ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ಪ್ರಯಾಣಿಕರು
ಹೊಸ ವರ್ಷದ ಸಂಭ್ರಮದಲ್ಲಿದ್ದ ಜನತೆಗೆ ಬಸ್ ಟಿಕೆಟ್ ದರ ಏರಿಕೆ ಬರೆ ಎಳೆದಿದ್ದು, ಶೇ.೧೫ರಷ್ಟು ಏರಿಕೆ ಮಾಡಿರು ವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಉಂಟಾಗಿರುವ ನಷ್ಟ ಸರಿದೂಗಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾತುಗಳು ವ್ಯಾಪಾಕವಾಗಿ ಕೇಳಿಬರುತ್ತಿದ್ದು, ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಸಾರಿಗೆ ಸಂಸ್ಥೆಗಳ ಆರ್ಥಿಕ ನಷ್ಟ ಸರಿದೂಗಿಸಲು ಸರ್ಕಾರ ಶಕ್ತಿ ಯೋಜನೆಯ ಹಣವನ್ನು ಕೆಎಸ್‌ಆರ್‌ಟಿಸಿಗೆ ನೀಡಿದರೆ ದರ ಏರಿಕೆ ಮಾಡುವ ಪ್ರಮೇಯ ಇರುವುದಿಲ್ಲ. ಹಾಗಾಗಿ ಈ ಹೊರೆಯನ್ನು ಸಾಮಾನ್ಯ ಪ್ರಯಾಣಿಕರ ಮೇಲೆ ಹೇರುವುದು ಸರಿಯಿಲ್ಲ.
-ಉಮಾ ಅನಿಲ್, ಮಳವಳ್ಳಿ.
ಮಹಿಳೆಯರ ಉಚಿತ ಪ್ರಯಾಣದಿಂದ ಉಂಟಾಗಿರುವ ನಷ್ಟ ಸರಿದೂಗಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಬಸ್ ಪ್ರಯಾಣ ದರ ಹೆಚ್ಚಳ ವಿದ್ಯಾರ್ಥಿಗಳ ಮೇಲೆ ಬರೆ ಎಳೆದಂತಾಗಿದೆ. ದರ ಹೆಚ್ಚಳದಿಂದ ವಿದ್ಯಾರ್ಥಿಗಳ ಬಸ್ ಪಾಸ್ ದರಕ್ಕೂ ಹೆಚ್ಚಿನ ಹೊರೆಯಾಗಲಿದೆ.
-ಸಿದ್ದರಾಜು, ಖಾಸಗಿ ಶಾಲೆ ಶಿಕ್ಷಕ
ಬಸ್ ದರವನ್ನು ಮತ್ತೇ ಹೆಚ್ಚಳ ಮಾಡಿರುವುದು ಸರಿಯಲ್ಲ. ಮಹಿಳೆಯರಿಗೆ ಉಚಿತ ಮಾಡಿರುವುದು ಸರಿ. ಆದರೆ, ಮತ್ತೇ ದರ ಹೆಚ್ಚಿಸಿ ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಪ್ರಸ್ತುತ ಇರುವ ದರವನ್ನೇ ಮುಂದುವರಿಸಿದರೆ ಅನುಕೂಲವಾಗುತ್ತದೆ.
-ರಾಜು, ಸರಗೂರು
ವ್ಯಾಪಾರಕ್ಕಾಗಿ ಹಳ್ಳಿಯಿಂದ ಮೈಸೂರಿಗೆ ಬಂದುಅದರಲ್ಲಿ ಬಂದ ಲಾಭದಲ್ಲಿ ಊರಿಗೆ ಹೋಗುತ್ತೇವೆ. ಸದ್ಯ ಟಿಕೆಟ್ ದರ ಹೆಚ್ಚಳ ಮಾಡಿರುವುದರಿಂದ ಊಟಕ್ಕೆ ಖರ್ಚು ಮಾಡಿದರೆ ಬಸ್ ಚಾರ್ಜ್‌ಗೆ ಹಣ ಇರಲ್ಲ. ಹಾಗಾಗಿ ಇರುವ ದರವನ್ನೇ ಮುಂದುವರಿಸಿದರೆ ಸಮಸ್ಯೆ ಇರುವುದಿಲ್ಲ.
-ಸುನಿಲ್, ವ್ಯಾಪಾರಸ್ಥರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಸದ್ಯ ಬಸ್ ಪ್ರಯಾಣ ದರ ಹೆಚ್ಚಿಸಿರುವುದರಿಂದ ಸಾರ್ವಜನಿಕರು ಖಾಸಗಿ ವಾಹನಗಳ ದರ ಕಡಿಮೆ ಇರುವುದರಿಂದ ಅತ್ತ ಮುಖ ಮಾಡಿದ್ದಾರೆ.
-ದೀಪಕ್ ಕಿರಣ್, ಮೈಸೂರು.
ನಾವು ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಯಾಣಿಕರಿಗೆ ಉತ್ತಮ ಸೇವೆ ಕೊಡುವುದಷ್ಟೇ ನಮ್ಮ ಕೆಲಸ. ಬಸ್ ದರ ಹೆಚ್ಚಳ ಅಥವಾ ಕಡಿಮೆ ಮಾಡುವುದರ ಸಂಬಂಧ ನಮಗೆ ಗೊತ್ತಿರು ವುದಿಲ್ಲ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ.
-ನಾಗಣ್ಣ ಬಂಗಾರಗುಂಡ, ಚಾಲಕ ಕಂ ನಿರ್ವಾಹಕ
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರಕ್ಕಿಂತ ಖಾಸಗಿ ವಾಹನದ ದರ ಕಡಿಮೆ ಇದ್ದು, ಇನ್ನು ಮುಂದೆ ಅದರಲ್ಲಿ ಯೇ ಓಡಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ದರ ಹೆಚ್ಚಿಸುವ ಬದಲು ಮಹಿಳೆಯರಿಗೆ ನೀಡಿರುವ ಉಚಿತ ಪ್ರಯಾಣ ಯೋಜನೆಯನ್ನು ರದ್ದು ಮಾಡಿ ಅವರಿಗೆ ಕಡಿಮೆ ದರ ನಿಗದಿ ಮಾಡಿದರೆ ಉತ್ತಮ.
-ಬಲರಾಮ್, ಪ್ರಯಾಣಿಕ.
ಉಚಿತಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಏಕಾಏಕಿ ಬಸ್ ಪ್ರಯಾಣ ದರವನ್ನು ಏರಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ. ಇದುವರೆಗೂ ಒಂದು ಕೈಯಲ್ಲಿ ನೀಡಿ ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದ್ದ ರಾಜ್ಯ ಸರ್ಕಾರ ಈಗ ಎರಡೂ ಕೈಗಳಿಂದ ಕಸಿದುಕೊಳ್ಳಲಾರಂಭಿಸಿದೆ.
-ಹೇಮಾ ನಂದೀಶ್, ಉಪಾಧ್ಯಕ್ಷರು, ಮೈಸೂರು ನಗರ ಬಿಜೆಪಿ





