Mysore
24
overcast clouds

Social Media

ಗುರುವಾರ, 08 ಜನವರಿ 2026
Light
Dark

ನೀರು ಸೋರಿಕೆ ತಡೆಗೆ ಬಲ್ಕ್ ಫ್ಲೋ ಮೀಟರ್

ಕೆ.ಬಿ.ರಮೇಶನಾಯಕ

೩ ತಿಂಗಳಲ್ಲಿ ಅಳವಡಿಕೆ: ವಾಟರ್ ಮನ್‌ಗಳ ಬೇಕಾಬಿಟ್ಟಿ ಕೆಲಸಕ್ಕೆ ಬೀಳಲಿದೆ ಬ್ರೇಕ್

ನಗರದ ಪ್ರಮುಖ ಪ್ರದೇಶಗಳು, ವಿಜಯನಗರ ಭಾಗದಲ್ಲಿ ಮೀಟರ್‌ಗಳ ಜೋಡಣೆ

ಮೈಸೂರು: ಕಾವೇರಿ, ಕಪಿಲಾ ನದಿಗಳಿಂದ ಅಗತ್ಯಕ್ಕಿಂತ ಹೆಚ್ಚು ನೀರು ಸರಬರಾಜಾಗುತ್ತಿದ್ದರೂ ವಿತರಣೆ ವೇಳೆ ಸೋರುವಿಕೆ, ವಾಲ್ವ್‌ಮನ್‌ಗಳ ಮೇಲೆ ನಿಯಂತ್ರಣ ಇಲ್ಲದೆ ವಾರ್ಡುಗಳಿಗೆ ಬೇಕಾಬಿಟ್ಟಿಯಾಗಿ ನೀರು ಹರಿಸುವುದಕ್ಕೆ ಬ್ರೇಕ್ ಹಾಕಲು ಮೂರು ತಿಂಗಳಲ್ಲಿ ಬಲ್ಕ್ ಫ್ಲೋ ಮೀಟರ್ ಅಳವಡಿಸಿ ಅನುಷ್ಠಾನಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಸಜ್ಜಾಗಿದೆ.

ಕೇಂದ್ರ ಸರ್ಕಾರದ ಅಮೃತ್ ಪ್ರೋತ್ಸಾಹಧನದ ಯೋಜನೆಯಡಿ ಎರಡು ಕೋಟಿ ರೂಪಾಯಿ ಮಂಜೂರಾಗಿದ್ದು, ಈಗಾಗಲೇ ಯೋಜನೆ ಅನುಷ್ಠಾನಕ್ಕೆ ರಾಜ್ಯ ಮಟ್ಟದ ಹಣಕಾಸು ಸಮಿತಿ ಒಪ್ಪಿಗೆ ನೀಡಿದೆ. ತಾಂತ್ರಿಕ ಅನುಮೋದನೆ ನೀಡುತ್ತಿದ್ದಂತೆ ಟೆಂಡರ್ ಪ್ರಕ್ರಿಯೆ ಶುರು ಮಾಡಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಹಲವಾರು ವರ್ಷಗಳಿಂದ ನಿಯಂತ್ರಣ ಇಲ್ಲದೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೇಕಾ ಬಿಟ್ಟಿಯಾಗಿ ಕೆಲವು ವಾರ್ಡುಗಳಿಗೆ ನೀರು ಪೂರೈಕೆ ಮಾಡುತ್ತಿರುವುದಕ್ಕೆ ಕಡಿವಾಣ ಬೀಳಲಿದೆ.

ಕಾವೇರಿ, ಕಪಿಲಾ ನದಿಗಳ ವಿವಿಧ ಜಲ ಸಂಗ್ರಹಾಗಾರಗಳಿಂದ ೩೦೬ ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಮೈಸೂರಿಗೆ ಪ್ರಸ್ತುತ ೨೭೦ ಎಂಎಲ್‌ಡಿ ನೀರು ಸಾಕಾಗಿದ್ದರೂ ಹೆಚ್ಚುವರಿಯಾಗಿ ೪೦ ಎಂಎಲ್‌ಡಿ ನೀರು ಬರುತ್ತಿದೆ. ಹೀಗಿದ್ದರೂ, ಕೆಲವು ಹಳೆಯ ಮತ್ತು ಮೇಲ್ಪಟ್ಟದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇವೆ.

ಚುನಾಯಿತ ಜನಪ್ರತಿನಿಧಿಗಳು ಇದ್ದಾಗ ತಮ್ಮ ಪ್ರಭಾವ ಬೀರಿ ಹೆಚ್ಚಿನ ಸಮಯ ನೀರು ವಿತರಣೆಯಾಗುವಂತೆ ನೋಡಿಕೊಂಡರೆ, ಕೆಲವು ವಾರ್ಡುಗಳಿಗೆ ಎರಡು-ಮೂರು ಗಂಟೆ ನೀರು ಸಿಗುವುದೇ ಹೆಚ್ಚಾಗಿತ್ತು. ಇದನ್ನೆಲ್ಲಾ ಮನಗಂಡಿರುವ ಮೈಸೂರು ನಗರ ಪಾಲಿಕೆಯು ಕುಡಿಯುವ ನೀರಿನ ಸರಬರಾಜಿನಲ್ಲಿ ಮುಖ್ಯ ಸ್ಥಾವರಗಳಿಂದ ಸಂಪರ್ಕಿತ ಕೊಳವೆ ಮಾರ್ಗಗಳಲ್ಲಿ ಸೋರುವಿಕೆಯನ್ನು ತಡೆಗಟ್ಟಲು ಕೊಳವೆ ಜಾಲದ ಪ್ರಮುಖ ಬಿಂದುಗಳಲ್ಲಿ ನೀರಿನ ಪ್ರಮಾಣವನ್ನು ಅಳತೆ ಮಾಡುವುದಕ್ಕಾಗಿ ಬಲ್ಕ್ ಫ್ಲೋ ಮೀಟರ್ ಅಳವಡಿಸಲು ನಿರ್ಧರಿಸಿರುವುದು ಗಮನಾರ್ಹವಾಗಿದೆ.

೪೪ಕಡೆಗಳಲ್ಲಿ ಅಳವಡಿಕೆ: ಕೇಂದ್ರದ ಅಮೃತ್ -೨ ಯೋಜನೆಯಡಿ ಎರಡು ಕೋಟಿ ರೂ. ಮಂಜೂರಾಗಿದೆ. ನಗರದ ಕೃಷ್ಣಮೂರ್ತಿಪುರಂ, ಜಯನಗರ, ಅಶೋಕಪುರಂ, ಕನ್ನೇಗೌಡನಕೊಪ್ಪಲು, ವಿದ್ಯಾರಣ್ಯಪುರಂ, ಸರಸ್ವತಿಪುರಂ, ಕುಕ್ಕರಹಳ್ಳಿ, ಅರವಿಂದನಗರ, ಶಾರದಾದೇವಿನಗರ, ರಾಮಾನುಜ ರಸ್ತೆ, ಯಾದವಗಿರಿ, ವಿ.ವಿ.ಪುರಂ, ವಿಜಯನಗರ, ಗೋಕುಲಂ, ಒಂಟಿಕೊಪ್ಪಲು, ಸಿದ್ಧಾರ್ಥ ನಗರ, ರಾಘವೇಂದ್ರನಗರ, ನಜರ್‌ಬಾದ್, ವೀರನಗೆರೆ, ಉದಯಗಿರಿ, ರಾಜೀವ್‌ನಗರ, ಕ್ಯಾತ ಮಾರನಹಳ್ಳಿ, ತಿಲಕ್‌ನಗರ, ಬನ್ನಿಮಂಟಪ ಸೇರಿದಂತೆ ೪೪ ಕಡೆಗಳಲ್ಲಿ ವಾಟರ್ ಬಲ್ಕ್ ಫ್ಲೋ ಮೀಟರ್ಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಎರಡು ರೀತಿಯ ಮೀಟರ್: ಮೈಸೂರಿನಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು ಅಳವಡಿಸಿರುವ ಪೈಪ್‌ಲೈನ್ ಗಾತ್ರ ಹೆಚ್ಚುತ್ತಿದ್ದು, ೩೦೦ ಎಂಎಂ ಮತ್ತು ೬೦೦ ಎಂಎಂ ಪೈಪ್‌ಗಳಿಗೆ ತಕ್ಕಂತೆ ಮೀಟರ್ ಹಾಕಲಾಗುತ್ತದೆ. ೩೦೦ ಎಂಎಂ ಪೈಪ್‌ಗೆ ೧.೧೦ ಲಕ್ಷ ರೂ.ವೆಚ್ಚದ, ೬೦೦ಎಂಎಂ ಪೈಪ್‌ಗೆ ೪.೫೦ ಲಕ್ಷ ರೂ. ವೆಚ್ಚದ ಮೀಟರ್‌ಗಳನ್ನು ಅಳವಡಿಸಲಾಗುತ್ತದೆ.

ಏನೇನು ಅನುಕೂಲ?: ನಗರಕ್ಕೆ ನೀರು ಸರಬರಾಜು ಮಾಡಿದರೂ ಯಾವ್ಯಾವ ಪ್ರದೇಶಗಳಿಗೆ ಎಷ್ಟು ನೀರು ಪೂರೈಕೆ ಆಗುತ್ತಿದೆ ಎನ್ನುವ ಲೆಕ್ಕ ಸಿಗುತ್ತಿಲ್ಲ. ಕೆಲವೊಮ್ಮೆ ವಾಲ್ವ್ ಮನ್‌ಗಳು ಒಂದೊಂದು ಬಡಾವಣೆಗಳಿಗೆ ಅವೈಜ್ಞಾನಿಕವಾಗಿ ನೀರು ಹರಿಸುವ ಕಾರಣ ಲೆಕ್ಕ ಗೊತ್ತಾಗುತ್ತಿರಲಿಲ್ಲ. ಆದರೆ, ಮೀಟರ್ ಅಳವಡಿಸುವುದರಿಂದ ಯಾವ ಪ್ರದೇಶಗಳಿಗೆ ಎಷ್ಟು ನೀರು ವಿತರಣೆಯಾಗಿದೆ ಎಂಬುದು ಮೀಟರ್‌ನಲ್ಲಿ ದಾಖಲಾಗಲಿದ್ದು ಲೆಕ್ಕ ಸಿಗಲಿದೆ. ಯಾವ ಸಮಯಕ್ಕೆ ನೀರು ಬಿಡಲಾಗಿದೆ, ಯಾವ ಸಮಯಕ್ಕೆ ಅಂತ್ಯವಾಗಿದೆ, ಎಷ್ಟು ವಿತರಣೆಯಾ ಯಿತು ಎಂಬ ನಿಖರ ಮಾಹಿತಿ ತಿಳಿಯಲಿದೆ.

” ಈಗಾಗಲೇ ಹಣಕಾಸು ಸಲಹಾ ಸಮಿತಿ ಒಪ್ಪಿಗೆ ನೀಡಿದ್ದು, ತಾಂತ್ರಿಕ ಅನುಮೋದನೆ ದೊರೆಯಬೇಕಿದೆ. ಮೂರು ತಿಂಗಳಲ್ಲಿ ಮೀಟರ್ ಅಳವಡಿಕೆ ಕಾರ್ಯ ಮುಗಿಯಲಿದೆ. ಇದರಿಂದಾಗಿ ಅನಗತ್ಯವಾಗಿ ಮತ್ತು ಅವೈಜ್ಞಾನಿಕವಾಗಿ ನೀರು ವಿತರಣೆ ಮಾಡುವುದು ನಿಯಂತ್ರಣವಾಗಲಿದೆ.”

-ಮುಸ್ತಫಾ, ಕಾರ್ಯಪಾಲಕ ಅಭಿಯಂತರ, ವಾಣಿವಿಲಾಸ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗ.

Tags:
error: Content is protected !!