Mysore
19
broken clouds

Social Media

ಭಾನುವಾರ, 11 ಜನವರಿ 2026
Light
Dark

ಅವಳಿ ತಾಲ್ಲೂಕುಗಳಲ್ಲಿ ಹೆಚ್ಚುತ್ತಿರುವ ಗಾಂಜಾ ಮಾರಾಟ

ಭೇರ್ಯ ಮಹೇಶ್

ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ಗಾಂಜಾ ಮಾರಾಟ ದಂಧೆ ನಡೆಯುತ್ತಿದ್ದು ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಹಲ ವಾರು ಬಾರಿ ಗಾಂಜಾ ಗಿರಾಕಿಗಳನ್ನು ಬಂಧಿಸಿದರೂ ಜೈಲಿಂದ ವಾಪಸ್ ಬಂದು ಮತ್ತೆ ದಂಧೆಯಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ಸ್ಥಳೀಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟವು ಆಟಿಕೆ ವಸ್ತುಗಳ ಮಾರಾಟದ ರೀತಿಯಲ್ಲಿ ನಡೆಯುತ್ತಿದೆ. ಅಬಕಾರಿ ಅಧಿಕಾರಿಗಳು ಈಚೆಗೆ ಚಿಕ್ಕಭೇರ್ಯ ಗ್ರಾಮದಲ್ಲಿ ಕೆಜಿಗಟ್ಟಲೆ ಗಾಂಜಾ ವಶಪಡಿಸಿಕೊಂಡಿದ್ದರು. ಭೇರ್ಯ ಭಾಗದಲ್ಲಿ ಹೆಚ್ಚಾಗಿ ಗಾಂಜಾ ಮಾರಾಟ ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಮೈಸೂರಿನ ಸೆನ್ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ರಾಜ್ ನೇತೃತ್ವದ ತಂಡ ಕೆ.ಆರ್.ನಗರದ ಅರ್ಕೇಶ್ವರ ದೇವಾಲಯದ ಬಳಿ ೫೭೮ ಗ್ರಾಂ (ಅರ್ಧ ಕೆಜಿ) ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಭೇರ್ಯ ಗ್ರಾಮದ ಚೇತನ್ ಎಂಬ ವ್ಯಕ್ತಿಯನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೆ.ಆರ್.ನಗರ ಪಟ್ಟಣದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಾಂಜಾ ಮಾರಾಟ ಹಾಗೂ ಗಾಂಜಾ ಸಸಿ ಬೆಳೆದಿದ್ದ ಪ್ರಕರಣಗಳನ್ನು ಪಟ್ಟಣ ಠಾಣೆ ಪೊಲೀಸರು ಭೇದಿಸಿದ್ದಾರೆ.

ಪ್ರಕರಣ ೧: ಪಟ್ಟಣದ ಮಧುವನಹಳ್ಳಿ ರಸ್ತೆಯಲ್ಲಿರುವ ಟಿ.ಮರಿಯಪ್ಪ ವಿದ್ಯಾ ಸಂಸ್ಥೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಸ್ಲಿಂ ಬಡಾವಣೆಯ ನಿವಾಸಿ ರಿಯಾಜ್ ಪಾಷ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ಆರೋಪಿ ದಪೋರ್ ಪರಾರಿಯಾಗಿದ್ದಾನೆ. ರಿಯಾಜ್ ಪಾಷಾನನ್ನು ಮಾಲು ಸಮೇತ ಬಂಧಿಸಿರುವ ಪೊಲೀಸರು ಆತನ ಮೇಲೆ ದೂರು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪೊಲೀಸ್ ಇನ್ ಸ್ಪೆಕ್ಟರ್ ಎಸ್.ಶಿವಪ್ರಕಾಶ್ ನೇತೃತ್ವದ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.

ಪ್ರಕರಣ ೨: ಪಟ್ಟಣದ ಮುಸ್ಲಿಂ ಬಡಾವಣೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾಗಿಡವನ್ನು ಗುರುವಾರ ಪತ್ತೆ ಹಚ್ಚಿರುವ ಅಬಕಾರಿ ನಿರೀಕ್ಷಕ ಎಚ್.ಎಸ್. ಲೋಕೇಶ್ ನೇತೃತ್ವದ ತಂಡ ೧ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ. ಮುಸ್ಲಿಂ ಬಡಾವಣೆಯ ಅಬ್ದುಲ್ ಕಲಾಂ ರಸ್ತೆಯ ನಾಮಫಲಕ ಹಾಗೂ ಅಲ್ಲಿಯೇ ಇರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೊಂದಿ ಕೊಂಡಂತಿರುವ ಲೋಕೋಪಯೋಗಿ ಇಲಾಖೆಯ ಕ್ವಾಟ್ರರ್ಸ್ ಕಾಂಪೌಂಡ್ ಪಕ್ಕದಲ್ಲಿಯೇ ಗಾಂಜಾ ಗಿಡ ಬೆಳೆಯಲಾಗಿದ್ದು, ಇಲ್ಲಿಯವರೆಗೆ ಯಾರ ಕಣ್ಣಿಗೂ ಕಾಣಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಖಚಿತ ಮಾಹಿತಿ ಮೇರೆಗೆ ಸ್ಥಳ ಪರಿಶೀಲಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಿಡವನ್ನು ಜಪ್ತಿ ಮಾಡಿದ್ದಾರೆ. ಅಬಕಾರಿ ಇಲಾಖೆ ಮುಖ್ಯಪೇದೆ ಕೆ.ಪಿ.ಶಿವಕುಮಾರ್, ಪೇದೆಗಳಾದ ಶಿವಪ್ಪ ಬಾನುಶಿ, ಪುಟ್ಟಸ್ವಾಮೇಗೌಡ, ಸಂದೀಪ್, ಚಾಲಕ ಮಹದೇವ ಭಾಗವಹಿಸಿದ್ದರು. ಮೈಸೂರು ನಗರದಲ್ಲಿ ಇತ್ತೀಚೆಗೆ ದ್ರವ ರೂಪದ ಮಾದಕವಸ್ತು ತಯಾರಿಕಾ ಘಟಕವನ್ನು ವಶ ಪಡಿಸಿಕೊಂಡ ಮೇಲೆ ನಗರದಲ್ಲಿ ವ್ಯಾಪಕವಾಗಿ ಮಾದಕವಸ್ತು ಮಾರಾಟ ಮಾಡುವವರನ್ನು ಬಂಧಿಸುವ ಕೆಲಸ ನಡೆಯುತ್ತಿದ್ದು, ಅದೇ ರೀತಿಯಲ್ಲಿ ಗ್ರಾಮಾಂತರ ಭಾಗದಲ್ಲೂ ಗಾಂಜಾ ಮಾರಾಟ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಸಾಲಿಗ್ರಾಮ ಮತ್ತು ಕೆ.ಆರ್.ನಗರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪೊಲೀಸರೊಂದಿಗೆ ಸಭೆ ನಡೆಸಿ ಕಾನೂನು ಬಾಹಿರ ಚಟುವಟಿಕೆಗೆ ಬಿಗಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

” ಮೈಸೂರಿನ ಸೆನ್ ಪೊಲೀಸ್ ಠಾಣೆ ವತಿಯಿಂದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ೭ಕ್ಕೂ ಹೆಚ್ಚು ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಗಾಂಜಾ ಮತ್ತು ಮಾದಕವಸ್ತು ಮಾರಾಟ ಜಾಲವನ್ನು ಪತ್ತೆ ಮಾಡಲಾಗುತ್ತಿದ್ದು, ಅಂತಹ ವ್ಯಕ್ತಿಗಳನ್ನು ಕಂಡರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು.”

-ಸುನಿಲ್ ರಾಜ್, ಪಿಎಸ್‌ಐ, ಸೆನ್ ಪೊಲೀಸ್ ಠಾಣೆ, ಮೈಸೂರು

Tags:
error: Content is protected !!