Mysore
31
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಕರ ಭಾರದ ನಡುವೆ ಘನ ತ್ಯಾಜ್ಯ ವಿಲೇವಾರಿಗೂ ಸೆಸ್‌

ಜನಪ್ರತಿನಿಧಿಗಳ ಆಡಳಿತವಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ಅಂಧ ದರ್ಬಾರ್‌

ಮೈಸೂರು : ಗ್ಯಾಸ್ ದರ ಹೆಚ್ಚಳ…, ವಿದ್ಯುತ್ ದರ ಹೆಚ್ಚಳ…, ನೀರಿನ ಕರ ಹೆಚ್ಚಳ.., ಒಳ ಚರಂಡಿ ಶುಲ್ಕ ಹೆಚ್ಚಳ…, ಕಂದಾಯದ ಜೊತೆಗೆ 7 ಮಾದರಿಯ ವಿವಿಧ ಸೆಸ್‌ಗಳು… ಇಷ್ಟೆಲ್ಲದರ ನಡುವೆ ಗಾಯದ ಮೇಲೆ ಬರೆ ಎಳೆದಂತೆ ನಗರ ಪಾಲಿಕೆಯು ಹೊಸದಾಗಿ ಘನ ತ್ಯಾಜ್ಯವಿಲೇವಾರಿ ಸೆಸ್ ವಿಧಿಸುವ ಮೂಲಕ ಉದ್ದಿಮೆದಾರರನ್ನು ಹೈರಾಣಾಗಿಸಲು ಮುಂದಾಗಿದೆ.

ಮೈಸೂರು ಮಹಾನಗರಪಾಲಿಕೆಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದಿರುವುದು ಅಧಿಕಾರಿಗಳಿಗೆ ವರದಾನವಾಗಿ ಪರಿಣಮಿಸಿದೆ. ಇನ್ನು ಶಾಸಕರು, ಸಂಸದರು ಅವರಿಗೆ ಲೆಕ್ಕಕ್ಕೇ ಇಲ್ಲ. . . !

ಹೋಟೆಲ್, ಬೇಕರಿ, ಆಹಾರ ತಯಾರಿಕಾ ಘಟಕ, ತರಕಾರಿ ಮಾರುವವರು, ಹಣ್ಣು ಮಾರುವವರು, ಮಾಂಸ ಮಾರಾಟಗಾರರು ಹೀಗೆ ವಿವಿಧ ಉದ್ದಿಮೆಗಳನ್ನು ನಡೆಸುವವರು ಇಂದು ಉದ್ದಿಮೆಗಳನ್ನು ನಡೆಸಬೇಕೆ ಅಥವಾ ಮುಚ್ಚಬೇಕೆ? ಎಂಬ ಗೊಂದಲದಲ್ಲಿ ಇದ್ದಾರೆ. ಕಾರಣ ನಗರಪಾಲಿಕೆ ಹಾಗೂ ಸರ್ಕಾರ ವಿಧಿಸುವ ತೆರಿಗೆ, ಕಂದಾಯ ಹಾಗೂ ಇನ್ನಿತರ ಶುಲ್ಕಗಳು.

ಅದರಂತೆ ಇದೀಗ ನಗರಪಾಲಿಕೆಯು ಶಾಸಕರು, ಸಂಸದರು ಅಥವಾ ಮಾಜಿ ಮೇಯರ್‌ಗಳು ಸೇರಿದಂತೆ ಯಾರೊಂದಿಗೂ ಚರ್ಚೆ ನಡೆಸದೆ ಎಸ್‌ಡಬ್ಲ್ಯೂಎಂ ಸೆಸ್ ಜಾರಿಗೊಳಿಸಲು ಮುಂದಾಗಿದ್ದು, ಇದೀಗ ಟ್ರೇಡ್ ಲೈಸನ್ಸ್ ನವೀಕರಣದ ಜೊತೆಗೆ ಈ ಸೆಸ್‌ಅನ್ನು ವಿಧಿಸುತ್ತಿದೆ.

ಈ ಸಂಬಂಧ ಹೋಟೆಲ್ ಮಾಲೀಕರ ಸಂಘ ಹಾಗೂ ಇನ್ನಿತರ ಸಂಘಟನೆಗಳು ನಗರಪಾಲಿಕೆ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿವೆ. ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗುತ್ತಿದ್ದು, ಅಲ್ಲಿಯವರೆಗೆ ಯಾರೂ ಕೂಡ ವಾಣಿಜ್ಯ ಪರವಾನಗಿ ಶುಲ್ಕ ಪಾವತಿಸದಂತೆ ಮನವಿ ಮಾಡಿದೆ.

ನಗರಪಾಲಿಕೆಯು ಬಿಡುಗಡೆ ಮಾಡಿರುವ ತ್ಯಾಜ್ಯವಿಲೇವಾರಿ ಸೆಸ್ ಪಟ್ಟಿಯನ್ನು ಗಮನಿಸಿದಲ್ಲಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಹೂವಿನ ಮಾರಾಟ ಮಳಿಗೆಗೆ ತಿಂಗಳಿಗೆ 25050 ರೂ. ಸೆಸ್, ಎಳನೀರು ಮಾರಾಟ ಮಳಿಗೆಗೆ ತಿಂಗಳಿಗೆ 400 ರೂ. ಈ ಪಟ್ಟಿ ಹೀಗೆಯೇ ಮುಂದುವರಿಯುತ್ತದೆ.

ತರಕಾರಿ ಮಾರಾಟ ಮಳಿಗೆಗೆ 500 ರೂ., ಹೋಟೆಲ್ ಗಳಿಗೆ ಚದರ ಅಡಿಗಳ ಆಧಾರದಲ್ಲಿ ಸೆಸ್ ನಿಗಧಿ. ಅದು ರೂ. ನಿಂದ ಆರಂಭವಾಗಿ ಗರಿಷ್ಟ ತಿಂಗಳಿಗೆ 5 ಸಾವಿರ ರೂ. ಸೆಸ್ ವಿಧಿಸಲು ನಗರಪಾಲಿಕೆ ಮುಂದಾಗಿದೆ.

ಹೋಟೆಲ್, ಗೋದಾಮು, ಬಟ್ಟೆ ವ್ಯಾಪಾರ ಮಳಿಗೆ, ಪೇಯಿಂಗ್ ಗೆಸ್ಟ್, ಕೂಲ್ ಪಾರ್ಲರ್, ಸಾಮಿಲ್, ಕಿರಾಣಿ ಮಳಿಗೆ, ಗುಡಿ ಕೈಗಾರಿಕೆಗಳು ಸೇರಿದಂತೆ ಸುಮಾರು 36 ಉದ್ದಿಮೆಗಳನ್ನು ನಗರಪಾಲಿಕೆ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಇದನ್ನು ಅವರೇ ನಡೆಸುವ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡಿದ್ದಾರೆ.

ಶಾಸಕರೇಕೆ ಮೌನ
ನಗರಪಾಲಿಕೆಯು ಇಷ್ಟೆಲ್ಲಾ ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೂ ಸ್ಥಳೀಯ ಶಾಸಕರು ಹಾಗೂ ಸಂಸದರು ಏಕೆ ಮೌನ ವಹಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಉದ್ದಿಮೆ ನಡೆಸುವವರು ಪ್ರಶ್ನಿಸುತ್ತಿದ್ದಾರೆ.

ನಗರಪಾಲಿಕೆಯು ಈಗಾಗಲೇ ಕಂದಾಯದ ಜೊತೆಗೆ ಭಿಕ್ಷುಕರ ಸೆಸ್, ಸಾರಿಗೆ ಸೆಸ್, ಗ್ರಂಥಾಲಯ ಸೆಸ್, ಯುಜಿಡಿ ಸೆಸ್ ಸೇರಿದಂತೆ ಏಳು ವಿಧದ ಸೆಸ್ ಗಳನ್ನು ಜನರಿಂದ ಪಾವತಿಸಿಕೊಳ್ಳುತ್ತಿದೆ. ಆದರೂ ಹೊಸದಾಗಿ ಮತ್ತೆ ಮತ್ತೆ ಶುಲ್ಕಗಳನ್ನು ಹೇರುವ ಮೂಲಕ ಜನರಿಗೆ ಹಾಗೂ ಉದ್ದಿಮೆದಾರರಿಗೆ ಏಕೆ ತೊಂದರೆ ಕೊಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಉದ್ದಿಮೆದಾರರು ಬೇಸರದಿಂದ ಪ್ರಶ್ನಿಸುತ್ತಾರೆ.

Tags:
error: Content is protected !!