ಪದ್ಮಾ ಶ್ರೀರಾಮ
ನಮ್ಮ ಮದುವೆಯ ನಂತರ ನಾನು ನನ್ನ ಪತಿ ಶ್ರೀರಾಮರೊಡನೆ ತೇಜಸ್ವಿಯವರ ಮೊದಲಿನ ತೋಟ ಚಿತ್ರಕೂಟಕ್ಕೆ ಹೊರಟೆ. ಮೂಡಿಗೆರೆಗಿಂತ ಮುಂಚೆ ಜನ್ನಾಪುರ ಎಂಬಲ್ಲಿ ಬಸ್ಸಿನಿಂದ ಇಳಿದು ಒಂದು ಕಾಲುದಾರಿಯಲ್ಲಿ ಸಣ್ಣ, ಸಣ್ಣ ಕುರುಚಲು ಗಿಡಗಳ ಒಂದು ತಾವನ್ನು ಹಾದು ಕಾಫಿತೋಟದ ಅಂಚಿಗೆ ಬರುವಷ್ಟರಲ್ಲಿ ಒಂದೆರಡು ಕಿ. ಮೀ. ಆಗಿತ್ತು. ಕಾಫಿಗಿಡಗಳ ನಡುವಿನ ಹಾದಿ ಹಾಯ್ದರೆ ಒಂದು ಏಕಾಂಗಿ ಮನೆ. ಮನೆ ಹಿಂದೆ ಗಕುಂ ಎನ್ನುವ ಕಾಡು! ಮನೆ ಮುಂದೆ ನಿಂತಿದ್ದ ಜೀಪಿನ ತಳದಿಂದ ತೆವಳಿಕೊಂಡು ತೇಜಸ್ವಿ ಹೊರಬಂದರು? ನನಗೆ ಎಲ್ಲವೂ ಅಯೋಮಯ! ಇದೇನು ಹೆಸರಾಂತ ವ್ಯಕ್ತಿಯ ಮಗ, ಸ್ವತಃ ಹೆಸರಾಗಿರುವವರು ಹೀಗೆ? ತಮ್ಮ ಗುಂಪಿನ ಹೊಸ ಸದಸ್ಯಳ ಮೇಲೆ ತೇಜಸ್ವಿ ತಮ್ಮ ನಾಯಿ ಕಿವಿಯನ್ನು ಛೂ ಬಿಟ್ಟರು. ಕಹಿ ಯಾದ ಜುಮ್ಮಿನಕಾಯಿ ತಿನ್ನಿಸಿದರು; ತೋಟದಲ್ಲಿದ್ದ ಕೆರೆಗೆ ಅಡ್ಡಲಾಗಿ ಬಿದ್ದಿದ್ದ ದಪ್ಪ ಮರದ ದಿಮ್ಮಿಯ ಮೇಲೆ ತಾವು ನಡೆದುಹೋದಂತೆ ನನಗೆ ನಡೆಯಲು ಆಹ್ವಾನ; ಯಾವುದಕ್ಕೂ ಜಗ್ಗದ ನಾನು ಆ ಸ್ನೇಹ ಬಳಗದಲ್ಲಿ ಒಬ್ಬಳಾದೆ.
ಮುಂದೆ ಪ್ರಸಿದ್ಧ ಜೀಪಿನಲ್ಲಿ ನಾವು ಅಂದರೆ ತೇಜಸ್ವಿ, ರಾಜೇಶ್ವರಿ, ರಾಮದಾಸ್, ಶ್ರೀರಾಂ ಮತ್ತು ನಾನು ಎಷ್ಟು ಸುತ್ತಿದೆವು? ಬೆಳಿಗ್ಗೆ ತೇಜಸ್ವಿಯವರ ಮೊದಲಿನ ತೋಟ ಚಿತ್ರಕೂಟವನ್ನು ಬಿಟ್ಟರೆ, ನಮ್ಮ ಗುರಿ ಶಾಮಣ್ಣ ಶ್ರೀದೇವಿಯರ ಭಗವತಿಕೆರೆ ಮನೆಯಾದರೂ ನಾವು ಕೆಮ್ಮಣ್ಣುಗುಂಡಿ ಹಾಯುವಾಗ ಅಲ್ಲಿ ಹಾಡುತ್ತ, ಕೂಗುತ್ತ ಇರುವಾಗ ನಮ್ಮಲ್ಲಿ ಒಬ್ಬರು ಅಲ್ಲಿನ ಮೋಡಗಳ ಚೆಲುವನ್ನು ಮೆಚ್ಚಿ ಓಡುತ್ತಿರುವ ಮೋಡಗಳೆ, ನಾಲ್ಕು ಹನಿ ನೀರು ಚೆಲ್ಲಿ ಎಂದು ಹಾಡಿದಾಗ ರಾಮದಾಸ್ ನಾವೂ ನಾಲ್ಕು ಹನಿ ಚೆಲ್ಲಬೇಕು, ನಿಲ್ಲಿಸಿ ಎಂದಾಗ ಜೀಪ್ ನಿಲ್ಲುತ್ತಿತ್ತು! ಹೀಗೆ ಕುಂತು ನಿಂತು ಮಾತಾಡುತ್ತ ಭಗವತಿಕೆರೆ ತಲುಪುವಷ್ಟರಲ್ಲಿ ಸಂಜೆಯಾಗುತ್ತಿತ್ತು. ಮುಂದೆ ಇದ್ದಷ್ಟು ದಿನ ಎಲ್ಲರೂ ಸೇರಿ ಹರಟುವುದು, ತಿನ್ನುವುದು, ಸುತ್ತುವುದು. ನಂತರ ನಮ್ಮ ಮೂಲಸ್ಥಾನ. ನಂತರದ ದಿನಗಳಲ್ಲಿ ಆ ಜೀಪು, ಕಿವಿ ನಾಯಿ ತೇಜಸ್ವಿಯವರ ಕಥಾ ಪಾತ್ರಧಾರಿಗಳಾದವು. ಫೋನು ಮೊಬೈಲುಗಳಿಲ್ಲದ ಆ ಕಾಲವನ್ನು ಈಗಿನವರು ಊಹಿಸಿಕೊಳ್ಳಲಾರರು. ಎಲ್ಲವೂ ಅಂಚೆ ಮೂಲಕ! ಶ್ರೀರಾಮರ ವಿದ್ಯಾರ್ಥಿ ದಿಸೆಯಲ್ಲೂ, ಮುಂದೆ ಅಧ್ಯಾಪಕ ವೃತ್ತಿ ಹಿಡಿದಾಗಲೂ ರಜೆ ಬಂದ ತಕ್ಷಣ ತೇಜಸ್ವಿ ತೋಟದಲ್ಲಿರಬೇಕಿತ್ತು. ಹೀಗಿರುವಾಗ ರಾಜೇಶ್ವರಿಯವರಿಂದ ನಮಗೊಂದು ಪತ್ರ. ಇಲ್ಲಿ ಎಲ್ಲ ಸ್ನೇಹಿತರೂ ಸೇರುವುದರಿಂದ ತರಕಾರಿಗಳು ಕೋಸು, ನವಿಲುಕೋಸು, ಬೀನ್ಸ್, ೨೫ ಮೂಸಂಬಿ ಇವನ್ನು ನೀವಿಬ್ಬರು ಬರುವಾಗ ತರಲು ಸಾಧ್ಯವೆ? ಮೊದಲು ನಿಸ್ಸಂಕೋಚವಾಗಿ ತರಲು ಹೇಳುತ್ತಿದ್ದೆವು. ಈಗ ಹೇಗೊ, ಏನೊ ಎಂದಿತ್ತು. ಶ್ರೀರಾಂ ಕಾಗದವನ್ನು ನನಗೆ ತೋರಿದರು. ಹೇಗೊ ಇಲ್ಲ, ತಗೊಂಡು ಹೋಗೋದೇ ಎಂದು ತರಕಾರಿ, ಹಣ್ಣಿನ ಮೂಟೆಯೊಂದಿಗೆ ಜನ್ನಾಪುರದಲ್ಲಿ ಇಳಿದಾಗ ತೇಜಸ್ವಿ ತಮ್ಮ ಫೇಮಸ್ ಜೀಪಿನೊಡನೆ ಕಾಯುತ್ತಿದ್ದರು! ಆ ದಿನಗಳಲ್ಲಿ ತೋಟದ ಮನೆಗೆ ಕರೆಂಟ್ ಇರಲಿಲ್ಲ. ಅಡುಗೆಗೆ ಸೌದೆ ಒಲೆ, ರಾತ್ರಿ ಸೀಮೆಯೆಣ್ಣೆಯ ದೊಡ್ಡ ಲ್ಯಾಂಪುಗಳು. ಊಟ, ಮಾತುಕತೆಗೆ ಕುರ್ಚಿ, ಟೇಬಲ್, ರಾತ್ರಿ ನೆಲದ ಮೇಲೆ ಹಾಸಿಗೆ ಹಾಸಿ ಮಲಗುವುದು. ಇಂತಹ ದಿನಗಳಲ್ಲೇ ತೇಜಸ್ವಿಯವರ ಕರ್ವಾಲೊ ಮೂಡಿ ಬಂದಿತು. ಇಷ್ಟೆಲ್ಲಾ ಸ್ನೇಹಿತರೊಡನೆ ಬೆರೆತು ಕಾಲ ಕಳೆದರೂ, ಬರೆಯುವ ಸಮಯದಲ್ಲಿ ತೇಜಸ್ವಿ ಸೀರಿಯಸ್ಸಾಗಿ ಬರೆಯುತ್ತಿದ್ದರು. ನಾವು ಯಾರೂ ಅವರನ್ನು ಡಿಸ್ಟರ್ಬ್ ಮಾಡುತ್ತಿರಲಿಲ್ಲ.
ಮುಂದೆ ಅವರು ಮೂಡಿಗೆರೆಗೆ ಅತ್ಯಂತ ಸಮೀಪದಲ್ಲಿ ಕಾಫಿತೋಟ ಮಾಡಿದರು. ಆಗ ಅವರಲ್ಲಿಗೆ ಹೋಗಲು ಬಹಳ ಸುಲಭವಾಯ್ತು. ಜನ ಬರಲಾರಂಭಿಸಿದರು. ಒಮ್ಮೆ ನಾನು ಅವರ ತೋಟಕ್ಕೆ ಹೋಗಿದ್ದಾಗ, ವಾಪಸ್ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತ ನಾನು, ತೇಜಸ್ವಿ ಅವರ ಕಾರಿನಲ್ಲಿ ಕುಳಿತಿದ್ದೆವು. ಆಗ ಒಬ್ಬ ವ್ಯಕ್ತಿ ಬಂದು ಅಣ್ಣೋರೆ? ದೀಪಾವಳಿ ಹಬ್ಬಕ್ಕೆ ನಿಮಗೆ ಎಷ್ಟು ಕೆ. ಜಿ. ಮಾಂಸ ಬೇಕು ಎಂದು ಕೇಳಿತು. ತೇಜಸ್ವಿ ಎಷ್ಟೊ ಕೊಡೊ ಎಂದು ಬಿಟ್ಟರು. ನಾನು ಈತನೇ ಬಿರಿಯಾನಿ ಕರಿಯಪ್ಪನೇ ಎಂದು ಕೇಳಿದೆ, ತೇಜಸ್ವಿ ಅಚ್ಚರಿಯಿಂದ ನಿಮಗೆ ಹೇಗೆ ಗೊತ್ತಾಯಿತು? ಎಂದು ಕೇಳಿದಾಗ, ಆತನ ಮಾತಿನ ಸ್ಟೈಲಿನಿಂದ ಎಂದು ಬೀಗಿದೆ. ದೀಪಾವಳಿ ಒಂದು ರೀತಿಯಲ್ಲಿ ತೇಜಸ್ವಿಯವರ ಮೆಚ್ಚಿನ ಹಬ್ಬ ಎಂದು ಕಾಣುತ್ತದೆ. ತೇಜಸ್ವಿಯವರೊಡನೆ ಒಮ್ಮೆ ದೀಪಾವಳಿ ಹಬ್ಬದಲ್ಲಿ ನಮ್ಮ ಸ್ನೇಹಿತ ಸುಂದರೇಶರ ಪತ್ನಿ ಶೋಭಾರವರ ತಾಯಿ ಮನೆಗೆ ದೀಪಾವಳಿ ರಾತ್ರಿ ಊಟಕ್ಕೆ ಹೋಗಿದ್ದೆವು. ನನ್ನ ನಿರೀಕ್ಷೆಗೆ ವ್ಯತಿರಿಕ್ತವಾಗಿ ಸಿಹಿಯೂಟದ ಬದಲು ಮೀನು, ಕುರಿ, ಕೋಳಿ ಮಾಂಸಗಳ ಭಕ್ಷ್ಯಗಳಿದ್ದವು. ಕೈಲಾದಷ್ಟು ತಿಂದೆವು. ಸಾಮಾನ್ಯವಾಗಿ ದೀಪಾವಳಿ ಸಮಯದಲ್ಲಿ ತೇಜಸ್ವಿ, ಶ್ರೀರಾಂ ಜೊತೆಯಲ್ಲಿ ನಮ್ಮ ಶಾಮಣ್ಣನವರ ತಂದೆ ಮನೆ ಕಡಿದಾಳಿಗೆ ಇಷ್ಟಪಟ್ಟು ಹೋಗುತ್ತಿದ್ದರು. ವಾಪಸ್ ಬರುವ ಸಂಜೆ ರಸ್ತೆಯ ಇಕ್ಕೆಲಗಳ ಗದ್ದೆಗಳಲ್ಲಿ ಹತ್ತಿಸಿರುತ್ತಿದ್ದ ಅನೇಕಾನೇಕ ಪಂಜುಗಳ ಬೆಳಕಿನ ಮೆರವಣಿಗೆಯನ್ನು ಮೌನವಾಗಿ ಆಸ್ವಾದಿಸುತ್ತ ಸ್ನೇಹಿತರೊಡನೆ ತಮ್ಮ ತಾಣಕ್ಕೆ ಮರಳುತ್ತಿದ್ದರು.
ತೇಜಸ್ವಿ ಕಥೆಗಳ ಪಾತ್ರಧಾರಿಗಳು ತಮ್ಮ ಅರಿವಿಲ್ಲದೆ ನಮಗೆ ದರ್ಶನ ಕೊಡುತ್ತಿದ್ದರು! ಮಾರ ತನ್ನ ಕೊನೆಗಾಲ ದಲ್ಲಿ ತೇಜಸ್ವಿ ತೋಟಕ್ಕೆ ಬಂದ. ತೇಜಸ್ವಿ ಮಗಳು ಈಶಾನ್ಯಗೆ ಅಕ್ಕೋರೆ, ನಾನು ಬರುವುದು ಇದೇ ಕೊನೆ. ಅಯ್ಯಾವರದ್ದು ಒಂದು ಶರ್ಟು ನಂಗೆ ಕೊಡಿ ಎಂದು ಕೇಳಿದ. ತೇಜಸ್ವಿ ಮಾರನಿಗೆ ಶರ್ಟು, ಕೊಂಚ ಹಣ ಕೊಟ್ಟು ಕಳಿಸಿದರು. ಮಾರ ಕಾಡಿನ ಬೆತ್ತದಿಂದ ಹೆಣೆದ ಕುಕ್ಕೆ, ಬುಟ್ಟಿಗಳು ನನ್ನಲ್ಲಿವೆ.
ಅವರ ಸ್ವಭಾವಕ್ಕೆ ತಕ್ಕಂತೆ ಅವರಿಗೆ ಅಂಟಿಕೊಂಡ ಹವ್ಯಾಸಗಳಲ್ಲಿ ಬಹಳ ದಿವಸ ನಡೆದದ್ದು ಮೀನು ಶಿಕಾರಿ. ಇದಕ್ಕಾಗಿ ಗಾಳಗಳು, ಮೀನುಗಳನ್ನು ಆಕರ್ಷಿಸಲು ಮಣ್ಣನ್ನು ಅಗೆದು ಎರೆಹುಳುಗಳನ್ನು ಡಬ್ಬಕ್ಕೆ ತುಂಬಿಕೊಳ್ಳುವುದು ನಡೆಯಿತು. ಇದು ಸಾಂಕ್ರಾಮಿಕವಾಗಿ ಅವರ ಸ್ನೇಹಿತರಿಗೂ ಅಂಟಿಕೊಂಡಿತು. ಒಮ್ಮೆ ನಾನು ಅವರಲ್ಲಿದ್ದಾಗ ಮೀನು ಬೇಟೆಗೆ ಸಿದ್ಧರಾದ ತೇಜಸ್ವಿ, ರೀ ಪದ್ಮಾ ಇವತ್ತು ಎಂಥ ಮೀನು ಸಿಗಬಹುದು ಹೇಳಿ ನೋಡೋಣ ಎಂದರು. ನಿಮಗೆ ಯಾವ ಮೀನೂ ಸಿಗದಿರಲಿ ಎಂದೆ. ಸುಮ್ಮನೆ ದಿಟ್ಟಿಸಿ ನೋಡಿ ಸ್ನೇಹಿತರೊಡನೆ ಮೀನು ಬೇಟೆಗೆ ಹೊರಟರು. ರಾತ್ರಿ ೮ ಗಂಟೆ ಹೊತ್ತಿಗೆ ಬರಿಗೈಯಲ್ಲಿ ಹಿಂತಿರುಗಿದರು. ಬಂದವರೆ ಆಹಾ, ಎಂಥ ಬಾಯೊ! ಎಂದು ನನ್ನನ್ನು ಆಶೀರ್ವದಿಸಿದರು. ಅವರ ಇಂಥ ಮಾತುಗಳಿಗೆ ನಾವು ಸೊಪ್ಪು ಹಾಕುತ್ತಿರಲಿಲ್ಲ. ಅವರ ಬೈಗುಳಗಳಿಗೆ ನಮ್ಮ ಸ್ನೇಹಿತರಾದ ರಾಘವೇಂದ್ರ ಅವರು ಪ್ರೀತಿಯ ನುಡಿಗಳು ಎಂದು ಹೆಸರಿಟ್ಟಿದ್ದರು! ಮಿಕ್ಸರ್, ಗ್ರ್ತ್ಯೈಂಡರ್‌ಗಳ ಹೆಸರೇ ಇಲ್ಲದ ಕಾಲದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಗುಂಡುಕಲ್ಲಿನಲ್ಲಿ ಕಾರ ರುಬ್ಬುವುದನ್ನು ಯಾರು ತಾನೆ ಸ್ವಾಗತಿಸುತ್ತಿದ್ದರು. ತೇಜಸ್ವಿಯವರ ಅಂತರಂಗದೊಳಗೊಂದು ಮಾನವೀಯ ಅನುಕಂಪದ ಅಲೆ ಇತ್ತೆಂಬುದಕ್ಕೆ ಒಂದು ಸಂಗತಿ ತಿಳಿಸುತ್ತೇನೆ. ತೇಜಸ್ವಿಯವರ ತೋಟಕ್ಕೆ ರಸ್ತೆ ತಿರುಗುವ ಎಡಬದಿಯಲ್ಲಿ ಒಂದು ಖಾಲಿ ದಿಬ್ಬ ಇತ್ತು. ಒಮ್ಮೆ ಶ್ರೀರಾಂ ಮತ್ತು ನಾನು ಬಂದಾಗ ಅಲ್ಲೊಂದು ಹಳೆಯ ಟೆಂಟ್ ಹಾಕಿದ್ದರು. ನಾವು ಹೋಗಿ ತೇಜಸ್ವಿಯವರನ್ನು ವಿಚಾರಿಸಿದಾಗ ತೇಜಸ್ವಿ ಹೇಳಿದರು, ಅಯ್ಯೊ! ಅದೊಂದು ಸರ್ಕಸ್ ಕಂಪೆನಿಯಂತೆ. ಅದರ ಮಾಲೀಕ ಮೊನ್ನೆ ಬಂದು ನನಗೊಂದು ಹರಿದು ಜೂಲಾದ ಪಾಸನ್ನು ಕೊಟ್ಟು, ನಿಮ್ಮಂತಹವರು ಬಂದು ನೋಡಿ, ನಶಿಸಿ ಹೋಗುತ್ತಿರುವ ಸರ್ಕಸ್ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಹೇಳಿದ. ಮತ್ತು ರಾಟೆ ಮೇಲೆ ಮಣೆ ಇಟ್ಟು, ತಾನೇ ಅದರ ಮೇಲೆ ಸರ್ಕಸ್ ಮಾಡಲು ಪ್ರಾರಂಭಿಸಿದ! ಅವನ ದಯನೀಯ ಸ್ಥಿತಿ ನೋಡಿ ನಾನು ಒಂದು ಚೀಲ ಅಕ್ಕಿ, ಕಾಫಿಪುಡಿ, ಸ್ವಲ್ಪ ದುಡ್ಡು ಕೊಟ್ಟು ಕಳಿಸಿದೆ. ಮಾರನೆ ದಿನ ನಾನು ಆ ದಾರಿಯಲ್ಲಿ ಹೋಗುವಾಗ ಸರ್ಕಸ್‌ಗೆ ಸೇರಿದ ಸರ್ಕಸ್ ಡ್ರೆಸ್ಸು, ತುಟಿಗೆ ಬಣ್ಣ ಹಚ್ಚಿದ ಒಬ್ಬ ಹೆಂಗಸು ಸರ್ಕಸ್ಸಿನ ಡೇರಾದ ತೂತುಗಳ ಮೂಲಕ ಇಣುಕಿ ನೋಡುತ್ತಿದ್ದ ಹುಡುಗರನ್ನು ಕೋಲು ಹಿಡಿದು ಬೆದರಿಸುತ್ತಿದ್ದಳು ಎಂದು ಹೇಳಿದರು.