ಪ್ರತಿ ವರ್ಷ ಎಫ್‌ಆರ್‌ಪಿ ದರ ಹೆಚ್ಚಳ ೫ ವರ್ಷಗಳಿಂದಲೂ ಹೆಚ್ಚಳವಾಗದ ಸಕ್ಕರೆ ದರ!
ಅಣ್ಣೂರು ಸತೀಶ್
ಭಾರತೀನಗರ: ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ವರ್ಷದ ಕಬ್ಬು ಅರೆಯುವ ಕಾರ್ಯವು ಜೂ.೨೨ ರಂದು ದಿನಾಂಕ ನಿಗದಿಯಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಚಾಂಷುಗರ‍್ಸ್‌ನಲ್ಲಿ ಈಗಾಗಲೇ ಬಾಯ್ಲರ್ ಪೂಜೆ ಮತ್ತು ಕಬ್ಬು ಅರೆಯುವ ಯಂತ್ರಕ್ಕೆ ಚಾಲನೆ ನೀಡಲಾಗಿದೆ. ಅಽಕೃತ ವಾಗಿ ಜೂ.೨೨ರ ಭಾನುವಾರ ರೈತರ ಕಬ್ಬು ಸರಬರಾಜಿಗೆ ಅನುಮತಿ ದೊರಕಲಿದೆ. ೨೦೨೪-೨೫ನೇ ಸಾಲಿನಲ್ಲಿ ನೀರಿನ ಅಭಾವದ ನಡುವೆಯೂ ೨೮ ಬ್ಯಾಚ್‌ಗಳನ್ನು ಪೂರೈಸಿ ೭.೬೫ ಲಕ್ಷ ಟನ್‌ಗಳಷ್ಟು ಕಬ್ಬು ಅರೆಯಲಾಗಿತ್ತು. ೨೦೨೨-೨೦೨೩ನೇ ಸಾಲಿನಲ್ಲಿ ೧೦.೩೫ ಲಕ್ಷ ಟನ್, ೨೦೨೩-೨೦೨೪ನೇ ಸಾಲಿನಲ್ಲಿ ೯.೩೫ ಲಕ್ಷ ಟನ್‌ಗಳಷ್ಟು ಕಬ್ಬು ಅರೆಯಲಾಗಿತ್ತು. ಪ್ರಸಕ್ತ ೨೦೨೫-೨೬ನೇ ಸಾಲಿನಲ್ಲಿ ೮.೫ ಲಕ್ಷ ಟನ್ ಕಬ್ಬು ಅರೆಯುವ ನಿರೀಕ್ಷೆ ಹೊಂದಲಾಗಿದೆ. ಈ ವರ್ಷವೂ ಪ್ರತಿಟನ್ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿ ದರವನ್ನು ನೀಡಲು ಕಾರ್ಖಾನೆ ಬದ್ಧವಾಗಿದೆ.
ಎಫ್‌ಆರ್‌ಪಿ ದರ ಹೆಚ್ಚಳ: ೨೦೨೫-೨೬ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ೯.೫ ಇಳುವರಿಗೆ ಎಫ್‌ಆರ್‌ಪಿ ೩೨೯೧ ಹಣವನ್ನು ಟನ್ ಕಬ್ಬಿಗೆ ನಿಗದಿಪಡಿಸಿದೆ. ಇಳುವರಿ ಕಡಿಮೆ ಬಂದಲ್ಲಿ ಕಾರ್ಖಾನೆ ನಷ್ಟಕೊಳಗಾಗಬಹುದೆಂಬ ಆತಂಕದಲ್ಲಿದೆ.
ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ಮಾತ್ರ ಪ್ರತಿ ವರ್ಷ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ನಿಗದಿಪಡಿಸುತ್ತಿದೆ. ಕಳೆದ ವರ್ಷ ೩,೧೫೧ ರೂ.ಗಳನ್ನು ಟನ್ ಕಬ್ಬಿಗೆ ನಿಗದಿಪಡಿಸಲಾಗಿತ್ತು. ಪ್ರಸಕ್ತ ವರ್ಷ ೨೦೨೫-೨೦೨೬ನೇ ಸಾಲಿನಲ್ಲಿ ೩,೨೯೧ ರೂ.ಗಳನ್ನು ನಿಗದಿಪಡಿಸಿದೆ. ಆದರೆ, ಸಕ್ಕರೆ ಬೆಲೆಯನ್ನು ಕಳೆದ ಐದಾರು ವರ್ಷಗಳಿಂದಲೂ ಸರ್ಕಾರ ೩೧.೫ ರೂ. ನಿಗದಿಪಡಿಸಿದೆ. ಮಾರುಕಟ್ಟೆಗೆ ಪ್ರತಿ ಕೆ.ಜಿ.ಗೆ ೩೮ ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಕನಿಷ್ಠ ೪೨ ರೂ.ನಿಗದಿಪಡಿಸಿದರೆ ಕಾರ್ಖಾನೆಗಳನ್ನು ಉಳಿಸಿಕೊಂಡು ಕಾರ್ಮಿಕರಿಗೆ ವೇತನ ಕೊಡಲು ಅನುಕೂಲವಾಗುತ್ತದೆ.
ಇಲ್ಲದಿದ್ದರೆ ಕಾರ್ಖಾನೆ ನಷ್ಟಕ್ಕೊಳಗಾಗಿ ಕಾರ್ಮಿಕರಿಗೂ ತೊಂದರೆ ಉಂಟಾಗಿ, ರೈತರಿಗೂ ಸಂಕಷ್ಟ ಎದುರಾಗುತ್ತದೆ ಎಂಬುದು ಕಾರ್ಖಾನೆ ಆಡಳಿತ ಮಂಡಳಿಯ ಅಭಿಪ್ರಾಯವಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಕ್ಕರೆ ಬೆಲೆಯನ್ನು ಕೆ.ಜಿ.ಗೆ ಕನಿಷ್ಠ ೪೨ ರೂ.ಗಳಿಗೆ ಹೆಚ್ಚಿಸಲು ಕ್ರಮಕೈಗೊಂಡರೆ ಕಾರ್ಖಾನೆಗಳು ಉಳಿಯಲು ಸಾಧ್ಯವಾಗುತ್ತದೆ ಎಂಬುದು ಕಾರ್ಮಿಕರ ಅಭಿಪ್ರಾಯ.
ರೈತರಿಗೆ ಸಂಕಷ್ಟ: ಚಿಕ್ಕರಸಿನಕೆರೆ ಹೋಬಳಿಯ ರೈತರು ಕಬ್ಬು, ಭತ್ತದ ಬೆಳೆಯನ್ನೇ ಅವಲಂಬಿಸಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣದಿಂದ ಕೆಲವೆಡೆ ಕಬ್ಬು ಒಣಗಿ ಹೋಗಿತ್ತು. ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರುಸಂಗ್ರಹವಾಗಿದ್ದರೂ ಬೆಳೆಗಳಿಗೆ ಸಮರ್ಪಕವಾಗಿ ನೀರು ಬಿಡಲಿಲ್ಲ. ಈಗಾಗಲೇ ಸಾಕಷ್ಟು ರೈತರು ನಷ್ಟವನ್ನೂ ಅನುಭವಿಸಿದ್ದಾರೆ. ರೈತರು ಸಾಲಸೋಲ ಮಾಡಿ ಬೋರ್‌ವೆಲ್ ಕೊರೆಸಿದ್ದಾರೆ. ಮಳೆ ಅಭಾವದಿಂದ ಬೋರ್‌ವೆಲ್‌ಗಳು ೧,೦೦೦, ೧,೫೦೦ ಅಡಿ ಆಳವಿದ್ದರೂ ನೀರು ಬತ್ತಿ ಹೋಗುತ್ತಿದೆ. ಸರ್ಕಾರ ಬೆಳೆ ಸಮೀಕ್ಷೆ ನಡೆಸಿದೆ. ಪರಿಹಾರ ಮಾತ್ರ ಇನ್ನೂ ಸಹ ರೈತರಿಗೆ ದೊರೆತ್ತಿಲ್ಲ. ಹೀಗಾದರೆ ರೈತರ ಗತಿ ಏನು ಎಂಬಂತಾಗಿದೆ.
ನಾಲೆಗಳ ಆಧುನೀಕರಣ ಸಮರ್ಪಕವಾಗಿ ಆಗದ ಕಾರಣ ಸಾಕಷ್ಟು ರೈತರು ಕಬ್ಬು ಬೆಳೆಯುವುದನ್ನೇ ಕೈಬಿಟ್ಟಿದ್ದರು. ಇನ್ನೂ ಕೆಲವು ರೈತರ ಕಬ್ಬು ನೀರಿಲ್ಲದೆ ಒಣಗಿ ನಷ್ಟ ಅನುಭವಿಸಿದ್ದಾರೆ. ಕಾರ್ಖಾನೆ ೮.೫ ಲಕ್ಷ ಟನ್ ಕಬ್ಬು ಅರೆಯುವ ನಿರೀಕ್ಷೆಯನ್ನು ಹೇಗೆ ಇಟ್ಟುಕೊಂಡಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕಬ್ಬು ಕಡಿಯುವ ಕಾರ್ಮಿಕರ ಕೊರತೆ: ಈಗಾಗಲೇ ಚಾಂ ಷುಗರ‍್ಸ್ ಕಾರ್ಖಾನೆಯ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಬ್ಬು ಕಟಾವಿಗೆ ಬಂದಿದೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರಿಲ್ಲದೆ ಬಳ್ಳಾರಿಯಿಂದ ಬರುವ ಕಾರ್ಮಿಕರನ್ನು ಅವಲಂಬಿಸ ಬೇಕಿದೆ. ಕಬ್ಬಿನ ಕೊರತೆಯಿಂದ ಅವರೂ ಬೇರೆ ಕಾರ್ಖಾನೆ ವ್ಯಾಪ್ತಿಗೆ ತೆರಳಿದ್ದಾರೆ. ೨೦೨೫- ೨೬ ನೇ ಸಾಲಿಗೆ ಅಷ್ಟೋ-ಇಷ್ಟೋ ಕಬ್ಬು ಬೆಳೆದು ಕಾರ್ಖಾನೆಗೆ ಸಬರಾಜು ಮಾಡಬೇಕೆಂದು ಕೊಂಡಿರುವ ರೈತರ ಸ್ಥಿತಿ ಕೂಲಿಕಾರ್ಮಿಕರಿಲ್ಲದೆ ಅತಂತ್ರ ವಾಗಲಿದೆ. ಈ ಕಾರ್ಖಾನೆ ಕೂಡ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ಕಳೆದ ಸಾಲಿನಲ್ಲಿ ೭.೬೫ ಲಕ್ಷ ಟನ್ ಕಬ್ಬನ್ನು ಮಾತ್ರ ಅರೆಯಲು ಸಾಧ್ಯವಾಗಿದೆ. ಸಕಾಲಕ್ಕೆ ಬಟವಾಡೆ: ಚಾಂ ಷುಗರ‍್ಸ್ ಆಡಳಿತ ಮಂಡಳಿ ೨೦೨೪-೨೦೨೫ನೇ ಸಾಲಿನಲ್ಲಿ ೨೮ ಬ್ಯಾಚ್‌ಗಳಿಗೂ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ೩,೧೫೧ ರೂ.ಗಳನ್ನು ಸಕಾಲಕ್ಕೆ ಬಟವಾಡೆ ಮಾಡಿದೆ. ಪ್ರಸಕ್ತ ಸಾಲಿನಲ್ಲೂ ಅದೇ ರೀತಿ ಕಾರ್ಯನಿರ್ವ ಹಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಪ್ರಯೋಜನ ಪಡೆದುಕೊಳ್ಳಿ:
ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರ ಕೊರತೆ, ಕೂಲಿ ಹೆಚ್ಚಳ ಹಿನ್ನೆಲೆಯಲ್ಲಿ ಕಬ್ಬು ಕಟಾವು ಯಂತ್ರವನ್ನು ಪರಿಚಯಿಸಲಾಗುತ್ತಿದೆ. ಈ ಯಂತ್ರದ ಮೂಲಕ ದಿನವೊಂದಕ್ಕೆ ೨೫೦ ಟನ್ ಕಬ್ಬು ಕಟಾವು ಮಾಡ ಬಹುದಾಗಿದೆ. ಪ್ರತಿ ಟನ್ ಕಬ್ಬು ಕಟಾವಿಗೆ ೬೫೦ ರಿಂದ ೭೦೦ ರೂ. ಖರ್ಚಾಗಲಿದೆ. ಈ ಸಾಲಿನಲ್ಲಿ ಹೆಚ್ಚು ಇಳುವರಿ ಕೊಡುವ ಕಬ್ಬಿನ ತಳಿಗಳನ್ನು ರೈತರಿಗೆ ಪರಿಚಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಬ್ಬು ಅಭಿವೃದ್ಧಿ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.
” ಎಫ್‌ಆರ್‌ಪಿ ದರವನ್ನು ಮಾತ್ರ ಪ್ರತಿ ವರ್ಷ ಏರಿಕೆ ಮಾಡುತ್ತಿದ್ದಾರೆ. ಐದಾರು ವರ್ಷಗಳಿಂದಲೂ ಸಕ್ಕರೆ ಬೆಲೆಯನ್ನು ಮಾತ್ರ ಹೆಚ್ಚಿಸಿಲ್ಲ. ಕ್ಷೇತ್ರದ ಸಂಸದರು ಸದನದಲ್ಲಿ ಇದರ ಬಗ್ಗೆ ಚರ್ಚಿಸಿ ಸಕ್ಕರೆ ಬೆಲೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ. ಇದರಿಂದ ಕಾರ್ಖಾನೆಗಳೂ ಉಳಿಯುತ್ತವೆ. ಕಾರ್ಮಿಕರು, ರೈತರು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ.”
ಎಂ.ಶ್ರೀನಿವಾಸನ್, ವ್ಯವಸ್ಥಾಪಕ ನಿರ್ದೇಶಕರು, ಚಾಂಷುಗರ‍್ಸ್
” ರೈತರು ಕಷ್ಟಪಟ್ಟು ಬೆಳೆದ ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡಿದ್ದಾರೆ. ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವ್ಯವಸ್ಥಾಪಕ ನಿರ್ದೇಶಕ ಎಂ.ಶ್ರೀನಿವಾಸನ್ ಅವರ ನಿರ್ದೇಶನದಂತೆ ಪ್ರಸಕ್ತ ಸಾಲಿನಲ್ಲೂ ರೈತರಿಗೆ ಸಕಾಲಕ್ಕೆ ಹಣ ಬಟವಾಡೆ ಮಾಡಲಾಗುವುದು.”
– ಮಣಿ, ಉಪಾಧ್ಯಕ್ಷರು, ಚಾಂಷುಗರ್ಸ್





