Mysore
28
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ದೀಪಾವಳಿ ಹಬ್ಬದ ಅಂಗವಾಗಿ ಎತ್ತಿನಗಾಡಿ ಓಟ

ಮಂಜು ಕೋಟೆ

ಎಚ್.ಡಿ.ಕೋಟೆ: ಸಂಪ್ರದಾಯದಂತೆ ದನ -ಕರುಗಳಿಗೆ ಅಲಂಕಾರ; ಬೆಳೆಗಳಿಗೆ ಪೂಜೆ ಸಲ್ಲಿಕೆ

ಎಚ್.ಡಿ.ಕೋಟೆ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ರೈತಾಪಿ ವರ್ಗದವರು ದೀಪಾವಳಿ ಹಬ್ಬವನ್ನು ಸಂಪ್ರದಾಯದಂತೆ ದನ -ಕರುಗಳನ್ನು ಅಲಂಕರಿಸಿ, ಜಮೀನಿಗೆ ಮತ್ತು ಬೆಳೆಗಳಿಗೆ ಪೂಜೆ ಸಲ್ಲಿಸಿ ರಸ್ತೆಗಳಲ್ಲಿ ಎತ್ತಿನಗಾಡಿ ಓಟವನ್ನು ಸಡಗರದಿಂದ ಆಚರಿಸಿದರು.

ಈ ಬಾರಿಯ ದೀಪಾವಳಿ ರೈತರಿಗೆ ಸ್ವಲ್ಪ ಮಟ್ಟಿಗಾದರೂ ಹರುಷ ತಂದಿದೆ. ಉತ್ತಮ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿ ಬಂದಿದೆ. ಮಾರುಕಟ್ಟೆಯಲ್ಲಿ ಬೆಳೆಗೆ ಸಮರ್ಪಕ ಬೆಲೆ ಸಿಗದಿದ್ದರೂ ಉತ್ತಮ ಬೆಳೆ ಕೈ ಸೇರಿದ ಸಂತೋಷ ರೈತರ ಮುಖದಲ್ಲಿ ಕಾಣುತ್ತಿದೆ. ಹೀಗಾಗಿ ದೀಪಾವಳಿ ಸಡಗರ ಹೆಚ್ಚಿದೆ.

ಹಬ್ಬದ ದಿನದಂದು ರೈತರು ತಮ್ಮ ದನ ಕರುಗಳನ್ನು ತೊಳೆದು ಜಮೀನುಗಳಲ್ಲಿ ಬುಧವಾರ ಮಧ್ಯಾಹ್ನದವರೆಗೆ ಹುಲ್ಲು ಹಾಕಿ, ಮೇಯಿಸಿಕೊಂಡು ಬಂದು ಸಂಜೆಯಾಗುತ್ತಿದ್ದಂತೆ ಅವುಗಳನ್ನು ಅಲಂಕರಿಸಿ ಗ್ರಾಮದಲ್ಲಿ ಖುಷಿಯಿಂದ ಓಡಾಡಿಸಿದರು. ನಂತರ ಮನೆಯಲ್ಲಿ ತಯಾರಿಸಿದ್ದ ಆಹಾರ ಪದಾರ್ಥಗಳನ್ನು ನೀಡಿ ಪೂಜೆ ಸಲ್ಲಿಸಿದರು.

ರಾತ್ರಿ ವೇಳೆ ರೈತರು ತಮ್ಮ ಗೊಬ್ಬರದ ಗುಂಡಿಗಳಿಗೆ ಮತ್ತು ತಮ್ಮ ಜಮೀನಿನಲ್ಲಿರುವ ಬೆಳೆಗಳಿಗೆ ದೀಪವನ್ನು ಹಚ್ಚಿ ಪೂಜೆ ಸಲ್ಲಿಸಿದರು. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಮಾರ್ಚ್ ತಿಂಗಳಲ್ಲಿ ತಮ್ಮ ಜಮೀನುಗಳಲ್ಲಿ ರೈತರು ಬಿತ್ತನೆ ಕಾರ್ಯ ಮಾಡುತ್ತಾರೆ. ದೀಪಾವಳಿಯ ಸಂದರ್ಭದಲ್ಲಿ ಆ ಬೆಳೆಗಳು ಸಂಪೂರ್ಣವಾಗಿ ಕಟಾವಿಗೆ ಬರುತ್ತವೆ. ಇದು ಅವರ ಜೀವನ ನಿರ್ವಹಣೆಗೆ ಪೂರಕವಾಗುವುದರಿಂದ ಈ ದೀಪಾವಳಿ ಈ ಭಾಗದಲ್ಲಿ ಮಹತ್ವ ಪಡೆದುಕೊಂಡಿದೆ.

ಕೋಟೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಕಟ್ಟಮಗನಹಳ್ಳಿ, ಜೊಂಪನಹಳ್ಳಿ, ನೇರಳೆ, ಜಕ್ಕಹಳ್ಳಿ, ಹೆಗ್ಗನೂರು, ಮೇಟಿಕುಪ್ಪೆ , ಚುಕ್ಕೋಡನಹಳ್ಳಿ , ಡಿ.ಬಿ.ಕುಪ್ಪೆ, ಹ್ಯಾಂಡ್ ಪೋಸ್ಟ್ ಯರಹಳ್ಳಿ, ಅಂತರಸಂತೆ, ಸರಗೂರು, ಹಂಪಾಪುರ , ಹೊಂಬರಗಳ್ಳಿ, ಮಾದಾಪುರ , ಚಿಕ್ಕ ಕೆರೆಯೂರು, ಕ್ಯಾತನಹಳ್ಳಿ , ಜಿ.ಬಿ.ಸರಗೂರು, ಗಂಗಡ ಹೊಸಹಳ್ಳಿ, ಅಣ್ಣೂರು ಗ್ರಾಮಗಳಲ್ಲಿ ದನ, ಕರು, ಎತ್ತುಗಳನ್ನು ಅಲಂಕರಿಸಿ ಎತ್ತಿನಗಾಡಿಯ ಓಟ ನಡೆಸಿ ಸಂಭ್ರಮಿಸಿದರು.

ಪಟ್ಟಣದ ಹನುಮಂತನಗರದ ವಾಲ್ಮೀಕಿ ಗೆಳೆಯರ ಬಳಗದವರು ಬಲಿ ಚಕ್ರವರ್ತಿಯ ಸಂಹಾರದ ವಿಷ್ಣುವಿನ ಪ್ರತಿಕೃತಿಯನ್ನು ವಾರ್ಡ್‌ನ ಮುಂಭಾಗದಲ್ಲಿ ನಿರ್ಮಿಸಿದರು. ಕೆಲವು ಗ್ರಾಮದವರು ಗ್ರಾಮದ ಹೆಬ್ಬಾಗಿಲಿನಲ್ಲಿ ಸೌದೆಗಳನ್ನು ಹಚ್ಚಿ ದುಷ್ಟ ಶಕ್ತಿಗಳ ಗುಡ್ಡೆ ಹಾಕಿ ಬೆಂಕಿ ಹಚ್ಚಿ ನಿವಾರಣೆಗಾಗಿ ಪ್ರಾರ್ಥಿಸಿದರು.

ಒಟ್ಟಿನಲ್ಲಿ ಪಟ್ಟಣದ ಕೆಲವು ಕಡೆಗಳಲ್ಲಿ ಸಾವಿರಾರು ರೂ. ಖರ್ಚು ಮಾಡಿ ಪಟಾಕಿ ಸಿಡಿಸಿ ಆಚರಿಸಿದರೆ, ಗ್ರಾಮಗಳಲ್ಲಿ ರೈತ ಕುಟುಂಬದವರು ಸಂಪ್ರದಾಯದಂತೆ ಮಳೆಯ ನಡುವೆಯೂ ದೀಪಾವಳಿ ಹಬ್ಬಕ್ಕೆ ಕಳೆ ತಂದರು.

ಎತ್ತಿನಗಾಡಿ ಓಟಕ್ಕೆ ಪ್ರೋತ್ಸಾಹ ಬೇಕು…: 

ದೀಪಾವಳಿ ಹಬ್ಬದ ಪ್ರಯುಕ್ತ ರೈತಾಪಿ ಕುಟುಂಬದವರು ಅಲಂಕರಿಸಿದ ಅನೇಕ ಎತ್ತಿನಗಾಡಿಗಳನ್ನು ಪಟ್ಟಣದ ಮೊದಲನೇ ಮುಖ್ಯ ರಸ್ತೆಯಲ್ಲಿ ಪೈಪೋಟಿಯ ಮೂಲಕ ಓಡಿಸಲಾಯಿತು. ಇದನ್ನು ನೋಡಲು ಸಾವಿರಾರು ಜನರು ಜಮಾಯಿಸುತ್ತಾರೆ. ಪಟ್ಟಣದಲ್ಲಿ ದಸರಾ ದಿನದಂದು ನಡೆಯುವ ಮಿನಿ ದಸರಾ ಮತ್ತು ದೀಪಾವಳಿಯ ಎತ್ತಿನಗಾಡಿ ಓಟವನ್ನು ಜನಪ್ರತಿನಿಧಿಗಳು ಪ್ರೋತ್ಸಾಹಿಸಿದರೆ ಮತ್ತಷ್ಟು ಅದ್ಧೂರಿಯಾಗಿ ನಡೆಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Tags:
error: Content is protected !!