ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ
ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಖ್ಯ ಶಿಕ್ಷಕರಿಂದ ಅಗತ್ಯ ಮಾಹಿತಿ ಪಡೆದರು.
ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚೆದೊಡ್ಡಿ ಗ್ರಾಮದಲ್ಲಿನ ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಜ್ಜೀಪುರ, ರಾಮಾಪುರ, ಹನೂರು ಶಾಲೆಗಳಿಗೆ ವ್ಯಾಸಂಗಕ್ಕೆ ಪ್ರತಿನಿತ್ಯ ೧೪ ಕಿ.ಮೀ. ನಡೆದುಕೊಂಡೇ ಹೋಗಬೇಕಿದ್ದು. ಈ ಸಂಬಂಧ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಎಂ.ಆರ್.ಮಂಜುನಾಥ್ ರವರಿಗೆ ಪತ್ರ ಬರೆದು ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ‘ಆಂದೋಲನ’ ದಿನಪತ್ರಿಕೆಯ ಮುಖಪುಟದಲ್ಲಿ ವರದಿ ಪ್ರಕಟಿಸಲಾಗಿತ್ತು.
ವರದಿಯಿಂದ ಎಚ್ಚೆತ್ತುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಗ್ರಾಮಕ್ಕೆ ಭೇಟಿ ನೀಡಿ, ಎಷ್ಟು ವಿದ್ಯಾರ್ಥಿಗಳು, ಯಾವ ಯಾವ ಶಾಲೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ತಹಸಿಲ್ದಾರ್ ಚೈತ್ರರವರಿಗೆ ದೂರವಾಣಿ ಕರೆ ಮಾಡಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ರಸ್ತೆ ಸರಿ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ಬಸ್ ಸಂಚಾರ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಜೀಪ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ತಹಸಿಲ್ದಾರ್ ಚೈತ್ರ ಅವರು ಮಾತನಾಡಿ, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ಹನೂರು ಶೈಕ್ಷಣಿಕ ವಲಯದ ಪಚ್ಚೆ ದೊಡ್ಡಿ ಗ್ರಾಮದ ಒಂದರಿಂದ ಐದನೇ ತರಗತಿಯವರೆಗೆ ೧೩ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ.
ಯೋಗಕ್ಷೇಮ ವಿಚಾರಿಸಿದ ಬಿಇಒ: ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಯೋರ್ವ ಹನೂರು ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಆದರೆ ಹಲವು ದಿನಗಳಿಂದ ಶಾಲೆಗೆ ಗೈರಾಗಿರುವ ಬಗ್ಗೆ ವಿಚಾರ ತಿಳಿದು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗೆ ಕೌನ್ಸಿಲಿಂಗ್ ಅಗತ್ಯವಿರುವುದರಿಂದ ಸಂಬಂಧಪಟ್ಟ ಶಿಕ್ಷಕರು ವಿದ್ಯಾರ್ಥಿಯೊಂದಿಗೆ ಕೌನ್ಸಿಲಿಂಗ್ ನಡೆಸುವಂತೆ ಸಲಹೆ ನೀಡಿದ್ದಾರೆ.





