Mysore
26
broken clouds

Social Media

ಶನಿವಾರ, 12 ಸೆಪ್ಟೆಂಬರ್ 2026
Light
Dark

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?” – ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ

ಟಿ.ಕೆ.ಹರೀಶ್

ನೀವು ಯಾವ ಜಾತಿ?… ಪರಿಚಯವಾದ ಕೆಲವೇ ಕ್ಷಣಗಳಲ್ಲಿ ಎದುರಾಗುವ ಪ್ರಶ್ನೆ ಇದು. ಹೆಸರು ಏನು, ಊರು ಯಾವುದು, ಏನು ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆಗಳ ನಂತರ ಕೆಲವರ ಕುತೂಹಲ ನೇರವಾಗಿ ಜಾತಿಯತ್ತ ತಿರುಗುತ್ತದೆ. ವ್ಯಕ್ತಿಯನ್ನು ತಿಳಿದುಕೊಳ್ಳುವ ಆಸಕ್ತಿಗಿಂತ, ಆತನ ಜಾತಿಯನ್ನು ತಿಳಿದುಕೊಳ್ಳುವ ಆತುರವೇ ಹೆಚ್ಚಾಗಿರುವುದು ನಮ್ಮ ಸಮಾಜದ ಒಂದು ವಿಚಿತ್ರ ವಾಸ್ತವ.

ಒಬ್ಬ ವ್ಯಕ್ತಿಯ ಗುಣವೇನು? ಅವರ ಆಲೋಚನೆಗಳೇನು? ಅವರು ಹೇಗೆ ಬದುಕುತ್ತಾರೆ? ಸಮಾಜಕ್ಕೆ ಅವರ ಕೊಡುಗೆ ಏನು? ಅವರ ಮಾನವೀಯತೆ ಎಷ್ಟು? ಎಂಬುದಕ್ಕಿಂತ “ಅವರು ಯಾವ ಜಾತಿಯವರು?” ಎಂಬ ಪ್ರಶ್ನೆ ಮುಖ್ಯವಾಗುವುದು ನಮ್ಮ ಸಾಮಾಜಿಕ ಮನಸ್ಥಿತಿಯ ಆಳದಲ್ಲಿ ಇನ್ನೂ ಜಾತಿಯ ಬೇರುಗಳು ಗಟ್ಟಿಯಾಗಿವೆ ಎಂಬುದನ್ನು ತೋರಿಸುತ್ತದೆ.

ಜಾತಿ ಕೇಳುವ ಪ್ರತಿಯೊಬ್ಬರ ಉದ್ದೇಶವೂ ಕೆಟ್ಟದ್ದೇ ಎಂದು ಹೇಳಲಾಗುವುದಿಲ್ಲ. ಕೆಲವರು ಸಹಜ ಕುತೂಹಲದಿಂದ ಕೇಳಬಹುದು. ಆದರೆ ಆ ಪ್ರಶ್ನೆಯ ಹಿಂದಿರುವ ಮನೋವಿಜ್ಞಾನವನ್ನು ಗಮನಿಸಿದರೆ, ಬಹುತೇಕ ಸಂದರ್ಭಗಳಲ್ಲಿ ನಾವು ವ್ಯಕ್ತಿಯನ್ನು ವ್ಯಕ್ತಿಯಾಗಿ ನೋಡುವುದಕ್ಕಿಂತ ಮೊದಲು ಯಾವುದೋ ಒಂದು ಸಾಮಾಜಿಕ ಗುಂಪಿನ ಸದಸ್ಯನಾಗಿ ಗುರುತಿಸಲು ಪ್ರಯತ್ನಿಸುತ್ತೇವೆ.

ಹೆಸರು ಕೇಳಿದಾಗ ವ್ಯಕ್ತಿಯ ಪರಿಚಯ ಸಿಗುತ್ತದೆ. ಊರು ಕೇಳಿದಾಗ ಅವರ ಹಿನ್ನೆಲೆಯ ಒಂದು ಭಾಗ ತಿಳಿಯುತ್ತದೆ. ಕೆಲಸ ಕೇಳಿದಾಗ ಅವರ ವೃತ್ತಿ ತಿಳಿಯುತ್ತದೆ. ಆದರೆ ಜಾತಿ ಕೇಳುವುದರಿಂದ ನಿಜವಾಗಿ ಏನು ತಿಳಿಯುತ್ತದೆ ಎನ್ನುವ ವಿಷಯ ಗೊತ್ತಿಲ್ಲ ? ಒಬ್ಬರ ಜಾತಿ ಅವರ ಬುದ್ಧಿವಂತಿಕೆಯನ್ನು ಹೇಳುವುದಿಲ್ಲ. ಅವರ ಪ್ರಾಮಾಣಿಕತೆಯನ್ನು ಅಳೆಯುವುದಿಲ್ಲ. ಅವರ ಮಾನವೀಯತೆಯನ್ನು ನಿರ್ಧರಿಸುವುದಿಲ್ಲ. ಅವರ ಸಾಮರ್ಥ್ಯವನ್ನು ತೋರಿಸುವುದಿಲ್ಲ.

ಅವರ ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಅದು ಮಾನದಂಡವಲ್ಲ. ಹಾಗಿದ್ದರೂ ಏಕೆ ಈ ಪ್ರಶ್ನೆ.
ಕೆಲವೊಮ್ಮೆ ಜಾತಿ ತಿಳಿಯುವ ಮುನ್ನ ವ್ಯಕ್ತಿಯೊಂದಿಗೆ ಆತ್ಮೀಯವಾಗಿ ಮಾತನಾಡುವವರು, ಜಾತಿ ತಿಳಿದ ನಂತರ ತಮ್ಮ ವರ್ತನೆಯನ್ನು ಬದಲಾಯಿಸುತ್ತಾರೆ. ಮಾತನಾಡುವ ರೀತಿ ಬದಲಾಗುತ್ತದೆ. ಅಂತರ ಹೆಚ್ಚಾಗುತ್ತದೆ. ಸ್ನೇಹದ ಸ್ವರೂಪ ಬದಲಾಗುತ್ತದೆ. ಮದುವೆಯ ವಿಚಾರ ಬಂದರೆ ನಿರ್ಧಾರವೇ ಬದಲಾಗುತ್ತದೆ. ಅಂದರೆ ಸಮಸ್ಯೆ ಜಾತಿ ಇರುವುದರಲ್ಲಿ ಮಾತ್ರವಲ್ಲ; ಜಾತಿಯ ಆಧಾರದ ಮೇಲೆ ಮನುಷ್ಯನ ಮೌಲ್ಯವನ್ನು ಅಳೆಯುವ ಮನಸ್ಥಿತಿಯಲ್ಲಿದೆ.

ಒಬ್ಬ ವ್ಯಕ್ತಿ ಸಮಾಜದಲ್ಲಿ ಸಾಧನೆ ಹಾಗೂ ಯಶಸ್ಸು ಸಾಧಿಸಿದಾಗ ಜನರು ಮೊದಲು ಅವರ ಜಾತಿಯನ್ನು ಹುಡುಕುವುದು ಇಂದಿನ ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಒಂದು ಪ್ರಮುಖ ಪ್ರವೃತ್ತಿಯಾಗಿದೆ. ಇದನ್ನು ನಾವು ಹೆಚ್ಚಾಗಿ ಗೂಗಲ್ ಟ್ರೆಂಡ್ಸ್ ಅಥವಾ ಸರ್ಚ್ ಇಂಜಿನ್‌ಗಳಲ್ಲಿ ಗಮನಿಸಬಹುದು. ವ್ಯಂಗ್ಯವೆಂದರೆ, ಒಬ್ಬ ವ್ಯಕ್ತಿ ಎಷ್ಟು ಕಷ್ಟಪಟ್ಟು ಯಶಸ್ಸು ಗಳಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ನಮಗೆ ಸಮಯವಿಲ್ಲ; ಆದರೆ “ಯಾವ ಜಾತಿ?” ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮಾತ್ರ ಕುತೂಹಲ ಹೆಚ್ಚಿರುತ್ತದೆ!
ಮಕ್ಕಳಿಗೆ ನಾವು ಏನು ಕಲಿಸುತ್ತಿದ್ದೇವೆ?: ಮಕ್ಕಳು ಸಹಜವಾಗಿ ಯಾರನ್ನೂ ಜಾತಿಯಿಂದ ನೋಡುವುದಿಲ್ಲ. ಅವರು ಸ್ನೇಹಿತನನ್ನು ಸ್ನೇಹಿತನಾಗಿಯೇ ನೋಡುತ್ತಾರೆ. ಆದರೆ ದೊಡ್ಡವರು “ಅವನು ಯಾವ ಜಾತಿ?”, “ಅವಳು ಯಾವ ಸಮುದಾಯ?” ಎಂದು ಕೇಳುತ್ತಾ ಹೋದಂತೆ, ಮಕ್ಕಳ ಮನಸ್ಸಿನಲ್ಲೂ ಆ ಪ್ರಶ್ನೆ ಬೇರು ಬಿಡುತ್ತದೆ.

ಹೀಗಾಗಿ ಜಾತಿ ವ್ಯವಸ್ಥೆಯನ್ನು ಕೇವಲ ಕಾನೂನಿನಿಂದ ಅಥವಾ ಭಾಷಣಗಳಿಂದ ಮುಗಿಸಲು ಸಾಧ್ಯವಿಲ್ಲ. ನಮ್ಮ ದೈನಂದಿನ ಮಾತುಕತೆಯಲ್ಲಿರುವ ಸಣ್ಣ ಸಣ್ಣ ಪೂರ್ವಗ್ರಹಗಳನ್ನು ಬದಲಾಯಿಸಬೇಕು. ಒಬ್ಬ ಮನುಷ್ಯನನ್ನು ಆತನ ಜಾತಿಯಿಂದ ಪರಿಚಯಿಸುವುದಕ್ಕಿಂತ, ಆತನ ನಡವಳಿಕೆ, ವ್ಯಕ್ತಿತ್ವ ಮತ್ತು ಮಾನವೀಯತೆಯಿಂದ ಪರಿಚಯಿಸುವುದು ಹೆಚ್ಚು ಅರ್ಥಪೂರ್ಣ. ಜಾತಿ ಕೇಳುವ ಕುತೂಹಲವನ್ನು ಬಹುಶಃ ಒಂದು ದಿನದಲ್ಲಿ ಸಾಧ್ಯವಿಲ್ಲ. ಆದರೆ ಆ ಪ್ರಶ್ನೆಗೆ ನಾವು ನೀಡುವ ಮಹತ್ವವನ್ನು ಕಡಿಮೆ ಮಾಡಬಹುದು.
ಮನುಷ್ಯ ಹುಟ್ಟುವಾಗ ಜಾತಿಯೊಂದಿಗೆ ಹುಟ್ಟುವುದಿಲ್ಲ. ಯಾರು ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕು ಅರ್ಜಿ ಹಾಕಿರುವುದಿಲ್ಲ. ಆದ್ದರಿಂದ ಮುಂದಿನ ಬಾರಿ ಯಾರನ್ನಾದರೂ ಭೇಟಿಯಾದಾಗ, “ಜಾತಿ ಯಾವುದು?” ಎಂದು ಕೇಳುವ ಮುನ್ನ ಒಂದು ಕ್ಷಣ ಯೋಚಿಸೋಣ. ಮನುಷ್ಯನ ಪರಿಚಯವನ್ನು ಅವನ ಜಾತಿಯಿಂದಲ್ಲ, ಅವನ ನಡವಳಿಕೆ, ಆಲೋಚನೆ ಮತ್ತು ಮಾನವೀಯತೆಯಿಂದ ಮಾಡಿಕೊಳ್ಳುವ ಸಮಾಜ ನಮ್ಮದಾಗಬೇಕು.

Tags:
error: Content is protected !!