Mysore
21
overcast clouds

Social Media

ಮಂಗಳವಾರ, 22 ಅಕ್ಟೋಬರ್ 2024
Light
Dark

ಅರಮನೆಯ ಗತವೈಭವ ಅನಾವರಣ

ವಸ್ತುಪ್ರದರ್ಶನ ಆವರಣದಲ್ಲಿ ಜನಾಕರ್ಷಣೆಯ ಕೇಂದ್ರವಾದ ‘ಕಟ್ಟಿಗೆ ಅರಮನೆ

ಎಚ್.ಎಸ್.ದಿನೇಶ್‌ ಕುಮಾರ್

ಮೈಸೂರು: ನಗರದ ವಸ್ತುಪ್ರದರ್ಶನ ಆವರಣದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನ ಗತ ವೈಭವವನ್ನು ಸಾರುವ ಕಟ್ಟಿಗೆ ಅರಮನೆ ಮಾದರಿಯನು ಅನಾವರಣಗೊಳಿಸಿದ್ದು, ಅದು ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ.

ಈ ಬಾರಿ ದಸರಾ ಉತ್ಸವದ ಅಂಗವಾಗಿ ಕರ್ನಾಟಕ ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಸೆಳೆಯಲು ವಿಭಿನ್ನ ಹಾಗೂ ವಿಶೇಷವಾದ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಸಾಮಾನ್ಯವಾಗಿ ದಸರಾ ಮಹೋತ್ಸವದಲ್ಲಿ ಯುವ ಸಂಭ್ರಮ, ಯುವ ದಸರಾ, ಆಹಾರ ಮೇಳ ಮುಂತಾದ ಕಾರ್ಯಕ್ರಮಗಳ ಜೊತೆಗೆ ದಸರಾ ವಸ್ತು ಪ್ರದರ್ಶನ ಕೂಡ ಜನಾಕರ್ಷಕವಾಗಿರುತ್ತದೆ.

ಏಕೆಂದರೆ ಈ ಎಲ್ಲದರಲ್ಲಿ ಸಿಗುವ ಸಂಭ್ರಮ ಸಡಗರವೆಲ್ಲ ಒಂದೆಡೆ ಸಿಗುತ್ತದೆ. ಆಟ, ಊಟ, ಶಾಪಿಂಗ್, ಕಲೆ, ಸಂಸ್ಕೃತಿ ಎಲ್ಲವೂ ಒಂದೆಡೆ ಸಿಗಲಿದೆ. ಇಷ್ಟು ಜನಪ್ರಿಯತೆ ಹೊಂದಿರುವ ವಸ್ತು ಪ್ರದರ್ಶನ ಈ ಬಾರಿ ಹೊಸ ಮೆರುಗು ಪಡೆದಿದೆ.

ಜನಾಕರ್ಷಕವಾದ ಕಟ್ಟಿಗೆ ಅರಮನೆ: ಬ್ರಿಟಿಷರ ಮೇಲಿನ ಯುದ್ಧದಲ್ಲಿ ಟಿಪ್ಪು ಹತನಾದ ನಂತರ ಶ್ರೀರಂಗಪಟ್ಟಣದಿಂದ ಮೈಸೂರಿಗೆ ರಾಜಮನೆತನ ಸ್ಥಳಾಂತರವಾಯಿತು. ಅಂದು ಅವರಿಗಾಗಿ ಕಟ್ಟಿಗೆಯ ಅರಮನೆ ನಿರ್ಮಾಣವಾಯಿತು.

ನಂತರ ಅದು ರಾಜ ಮನೆತನದ ವಾಸಸ್ಥಾನವಾಗಿತ್ತು. ಆದರೆ ಆಕಸ್ಮಿಕ ಬೆಂಕಿ ಅವಘಡದಿಂದ ಅರಮನೆ ಭಸ್ಮವಾಯಿತು. ನಂತರ ರಾಜಮನೆತನದವರು ಜಗನೋಹನ ಅರಮನೆಯಲ್ಲಿ ಇದ್ದುಕೊಂಡು ಈಗಿನ ಅಂಬಾವಿಲಾಸ ಅರಮನೆಯನ್ನು ನಿರ್ಮಾಣ ಮಾಡುತ್ತಾರೆ.

ಹೀಗಾಗಿ ಅಂದು ಕಟ್ಟಿಗೆ ಅರಮನೆಯು ಹೇಗಿತ್ತು, ಅದರ ವಾಸ್ತುಶಿಲ್ಪ ರಚನೆ ಹಾಗೂ ಅರಮನೆಯ ಸೊಬ ಗನ್ನು ಜನರಿಗೆ ತೋರಿಸುವ ಉದ್ದೇಶದಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಟ್ಟಿಗೆ ಅರಮನೆಯ ಮಾದರಿಯನ್ನು ನಿರ್ಮಿಸಲಾಗಿದೆ.

ಮಾದರಿ ಕಟ್ಟಡಕ್ಕೆ ಅತ್ಯಾಕರ್ಷಕ ಬಣ್ಣ ಹಾಗೂ ದೀಪದ ಬುಡ್ಡಿ ಮಾದರಿಯಲ್ಲಿ ಲೈಟಿಂಗ್ಸ್ ನೀಡಲಾಗಿದೆ. ವಸ್ತುಪ್ರದರ್ಶನ ಆವರಣಕ್ಕೆ ಭೇಟಿ ನೀಡುವವರು ಕಟ್ಟಿಗೆ ಅರಮನೆಯ ಬಳಿಗೆ ತೆರಳದೆ ವಾಪಸ್ ಹೋಗುವುದಿಲ್ಲ ಎಂಬಂತಾಗಿದೆ. ಇನ್ನು ಸೆಲ್ಲಿ ಹಾಗೂ ಫೋಟೋ ತೆಗೆದುಕೊಳ್ಳುವುದು ಮಾಮೂಲಾಗಿದೆ.

ಮಾದರಿ ಅರಮನೆಯ ಒಳಭಾಗದಲ್ಲಿ ಮೈಸೂರಿನ ಪಾರಂಪರಿಕ ಉತ್ಪನ್ನಗಳಾದ ಮೈಸೂರು ರೇಷ್ಮೆ, ಮೈಸೂರು ಪಾಕ್, ವೀಳ್ಯದೆಲೆ, ರಸಬಾಳೆ ಹೀಗೆ ಹಲವು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ.

ಉಳಿದಂತೆ ನೂಲಿನಿಂದ ಸೀರೆಯನ್ನು ಸ್ಥಳದಲ್ಲಿಯೇ ನೇಯುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಜನರು ಕುತೂಹಲದಿಂದ ಸೀರೆ ನೇಯ್ದೆಯನ್ನು ಗಮನಿ ಸುವುದು ಹಾಗೂ ಅದರ ಮಾಹಿತಿ ಪಡೆಯುವುದು ನಡೆದಿದೆ. ಅಲ್ಲಿ ರೇಷ್ಮೆ ಸೀರೆಗಳ ಮಾರಾಟ ಕೂಡ ಭರ್ಜರಿಯಾಗಿ ನಡೆಯುತ್ತಿದೆ.

ಜೊತೆಗೆ ಪಾರಂಪರಿಕ ವಸ್ತುಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ ಫಲಕಗಳು ಜನರನ್ನು ಸೆಳೆಯುತ್ತಿವೆ. ಚನ್ನಪಟ್ಟಣದ ಬೊಂಬೆ, ಮಣ್ಣಿನ ಮಡಿಕೆ ಮುಂತಾದವುಗಳ ಮಾರಾಟ ಕೂಡ ಮಾದರಿ ಅರಮನೆಯ ಒಳಭಾಗ ನಡೆಯುತ್ತಿದೆ. ಒಟ್ಟಾರೆ ಕಟ್ಟಿಗೆ ಅರಮನೆಯ ಮಾದರಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ವಸ್ತುಪ್ರದರ್ಶನ ಆವರಣದಲ್ಲಿ ಕಟ್ಟಿಗೆ ಅರಮನೆ ನಿರ್ಮಾಣ ವಾಗಿರುವ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆವು. ಇದೀಗ ಸ್ವತಃ ಕಣ್ಣಾರೆ ಕಾಣುವಂತಾಗಿದೆ. ಅರಮನೆ ಹೀಗಿತ್ತೆ ಎಂಬಂತೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇಲ್ಲಿನ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

– ಜಿತೇಂದ್ರ, ಬಳ್ಳಾರಿ ನಿವಾಸಿ.

ಈ ಹಿಂದೆ ರಾಜಮನೆತನದವರ ವೈಭೋಗ ಹೇಗಿತ್ತು ಎಂಬುದಕ್ಕೆ ಈ ಕಟ್ಟಿಗೆ ಅರಮನೆ ಸಾಕ್ಷಿಯಾಗಿದೆ. ರಾತ್ರಿ ವೇಳೆ ಈ ಅರಮನೆ ಮಾದರಿಯನ್ನು ವೀಕ್ಷಿಸುವುದಕ್ಕೆ ಸಂತಸ ವಾಗುತ್ತದೆ. ಜೊತೆಗೆ ಪಾರಂಪರಿಕ ವಸ್ತುಗಳನ್ನು ಪರಿಚಯಿಸುತ್ತಿರುವುದು ಕೂಡ ಶ್ಲಾಘನೀಯ.

-ಶಾರದಾ, ಬಳ್ಳಾರಿ ನಿವಾಸಿ.

Tags: