ಎಚ್.ಎಸ್.ದಿನೇಶ್‌ಕುಮಾರ್
ಅರಮನೆಗೆ ಹೊಂದಿಕೊಂಡಂತಿರುವ ಕಟ್ಟಡ; ಚಾವಣಿಯ ಒಂದು ಭಾಗದಲ್ಲಿ ದೊಡ್ಡ ಬಿರುಕು
ಕಟ್ಟಡದ ದುಸ್ಥಿತಿಯ ಬಗ್ಗೆ ಪುರಾತತ್ವ ಇಲಾಖೆ ಗಮನಕ್ಕೆ ತಂದು ವರ್ಷಗಳೇ ಕಳೆದರೂ ಪ್ರಯೋಜನವಿಲ್ಲ
ದಶಕಗಳ ಕಾಲ ಸಾಹಿತ್ಯಕ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಕಟ್ಟಡದ ಒಳಭಾಗವೀಗ ಹೆಗ್ಗಣಗಳ ತಾಣ
೬೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ನೀಡಿದ್ದ ಸಭಾಂಗಣ
ಮೈಸೂರು: ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ. ಸಾಹಿತ್ಯಾಸಕ್ತರು ಚರ್ಚೆಯ ಉನ್ಮಾದದಲ್ಲಿದ್ದಾರೆ. ಆದರೆ ಇತ್ತ ಸಾಂಸ್ಕೃತಿಕ ನಗರಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ಚಾವಣಿ ಕುಸಿಯುವ ಹಂತಕ್ಕೆ ತಲುಪಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ವಿಷಾದದ ಸಂಗತಿಯಾಗಿದೆ.
ಬಲರಾಮ ದ್ವಾರದ ಬಳಿ ಅರಮನೆಗೆ ಹೊಂದಿಕೊಂಡಂತಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ಚಾವಣಿ ಕುಸಿ ಯುವ ಹಂತಕ್ಕೆ ತಲುಪಿದ್ದು, ಈ ಪಾರಂಪರಿಕ ಕಟ್ಟಡ ದುಸ್ಥಿತಿಯಲ್ಲಿರುವ ಕಾರಣ ಇತ್ತೀಚಿನ ಕೆಲ ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಿಗೆ ಅದನ್ನು ಬಳಸುತ್ತಿಲ್ಲ. ಕಟ್ಟಡದ ದುಸ್ಥಿತಿಯ ಬಗ್ಗೆ ಕಸಾಪ ಹಿಂದಿನ ಜಿಲ್ಲಾ ಅಧ್ಯಕ್ಷರುಗಳಾದ ಡಾ.ವೈ.ಡಿ.ರಾಜಣ್ಣ, ಎಂ.ಚಂದ್ರಶೇಖರ್ ಹಾಗೂ ಈಗಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರು ಪುರಾತತ್ವ ಇಲಾಖೆಯ ಗಮನಕ್ಕೆ ತಂದು ವರ್ಷಗಳೇ ಕಳೆದಿವೆ. ಆದರೂ ಯಾವುದೇ ಪ್ರಯೋ ಜನವಾಗಿಲ್ಲ. ಕಟ್ಟಡದ ಚಾವಣಿಯ ಒಂದು ಭಾಗ ದಲ್ಲಿ ದೊಡ್ಡ ಬಿರುಕು ಮೂಡಿದೆ. ಹೆಚ್ಚು ಮಳೆಯಾದಲ್ಲಿ ಅದು ಕುಸಿದು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜೊತೆಗೆ ಕಟ್ಟಡದ ಒಳಭಾಗದ ಗೋಡೆಗಳಲ್ಲಿ ಕೂಡ ಸಾಕಷ್ಟು ಬಿರುಕು ಕಾಣಿಸಿಕೊಂಡಿದೆ. ದಶಕಗಳ ಕಾಲ ಸಾಹಿತ್ಯಿಕ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಕಟ್ಟಡದ ಒಳಭಾಗವೀಗ ಹೆಗ್ಗಣಗಳ ತಾಣವಾಗಿ ಮಾರ್ಪಟ್ಟಿದೆ. ಈಗಲಾದರೂ ಅಽಕಾರಿಗಳು ಎಚ್ಚೆತ್ತುಕೊಂಡು ಕಟ್ಟಡವನ್ನು ದುರಸ್ತಿಗೊಳಿಸಬೇಕಿದೆ. ಇಲ್ಲವಾದಲ್ಲಿ ಪಾರಂಪರಿಕ ಕಟ್ಟಡ ಎಂದೇ ಹೆಸರಾಗಿರುವ ಕಸಾಪ ಬಳಸುತ್ತಿದ್ದ ಕಚೇರಿ ಕುಸಿಯುವ ಎಲ್ಲಾ ಸಾಧ್ಯತೆಗಳಿವೆ.
ಸ್ವಾಗತ ಸಮಿತಿಗೆ ನೀಡಿದ್ದು: ಅರಮನೆ ಆವರಣದಲ್ಲಿರುವ ಕಸಾಪ ಕಚೇರಿಗೆ ೩೪ ವರ್ಷಗಳ ಇತಿಹಾಸವಿದೆ. ೧೯೯೦ರಲ್ಲಿ ನಡೆದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಸಾಹಿಸಿ ಕೆ.ಎಸ್.ನರಸಿಂಹ ಸ್ವಾಮಿ ಆಯ್ಕೆಯಾಗಿದ್ದರು. ಸಮ್ಮೇಳನವು ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದ ಸ್ವಾಗತ ಸಮಿತಿಗೆ ಈ ಕೊಠಡಿಯನ್ನು ನೀಡಲಾಗಿತ್ತು. ನಂತರ ಅದು ಕಸಾಪ ಕಚೇರಿಯಾಗಿ ಪರಿವರ್ತನೆಯಾಯಿತು. ನಂತರ ಕಸಾಪ ಕಾರ್ಯಕ್ರಮಗಳು ಅಲ್ಲಿಯೇ ನಡೆಯುತ್ತಿದ್ದವು. ಅಲ್ಲಿ ಕಾರ್ಯಕ್ರಮಗಳ ಜೊತೆಗೆ ಪುಸ್ತಕ ಮಾರಾಟವೂ ಆಗಾಗ್ಗೆ ನಡೆಯುತ್ತಿತ್ತು. ಕಳೆದ ೪ ವರ್ಷಗಳ ಹಿಂದೆ ಕಟ್ಟಡ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಅರಮನೆ ಮಂಡಳಿ ವಶಕ್ಕೆ ನೀಡಲಾಗಿದೆ. ಕಟ್ಟಡ ದುರಸ್ತಿಗೆ ನಿರ್ಮಿತಿ ಕೇಂದ್ರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂ ಒಪ್ಪಿಗೆ ನೀಡಿಲ್ಲ. ಪಾರಂಪರಿಕ ಕಟ್ಟಡವಾಗಿರುವ ಕಾರಣ ನುರಿತ ತಜ್ಞರೇ ದುರಸ್ತಿಗೊಳಿಸಬೇಕು ಎಂಬುದು ಅವರ ಅನಿಸಿಕೆ.
” ಕಸಾಪ ಕಚೇರಿಗೆ ನೀಡಿದ್ದ ಜಾಗ ಪಾರಂಪರಿಕ ಕಟ್ಟಡ ಗಳ ಪಟ್ಟಿಯಲ್ಲಿದೆ. ಹೀಗಾಗಿ ಬಹಳ ಸೂಕ್ಷ ವಾಗಿಕಟ್ಟಡದ ದುರಸ್ತಿ ಕೆಲಸ ನಡೆಸಬೇಕು. ದುರಸ್ತಿಗಾಗಿ ಟೆಂಡರ್ ಕರೆಯಲಾಗಿದೆ. ತಜ್ಞರು ಮುಂದೆ ಬಂದಲ್ಲಿ ಆದಷ್ಟು ಶೀಘ್ರವಾಗಿ ಕಟ್ಟಡದ ದುರಸ್ತಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು.”
-ಟಿ.ಎಸ್.ಸುಬ್ರಹ್ಮಣ್ಯ, ಉಪ ನಿರ್ದೇಶಕರು, ಮೈಸೂರು ಅರಮನೆ ಮಂಡಳಿ
” ನಗರದ ಹೃದಯಭಾಗದಲ್ಲಿರುವ ಕಾರಣ ಕನ್ನಡದ ಕೆಲಸಗಳನ್ನು ಅಲ್ಲಿ ಮಾಡಲಾಗುತ್ತಿತ್ತು. ಸಾಹಿತ್ಯಾಸಕ್ತರಿಗೆ ಬಂದು ಹೋಗಲು ಅನುಕೂಲವೂ ಆಗಿತ್ತು. ಮುಖ್ಯವಾಗಿ ಕಸಾಪ ಆರಂಭಿಸಿದ್ದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಹೀಗಾಗಿ ಅಲ್ಲಿ ಕಸಾಪ ಕಚೇರಿ ಮತ್ತೆ ಆರಂಭವಾಗಬೇಕು.”
ಎಂ.ಚಂದ್ರಶೇಖರ್, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ.
” ಕಟ್ಟಡವನ್ನು ದುರಸ್ತಿಗೊಳಿಸಿ ಕಸಾಪಗೆ ನೀಡಿ ಎಂದು ವರ್ಷಗಳ ಹಿಂದೆಯೇ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಮೈಸೂರಿನ ಸಂಸ್ಕೃತಿ ಹಾಗೂ ಪರಂಪರೆಗೆ ಅರಮನೆ ಮುಕುಟವಿದ್ದಂತೆ. ಹೀಗಾಗಿ ಅರಮನೆ ಆವರಣದಲ್ಲಿ ಕಸಾಪ ಕಚೇರಿ ಇದ್ದರೆ ಅರ್ಥಪೂರ್ಣ.”
ವೈ.ಡಿ.ರಾಜಣ್ಣ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ.





