Mysore
25
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಬದಲಾದ ಋತುಮಾನ: ಹೆಚ್ಚಿದ ಮದ್ರಾಸ್ ಐ ಪ್ರಕರಣ

ಗಿರೀಶ್ ಹುಣಸೂರು

ನಿರ್ಲಕ್ಷ್ಯ ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ

ಮೈಸೂರು: ರಾಜ್ಯದಲ್ಲಿ ಚಳಿಗಾಲದ ಪರಿಣಾಮ ಶೀತಗಾಳಿ ಬೀಸುವಿಕೆ ಹೆಚ್ಚಾಗುತ್ತಿದ್ದಂತೆ ಕಣ್ಣಿನ ಹೊರ ಪದರಕ್ಕೆ ಕಂಜಂಕ್ಟಿವಾ ಸೋಂಕು ತಗುಲಿರುವ ‘ಮದ್ರಾಸ್ ಐ’ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಜತೆಗೆ ಋತುಮಾನದ ಸಾಂಕ್ರಾಮಿಕ ರೋಗ ಫ್ಲೂಜ್ವರ ಕೂಡ ಜನರನ್ನು ಬಾಧಿಸುತ್ತಿದ್ದು, ಇವು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವುದರಿಂದ ಅದನ್ನು ನಿರ್ಲಕ್ಷಿಸದೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಸಿದೆ.

ಚಳಿಗಾಲ ಅಥವಾ ಮಳೆಗಾಲದಲ್ಲಿ ಶೀತ, ಬಿರುಸಾದ ಗಾಳಿಯಿಂದ ‘ಮದ್ರಾಸ್ ಐ’ ಸೋಂಕು ಹರಡು ವುದು ಸಾಮಾನ್ಯ. ಧೂಳು ಅಥವಾ ರಾಸಾಯನಿಕಗಳಿಂದಲೂ ಈ ಅಲರ್ಜಿ ಹರಡಬಹುದು. ಚಳಿಗಾಲದಲ್ಲಿ ಕಣ್ಣುಗಳು ಸುಲಭವಾಗಿ ಒಣಗುವುದರಿಂದ, ದೂಳಿನ ಕಣಗಳು ಹೆಚ್ಚುವುದರಿಂದ ಸೋಂಕಿನ ವೈರಸ್‌ಗಳು ಸುಲಭವಾಗಿ ಕಣ್ಣಿನ ಪೊರೆಯನ್ನು ಸೇರಿ ಬಾಧಿಸುತ್ತವೆ.

‘ಮದ್ರಾಸ್ ಐ’ ಸೋಂಕು ಅತ್ಯಂತ ಸಾಂಕ್ರಾಮಿಕವಾಗಿರುವುದರಿಂದ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಋತುಮಾನದ ಸಾಂಕ್ರಾಮಿಕ ರೋಗಗಳು: ಜ್ವರ, ಕೆಮ್ಮು, ಗಂಟಲು ಊತ, ಮೈ ಕೈ ನೋವು, ಉಸಿರಾಟದ ತೊಂದರೆ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಕೆಮ್ಮುವಾಗ, ಸೀನುವಾಗ ಬರುವ ತುಂತುರುಗಳನ್ನು ಉಸಿರಾಡುವ ಮೂಲಕ, ಕೈ ಹಾಗೂ ಮೇಲ್ಮೈಗಳ ಮೇಲಿನ ತುಂತುರುಗಳ ಮೂಲಕ ಋತುಮಾನದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರೋಗ ಸುಲಭವಾಗಿ ಹರಡುವ ಸಾಧ್ಯತೆ ಇರುವ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ಮಕ್ಕಳು, ವಯೋವೃದ್ಧರು, ರೋಗ ನಿರೋಧಕ ಶಕ್ತಿ ಕುಂಠಿತಗೊಂಡವರು, ವೈದ್ಯಕೀಯ ಹಾಗೂ ಶಸಚಿಕಿತ್ಸೆಗೆ ಒಳಪಟ್ಟವರನ್ನು ಪ್ರತ್ಯೇಕವಾಗಿರಿಸಿ, ರೋಗ ಹರಡದಂತೆ ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಹಾಗೂ ಮೂಗನ್ನು ಮುಚ್ಚಿಕೊಳ್ಳಬೇಕು. ಕೈಗಳನ್ನು ಸೋಪು ಮತ್ತು ಶುದ್ಧ ನೀರು ಬಳಸಿ ನಿಯಮಿತವಾಗಿ ತೊಳೆದುಕೊಳ್ಳಿ, ಹೆಚ್ಚು ದ್ರವರಸಗಳಿರುವ ಆಹಾರವನ್ನು ಬಳಸಿ, ಜ್ವರ ಇದ್ದವರನ್ನು ಪ್ರತ್ಯೇಕವಾಗಿರಿಸಬೇಕಿದೆ.

ಮದ್ರಾಸ್ ಐ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯ  ಕಣ್ಣುಗಳ ಬಿಳಿ ಭಾಗವು ಕೆಂಪಾಗುತ್ತದೆ. ಕಣ್ಣುಗಳಲ್ಲಿ ತುರಿಕೆ ಮತ್ತು ನೋವು ಉಂಟಾಗುತ್ತದೆ. ಕಣ್ಣಿನಿಂದ ನೀರು ನಿರಂತರವಾಗಿ ಸೋರುತ್ತಿರುತ್ತದೆ. ಕೆಲವೊಮ್ಮೆ ದೃಷ್ಟಿ ಮಸುಕಾಗುವ ಸಾಧ್ಯತೆಯೂ ಇದೆ. ಕಣ್ಣುಗಳು ಊದಿಕೊಳ್ಳುತ್ತದೆ. ಈ ಆರೋಗ್ಯ ಸಮಸ್ಯೆಯು ದೃಷ್ಟಿಯ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ. ಆದರೆ, ಕೆಲ ಸಮಯದವರೆಗೆ ಮಸುಕಾಗಿ ಕಾಣಬಹುದು. ಹೀಗಾಗಿ ಶುಚಿತ್ವಕ್ಕೆ ಹೆಚ್ಚು ಗಮನಕೊಡಿ ಎನ್ನುತ್ತಾರೆ ತಜ್ಞ ವೈದ್ಯರು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯಿರಿ, ಪದೇ ಪದೆ ಕಣ್ಣುಗಳನ್ನು ಮುಟ್ಟಬೇಡಿ, ನಿಮ್ಮ ಟವೆಲ್, ಹಾಸಿಗೆ, ಬೆಡ್‌ಶೀಟ್ ಅಥವಾ ಕರವಸವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕಾಂಟ್ಯಾಕ್ಟ್ ಲೆನ್ಸ್ ಹಾಕುವುದನ್ನು ತಪ್ಪಿಸಿ, ಸ್ವಯಂ ವೈದ್ಯರಾಗಿ ಯಾವುದೇ ಔಷಧವನ್ನು ಬಳಸಬೇಡಿ, ವೈದ್ಯರ ಸಲಹೆಯಂತೆ ಸೋಂಕಿತ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಿ, ಸಾರ್ವಜನಿಕ ಈಜುಕೊಳ ಬಳಸುವುದನ್ನು ತಪ್ಪಿಸಿ, ಸೋಂಕಿತ ವ್ಯಕ್ತಿ ಬಳಸಿದ ಯಾವುದೇ ವಸ್ತುಗಳನ್ನೂ ಬಳಸಬೇಡಿ, ದಿನದಲ್ಲಿ ಸಾಕಷ್ಟು ನೀರು ಕುಡಿಯುವುದು ಈ ಸಮಸ್ಯೆಯಿಂದ ಹೊರಬರಲು ಉತ್ತಮ ಮಾರ್ಗವಾಗಿದೆ. ಅಲ್ಲದೆ, ಹಸಿರು ತರಕಾರಿಗಳು, ತಾಜಾ ಹಣ್ಣುಗಳನ್ನು ಸೇವಿಸುವುದು, ಉತ್ತಮ ವಿಶ್ರಾಂತಿ ಮತ್ತು ನಿದ್ರೆ ಇತ್ಯಾದಿಗಳು ಈ ರೋಗವನ್ನು ದೂರ ಮಾಡಲು ಸಹಕಾರಿಯಾಗಲಿವೆ.

ಮದ್ರಾಸ್ ಐ ಲಕ್ಷಣಗಳು ಹೀಗಿವೆ: 

* ಕಣ್ಣುಗಳು ಹೆಚ್ಚು ಕೆಂಪಾಗಿ, ಸತತವಾಗಿ ನೀರು ಸುರಿಯುವುದು

* ಕಣ್ಣಿನಲ್ಲಿ ಮರಳು ಬಿದ್ದಂತೆ ಉರಿ ಮತ್ತು ಚುಚ್ಚಿದ ಅನುಭವ

* ರೆಪ್ಪೆಗಳು ಅಂಟಿಕೊಳ್ಳುವುದು ಮತ್ತು ಕಣ್ಣಿನ ಊತ

* ಬೆಳಕು ನೋಡಲು ಕಷ್ಟವಾಗುವುದು

ಈ ರೀತಿ ಮಾಡಬೇಡಿ: 

* ಗುಣಮುಖರಾಗುವವರೆಗೂ ಸಾರ್ವಜನಿಕ ಸ್ಥಳಗಳಿಗೆ ಹೋಗದಿರಿ

* ಕಣ್ಣಿಗೆ ವಿಶ್ರಾಂತಿಯಿಲ್ಲದೆ ಮೊಬೈಲ್ ಅಥವಾ ಟಿವಿ ವೀಕ್ಷಣೆ ಬೇಡ

* ಸೋಂಕಿತರು ಬಳಸಿದ ಬಟ್ಟೆ, ಸೋಪು ಅಥವಾ ಮೊಬೈಲ್ ಬಳಸಬೇಡಿ

* ಸೋಂಕಿನ ಲಕ್ಷಣಗಳು ಕಂಡುಬಂದರೆ ಮನೆಮದ್ದು ಮಾಡದಿರಿ ಈ ನಿಯಮಗಳನ್ನು ಪಾಲಿಸಿ

* ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಿರಿ

* ಆಗಾಗ್ಗೆ ಕಣ್ಣುಗಳನ್ನು ಸ್ವಚ್ಛಗೊಳಿಸಿ

* ಸೋಂಕಿತ ವ್ಯಕ್ತಿಯಿಂದ ಕನಿಷ್ಠ ಅಂತರ ಕಾಯ್ದುಕೊಳ್ಳಿ

* ಸೋಂಕಿನ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಕಣ್ಣಿನ ಡ್ರಾಪ್ಸ್ ಬಳಸಿ

” ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈಗಾಗಲೇ ಈ ಬಗ್ಗೆ ಕನ್ನಡದಲ್ಲಿ ಭಿತ್ತಿಪತ್ರಗಳನ್ನು ಹೊರಡಿಸಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಜನ ಜಾಗೃತಿ ಮೂಡಿಸಲು ಮುಂದಾಗಿದೆ. ಶೀತಗಾಳಿಯ ಪ್ರಭಾವದಿಂದ ಉಂಟಾಗುತ್ತಿರುವ ಕಣ್ಣಿನ ಸೋಂಕು ಹಾಗೂ ಋತುಮಾನದ ಸಾಂಕ್ರಮಿಕ ರೋಗಗಳ ಹರಡುವಿಕೆ ಬಗ್ಗೆ ನಿರ್ಲಕ್ಷ್ಯವಹಿಸದೆ ಎಚ್ಚರದಿಂದಿರಬೇಕು.”

 

Tags:
error: Content is protected !!