ಕೆ.ಬಿ.ರಮೇಶನಾಯಕ
ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದಿಂದಾಗಿ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಹೊಂದಿದ್ದವರ ಮನೆಗಳಲ್ಲಿರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಇದರಿಂದಾಗಿ ಮೂರು ವರ್ಷಗಳಿಂದ ಎರಡನ್ನೂ ಬಳಕೆ ಮಾಡುತ್ತಿದ್ದ ಗ್ರಾಹಕರು ಪೀಕಲಾಟಕ್ಕೆ ಸಿಲುಕಿದ್ದಾರೆ.
ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರ ಮಾಹಿತಿ ಸಂಗ್ರಹಿಸಿ ಬ್ಲಾಕ್ ಮಾಡುತ್ತಿರುವ ತೈಲ ಕಂಪೆನಿಗಳು, ಎಲ್‌ಪಿಜಿ ಸಿಲಿಂಡರ್‌ಗಳನ್ನು ಮರಳಿಸುವಂತೆ ನೋಟಿಸ್ ಕೊಡಲು ಮುಂದಾಗಿವೆ. ಗ್ರಾಹಕರು ಪಿಎನ್‌ಜಿ ಜತೆಗೆ, ಒಂದು ಅಥವಾ ಎರಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೊಂದಿದ್ದರು. ಈಗ ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ತಮ್ಮಲ್ಲಿರುವ ಎಲ್‌ಪಿಜಿ ಸಿಲಿಂಡರ್ ಗಳನ್ನು ಹಿಂತಿರುಗಿಸಬೇಕಾಗಿದೆ.
ಎಲ್‌ಪಿಜಿ ಸಿಲಿಂಡರ್ ವಾಪಸ್ ಮಾಡುವುದರಿಂದ ಪಿಎನ್‌ಜಿ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಭರ್ತಿಯಾದ ಎಲ್‌ಪಿಜಿ ಅನಿಲ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಪರೋಕ್ಷವಾಗಿ ಬ್ರೇಕ್ ಹಾಕಿದಂತಾಗಿದೆ. ನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ತೀವ್ರ ವಿರೋಧದ ನಡುವೆಯೂ ಪಿಎನ್‌ಜಿ ಗ್ಯಾಸ್ ಸಂಪರ್ಕಕ್ಕೆ ಪೈಪ್‌ಲೈನ್ ಅಳವಡಿಸಲು ಅನುಮತಿ ನೀಡಲಾಗಿತ್ತು. ನಂತರ, ಪೈಪ್‌ಲೈನ್ ಕಾಮಗಾರಿ ಶುರು ಮಾಡಿದ ಮೇಲೆ ೨೦೨೩ರ ಹೊತ್ತಿಗೆ ವಿಜಯನಗರ ಒಂದನೇ, ಎರಡನೇ ಮತ್ತು ಮೂರನೇ ಹಂತದ ಎ,ಬಿ ಮತ್ತು ಸಿ ಮಾರ್ಗಗಳು, ವಿಜಯನಗರ ಎರಡನೇ ಮತ್ತು ಮೂರನೇ ಮೇನ್‌ನ ಪ್ರಮುಖ ರಸ್ತೆಗಳು, ಬೋಗಾದಿ, ಹೂಟಗಳ್ಳಿ, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ರಾಮಕೃಷ್ಣನಗರ ಸೇರಿದಂತೆ ಒಟ್ಟು ೩,೨೭೩ ಪಿಎನ್‌ಜಿ ಸಂಪರ್ಕಗಳನ್ನು ಕಲ್ಪಿಸಲಾಗಿದೆ.
ಇದಾದ ಬಳಿಕ ಕೆಲವು ಮಾರ್ಗಗಳ ನಿವಾಸಿಗಳಿಗೆ ಸಂಪರ್ಕ ಕಲ್ಪಿಸಲು ಪ್ಲಂಬಿಂಗ್ ಕೆಲಸ ಮುಗಿದರೂ ಪೈಪ್‌ಲೈನ್ ಕೆಲಸವಾಗದ ಕಾರಣ ಅಷ್ಟಕ್ಕೆ ನಿಂತಿತ್ತು. ಪಿಎನ್‌ಜಿ ಸಂಪರ್ಕ ಪಡೆಯಲು ಗ್ರಾಹಕರಿಂದ ಬೇಡಿಕೆ ಬಂದರೂ ಬದಲಾದ ಸನ್ನಿವೇಶದಲ್ಲಿ ಪೈಪ್‌ಲೈನ್ ಅಳವಡಿಸಲು ಅನುಮತಿ ಕೊಡದ ಕಾರಣ ಹೊಸ ಸಂಪರ್ಕ ನಿಂತು ಹೋಗಿದೆ. ಹೀಗಿದ್ದರೂ ಕಳೆದ ಮೂರು ವರ್ಷಗಳಿಂದ ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಮನೆಯ ಅಡುಗೆ ಕೋಣೆಗೆ ಪೈಪ್‌ಲೈನ್ ಮೂಲಕ ನೇರವಾಗಿ ಬರುವ ಗ್ಯಾಸ್‌ನಿಂದಾಗಿ ಸಮಸ್ಯೆ ಇಲ್ಲದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಪಿಎನ್‌ಜಿ ಹೊಂದಿರುವ ಕೆಲವು ಗ್ರಾಹಕರು ತಮ್ಮ ಬಳಿ ಇರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹಿಂತಿರು ಗಿಸಿದ್ದರೆ, ಹಲವರು ವಾಪಸ್ ಮಾಡಿರಲಿಲ್ಲ. ಸರ್ಕಾರ ವಾಗಲಿ ಅಥವಾ ತೈಲ ಕಂಪೆನಿಗಳಾಗಲಿ ಯಾವುದೇ ಕ್ರಮಕೈಗೊಳ್ಳದೆ ಗ್ರಾಹಕರ ವಿವೇಚನೆಗೆ ಬಿಟ್ಟಿದ್ದರು.ಇದೀಗ ಮಧ್ಯಪ್ರಾಚ್ಯದೇಶಗಳ ನಡುವಿನ ಯುದ್ಧದ ಪರಿಣಾಮವಾಗಿ ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ವಾಣಿಜ್ಯ ಸಿಲಿಂಡರ್ ಬಳಕೆಗೆ ಮಿತಿ ಹೇರಲಾಗಿದೆ. ಅಲ್ಲದೆ, ಮೈಸೂರಿನ ಗ್ರಾಹಕರಿಗೆ ೨೫ ದಿನಗಳ ಅವಧಿ ಬಳಿಕ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ೪೫ ದಿನಗಳ ಅವಧಿಯ ಬಳಿಕ ಬುಕ್ಕಿಂಗ್ ಮಾಡಲು ಅವಕಾಶ ಕೊಟ್ಟಿದೆ.
ಎಲ್‌ಪಿಜಿ ಸಿಲಿಂಡರ್ ಕೊರತೆ ನೀಗಿಸಲು ಹಲವಾರು ಮಾರ್ಗೋಪಾಯಗಳನ್ನು ಹುಡುಕುತ್ತಿರುವ ಕೇಂದ್ರ ಸರ್ಕಾರ, ಇದೀಗ ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರ ಬಳಿ ಇರುಬಹುದಾದ ಎಲ್‌ಪಿಜಿ ಸಿಲಿಂಡರ್ ಗಳನ್ನು ವಾಪಸ್ ಪಡೆಯುವಂತೆ ಸೂಚನೆ ನೀಡಿದೆ.
” ಪಿಎನ್‌ಜಿ ಸಂಪರ್ಕಹೊಂದಿರುವ ಗ್ರಾಹಕರಿಂದ ಎಲ್‌ಪಿಜಿ ಸಿಲಿಂಡರ್ ವಾಪಸ್ ಪಡೆಯುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ತೈಲ ಕಂಪೆನಿಗಳು ಇಂತಹ ಕ್ರಮ ಕೈಗೊಳ್ಳಲು ಅವಕಾಶವಿದೆ. ನಗರದಲ್ಲಿ ಶೇ.೧೦ರಷ್ಟು ಪಿಎನ್‌ಜಿ ಸಂಪರ್ಕ ಹೊಂದಿಲ್ಲದ ಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ.”
ಮಂಟೇಸ್ವಾಮಿ, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
” ವಿಜಯನಗರದಲ್ಲಿ ನಮ್ಮ ಮನೆ ಸೇರಿದಂತೆ ೬೦೦ ಮನೆಗಳಲ್ಲಿ ಪಿಎನ್‌ಜಿ ಸಂಪರ್ಕ ಇದೆ. ಪಿಎನ್‌ಜಿ ಸಂಪರ್ಕ ಶುರುವಾದ ಮೇಲೆ ಎಲ್‌ಪಿಜಿ ಸಿಲಿಂಡರ್ ವಾಪಸ್ ಮಾಡಿದ್ದಾರೆ. ಕೆಲವರು ಇಟ್ಟುಕೊಂಡಿದ್ದರು. ಈಗ ವಾಪಸ್ ಮಾಡಿ ಎಂದರೆ ಮಾಡುತ್ತಾರೆ. ಪಿಎನ್‌ಜಿ ಸ್ಟೌ ಮತ್ತು ಎಲ್‌ಪಿಜಿ ಸ್ಟೌಗಳು ಬೇರೆ ಬೇರೆ ರೀತಿಯಲ್ಲಿವೆ. ಪಿಎನ್‌ಜಿ ಗ್ರಾಹಕರು ಎಲ್‌ಪಿಜಿಗೆ ಬದಲಿಸಿ ಕೊಳ್ಳುವುದು ಸಾಧ್ಯವಿಲ್ಲ.”
ಎಂ.ಯು.ಸುಬ್ಬಯ್ಯ, ಗ್ರಾಹಕ
ಪಿಎನ್‌ಜಿ ಸಂಪರ್ಕಕ್ಕೆ ಬೇಡಿಕೆ:
ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಪಿಎನ್‌ಜಿ ಹೊಸ ಸಂಪರ್ಕ ಕಲ್ಪಿಸುವಂತೆ ಬೇಡಿಕೆ ಇದ್ದರೂ, ಪೈಪ್‌ಲೈನ್ ಸಂಪರ್ಕ ಇಲ್ಲದಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರು ಎಲ್‌ಪಿಜಿ ಸಿಲಿಂಡರ್ ಸ್ಟೌ ಬಳಸಲು ಸಾಧ್ಯವಾಗುವುದಿಲ್ಲ. ಎಲ್‌ಪಿಜಿ ಇರುವವರಿಗೆ ದಿಢೀರ್ ಪಿಎನ್‌ಜಿ ಸೌಕರ್ಯ ಕಲ್ಪಿಸಲು ಆಗುವುದಿಲ್ಲ. ಇದಕ್ಕೆ ಪೈಪ್‌ಲೈನ್ ಆಗಬೇಕು. ಅಲ್ಲದೆ, ರೆಗ್ಯುಲೇಟರ್ ಕೂಡ ಬೇರೆಯಾಗಿದೆ. ಪಿಎನ್‌ಜಿ ತೆಗೆದು ಎಲ್‌ಪಿಜಿ ಸಿಲಿಂಡರ್‌ಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಗ್ರಾಹಕರೊಬ್ಬರು ಹೇಳಿದರು.
” ಮೈಸೂರಲ್ಲಿ ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್‌ಪಿಜಿಸಿಲಿಂಡರ್ ವಾಪಸ್ ಮಾಡುವಂತೆ ಹೇಳಿಲ್ಲ. ತೈಲ ಕಂಪೆನಿಗಳು ನೀಡುವ ಸೂಚನೆ ಬಗ್ಗೆ ನಮಗೇನೂ ಗೊತ್ತಿಲ್ಲ.”
ಸಂಜಿತ್ ಸುಮನ್, ಮ್ಯಾನೇಜರ್, ಪಿಎನ್‌ಜಿ ಕಂಪೆನಿ
ನಗರದಲ್ಲಿ ೩,೨೭೩ ಸಂಪರ್ಕ:
ಮೈಸೂರಿನಲ್ಲಿ ೩,೨೭೩ ಗ್ರಾಹಕರು ಪಿಎನ್‌ಜಿ ಸಂಪರ್ಕವನ್ನು ಹೊಂದಿದ್ದು, ವಿಜಯನಗರ ಒಂದನೇ ಹಂತದಲ್ಲಿ ೪೬೧, ವಿಜಯಗರ ಎರಡನೇ, ಮೂರನೇ ಹಂತದ ಅಕ್ಕಪಕ್ಕದಪ್ರದೇಶಗಳಿಂದ ೯೧೦, ಬೋಗಾದಿ ೧೬, ಹೂಟಗಳ್ಳಿ ೧,೦೮೨, ಹೂಟಗಳ್ಳಿ ಕೈಗಾರಿಕಾ ಪ್ರದೇಶ ೧೬೦, ರಾಮಕೃಷ್ಣನಗರದಲ್ಲಿ ೧,೨೮೧ ಗ್ರಾಹಕರು ಪಿಎನ್‌ಜಿ ಸಂಪರ್ಕ ಹೊಂದಿದ್ದಾರೆ. ಈಗ ತೈಲ ಕಂಪೆನಿಗಳಿಂದ ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರ ಡೇಟಾ ಸಂಗ್ರಹಿಸಿ, ಅವರ ಎಲ್‌ಪಿಜಿ ಬುಕ್ಕಿಂಗ್‌ನ್ನು ಬ್ಲಾಕ್ ಮಾಡುವ ಕೆಲಸ ಮಾಡಲಾಗುತ್ತಿದೆ.





