

ಸಾರ್ವಜನಿಕರು, ವ್ಯಾಪಾರಿಗಳು, ಆಟೋ ಸಂಘದವರು ಮತ್ತು ಪ್ರಯಾಣಿಕರು ಬಸ್ ನಿಲ್ದಾಣದ ನೀರಿನ ಸಮಸ್ಯೆ ತಕ್ಷಣ ಬಗೆಹರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

” ಸದ್ಯದಲ್ಲೆ ಕೇಂದ್ರ ಕಚೇರಿಗೆ ಸಮಸ್ಯೆ ಕುರಿತು ಮಾಹಿತಿ ಕಳುಹಿಸಿದ್ದೇವೆ, ಅಲ್ಲಿಂದ ಉತ್ತರ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ.”

-ಶ್ರೀನಿವಾಸ್, ಸಾರಿಗೆ ನಿಯಂತ್ರಣಾಧಿಕಾರಿ

Tags:
error: Content is protected !!